ETV Bharat / state

ಗಾಂಧೀಜಿ ಹುತಾತ್ಮರಾದರು ಅವರ ವಿಚಾರಧಾರೆ ನಮ್ಮೊಂದಿಗೆ ಇದೆ : ಸಿದ್ದರಾಮಯ್ಯ

author img

By

Published : Jan 30, 2022, 4:30 PM IST

Updated : Jan 30, 2022, 5:09 PM IST

ಆತ್ಮಬಲ ಮಹಾತ್ಮಗಾಂಧಿ ಅವರಿಗೆ ಹೆಚ್ಚಾಗಿತ್ತು. ಗಾಂಧಿ ಅವರ ವಿಚಾರಗಳಿಂದ ಪ್ರಭಾವಿತರಾದ ಯುವಕರು ನೀವು ನೂರು ವರ್ಷ ಬದುಕಬೇಕು ಎಂದು ಹಾರೈಸಿದರೆ, ಇಲ್ಲ ನಾನು ನೂರಾ ಇಪ್ಪತ್ತೈದು ವರ್ಷ ಬದುಕುತ್ತೇನೆ, ನೀವು ನನ್ನ ಆಯಸ್ಸನ್ನು ಕಡಿಮೆ ಮಾಡಿದ್ದೀರಿ ಎಂದು ಯುವಕರಿಗೆ ಹೇಳುತ್ತಿದ್ದರು. ಆ ಮಟ್ಟದ ಆತ್ಮಬಲ ಗಾಂಧಿ ಅವರಲ್ಲಿತ್ತು. ಅವರು ಕೊಲೆ ಆಗುವ ವೇಳೆಯಲ್ಲೂ ಆರೋಗ್ಯ ತುಂಬಾ ಚೆನ್ನಾಗಿತ್ತು. ಅವರು ಇಚ್ಚಿಸಿದಷ್ಟು ವರ್ಷ ಬದುಕುವ ಚೈತನ್ಯ ಮತ್ತು ಆತ್ಮಬಲದ ಜತೆಗೆ ಆರೋಗ್ಯವನ್ನೂ ಹೊಂದಿದ್ದರು..

ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು : ಮಹಾತ್ಮ ಗಾಂಧೀಜಿಯವರು ಹುತಾತ್ಮರಾದರೂ ಅವರ ವಿಚಾರಧಾರೆಗಳು ಇಂದಿಗೂ ನಮ್ಮೊಂದಿಗಿವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಇಂದು ಆಯೋಜಿಸಿದ್ದ ಹುತಾತ್ಮರ ದಿನಾಚರಣೆಯಲ್ಲಿ ಸಿದ್ದರಾಮಯ್ಯ ಅವರು ಭಾಗವಹಿಸಿ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಹುತಾತ್ಮರ ದಿನಾಚರಣೆ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾತನಾಡಿರುವುದು..

ನಂತರ ಮಾತನಾಡಿದ ಅವರು, ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಡಲು ಹೋರಾಟವನ್ನು ಮುನ್ನಡೆಸಿದ ಮಹಾತ್ಮಗಾಂಧಿ ಅವರು ಸ್ವಾತಂತ್ರ್ಯ ಸಿಕ್ಕ ಐದಾರು ತಿಂಗಗಳುಗಳಲ್ಲೇ ತಾವೇ ದೊರಕಿಸಿಕೊಟ್ಟ ಸ್ವಾತಂತ್ರ್ಯದ ಮಣ್ಣಿನಲ್ಲೇ ಕೊಲೆ ಆಗಿ ಹುತಾತ್ಮರಾದರು.

ಹುತಾತ್ಮ ಮಹಾತ್ಮ ಅವರು ಇಂದು ನಮ್ಮ ಜತೆಗೆ ಇಲ್ಲದಿರಬಹುದು. ಆದರೆ, ಅವರ ವಿಚಾರಗಳು ಮತ್ತು ಅವರ ಬದುಕಿನ ಸಂದೇಶಗಳು ನಮ್ಮ ಜತೆಗೆ ಇವೆ. ಅವರು ಗಾಂಧಿಯನ್ನು ಕೊಂದರೇ ಹೊರತು ಅವರ ವಿಚಾರಗಳನ್ನು ಕೊಲ್ಲಲು ಸಾಧ್ಯವಾಗಿಲ್ಲ. ಇಡೀ ವಿಶ್ವ ಗೌರವಿಸುವ ವ್ಯಕ್ತಿ ಮತ್ತು ವ್ಯಕ್ತಿತ್ವ ಮಹಾತ್ಮ ಗಾಂಧಿ ಅವರದ್ದು ಎಂದರು.

ದೇಶ ವಿಭಜನೆಯ ಸಂದರ್ಭದಲ್ಲಿ ಗಾಂಧಿ ಅವರು ನಿರ್ವಹಿಸಿದ ಪಾತ್ರವನ್ನು ಬೇರೆ ಯಾರಿಂದಲೂ ನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ. ವಿಭಜನೆ ಸಂದರ್ಭದಲ್ಲಿ ನಡೆದ ಕೋಮುಗಲಭೆಗಳು, ಹಿಂಸೆ ಮತ್ತು ಕ್ರೌರ್ಯದ ಘಟನೆಗಳನ್ನು ನಾನು ಓದಿದ್ದೇನೆ. ಆ ಘಟನೆಗಳನ್ನು ನೆನಪಿಸಿಕೊಂಡರೆ ಈಗಲೂ ಮೈನಡುಗುತ್ತದೆ.

ಲಾಹೋರ್, ದೆಹಲಿ, ಪಶ್ಚಿಮಬಂಗಾಳ ಮುಂತಾದ ಕಡೆಗಳಲ್ಲಿ ನಡೆಯುತ್ತಿದ್ದ ಭೀಕರ ಕೋಮುಗಲಭೆಗಳ ಸಂದರ್ಭದಲ್ಲಿ ಜನರ ಬಳಿಗೆ ಹೋಗಿ ಅವರಿಗೆ ಸಾಂತ್ವನ ಹೇಳಿ, ಸಮಾಧಾನಪಡಿಸಿ ಕೋಮುಗಲಭೆಗಳನ್ನು ನಿಲ್ಲಿಸಿದರು. ಈ ಕೆಲಸ ಮಾಡಲು ಸಾಧ್ಯ ಇದ್ದದ್ದು ಮಹಾತ್ಮ ಗಾಂಧಿಯವರಿಗೆ ಮಾತ್ರ. ಹೀಗಾಗಿ, ಗಾಂಧಿ ಅವರಿಗೆ ಗಾಂಧಿಯೇ ಸಾಟಿ. ವಿಶ್ವದಲ್ಲಿ ಮಹಾತ್ಮ ಎಂದು ಕರೆಸಿಕೊಳ್ಳುವ ನಿಜವಾದ ಅರ್ಹತೆ ಹೊಂದಿದ್ದವರು ಗಾಂಧಿ ಮಾತ್ರ ಎಂದು ಅವರ ಹೋರಾಟ ಮತ್ತು ವೈಚಾರಿಕತೆಯನ್ನು ಸ್ಮರಿಸಿದರು.

ಬದುಕಿರುವವರೆಗೂ, ತಮ್ಮ ದೇಹದಲ್ಲಿ ರಕ್ತದ ಕೊನೆ ಹನಿ ಇರುವವರೆಗೂ ಮನುಕುಲದ ಒಳಿತಿಗಾಗಿ ಶ್ರಮಿಸಬೇಕು ಎಂದು ಬದುಕಿದ್ದವರು. ಮನುಕುಲದ ಶಾಂತಿ-ನೆಮ್ಮದಿಗಾಗಿ ದುಡಿಯುತ್ತಿದ್ದವರು. ಇವರು ಇನ್ನಷ್ಟು ವರ್ಷಗಳ ಕಾಲ ಬದುಕಿದ್ದಿದ್ದರೆ ಭಾರತದ ಚಿತ್ರಣವೇ ಇನ್ನೂ ಭಿನ್ನವಾಗಿರುತ್ತಿತ್ತು. ಆದರೆ, ಮತಾಂಧತೆಯ ವಿರುದ್ಧ ಮನುಕುಲದ ಒಳಿತಿಗಾಗಿ ಶ್ರಮಿಸುತ್ತಿದ್ದ ಗಾಂಧಿ ಅವರನ್ನು ಮತಾಂಧನೊಬ್ಬ ಕೊಂದು ಹಾಕಿದ. ಆಗಿನ ಬ್ರಿಟಿಷ್ ಅಧಿಕಾರಿಯೇ ಗಾಂಧಿ ಅವರನ್ನು, "ಆರ್ಮಿ ಆಫ್ ಪೀಸ್' ಎಂದು ಕರೆದಿದ್ದರು.

ಆತ್ಮಬಲ ಮಹಾತ್ಮಗಾಂಧಿ ಅವರಿಗೆ ಹೆಚ್ಚಾಗಿತ್ತು. ಗಾಂಧಿ ಅವರ ವಿಚಾರಗಳಿಂದ ಪ್ರಭಾವಿತರಾದ ಯುವಕರು ನೀವು ನೂರು ವರ್ಷ ಬದುಕಬೇಕು ಎಂದು ಹಾರೈಸಿದರೆ, ಇಲ್ಲ ನಾನು ನೂರಾ ಇಪ್ಪತ್ತೈದು ವರ್ಷ ಬದುಕುತ್ತೇನೆ, ನೀವು ನನ್ನ ಆಯಸ್ಸನ್ನು ಕಡಿಮೆ ಮಾಡಿದ್ದೀರಿ ಎಂದು ಯುವಕರಿಗೆ ಹೇಳುತ್ತಿದ್ದರು. ಆ ಮಟ್ಟದ ಆತ್ಮಬಲ ಗಾಂಧಿ ಅವರಲ್ಲಿತ್ತು. ಅವರು ಕೊಲೆ ಆಗುವ ವೇಳೆಯಲ್ಲೂ ಆರೋಗ್ಯ ತುಂಬಾ ಚೆನ್ನಾಗಿತ್ತು. ಅವರು ಇಚ್ಚಿಸಿದಷ್ಟು ವರ್ಷ ಬದುಕುವ ಚೈತನ್ಯ ಮತ್ತು ಆತ್ಮಬಲದ ಜತೆಗೆ ಆರೋಗ್ಯವನ್ನೂ ಹೊಂದಿದ್ದರು ಎಂದರು.

ಹುತಾತ್ಮ ಮಹಾತ್ಮ ಗಾಂಧಿ ಅವರ ವಿಚಾರಧಾರೆಗಳು ಹಿಂದೆಂದಿಗಿಂತ ಇಂದು ಹೆಚ್ಚು ಅಗತ್ಯವಾಗಿದೆ. ಗಾಂಧಿ ಅವರ ಬದುಕಿನ ಹೋರಾಟ ಮತ್ತು ಬದುಕಿನ ಸಂದೇಶವೇ ನಮಗೆಲ್ಲರಿಗೂ ಸ್ಫೂರ್ತಿ ಆಗಬೇಕು. ಅದರಲ್ಲೂ ಇವತ್ತಿನ ವಿದ್ಯಾರ್ಥಿ ಯುವಜನರು ಗಾಂಧಿ ಮಹಾತ್ಮ ಏಕಾದರು ಎನ್ನುವುದನ್ನು ಅರಿತುಕೊಳ್ಳಬೇಕು. ಈ ವಿಶ್ವಕ್ಕೆ, ಈ ದೇಶಕ್ಕೆ ನೆಮ್ಮದಿ-ಶಾಂತಿಯ ಬದುಕು ಬೇಕೆಂದರೆ ಅದು ಗಾಂಧಿ ಅವರ ಬದುಕಿನ ಸಂದೇಶಗಳಿಂದ, ಬದುಕಿನ ಮಾರ್ಗದಿಂದ ಮಾತ್ರ ಸಾಧ್ಯ. ಹೀಗಾಗಿ, ಮಹಾತ್ಮರ ಪುಣ್ಯತಿಥಿಯಂದು ದೇಶದ ಸ್ವಾತಂತ್ರಕ್ಕಾಗಿ ಹೋರಾಡಿ ಮಡಿದ, ಮನುಕುಲದ ಶಾಂತಿಗಾಗಿ ತ್ಯಾಗ ಬಲಿದಾನಗೈದ ಪ್ರತಿಯೊಬ್ಬರನ್ನೂ ಸ್ಮರಿಸುತ್ತಾ ಅವರೆಲ್ಲರಿಗೂ ಈ ಸಂದರ್ಭದಲ್ಲಿ ನಮನಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

ಸಮಾರಂಭದ ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಇಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರೊಂದಿಗೆ ಸಿದ್ದರಾಮಯ್ಯ ಅವರು ಮಾತುಕತೆ ನಡೆಸಿದರು. ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್, ಕಾನೂನು ವಿಭಾಗದ ಅಧ್ಯಕ್ಷ ಪೊನ್ನಣ್ಣ, ಮಾಜಿ ಸಚಿವ ಆಂಜನೇಯ, ಮಾಜಿ ಸಂಸದ ಉಗ್ರಪ್ಪ ಹಾಜರಿದ್ದರು.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 30, 2022, 5:09 PM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.