ETV Bharat / state

2020ರ ಅತಿವೃಷ್ಟಿಗೆ ಕೊಚ್ಚಿಹೋದ ಮನೆ ಮಾಲೀಕರ ಕೈ ಸೇರದ ಹಣ: ಹೇಗಿದೆ ಪರಿಹಾರ ಪಾವತಿ ಸ್ಥಿತಿಗತಿ?

author img

By

Published : Jun 10, 2021, 2:29 AM IST

ಕಳೆದ ಬಾರಿ ಕರುನಾಡು ವರುಣನ ಅಬ್ಬರಕ್ಕೆ ನಲುಗಿ ಹೋಗಿತ್ತು. ಮಳೆಯ ಅಬ್ಬರಕ್ಕೆ ಸಾವಿರಾರು ಮಂದಿ ತಮ್ಮ ಮನೆಮಠ ಕಳೆದುಕೊಂಡು ನಿರಾಶ್ರಿತರಾಗಿದ್ದರು. ಮನೆ ಕಳೆದುಕೊಂಡವರಿಗೆ ಸರ್ಕಾರ ಪರಿಹಾರ ಘೋಷಣೆ ಮಾಡಿತ್ತು.‌ ಆದರೆ ಪರಿಹಾರ ಘೋಷಣೆ ಮನೆ ಕಳೆದುಕೊಂಡವರಿಗೆ ಸಂಪೂರ್ಣವಾಗಿ ಇನ್ನೂ ಕೈ ಸೇರಿಲ್ಲ.

many-people-still-not-get-relief-funds-who-lost-their-home-in-flood
2020ರ ಅತಿವೃಷ್ಟಿಗೆ ಕೊಚ್ಚಿಹೋದ ಮನೆ ಮಾಲೀಕರ ಕೈ ಸೇರದ ಹಣ

ಬೆಂಗಳೂರು: ಮುಂಗಾರು ಮಳೆ ರಾಜ್ಯಕ್ಕೆ ಎಂಟ್ರಿ ಕೊಟ್ಟಿದೆ. ಕೋವಿಡ್ ಅಬ್ಬರದ ಮಧ್ಯೆ ಕಳೆದ ಬಾರಿಯಂತೆ ಈ ವರ್ಷವೂ ಅತಿವೃಷ್ಟಿ ಎದುರಿಸಲು ಸರ್ಕಾರ ತಯಾರಿ‌ ನಡೆಸುತ್ತಿದೆ. ಕಳೆದ ವರ್ಷ ಒಂದರ ಹಿಂದೊಂದರಂತೆ ಸುರಿದ‌ ಭಾರೀ ಮಳೆಗೆ ಉತ್ತರ ಕರ್ನಾಟಕ‌ ಭಾಗದ ಸಾವಿರಾರು ಮಂದಿ ಮನೆಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಅತಿವೃಷ್ಟಿ ಸಂಭವಿಸಿ ಒಂದು ವರ್ಷ ಕಳೆದಿದ್ದು, ಮನೆ ಕಳೆದುಕೊಂಡವರ ಕೈ ಸೇರಿದ ಪರಿಹಾರ ಮಾತ್ರ ಅಷ್ಟಕಷ್ಟೇ.

ಕಳೆದ ಬಾರಿ ಕರುನಾಡು ವರುಣನ ಅಬ್ಬರಕ್ಕೆ ನಲುಗಿ ಹೋಗಿತ್ತು. ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಒಂದರ ಹಿಂದೊಂದರಂತೆ ಮಳೆ ಅಬ್ಬರಿಸಿ ಬೊಬ್ಬಿರಿದಿತ್ತು. ಇದರಿಂದ ಉತ್ತರ ಕರ್ನಾಟಕ ಭಾಗ ಬಹುತೇಕ ಜಲಾವೃತಗೊಂಡಿದ್ದವು. ಮಳೆಯ ಅಬ್ಬರಕ್ಕೆ ಸಾವಿರಾರು ಮಂದಿ ತಮ್ಮ ಮನೆಮಠ ಕಳೆದುಕೊಂಡು ನಿರಾಶ್ರಿತರಾಗಿದ್ದರು. ಮನೆ ಕಳೆದುಕೊಂಡವರಿಗೆ ಸರ್ಕಾರ ಪರಿಹಾರ ಘೋಷಣೆ ಮಾಡಿತ್ತು.‌ ಆದರೆ ಪರಿಹಾರ ಘೋಷಣೆ ಮನೆ ಕಳೆದುಕೊಂಡವರಿಗೆ ಸಂಪೂರ್ಣವಾಗಿ ಇನ್ನೂ ಕೈ ಸೇರಿಲ್ಲ.

ನೆರೆಗೆ ಸಂಪೂರ್ಣ ಹಾನಿಗೊಳಗಾದ ಮನೆ (ಎ ವರ್ಗ) ಮಾಲೀಕರಿಗೆ 5 ಲಕ್ಷ ರೂ., ಭಾಗಶಃ ಹಾನಿಗೊಳಗಾದ ಮನೆ‌ (ಬಿ ವರ್ಗ) ಮಾಲೀಕರಿಗೆ 3 ಲಕ್ಷ ರೂ. ಪರಿಹಾರ ಘೋಷಿಸಲಾಗಿತ್ತು. ಸಣ್ಣಪುಟ್ಟ ಹಾನಿಗೊಳಗಾದ ಮನೆ (ಸಿ ವರ್ಗ) ಮಾಲೀಕರಿಗೆ 50 ಸಾವಿರ ರೂ.‌ಪರಿಹಾರ ಘೋಷಿಸಲಾಗಿತ್ತು.

ಪರಿಹಾರದ ಸ್ಥಿತಿಗತಿ ಹೇಗಿದೆ?:

ಮಳೆಯ ಅಬ್ಬರಕ್ಕೆ ಸುಮಾರು 44,835 ಮನೆಗಳು ಹಾನಿಗೊಳಗಾಗಿದ್ದವು. ಈ ಪೈಕಿ 37,300 ಮನೆಗಳು ಸಣ್ಣಪುಟ್ಟ ಪ್ರಮಾಣದಲ್ಲಿ ಹಾನಿಗೊಳಗಾಗಿದ್ದವು. ಸರ್ಕಾರ ಈವರೆಗೆ ಅತಿವೃಷ್ಟಿಗೆ ಹಾನಿಗೊಳಗಾದ ಮನೆಗಳಿಗೆ ಪರಿಹಾರಾರ್ಥವಾಗಿ 130.57 ಕೋಟಿ ರೂ. ಬಿಡುಗಡೆ ಮಾಡಿದೆ.

Many people still not get Relief funds who lost their home in flood
ಪರಿಹಾರ ಪಾವತಿ ಅಂಕಿ-ಅಂಶ

ಎ ವರ್ಗದ ಫಲಾನುಭವಿಗಳಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುತ್ತಿದ್ದು, ಮನೆ ನಿರ್ಮಾಣದ ಪ್ರಗತಿ ಆಧಾರದಲ್ಲಿ ನಾಲ್ಕು ಕಂತುಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಅದೇ ಬಿ ವರ್ಗದ ಫಲಾನುಭವಿಗಳಿಗೆ 3 ಲಕ್ಷ ರೂ. ಪರಿಹಾರ ನೀಡಲಾಗುತ್ತಿದ್ದು, ಮೂರು ಕಂತುಗಳಲ್ಲಿ ಹಣ ಬಿಡುಗಡೆ ಮಾಡಲಾಗುತ್ತದೆ. ಆದರೆ, ಬಹುತೇಕ ಮನೆಗಳಿಗೆ ಮೊದಲ ಕಂತಾದ 1 ಲಕ್ಷ ರೂ. ಪರಿಹಾರ ಹಣವನ್ನು ಮಾತ್ರ ಬಿಡುಗಡೆ ಮಾಡಲಾಗಿದೆ.

ಕೋವಿಡ್ ಮಹಾಮಾರಿ ಹಿನ್ನೆಲೆಯಲ್ಲಿ ಪರಿಹಾರ ಹಣ ಪಾವತಿಯನ್ನು ವಿಳಂಬವಾಗಿಸುತ್ತಿದೆ. ಕಾರ್ಮಿಕರ ಕೊರತೆ ಹಿನ್ನೆಲೆ ಮನೆ ನಿರ್ಮಾಣ ಕಾಮಗಾರಿ ವಿಳಂಬವಾಗುತ್ತಿದ್ದು, ಪರಿಹಾರ ನೀಡುವ ಪ್ರಕ್ರಿಯೆ ತಡವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳು ತಿಳಿಸುವಂತೆ ಸುಮಾರು 90% ಮಳೆ ಹಾನಿ ಮನೆಗಳ ಮರು ನಿರ್ಮಾಣಕ್ಕಾಗಿ ಮೊದಲ ಕಂತನ್ನು ಬಿಡುಗಡೆ ಮಾಡಲಾಗಿದೆ.‌ ಇನ್ನು 30%ರಷ್ಟು ಫಲಾನುಭವಿಗಳಿಗೆ ಎರಡನೇ ಕಂತಿನ ಪರಿಹಾರ ಬಿಡುಗಡೆ ಮಾಡಲಾಗಿದೆ.

ಮೊದಲ ಕಂತು ಮಾತ್ರ 2ನೇ ಕಂತು ಇನ್ನೂ ಕೈಸೇರಿಲ್ಲ:

ಕಂದಾಯ ಇಲಾಖೆ ನೀಡಿದ ಅಂಕಿಅಂಶದ ಪ್ರಕಾರ ಸಂಪೂರ್ಣ ಹಾನಿಗೊಳಗಾದ 1,101 ಮನೆಗಳ (ಎ ವರ್ಗ) ಪೈಕಿ ಈವರೆಗೆ 970 ಮನೆಗಳಿಗೆ ಮೊದಲ ಕಂತಿನ ಪರಿಹಾರ ಹಣ ನೀಡಲಾಗಿದೆ. 131 ಮನೆಗಳಿಗೆ ಇನ್ನೂ ಮೊದಲ ಕಂತನ್ನೂ ಬಿಡುಗಡೆ ಮಾಡಿಲ್ಲ. ಅದೇ ರೀತಿ ಭಾಗಶಃ ಹಾನಿಗೊಳಗಾದ 7,694 ಮನೆಗಳ (ಬಿ ವರ್ಗ) ಪೈಕಿ ಈವರೆಗೆ 4,545 ಮನೆಗಳಿಗೆ ಮೊದಲ ಕಂತನ್ನು ಬಿಡುಗಡೆ ಮಾಡಲಾಗಿದೆ. ಅಂದರೆ 3,149 ಮನೆಗಳಿಗೆ ಇನ್ನೂ ಮೊದಲ ಕಂತಿನ ಪರಿಹಾರ ಹಣ ಕೈಸೇರಿಲ್ಲ. ಅದೇ ರೀತಿ 30,219 ಸಣ್ಣಪುಟ್ಟ ಹಾನಿಗೊಳಗಾದ ಮನೆ (ಸಿ ವರ್ಗ) ಪೈಕಿ 25,357 ಮನೆಗಳಿಗೆ ಮಾತ್ರ ಮೊದಲ ಕಂತಿನ ಪರಿಹಾರ ಹಣ ಪಾವತಿಸಲಾಗಿದೆ. ಅಂದರೆ 4,862 ಮನೆಗಳಿಗೆ ಇನ್ನೂ ಮೊದಲ ಕಂತನ್ನು ನೀಡಲಾಗಿಲ್ಲ.

2020ರಲ್ಲಿ ಸುರಿದ ಭಾರಿ ಮಳೆ ಬಳಿಕ ಸರ್ಕಾರ 1,342 ಮನೆಗಳನ್ನು ಸಂಪೂರ್ಣ ಹಾನಿಗೊಳಗಾದ ಮನೆಗಳೆಂದು ಗುರುತಿಸಲಾಗಿದ್ದರೆ, 5,790 ಮನೆಗಳನ್ನು ಭಾಗಶಃ ಹಾನಿಗೊಳಗಾದ ಮನೆಗಳೆಂದು ಗುರುತಿಸಲಾಗಿದೆ. ಇವುಗಳಲ್ಲಿ ಮೊದಲ ಕಂತಿನ‌ ಹಣ ಬಿಡುಗಡೆಯಾಗಿದ್ದರೆ, ಬಹುತೇಕರಿಗೆ ಎರಡನೇ ಕಂತಿನ ಪರಿಹಾರ ಹಣ ಬಿಡುಗಡೆಯಾಗಿಲ್ಲ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.