ETV Bharat / state

ಮಲ್ಲತ್ತಳ್ಳಿ ಕೆರೆ ಒತ್ತುವರಿ ಮಾಡಿಲ್ಲ, ಶಾಶ್ವತ ಪ್ರತಿಮೆ ನಿರ್ಮಾಣ ಇಲ್ಲ: ಹೈಕೋರ್ಟ್​​ಗೆ ಬಿಬಿಎಂಪಿ ಪ್ರಮಾಣ ಪತ್ರ

author img

By

Published : Mar 6, 2023, 9:26 PM IST

ಮಲ್ಲತ್ತಹಳ್ಳಿ ಕೆರೆಯಲ್ಲಿ ಯಾವುದೇ ರೀತಿಯಲ್ಲಿಯೂ ಒತ್ತುವರಿ ಆಗಿಲ್ಲ ಎಂದು ಹೈಕೋರ್ಟ್​ಗೆ ಬಿಬಿಎಂಪಿ ಪ್ರಮಾಣ ಪತ್ರ ಸಲ್ಲಿಸಿದೆ.

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ನಗರದ ಮಲ್ಲತ್ತಹಳ್ಳಿ ಕೆರೆಯಲ್ಲಿ ಯಾವುದೇ ಶಾಶ್ವತ ಕಟ್ಟಡ ನಿರ್ಮಾಣ ಮಾಡಿಲ್ಲ. ಧಾರ್ಮಿಕ ಆಚರಣೆಗೆ ಬಳಕೆ ಮಾಡುವ ಗಣೇಶ ಮತ್ತು ದುರ್ಗಾ ಮೂರ್ತಿಗಳ ವಿಲೇವಾರಿಗಾಗಿ ಕೆರೆಯಿಂದ 52 ಮೀಟರ್ ದೂರದಲ್ಲಿ ಕಲ್ಯಾಣಿ ನಿರ್ಮಿಸಲಾಗುತ್ತಿದ್ದು, ಯಾವುದೇ ರೀತಿಯಲ್ಲಿಯೂ ಕೆರೆ ಒತ್ತುವರಿಯಾಗಿಲ್ಲ ಎಂದು ಹೈಕೋರ್ಟ್​​ಗೆ ಬಿಬಿಎಂಪಿ ಪ್ರಮಾಣ ಪತ್ರ ಸಲ್ಲಿಸಿದೆ. ಮಲ್ಲತ್ತಹಳ್ಳಿ ಕೆರೆಯಲ್ಲಿ ಶಿವನ ಪ್ರತಿಮೆ ಮತ್ತು ಬಯಲು ರಂಗ ಮಂದಿರ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಿದೆ ಎಂದು ಆರೋಪಿಸಿ ವಕೀಲರಾದ ಗೀತಾ ಮಿಶ್ರಾ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ಟಿ.ವೆಂಕಟೇಶ ನಾಯಕ್ ಅವರಿದ್ದ ಪೀಠಕ್ಕೆ ಬಿಬಿಎಂಪಿ ಕೆರೆ ವಿಭಾಗದ ಮುಖ್ಯ ಎಂಜಿನಿಯರ್ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.

ಪ್ರಮಾಣ ಪತ್ರದಲ್ಲಿ ಏನಿದೆ? ರಾಜ್ಯ ಸರ್ಕಾರದ ನಿರ್ದೇಶನದಂತೆ ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆಯಡಿ ಕೆರೆಯಲ್ಲಿ ಕಲ್ಯಾಣಿಯಲ್ಲಿಯೇ ಬಯಲು ರಂಗ ಮಂದಿರ ಮಾದರಿಯಲ್ಲಿ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದ್ದು, ಕಾಮಗಾರಿಯನ್ನು ಬಿಬಿಎಂಪಿ ಕೈಗೆತ್ತಿಕೊಂಡಿದೆ. ಇದಕ್ಕಾಗಿ ಕರ್ನಾಟಕ ಕೆರೆ ಅಭಿವೃದ್ಧಿ ಪ್ರಾಧಿಕಾರ(ಕೆಟಿಸಿಡಿಎ)ದಿಂದ ಒಪ್ಪಿಗೆ ನೀಡಲಾಗಿದೆ. ಕಲ್ಯಾಣಿ ನಿರ್ಮಾಣದ ಕಾಮಗಾರಿ ನಡೆಯುತ್ತಿದ್ದು, ಇನ್ನೂ ಪೂರ್ಣಗೊಂಡಿಲ್ಲ.

ಕೆರೆ ಆವರಣದಿಂದ 52 ಮೀಟರ್ ದೂರದಲ್ಲಿ ಕಲ್ಯಾಣ ನಿರ್ಮಾಣ ಮಾಡಿಕೊಳ್ಳಲಾಗುತ್ತಿದೆ. ಇದು ಕೆರೆಯನ್ನು ಒತ್ತುವರಿ ಮಾಡಿರುವ ಆರೋಪವೇ ಬರುವುದಿಲ್ಲ. ಧಾರ್ಮಿಕ ಚಟುವಟಿಕೆಗಳಾದ ಗಣೇಶ ಮತ್ತು ದುರ್ಗಾ ಪ್ರತಿಮೆಗಳ ವಿಲೇವಾರಿಯಿಂದ ಕರೆ ನೀರಿನಲ್ಲಿ ಆಗಬಹುದಾದ ಮಾಲಿನ್ಯವನ್ನು ತಡೆಯುವ ಉದ್ದೇಶಕ್ಕಾಗಿ ಕಲ್ಯಾಣಿ ನಿರ್ಮಾಣ ಮಾಡಲಾಗುತ್ತಿದೆ. ಕಲ್ಯಾಣಿಯಲ್ಲಿರುವ ನೀರು ಕೆರೆ ನೀರಿನೊಂದಿಗೆ ಮಿಶ್ರಣವಾಗದೆ ಸ್ವಚ್ಛತೆ ಕಾಪಾಡುವ ಉದ್ದೇಶವನ್ನು ಹೊಂದಲಾಗಿದೆ. ಅಲ್ಲದೆ, ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಕೆ ಮಾಡುವ ಕಲ್ಯಾಣಿಯ ನೀರನ್ನು ಚರಂಡಿ ಮೂಲಕ ಹೊರ ಕಳುಹಿಸಲಾಗುವುದು. ಆದರೆ, ಕೆರೆಗೆ ಮಿಶ್ರಣ ಮಾಡುವುದಕ್ಕೆ ಅವಕಾಶ ಇರುವುದಿಲ್ಲ.

ಜೊತೆಗೆ, ಇತ್ತೀಚೆಗೆ ನಡೆದ ಶಿವರಾತ್ರಿ ಹಬ್ಬದಂತು ಕಲ್ಯಾಣಿ ಭಾಗದಲ್ಲಿ ಶಿವರಾತ್ರಿ ಆಚರಣೆ ಮಾಡಲು ಆರನೇ ಪ್ರತಿವಾದಿ ಮನವಿಯ ಮೇರೆಗೆ ಷರತ್ತುಬದ್ಧ ಅವಕಾಶ ನೀಡಲಾಗಿತ್ತು. ಶಿವರಾತ್ರಿಯಂದು ಪ್ರತಿಷ್ಠಾಪನೆ ಮಾಡಿದ್ದ ಶಿವನ ಪ್ರತಿಮೆ ಶಾಶ್ವತ ಕಟ್ಟಡವಲ್ಲ. ತಾತ್ಕಾಲಿಕವಾಗಿದೆ. ಇದು ಹಬ್ಬದ ದಿನಕ್ಕೆ ಮಾತ್ರ ಸೀಮಿತವಾಗಿದೆ. ಇದು ಮಣ್ಣಿನಲ್ಲಿ ಮಾಡಿರುವುದಾಗಿದ್ದು, ಕೆರೆಯಲ್ಲಿ ಮಾಲಿನ್ಯಕ್ಕೆ ಕಾರಣವಲ್ಲ. ಹಬ್ಬದ ಬಳಿಕ ಮೂರ್ತಿಯನ್ನು ತೆರವು ಮಾಡಲಾಗಿದೆ.

ಒಟ್ಟು 71.18 ಗುಂಟೆ ಇರುವ ಕರೆಯಲ್ಲಿ ಯಾವುದೇ ಒತ್ತುವರಿಯಾಗಿಲ್ಲ. ಕೆರೆಯ ಸಂಪೂರ್ಣ ಭಾಗಕ್ಕೆ ಬೇಲಿ ಹಾಕಿ ರಕ್ಷಣೆ ಮಾಡಲಾಗುತ್ತಿದೆ. ಆದರೆ, ಮೂರು ಪ್ರಕರಣದಲ್ಲಿ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಜೊತೆಗೆ ರಕ್ಷಣೆಗಾಗಿ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಈ ಕೆರೆಯನ್ನು 2016ರಲ್ಲಿ ಬಿಡಿಎ ಬಿಬಿಎಂಪಿಗೆ ಹಸ್ತಾಂತರ ಮಾಡಿದೆ. ಬಿಬಿಎಂಪಿ ಅದನ್ನು ಅಭಿವೃದ್ಧಿ ಪಡಿಸಿ ಪುನಶ್ಚೇತನ ಮಾಡಿ 44 ಎಕರೆ ವ್ಯಾಪ್ತಿ ವಿಸ್ತರಣೆ ಮಾಡಲಾಗಿದೆ. ಜೊತೆಗೆ, ಹೂಳು ತೆಗೆದಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಲ್ಲುತ್ತಿದೆ. 2020ರಲ್ಲಿ 364.2 ಮಿಲೀಲೀಟರ್ ಇದ್ದ ನೀರಿನ ಪ್ರಮಾಣ 2022ರಲ್ಲಿ 628.07 ಮಿಲಿ ಲೀಟರ್​ಗೆ ಹೆಚ್ಚಳವಾಗಿದೆ.

ಅಲ್ಲದೆ, ಮಲ್ಲತ್ತಹಳ್ಳಿ ಕೆರೆಯಲ್ಲಿ ಫೆ.18ರಂದು ಕೆಲ ಧಾರ್ಮಿಕ ಚಟುವಟಿಕೆಗಳು ನಡೆದಿವೆ. ಯಾವುದೇ ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಶಿವರಾತ್ರಿ ಹಬ್ಬದ ಪ್ರಯುಕ್ತ ಶಾಶ್ವತ ಶಿವನ ಪ್ರತಿಮೆ ಸ್ಥಾಪನೆಗೆ ಅನುಮತಿ ನೀಡಿಲ್ಲ. ಇದರಿಂದ ಕೆರೆ ಪ್ರದೇಶ ಕಡಿಮೆಯಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ. ಜೊತೆಗೆ, ಯಾವುದೇ ಕಾನೂನು ಬಾಹಿರ ಚಟುವಟಿಕೆಗೆಳಿಗೆ ಅನುಮತಿ ನೀಡಿಲ್ಲ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಮಾಡಾಳ್ ವಿರುಪಾಕ್ಷಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.