ETV Bharat / state

ರಾಜ್ಯಸಭೆಗೆ 3ನೇ ಅಭ್ಯರ್ಥಿ ಪ್ರಕಟಿಸಿದ ಬಿಜೆಪಿ: ಬಿಎಸ್ವೈ ಆಪ್ತ ಲೆಹರ್ ಸಿಂಗ್‌ಗೆ ಮಣೆ

author img

By

Published : May 31, 2022, 7:07 AM IST

ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೂರೂ ರಾಜಕೀಯ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿವೆ. ಬಿಜೆಪಿ ತನ್ನ ಮೂರನೇ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿದ್ದು, ಬಿಎಸ್​ವೈ ಆಪ್ತ ಲೆಹರ್ ಸಿಂಗ್‌ಗೆ ಬಿಜೆಪಿ ಟಿಕೆಟ್ ನೀಡಿದೆ.

bjp-announced-its-third-candidate-as-lehar-singh-for-rajyasbha-elections
ರಾಜ್ಯಸಭೆಗೆ ಮೂರನೇ ಅಭ್ಯರ್ಥಿ ಹೆಸರು ಪ್ರಕಟಿಸಿದ ಬಿಜೆಪಿ: ಬಿಎಸ್ವೈ ಆಪ್ತ ಲೆಹರ್ ಸಿಂಗ್ ಗೆ ಮಣೆ..!

ಬೆಂಗಳೂರು: ನಿರೀಕ್ಷೆಯಂತೆ ರಾಜ್ಯಸಭೆ ಚುನಾವಣೆಗೆ ಮೂರನೇ ಅಭ್ಯರ್ಥಿಯ ಹೆಸರನ್ನು ಬಿಜೆಪಿ ಪ್ರಕಟಿಸಿದ್ದು, ಬಿ.ಎಸ್.ಯಡಿಯೂರಪ್ಪ ಆಪ್ತ ಲೆಹರ್ ಸಿಂಗ್ ಅವರಿಗೆ ಬಿಜೆಪಿ ವರಿಷ್ಠರು ಟಿಕೆಟ್ ನೀಡಿದ್ದಾರೆ. ನಾಲ್ಕು ಸ್ಥಾನಗಳಿಗೆ ನಡೆಯುತ್ತಿರುವ ರಾಜ್ಯಸಭೆ ಚುನಾವಣೆಯಲ್ಲಿ ಎರಡು ಸ್ಥಾನವನ್ನು ಅನಾಯಾಸವಾಗಿ ಗೆಲ್ಲಬಹುದಾಗಿರುವ ಬಿಜೆಪಿ ನಿರ್ಮಲಾ ಸೀತಾರಾಮನ್ ಹಾಗು ನಟ ಜಗ್ಗೇಶ್ ಹೆಸರು ಪ್ರಕಟಿಸಿದ್ದು, ಹೆಚ್ಚುವರಿ ಮತಗಳ ಕಾರಣಕ್ಕೆ ಎರಡನೇ ಪ್ರಾಶಸ್ತ್ಯ ಅಥವಾ ಇತರ ಪಕ್ಷಗಳ ಮತಗಳ ಸೆಳೆಯುವ ತಂತ್ರದೊಂದಿಗೆ ಮೂರನೇ ಅಭ್ಯರ್ಥಿಯ ಹೆಸರು ಪ್ರಕಟಿಸಿದೆ.

ಈ ನಿಟ್ಟಿನಲ್ಲಿ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದ ಲೆಹರ್ ಸಿಂಗ್ ಅವರಿಗೆ ಬಿಜೆಪಿ ವರಿಷ್ಠರು ಮಣೆ ಹಾಕಿದ್ದಾರೆ. ಹಾಲಿ ಸದಸ್ಯ ಕೆ.ಸಿ.ರಾಮಮೂರ್ತಿ, ಲೆಹರ್ ಸಿಂಗ್ ಮತ್ತು ಉದ್ಯಮಿ ಪ್ರಕಾಶ್ ಶೆಟ್ಟಿ ಹೆಸರನ್ನು ಮೂರನೇ ಸ್ಥಾನಕ್ಕಾಗಿ ರಾಜ್ಯ ಕೋರ್ ಕಮಿಟಿ ಶಿಫಾರಸು ಮಾಡಿತ್ತು.

bjp-announced-its-third-candidate-as-lehar-singh-for-rajyasbha-elections

ಮತಗಳ ಲೆಕ್ಕಾಚಾರ: ರಾಜ್ಯಸಭಾ ಚುನಾವಣೆಯಲ್ಲಿ ಗೆಲುವು ಪಡೆಯಲು ಒಬ್ಬ ಅಭ್ಯರ್ಥಿಗೆ 46 ಮತಗಳು ಬೇಕಿದೆ‌. ಪಕ್ಷೇತರ ಅಭ್ಯರ್ಥಿಯ ಬೆಂಬಲದೊಂದಿಗೆ ಒಟ್ಟು 122 ಶಾಸಕರ ಮತಗಳನ್ನು ಆಡಳಿತಾರೂಢ ಬಿಜೆಪಿ ಹೊಂದಿದೆ. ಇದರಿಂದಾಗಿ ಸ್ವಂತ ಬಲದ ಮೇಲೆ ಎರಡು ಸ್ಥಾನಗಳನ್ನು ಪಡೆಯಲಿರುವ ಬಿಜೆಪಿ ಬಳಿ ಇನ್ನೂ 30 ಮತಗಳು ಹೆಚ್ಚುವರಿಯಾಗಿ ಉಳಿಯಲಿವೆ. ಮೂರನೇ ಸ್ಥಾನ ಗೆಲ್ಲಲು ಬಿಜೆಪಿಗೆ 16 ಮತಗಳ ಕೊರತೆ ಎದುರಾಗಲಿದೆ. ಈ ಸ್ಥಾನವನ್ನು ಗೆಲ್ಲಲು ಕಾಂಗ್ರೆಸ್‌ಗೆ 22 ಮತಗಳ ಕೊರತೆ, ಜೆಡಿಎಸ್‌ಗೆ 14 ಮತಗಳ ಕೊರತೆ ಎದುರಾಗಲಿದೆ. ನಾಲ್ಕನೇ ಸ್ಥಾನಕ್ಕೆ ಯಾವುದೇ ಪಕ್ಷಕ್ಕೂ ಅಗತ್ಯ ಮತ ಇಲ್ಲದೇ ಇದ್ದರೂ ಮೂರೂ ಪಕ್ಷಗಳು ಅಭ್ಯರ್ಥಿಗಳ ಕಣಕ್ಕಿಳಿಸುತ್ತಿವೆ. ಕಾಂಗ್ರೆಸ್ ಹೆಚ್ಚುವರಿ ಮತ ಮತ್ತು ಜೆಡಿಎಸ್ ಮತಗಳ ಮೇಲೆ ಬಿಜೆಪಿ ಕಣ್ಣಿಟ್ಟಿದ್ದು ಶಾಸಕರ ಮತ ಸೆಳೆಯುವ ಜವಾಬ್ದಾರಿಯನ್ನು ಅಭ್ಯರ್ಥಿಗೇ ಬಿಡಲಾಗಿದೆ. ಬಿಜೆಪಿ ನಾಯಕರು ಎರಡನೇ ಪ್ರಾಶಸ್ತ್ಯದ ಮತಗಳ ಲೆಕ್ಕಾಚಾರವನ್ನೂ ಹಾಕುತ್ತಿದ್ದಾರೆ.

ಪರಿಷತ್ ಅಭ್ಯರ್ಥಿಗಳ ಆಯ್ಕೆಯ ವೇಳೆ ಬಿಎಸ್ವೈ ಬೆಂಬಲಿಗರನ್ನು ಕೈಬಿಟ್ಟಿದ್ದ ಹೈಕಮಾಂಡ್, ರಾಜ್ಯಸಭೆ ಚುನಾವಣೆಯಲ್ಲಿ ಮೂರನೇ ಸ್ಥಾನವನ್ನು ಬಿಎಸ್​ವೈ ಆಪ್ತನಿಗೆ ನೀಡಿ ಮುನಿಸು ಶಮನಗೊಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಹೊರಟ್ಟಿ ಬಿಜೆಪಿ ಸೇರದಿದ್ದರೆ ಶಿಕ್ಷಕರ ಕ್ಷೇತ್ರಕ್ಕೆ ಸ್ಪರ್ಧೆ ಇರುತ್ತಿತ್ತು: ಜಗದೀಶ್ ಶೆಟ್ಟರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.