ETV Bharat / state

ವಿಧಾನ ಪರಿಷತ್ ಕಲಾಪ:ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುವ ವಿಚಾರ, ಗ್ಯಾರಂಟಿ ಚರ್ಚೆಗೆ ಆಗ್ರಹಿಸಿ ಬಿಜೆಪಿ ಧರಣಿ

author img

By

Published : Jul 5, 2023, 3:36 PM IST

Updated : Jul 5, 2023, 8:04 PM IST

legislative council
ವಿಧಾನಪರಿಷತ್ ಕಲಾಪ

ಗ್ಯಾರಂಟಿ ಯೋಜನೆ ಜಾರಿ ಚರ್ಚೆಗೆ ಆಗ್ರಹಿಸಿ ವಿಧಾನ ಪರಿಷತ್ ಸದನದ ಬಾವಿಯಲ್ಲಿ ಬಿಜೆಪಿ ಸದಸ್ಯರು ಧರಣಿ ಕೈಗೊಂಡು ನಂತರ ವಾಪಸು ಪಡೆದರು. ಗೋಹತ್ಯೆ ನಿಷೇಧ ಕಾಯ್ದೆ ವಾಪಸು ವಿಚಾರದಲ್ಲಿಯೂ ಸರ್ಕಾರದ ಸ್ಪಷ್ಟನೆ ಬಯಸಿ ಬಿಜೆಪಿ ಸದಸ್ಯರು ಮತ್ತೆ ಬಾವಿಗಿಳಿದು ಧರಣಿ ನಡೆಸಿದರು.

ವಿಧಾನ ಪರಿಷತ್ ಕಲಾಪ

ಬೆಂಗಳೂರು: ಗ್ಯಾರಂಟಿಗಳ ಚರ್ಚೆಗೆ ಅವಕಾಶ ಕೋರಿ ನಿನ್ನೆ ಇಡೀ ದಿನ ಸದನದಲ್ಲಿ ಧರಣಿ ನಡೆಸಿದ್ದ ಬಿಜೆಪಿ, ಮತ್ತೊಮ್ಮೆ ಹೊಸದಾಗಿ ನಿಲುವಳಿ ಸೂಚನೆ ಮಂಡಿಸಿ ಪರಿಶೀಲಿಸಿ ಪರಿಗಣಿಸುತ್ತೇನೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಭರವಸೆ ನೀಡಿದ ಹಿನ್ನೆಲೆ ವಿಧಾನ ಪರಿಷತ್ ನಲ್ಲಿ ಬಿಜೆಪಿ ಧರಣಿಯನ್ನು ವಾಪಸ್ ಪಡೆಯಿತು.

ಬಿಜೆಪಿ ಗದ್ದಲದಿಂದಾಗಿ ಮುಂದೂಡಿಕೆಯಾಗಿದ್ದ ಸದನ ಮತ್ತೆ ಆರಂಭಗೊಳ್ಳುತ್ತಿದ್ದಂತೆ ಮಾತನಾಡಿದ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹಮದ್, ಸದನ ನಡೆಸಲು ಅವಕಾಶ ಕೊಡಿ ಎಂದು ಮನವಿ ಮಾಡಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಧರಣಿ ಬಿಡುವಂತೆ ಎರಡು ಬಾರಿ ವಿನಂತಿ ಮಾಡಿದ್ದೇನೆ. ಸದನ ನಡೆಸಲು ಅವಕಾಶ ಕೊಡಿ, ಸದನ ನಡೆಯುವಾಗ ಟೀಕೆ ಟಿಪ್ಪಣಿ ಮಾಡಿ ಎಂದರು.

ಇದಕ್ಕೆ ಸಹಮತ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಸದನದ ಪ್ರತಿ ನಿಮಿಷ ಸದ್ವಿನಿಯೋಗ ಆಗಬೇಕು ಎನ್ನುವುದೇ ನಮ್ಮ ಉದ್ದೇಶ, ನಮ್ಮ ನಿಲುವಳಿ ಸೂಚನೆ ಸರಿಯಿಲ್ಲ ಎಂದಿದ್ದೀರಿ. ನಾಳೆ ಮತ್ತೆ ನಿಲುವಳಿ ಸೂಚನೆ ಕೊಡುತ್ತೇವೆ. ಅವಕಾಶ ನೀಡುವ ಭರವಸೆ ಕೊಟ್ಟರೆ ಧರಣಿ ವಾಪಸ್ ಪಡೆಯುತ್ತೇವೆ ಎಂದು ಹೇಳಿದರು.

ಇದಕ್ಕೆ ಸಭಾಪತಿ ಹೊರಟ್ಟಿ ಮೊದಲು ನಿಲುವಳಿ ಸೂಚನೆ ಕೊಡಿ ನಂತರ ನೋಡುತ್ತೇನೆ, ಏನಿದೆ ಎಂದು ನೋಡದೇ ಭರವಸೆ ಕೊಡಲಾಗಲ್ಲ ಎಂದರು. ಇದಕ್ಕೆ ಪ್ರತಿಯಾಗಿ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ನೋಡುತ್ತೇವೆ ಎಂದರೆ ಹೇಗೆ? ಭರವಸೆ ಕೊಡಿ ಎಂದರು. ಇದಕ್ಕೆ ಸಭಾಪತಿಗಳು ಸಾಧಕ ಬಾಧಕ ನೋಡಿ ಒಪ್ಪುತ್ತೇವೆ, ಕೊಡಿ ಎಂದು ಷರತ್ತು ಹಾಕಬೇಡಿ ಎಂದರು.

ಇದಕ್ಕೆ ಪ್ರತಿಯಾಗಿ ಮಾತನಾಡಿದ ಸಚಿವ ಕೃಷ್ಣಬೈರೇಗೌಡ, ಅವರ ನಿಲುವಳಿ ಸೂಚನೆಗೆ ನಾವೂ ಕೂಡ ನಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಿ, ನಂತರ ನಿರ್ಧಾರ ಕೈಗೊಳ್ಳಬೇಕು ಎಂದರು. ನಂತರ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ಕಾರ್ಯಕಲಾಪ ಸುಗಮವಾಗಿ ನಡೆಯಬೇಕು ಎನ್ನುವ ಕಾರಣದಿಂದ ಧರಣಿ ವಾಪಸ್ ಪಡೆಯುವ ನಿರ್ಧಾರ ಪ್ರಕಟಿಸಿ ಎಲ್ಲ ಸದಸ್ಯರು ಆಸನಗಳಿಗೆ ವಾಪಸಾದರು.

ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ವಿಚಾರ, ಮತ್ತೆ ಬಿಜೆಪಿ ಧರಣಿ.. ಗ್ಯಾರಂಟಿ ಜಾರಿಗೆ ಆಗ್ರಹಿಸಿ ವಿಧಾನ ಪರಿಷತ್ ಸದನದ ಬಾವಿಯಲ್ಲಿ ನಡೆಸಿದ ಧರಣಿ ಅಂತ್ಯಗೊಂಡ ಬೆನ್ನಲ್ಲೇ ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ವಿಚಾರದಲ್ಲಿಯೂ ಸರ್ಕಾರದ ಸ್ಪಷ್ಟನೆ ಬಯಸಿ ಬಿಜೆಪಿ ಸದಸ್ಯರು ಮತ್ತೆ ಸದನದ ಬಾವಿಗಿಳಿದು ಧರಣಿ ನಡೆಸಿದ್ದರಿಂದ ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿಕೆ ಮಾಡಲಾಯಿತು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ಗೋಹತ್ಯೆ ನಿಷೇಧ ಕಾಯ್ದೆ ರದ್ದುಪಡಿಸುವ ಪ್ರಸ್ತಾಪ ಇದೆಯಾ ಎನ್ನುವ ಪ್ರಶ್ನೆಗೆ ಅಂತಹ ಪ್ರಸ್ತಾಪ ಈಗ ಸರ್ಕಾರದ ಮುಂದಿಲ್ಲ ಎಂದು ಉತ್ತರ ಕೊಟ್ಟಿದ್ದಾರೆ. ಆದರೆ ಜೂನ್ 3 ರಂದು ಮೈಸೂರಿನಲ್ಲಿ ಎಮ್ಮೆ ಕೋಣ ಕಡಿಯುವುದಾದರೆ ಗೋವುಗಳನ್ನು ಯಾಕೆ ಕಡಿಯಬಾರದು ಎಂದು ಪಶುಸಂಗೋಪನಾ ಸಚಿವರೇ ಹೇಳಿಕೆ ಕೊಟ್ಟಿದ್ದಾರೆ. ಈಗ ಪ್ರಸ್ತಾಪ ಇಲ್ಲ ಎನ್ನುವ ಉತ್ತರ ನೀಡಿದ್ದಾರೆ, ನಮಗೆ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ವೆಂಕಟೇಶ್-ಮೈಸೂರಿನಲ್ಲಿ ಮಾತನಾಡುವಾಗ ಸಹಜವಾಗಿ ಹೇಳಿದ್ದೆ ಅಷ್ಟೆ, ಅಂತಹ ಪ್ರಸ್ತಾಪ ಇಲ್ಲ ಎಂದರು ಇದಕ್ಕೆ ಮರು ಪ್ರಶ್ನೆ ಕೇಳಿದ ರವಿಕುಮಾರ್, ಹಾಗಾದರೆ ಮುಂದೆ ಇದೆಯಾ? ಲಕ್ಷಾಂತರ ಜನ ಹಸು ಸಾಕುವವರಿದ್ದಾರೆ, ವಯಸ್ಸಾದ ಹಸುಗಳನ್ನು ಏನು ಮಾಡಬೇಕು ಎಂದು ಕೇಳಿದ್ದಾರೆ, ಸಮಾಜ ಈಗಾಗಲೇ ಇದಕ್ಕೆ ಪರಿಹಾರ ಕಂಡುಕೊಂಡಿದೆ ಹಾಗಾಗಿ ಸರ್ಕಾರ ತನ್ನ ಸ್ಪಷ್ಟ ನಿರ್ಧಾರ ತಿಳಿಸಿಬೇಕು ಎಂದರು, ಇದಕ್ಕೂ ಕೂಡ ಸಚಿವ ವೆಂಕಟೇಶ, ನಮ್ಮ ಮುಂದೆ ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯುವ ಪ್ರಸ್ತಾಪ ಸದ್ಯಕ್ಕೆ ಇಲ್ಲ ಎಂದು ಸದನಕ್ಕೆ ಹೇಳಿದರು.

ಪೂಜಾರಿ ನೀವು ಪ್ರತಿಪಕ್ಷ ನಾಯಕರಲ್ಲ: ಮೊನ್ನೆ ಹಬ್ಬದಲ್ಲಿ ಗೋಹತ್ಯೆಯಾಯಿತು ಯಾಕೆ ಕ್ರಮ ವಹಿಸಲಿಲ್ಲ, ಕಾಯ್ದೆ ಇದ್ದರೂ ಗೋವುಗಳ ರಕ್ಷಣೆ ಯಾಕಿಲ್ಲ ಎಂದು ರವಿಕುಮಾರ್ ಕಿಡಿಕಾರಿದರು. ಇದಕ್ಕೆ ಕೋಟ ಶ್ರೀನಿವಾಸ ಪೂಜಾರಿ ಸಾಥ್ ನೀಡಿದರು. ರವಿಕುಮಾರ್ ಸ್ಪಷ್ಟನೆಗೆ ಆಗ್ರಹಿಸಿ ದನಿಗೂಡಿಸಲು ಮುಂದಾದರು. ಇದಕ್ಕೆ ಗರಂ ಆದ ಸಭಾಪತಿ ಬಸವರಾಜ ಹೊರಟ್ಟಿ, ಪೂಜಾರಿ ನೀವೀಗ ಪ್ರತಿಪಕ್ಷದ ನಾಯಕರಲ್ಲ, ಆಗಾಗ ಎದ್ದು ನಿಲ್ಲಬೇಡಿ ಎಂದು ತಾಕೀತು ಮಾಡಿದರು.

ನಂತರ ಮೊನ್ನೆ ನಡೆದ ಗೋಹತ್ಯೆಗೆ ಕ್ರಮ ವಹಿಸುವ ವಿಚಾರದ ಕುರಿತು ಸ್ಪಷ್ಟ ಉತ್ತರಕ್ಕೆ ಆಗ್ರಹಿಸಿ ಸದನದ ಬಾವಿಗಿಳಿದ ರವಿಕುಮಾರ್ ಧರಣಿ ನಡೆಸಿದರು. ಅವರಿಗೆ ಬಿಜೆಪಿ ಸದಸ್ಯರು ಸಾಥ್ ನೀಡಿ ಸದನದ ಬಾವಿಯಲ್ಲಿ ಧರಣಿ ಆರಂಭಿಸಿದರು.

ಈ ವೇಳೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಗೋಮಾಂಸ ರಫ್ತಿನದಲ್ಲಿ ದೇಶ ಎರಡನೇ ಸ್ಥಾನದಲ್ಲಿದೆ ಇದಕ್ಕೆ ಮೊದಲು ಉತ್ತರ ಕೊಡಿ ಎಂದರು, ಇದಕ್ಕೆ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್​ ಸಾಥ್ ನೀಡಿ, ಬೇರೆ ರಾಜ್ಯದಲ್ಲಿ ಏನಿದೆಯೋ ಅದರ ಬಗ್ಗೆ ಮಾತನಾಡಿ, ಅಂಕಿ ಅಂಶ ತೆಗೆದುನೋಡಿ ಎಂದರು.

ನಂತರ ಮಾತನಾಡಿದ ಸಚಿವ ಕೃಷ್ಣಬೈರೇಗೌಡ, ಬಿಜೆಪಿ ಸದಸ್ಯರು ಸದನದ ಸಮಯ ಹಾಳು ಮಾಡುತ್ತಿದ್ದಾರೆ. ರಾಜಕೀಯ ಕಾರಣಕ್ಕೆ ಸದನದ ಸಮಯ ಹಾಳು ಮಾಡುತ್ತಿದ್ದಾರೆ. ಇದು ರಾಜಕೀಯ, ಮತಗಳ ಬೇಟೆಗೆ ಸದನದ ಸಮಯ ಬಲಿ ಕೊಡುತ್ತಿದ್ದಾರೆ. ನಮ್ಮ ನಿಲುವು ಹೇಳಿದರೂ ರಾಜಕೀಯಕ್ಕೆ ಸದನ ಹಾಳು ಮಾಡುತ್ತಿದ್ದಾರೆ. ರಾಜಕೀಯ ಹೊರಗೆ ಹೋಗಿ ಮಾಡಿ, ನಿಮಗೆ ಸದನ ನಡೆಯುವುದು ಬೇಕಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇದಕ್ಕೆ ದನಿಗೂಡಿಸಿದ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ, ಸೂಕ್ತ ಉತ್ತರ ಕೊಟ್ಟ ನಂತರ ಇದೇ ರೀತಿ ಉತ್ತರ ಕೊಡಬೇಕು ಎನ್ನುವ ಮೊಂಡುತನ ಸರಿಯಲ್ಲ. ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು, ಗೋಹತ್ಯೆ ನಿಷೇಧ ಬಿಲ್ ವಾಪಸ್ ಪಡೆಯಲ್ಲ ಎನ್ನುವ ಭರವಸೆ ನೀಡಬೇಕು ಎಂದರು. ಇದಕ್ಕೆ ಉತ್ತರಿಸಿದ ಸಚಿವ ವೆಂಕಟೇಶ್ ಮೊನ್ನೆ ಗೋಹತ್ಯೆ ನಡೆದಿದ್ದು ಕಂಡುಬಂದಲ್ಲಿ ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಸರ್ಕಾರದ ಉತ್ತರ ಖಂಡಿಸಿ ಬಿಜೆಪಿ ಸದಸ್ಯರು ಸದನದಲ್ಲಿ ಧರಣಿ ಮುಂದುವರೆಸಿದರು. ಸಭಾಪತಿ ಮನವಿಗೂ ಸ್ಪಂಧಿಸದೆ ಘೋಷಣೆ ಕೂಗಿದರು, ಸಭಾಪತಿಗಳು ಮುಂದಿನ ಕಲಾಪ ಕೈಗೆತ್ತಿಕೊಂಡರೂ ಬಿಜೆಪಿ ಸದಸ್ಯರು ಘೋಷಣೆ ಕೂಗಿ ಧರಣಿ ನಡೆಸಿದ ಹಿನ್ನೆಲೆಯಲ್ಲಿ ಸದನದಲ್ಲಿ ಗದ್ದಲ ಉಂಟಾದ ಕಾರಣ ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿಕೆ ಮಾಡಲಾಗಿತ್ತು.

ಇದನ್ನೂಓದಿ:ಡಿಕೆಶಿ ಬ್ಯುಸಿನೆಸ್ ಮಾಡಿಕೊಂಡು ಬಂದಿದ್ದಾರೆ, ಹೆಚ್​ಡಿಕೆ ಏನು ಮಾಡಿಕೊಂಡು ಬಂದಿದ್ದಾರೆ ಹೇಳಲಿ: ಸಚಿವ ಚೆಲುವರಾಯಸ್ವಾಮಿ

Last Updated :Jul 5, 2023, 8:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.