ETV Bharat / state

ರಾಜ್ಯ ಕಾಂಗ್ರೆಸ್ ನಾಯಕರ ಮನೆ ಮುಂದೆ ಮುಖಂಡರು ಕಾರ್ಯಕರ್ತರ ಹೈಡ್ರಾಮ: ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ

author img

By

Published : Mar 30, 2023, 4:32 PM IST

ಏಪ್ರಿಲ್​ 5 ರಂದು ಕಾಂಗ್ರೆಸ್​ನ ಎರಡನೇ ಅಭ್ಯರ್ಥಿ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದ್ದು, ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಮನೆ ಮುಂದೆ ಟಿಕೆಟ್ ಆಕಾಂಕ್ಷಿಗಳು ಮತ್ತು ಅವರ ಅಭಿಮಾನಿಗಳು ಆಗಮಿಸಿ ಒತ್ತಡ ಹೇರುವ ಪ್ರಯತ್ನ ನಡೆಸಿದ್ದಾರೆ.

leaders-and-activists-of-congress-party-protesting-infront-of-leaders-house
ರಾಜ್ಯ ಕಾಂಗ್ರೆಸ್ ನಾಯಕರ ಮನೆ ಮುಂದೆ ಮುಖಂಡರು ಕಾರ್ಯಕರ್ತರ ಹೈಡ್ರಾಮ

ಬೆಂಗಳೂರು: ಕಾಂಗ್ರೆಸ್ ಪಕ್ಷದ ಎರಡನೇ ಪಟ್ಟಿ ಬಿಡುಗಡೆ ಸನ್ನಿಹಿತ ಆಗುತ್ತಿದ್ದಂತೆ ಆಕಾಂಕ್ಷಿಗಳ ಒತ್ತಡವೂ ಹೆಚ್ಚಾಗುತ್ತಿದೆ. ಎರಡನೇ ಪಟ್ಟಿಯಲ್ಲಿ ತಮ್ಮ ಬೆಂಬಲಿತ ಅಭ್ಯರ್ಥಿಗಳಿಗೆ ಟಿಕೆಟ್​​ ನೀಡುವಂತೆ ಒತ್ತಾಯಿಸಿ ರಾಜ್ಯ ಕಾಂಗ್ರೆಸ್ ನಾಯಕರ ಮನೆ ಮುಂದೆ ಅಭಿಮಾನಿಗಳು ಜಮಾಯಿಸಿ ಒತ್ತಡ ಹೇರುವ ಕಾರ್ಯ ಮಾಡುತ್ತಿದ್ದಾರೆ. ಎರಡನೇ ಪಟ್ಟಿ ಬಿಡುಗಡೆ ಸಂಬಂಧ ಸ್ಕ್ರೀನಿಂಗ್ ಕಮಿಟಿ ಸಭೆ ನಗರದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದು, ಇನ್ನೆರಡು ದಿನ ಮುಂದುವರಿಯಲಿದೆ.

ಎರಡನೇ ಪಟ್ಟಿಯ ಅಭ್ಯರ್ಥಿಗಳ ಹೆಸರನ್ನು ಏಪ್ರಿಲ್ 3 ರಂದು ಸ್ಕ್ರೀನಿಂಗ್ ಕಮಿಟಿ ಸದಸ್ಯರು ಪಕ್ಷದ ಹೈಕಮಾಂಡ್​ಗೆ ನೀಡಲಿದ್ದು, ಏಪ್ರಿಲ್ 5ರಂದು ಪಟ್ಟಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಇದೇ ಸಂದರ್ಭದಲ್ಲಿ ರಾಜ್ಯ ನಾಯಕರಾದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿವಾಸದ ಮುಂದೆ ಟಿಕೆಟ್ ಆಕಾಂಕ್ಷಿಗಳು ಹಾಗೂ ಅವರ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ಒತ್ತಡ ಹೇರುವ ಪ್ರಯತ್ನ ನಡೆಸಿದ್ದಾರೆ.

ಅರೆಬೆತ್ತಲೆ ಪ್ರತಿಭಟನೆ: ಸಿದ್ದರಾಮಯ್ಯ ನಿವಾಸದ ಮುಂದೆ ಮೊಳಕಾಲ್ಮೂರು ಕ್ಷೇತ್ರದವರಿಂದ ಯೋಗೇಶ್​ಗೆ ಟಿಕೆಟ್ ನೀಡುವಂತೆ ಪ್ರತಿಭಟನೆ ನಡೆದಿದೆ. ಅರೆಬೆತ್ತಲೆ ಪ್ರತಿಭಟನೆ ನಡೆಸಿದ ಬೆಂಬಲಿಗರು ತಮ್ಮ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದಾರೆ. ಈ ಸಂದರ್ಭ ಅಭಿಮಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾರೆ. ಆಗ ಅವರ ಅಕ್ಕ ಪಕ್ಕದಲ್ಲಿ ಇದ್ದವರು ಆತನನ್ನು ತಡೆದಿದ್ದಾರೆ.

ಕೆಪಿಸಿಸಿ ಅಧ್ಯಕ್ಷರ ಮನೆ ಮುಂದೆಯೂ ಜಮಾಯಿಸಿದ ದಂಡು: ಬೆಂಗಳೂರಿನ ಸದಾಶಿವನಗರದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಿವಾಸದ ಒಂದು ವಿವಿಧ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಆಗಮಿಸಿ ಟಿಕೆಟ್​ಗಾಗಿ ಒತ್ತಡ ಹೇರುವ ಕಾರ್ಯ ಮಾಡಿದ್ದಾರೆ. ನೂರಾರು ಸಂಖ್ಯೆಯಲ್ಲಿ ಮನೆಯ ಮುಂದೆ ಜಮಾಯಿಸಿದ್ದರಿಂದ ಸಕಾಲಕ್ಕೆ ಕೆಪಿಸಿಸಿ ಕಚೇರಿಗೆ ಆಗಮಿಸಲು ಸಹ ಡಿಕೆಶಿಗೆ ತೊಡಕು ಉಂಟಾಯಿತು. ಕಾಂಗ್ರೆಸ್ ಕಚೇರಿಯಲ್ಲಿ ಜೆಡಿಎಸ್ ಮಾಜಿ ಶಾಸಕ ಗುಬ್ಬಿ ಶ್ರೀನಿವಾಸ್ ಸೇರ್ಪಡೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಮನೆಯ ಮುಂದೆ ಅಪಾರ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ತುಂಬಿಕೊಂಡಿದ್ದ ಹಿನ್ನೆಲೆ ಅವರನ್ನು ಸಂಬಾಳಿಸಿ ಬರುವುದು ತಡವಾಯಿತು.

ಕಾಂಗ್ರೆಸ್ ಕಚೇರಿಯಲ್ಲೂ ಒತ್ತಡ: ಗುಬ್ಬಿ ಶ್ರೀನಿವಾಸ್ ಸೇರ್ಪಡೆ ಸಮಾರಂಭಕ್ಕೆ ಅಪಾರ ಸಂಖ್ಯೆಯಲ್ಲಿ ಕೆಪಿಸಿಸಿ ಕಚೇರಿಗೆ ಕಾರ್ಯಕರ್ತರು ಆಗಮಿಸಿದ್ದರು. ಗುಬ್ಬಿ ಕ್ಷೇತ್ರದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಸಾಮೂಹಿಕವಾಗಿ ಇಂದು ಶ್ರೀನಿವಾಸ್ ಜೊತೆ ಕಾಂಗ್ರೆಸ್ ಸೇರ್ಪಡೆ ಆದರು. ಚಿಕ್ಕ ಸಭಾಂಗಣದಲ್ಲಿ ಮತ್ತೊಮ್ಮೆ ಕಾರ್ಯಕ್ರಮ ಆಯೋಜಿಸಿದ ಕಾಂಗ್ರೆಸ್ ಸಾಕಷ್ಟು ಸಂಖ್ಯೆಯಲ್ಲಿ ಕಾರ್ಯಕರ್ತರು ತುಂಬಿದ್ದರು.

150 ಮಂದಿ ಕೂರಲು ಅವಕಾಶವಿರುವ ಸಭಾಂಗಣದಲ್ಲಿ 400ಕ್ಕೂ ಹೆಚ್ಚು ಮಂದಿ ಜಮಾಯಿಸಿ ಗೊಂದಲ ಸೃಷ್ಟಿಸಿದರು. ವೇದಿಕೆ ಮುಂಭಾಗ ಮಾತ್ರವಲ್ಲ ಹಿಂಭಾಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಾರ್ಯಕರ್ತರು ನಿಂತು ಸಮಾರಂಭ ಮಧ್ಯವೇ ಸಿಳ್ಳೆ, ಕೇಕೆ, ಕೂಗು ಹಾಕುವ ಕಾರ್ಯ ಮಾಡಿದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವೇದಿಕೆ ಮೇಲೆ ಆಗಮಿಸುತ್ತಿದ್ದಂತೆ ಸಾಕಷ್ಟು ಅಭಿಮಾನಿಗಳು ಜೈಕಾರ ಕೂಗಿದರು.

ಡಿಕೆ ಶಿವಕುಮಾರ್ ಆಕ್ರೋಶ: ಇದಾದ ಬಳಿಕ ಗುಬ್ಬಿ ಶ್ರೀನಿವಾಸ್ ವೇದಿಕೆ ಪ್ರವೇಶಿಸುತ್ತಿದ್ದಂತೆ ಅಭಿಮಾನಿಗಳ ಅರಚಾಟ ಮುಗಿಲು ಮುಟ್ಟಿತು. ಬಾರಿ ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರು ಗುಬ್ಬಿ ಶ್ರೀನಿವಾಸ್ ಗುಣಗಾನ ಮಾಡತೊಡಗಿದರು. ಸೇರ್ಪಡೆ ಕಾರ್ಯಕ್ರಮವನ್ನು ಬಹಿರಂಗ ಸಮಾವೇಶದ ರೀತಿ ಪರಿವರ್ತಿಸಿದ ಕಾರ್ಯಕರ್ತರ ನಡೆಯನ್ನು ಖಂಡಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಇದು ಪಕ್ಷದ ಕಾರ್ಯಕ್ರಮವಾಗಿದ್ದು ಜೈಕಾರ ಕೂಗುವ ಸಮಾವೇಶ ಅಲ್ಲ. ಸುಮ್ಮನೆ ಕಾರ್ಯಕ್ರಮ ವೀಕ್ಷಿಸುವುದಾದರೆ ಇರಿ ಇಲ್ಲವಾದರೆ ಹೊರಡಿ ಎಂದು ತಾಕೀತು ಮಾಡಿದರು. ಕೇವಲ 150 ಮಂದಿ ಆಗಮಿಸಲಿದ್ದಾರೆ ಎಂದು ಮಾಹಿತಿ ಇತ್ತು. ಆದರೆ ನಿರೀಕ್ಷೆಗೂ ಮೀರಿ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿರುವುದರಿಂದ ತೊಂದರೆ ಉಂಟಾಗಿದೆ. ಇಷ್ಟೊಂದು ಜನ ಆಗಮಿಸುತ್ತಾರೆ ಎಂದು ತಿಳಿದಿದ್ದರೆ ಪಕ್ಕದ ದೊಡ್ಡ ಸಭಾಂಗಣವನ್ನು ವ್ಯವಸ್ಥೆ ಮಾಡುತ್ತಿದ್ದೆವು. ಒಮ್ಮೆ ಹೋಗಿ ಅಲ್ಲಿ ನೋಡಿ ಬನ್ನಿ ಎಂದು ಗದರಿಸಿದರು.

ಒಟ್ಟಾರೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಚುನಾವಣೆ ಕಾವು ಹೆಚ್ಚುತ್ತಿದ್ದು ಟಿಕೆಟ್​ಗಾಗಿ ಆಕಾಂಕ್ಷಿಗಳು ಒತ್ತಡ ಹೇರುವ ಕಾರ್ಯ ಜೋರಾಗುತ್ತಿದೆ. ಪ್ರಮುಖ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಗೆ ಈಗಲೇ ಇದರ ಬಿಸಿ ತಟ್ಟಿದೆ.

ಇದನ್ನೂ ಓದಿ: ಟಿಕೆಟ್​ ಹಂಚಿಕೆ ಅಸಮಾಧಾನ: ಸಿದ್ದರಾಮಯ್ಯ ಮನೆ ಮುಂದೆ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.