ETV Bharat / state

ಕೆಎಸ್​​ಪಿಸಿಬಿ ಅಧ್ಯಕ್ಷರ ನೇಮಕಾತಿ ಮಾರ್ಗಸೂಚಿ ಪ್ರಶ್ನಿಸಿ ಅರ್ಜಿ: ತಿದ್ದುಪಡಿ ಮಾಡುವುದಾಗಿ ಸರ್ಕಾರದ ಮಾಹಿತಿ

author img

By

Published : Sep 16, 2020, 6:39 PM IST

ಕೆಎಸ್​​ಪಿಸಿಬಿ ಅಧ್ಯಕ್ಷರ ನೇಮಕಾತಿ ಮಾರ್ಗಸೂಚಿ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವಗದಿ ಅವರು ಪೀಠಕ್ಕೆ ಮಾಹಿತಿ ನೀಡಿ, ಮಾರ್ಗಸೂಚಿಗಳನ್ನು ಪರಿಷ್ಕರಿಸಲಾಗುತ್ತಿದೆ ಎಂದರು.

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್​​ಪಿಸಿಬಿ) ಅಧ್ಯಕ್ಷರ ನೇಮಕಾತಿ ಸಂಬಂಧ ರೂಪಿಸಿರುವ ಮಾರ್ಗಸೂಚಿಗಳನ್ನು ತಿದ್ದುಪಡಿ ಮಾಡಿ ಸೆಪ್ಟೆಂಬರ್ 21ರಂದು ಸಲ್ಲಿಸುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್​ಗೆ ಮಾಹಿತಿ ನೀಡಿದೆ.

ಕೆಎಸ್​​ಪಿಸಿಬಿ ಅಧ್ಯಕ್ಷರ ನೇಮಕಾತಿಗಾಗಿ ಸರ್ಕಾರ ಜೂನ್ 19ರಂದು ಜಾರಿಗೊಳಿಸಿರುವ ಮಾರ್ಗಸೂಚಿಗಳು ಜಲ ಕಾಯ್ದೆ ಹಾಗೂ ಸುಪ್ರೀಂಕೋರ್ಟ್ ನಿರ್ದೇಶನಗಳಿಗೆ ವಿರುದ್ಧವಾಗಿವೆ ಎಂದು ಆರೋಪಿಸಿ ಚಿಕ್ಕಬಳ್ಳಾಪುರದ ಆಂಜನೇಯ ರೆಡ್ಡಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವಗದಿ ಅವರು ಪೀಠಕ್ಕೆ ಮಾಹಿತಿ ನೀಡಿ, ಮಾರ್ಗಸೂಚಿಗಳನ್ನು ಪರಿಷ್ಕರಿಸಲಾಗುತ್ತಿದೆ. ಮುಂದಿನ ಸೋಮವಾರ ಪರಿಷ್ಕೃತ ಮಾರ್ಗಸೂಚಿಗಳನ್ನು ಪೀಠಕ್ಕೆ ಸಲ್ಲಿಸಲಾಗುವುದು ಎಂದರು. ಇದೇ ವೇಳೆ ಮಂಡಳಿಯ ಸದಸ್ಯರಿಗೂ ಪರಿಸರ ಸಂರಕ್ಷಣೆ ಸಂಬಂಧ ವಿಶೇಷ ಜ್ಞಾನ ಇರುವಂತೆ ಮಾರ್ಗಸೂಚಿಗಳಿರಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನೂ ಪರಿಗಣಿಸಿ ಮಾರ್ಗಸೂಚಿಗಳನ್ನು ತಿದ್ದುಪಡಿ ಮಾಡಿ. ಇಲ್ಲದಿದ್ದಲ್ಲಿ ಮತ್ತೆ ನಿಯಮಗಳ ಕುರಿತು ಆಕ್ಷೇಪ ಎತ್ತಿ ನ್ಯಾಯಾಲಯಕ್ಕೆ ಬರಬಹುದು ಎಂದು ಪೀಠ ಸೂಚಿಸಿತು. ಇದಕ್ಕೆ ಎಜಿ ಒಪ್ಪಿಗೆ ಸೂಚಿಸಿದರು.

ಬಳಿಕ ಸೂಚನೆ ನೀಡಿದ ಪೀಠ, ಸೋಮವಾರ ಪರಿಷ್ಕೃತ ಮಾರ್ಗಸೂಚಿಯನ್ನು ಸಲ್ಲಿಸಿ. ಈ ಕರಡು ಪ್ರತಿಯನ್ನು ಪ್ರತಿವಾದಿಗಳಿಗೂ ತಲುಪಿಸಿ ಎಂದು ಸೂಚಿಸಿತು. ಈ ಸಂದರ್ಭದಲ್ಲಿ ಮಂಡಳಿಯ ಸದಸ್ಯ ಕಾರ್ಯದರ್ಶಿ ನೇಮಕಾತಿ ಮಾರ್ಗಸೂಚಿಗಳನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಇವುಗಳ ಜತೆಯಲ್ಲೇ ವಿಚಾರಣೆ ನಡೆಸಬಹುದು ಎಂದು ಅರ್ಜಿದಾರರ ಪರ ವಕೀಲ ಪ್ರಿನ್ಸ್ ಐಸಾಕ್ ಕೋರಿದರು. ಒಪ್ಪಿಗೆ ಸೂಚಿಸಿದ ಪೀಠ ಮೂರು ಅರ್ಜಿಗಳನ್ನು ಒಟ್ಟಿಗೆ ವಿಚಾರಣೆ ನಡೆಸುವುದಾಗಿ ತಿಳಿಸಿ, ವಿಚಾರಣೆಯನ್ನು ಸೆಪ್ಟೆಂಬರ್ 21ಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆ : ಜಲ (ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣ) ಕಾಯ್ದೆಯ ಸೆಕ್ಷನ್ 4(2) ಪ್ರಕಾರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗುವವರು ಪರಿಸರ ಸಂರಕ್ಷಣೆ ಕುರಿತು ವಿಶೇಷ ಜ್ಞಾನ ಅಥವಾ ಪ್ರಾಯೋಗಿಕ ಅನುಭವ ಹೊಂದಿರಬೇಕು. ಪರಿಸರಕ್ಕೆ ಸಂಬಂಧಿಸಿದ ಸಂಸ್ಥೆಗಳ ಆಡಳಿತ ನಡೆಸಿದ ಅನುಭವ ಹೊಂದಿರಬೇಕು. ಆದರೆ, ಸರ್ಕಾರದ ಜೂನ್ 19 ರಂದು ಜಾರಿಗೊಳಿಸಿರುವ ಮಾರ್ಗಸೂಚಿಯಲ್ಲಿ ವಿಶೇಷ ಹಾಗೂ ಪ್ರಾಯೋಗಿಕ ಎಂಬ ಅರ್ಹತೆಗಳನ್ನು ಕೈಬಿಡಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ನೇಮಕಗೊಳ್ಳುವ ವ್ಯಕ್ತಿ ಸರ್ಕಾರಿ ಇಲಾಖೆ, ಸಂಸ್ಥೆ ಅಥವಾ ವಿಶ್ವವಿದ್ಯಾಲಯದ ಆಡಳಿತದ ಭಾಗವಾಗಿರಬೇಕು ಎಂದಷ್ಟೇ ಹೇಳಿದೆ.

ಮಂಡಳಿಯ ಸದಸ್ಯ ಕಾರ್ಯದರ್ಶಿಗೆ ಮಾಲಿನ್ಯ ನಿಯಂತ್ರಣ ಕುರಿತು ವೈಜ್ಞಾನಿಕ ಹಾಗೂ ತಾಂತ್ರಿಕ ವಿಚಾರಗಳಲ್ಲಿ ವಿದ್ಯಾರ್ಹತೆ, ಜ್ಞಾನ ಮತ್ತು ಅನುಭವ ಇರಬೇಕು. ಆದರೆ, ಆ ಸ್ಥಾನಕ್ಕೆ ಭಾರತೀಯ ಸೇವಾ ಆಯೋಗದ ಹಿರಿಯ ಅಧಿಕಾರಿಗಳನ್ನು ನೇಮಕ ಮಾಡಲು ಮಾರ್ಗಸೂಚಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಸರ್ಕಾರದ ಮಾರ್ಗಸೂಚಿಗಳನ್ನು ರದ್ದುಪಡಿಸಬೇಕು. ಜಲ ಕಾಯ್ದೆ ಹಾಗೂ ಸುಪ್ರೀಂಕೋರ್ಟ್ ನಿರ್ದೇಶನಗಳಿಗೆ ಅನುಗುಣವಾಗಿ ಹೊಸ ಮಾರ್ಗಸೂಚಿ ಮತ್ತು ನಿಯಮಗಳನ್ನು ರೂಪಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು. ಅರ್ಜಿ ಇತ್ಯರ್ಥವಾಗುವವರೆಗೆ ಜೂ.19ರ ಮಾರ್ಗಸೂಚಿ ಜಾರಿಗೆ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.