ETV Bharat / state

ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಭರವಸೆ ಸಿಕ್ಕಿದೆ: ಕೆ ಎಸ್​ ಈಶ್ವರಪ್ಪ

author img

By

Published : Dec 20, 2022, 2:32 PM IST

ರಾಜ್ಯ ಹಾಗೂ ರಾಷ್ಟ್ರೀಯ ಬಿಜೆಪಿ ನಾಯಕರ ಮೇಲೆ ನನಗೆ ಭರವಸೆ ಇದ್ದು, ಶೀಘ್ರವೇ ಸಚಿವ ಸಂಪುಟ ಸೇರಲಿದ್ದೇನೆ ಎಂದು ಮಾಜಿ ಸಚಿವ ಕೆ ಎಸ್​ ಈಶ್ವರಪ್ಪ ಹೇಳಿದ್ದಾರೆ.

ks-shwarappa-statement-on-cabinet-inclusion
ಕೆ ಎಸ್​ ಈಶ್ವರಪ್ಪ

ಬೆಂಗಳೂರು: ರಾಜೀನಾಮೆ ಸಲ್ಲಿಸಿದ್ದ ನನ್ನ ಹಾಗೂ‌ ರಮೇಶ್ ಜಾರಕಿಹೊಳಿ ಅವರನ್ನು ಸಂಪುಟಕ್ಕೆ ವಾಪಸ್ ಪಡೆಯುವ ಭರವಸೆ ಲಭಿಸಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಸಚಿವ ಸ್ಥಾನ ಬಯಸಿ ಪ್ರತಿಭಟನೆ ಮಾಡಿದ್ದು ನಿಜ. ಸಿಎಂ ಸಹ ಸಂಪುಟಕ್ಕೆ ಸೇರಿಸಿಕೊಳ್ಳುವ ಭರವಸೆ ಸಿಕ್ಕಿದೆ. ನನಗೆ ರಾಜ್ಯ, ಹಾಗೂ ರಾಷ್ಟ್ರೀಯ ನಾಯಕರ ಮೇಲೆ ಭರವಸೆ ಇದ್ದು, ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸಮಾಲೋಚಿಸುತ್ತೇನೆ. ಇದಾದ ಬಳಿಕವೇ ವಿಧಾನ ಮಂಡಲ ಅಧಿವೇಶನದಲ್ಲಿ ಪಾಲ್ಗೊಳ್ಳುವ ನಿರ್ಧಾರ ಕೈಗೊಳ್ಳುತ್ತೇನೆ. ರಾಜ್ಯ ಹಾಗೂ ರಾಷ್ಟ್ರೀಯ ಬಿಜೆಪಿ ನಾಯಕರ ಮೇಲೆ ನನಗೆ ಭರವಸೆ ಇದ್ದು ಶೀಘ್ರವೇ ಸಚಿವ ಸಂಪುಟ ಸೇರಲಿದ್ದೇನೆ ಎಂಬ ವಿಶ್ವಾಸ ಇದೆ ಎಂದರು.

ಪಕ್ಷದ ರಾಷ್ಟ್ರೀಯ ನಾಯಕರು ಪ್ರಕರಣದಲ್ಲಿ ಕ್ಲೀನ್ ಚಿಟ್ ಲಭಿಸಿದರೆ ಮರಳಿ ಸಂಪುಟಕ್ಕೆ ಪಡೆಯುವ ಭರವಸೆ ಕೊಟ್ಟಿದ್ದರು. ಇದೀಗ ನನಗೆ ಕ್ಲೀನ್ ಚಿಟ್ ಲಭಿಸಿದ್ದು ಸಂಪುಟಕ್ಕೆ ಮರಳುವ ಅವಕಾಶ ಒದಗಿ ಬಂದಿದೆ. ಹಿಂದಿನ ಸರ್ಕಾರದಲ್ಲಿ ಸಹ ಕೆ ಜೆ ಜಾರ್ಜ್ ವಿರುದ್ಧ ಆರೋಪ ಕೇಳಿ ಬಂದಿತ್ತು. ಅವರು ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಅವರಿಗೆ ಕ್ಲೀನ್ ಚಿಟ್ ಸಿಕ್ಕ ಹಿನ್ನೆಲೆ ಸಂಪುಟಕ್ಕೆ ಮರಳಿದ್ದರು. ಇದೇ ಮಾನದಂಡದ ಮೇಲೆ ನನಗೂ ಸಹ ಸಚಿವ ಸಂಪುಟಕ್ಕೆ ಮರಳುವ ವಿಶ್ವಾಸ ಇದೆ. ನಾನು ಮತ್ತು ರಮೇಶ್ ಜಾರಕಿಹೊಳಿ ಶೀಘ್ರವೇ ಸಂಪುಟಕ್ಕೆ ಸೇರ್ಪಡೆ ಆಗುತ್ತೇವೆ. ಇದುವರೆಗೂ ನಮಗಿದ್ದ ಬೇಸರ ಈಗ ಇಲ್ಲವಾಗಿದೆ. ಸರ್ಕಾರ ಹಾಗೂ ಸಿಎಂ ಮೇಲೆ ನಂಬಿಕೆ ಇದೆ ಎಂದರು. ರಾಜ್ಯದಲ್ಲಿ ಬಿಜೆಪಿ ಬೆಳಗಣಿಗೆ 90ರ ದಶಕದಲ್ಲಿ ವೇಗ ಪಡೆದುಕೊಳ್ತು. ಅನಂತ್ ಕುಮಾರ್, ಯಡಿಯೂರಪ್ಪ ಜೊತೆಗೆ ಹೆಗಲಿಗೆ ಹೆಗಲು ಕೊಟ್ಟು ಪಕ್ಷಕ್ಕಾಗಿ ಪ್ರವಾಸ ಮಾಡಿದ್ದೆ ಎಂದು ಈಶ್ವರಪ್ಪ ತಿಳಿಸಿದರು.

ಜಗದೀಶ್ ಶೆಟ್ಟರ್, ಜೋಶಿ, ಸದಾನಂದ ಗೌಡರು ಬಿಜೆಪಿ ಅಧ್ಯಕ್ಷರಾದ ಬಳಿಕ ಶಕ್ತಿ ಜಾಸ್ತಿ ಆಯ್ತು. ರಾಜ್ಯದಲ್ಲಿ 25 ಸೀಟ್ ಗೆಲ್ಲುವುದಕ್ಕೆ, ಅಧಿಕಾರ ಹಿಡಿಯೋದಕ್ಕೆ ಇಷ್ಡು ಜನರ ಜೊತೆಗೆ ರಾಜ್ಯದ ಕಾರ್ಯಕರ್ತರ ಸಹಕಾರ ಇದೆ ಎಂದರು. ನನ್ನ ಮೇಲೆ ಆರೋಪ ಬಂದಾಗ ನಮ್ಮ ಕೇಂದ್ರ ನಾಯಕರಿಗೆ, ರಾಜ್ಯದ ನಾಯಕರಿಗೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದೆ. ಆಗ ಎಲ್ಲರೂ ಬೇಡ ಅಂದಿದ್ದರು.

ಹಿಂದೆ ಕೆ ಜೆ ಜಾರ್ಜ್ ಮೇಲೆ ಆರೋಪ ಬಂದಾಗ ನಾನು ಮೇಲ್ಮನೆಯಲ್ಲಿ ಒತ್ತಾಯ ಮಾಡಿದ್ದೆ. ನೀವು ರಾಜೀನಾಮೆ ಕೊಡಿ, ತನಿಖೆ ಬಳಿಕ ಮತ್ತೆ ಸಂಪುಟ ಸೇರಿ ಅಂತ ಹೇಳಿದ್ದೆ. ಇದೇ ಉದಾಹರಣೆಯನ್ನ ಇಟ್ಟುಕೊಂಡು ಕೇಂದ್ರದ ನಾಯಕರಿಗೆ ಹೇಳಿದೆ. ಬಳಿಕ ಸರಿ ರಾಜೀನಾಮೆ ಕೊಡಿ ಅಂದ್ರು. ಇದಾದ ಬಳಿಕ ನನ್ನ ಕೇಸ್​ನಲ್ಲಿ ಕ್ಲೀನ್ ಚಿಟ್ ಬಂತು. ಕ್ಲೀನ್‌ ಚೀಟ್ ಬಳಿಕ ಕ್ಯಾಬಿನೆಟ್​ಗೆ ತಗೋತಿನಿ ಅಂತ ಹೇಳಿದ್ರು. ಕ್ಲೀನ್ ಚಿಟ್ ಬಂದು ನಾಲ್ಕು ತಿಂಗಳಾಯ್ತು.

ನಾನು ಮುಖ್ಯಮಂತ್ರಿಗಳ ಜೊತೆ ಕೂಡ ಮಾತಾಡ್ತಿದ್ದೆ. ಆದ್ರೆ ಇಲ್ಲೀತನಕ ಕ್ಯಾಬಿನೆಟ್​ಗೆ ತೆಗೆದುಕೊಳ್ಳುವ ತೀರ್ಮಾನ ಮಾಡಿಲ್ಲ. ಇಂದು ಬೆಳಗ್ಗೆ ಸಿಎಂ ಟಿವಿಯೊಂದರ ಸಂದರ್ಶನದಲ್ಲಿ ಮಾತಾಡಿದ್ದಾರೆ. ಈಶ್ವರಪ್ಪ ಹಾಗೂ ರಮೇಶ್ ಜಾರಕಿಹೊಳಿ ಅವರನ್ನು ಕ್ಯಾಬಿನೆಟ್​ಗೆ ತೆಗೆದುಕೊಳ್ಳುತ್ತೇವೆ ಅಂತ ಹೇಳಿದ್ದಾರೆ. ಅವರಿಗೆ ಪ್ರತಿಭಟನೆ ಮಾಡುವ ಹಕ್ಕಿದೆ. ಶೀಘ್ರದಲ್ಲೇ ಈ ಬಗ್ಗೆ ತೀರ್ಮಾನ ಮಾಡುತ್ತೇವೆ ಅಂದಿದ್ದಾರೆ. ಹೀಗಾಗಿ ಸಿಎಂ ಅವರಿಗೂ ಹಾಗೂ ಕೇಂದ್ರದ ನಾಯಕರಿಗೂ ಅಭಿನಂದನೆ ಸಲ್ಲಿಸ್ತೇನೆ ಎಂದು ವಿವರಿಸಿದರು.

ಕಾಂಗ್ರೆಸ್ ಹಿಂದುತ್ವದ ವಿರುದ್ಧ ಇದೆ. ಸಾವರ್ಕರ್ ವಿಚಾರ, ಕುಕ್ಕರ್ ಬಾಂಬ್ ಬಗ್ಗೆ ಅವರ ಹೇಳಿಕೆ ಗಮನಿಸಿದರೆ, ಕಾಂಗ್ರೆಸ್ ನೇರವಾಗಿ ಹಿಂದುತ್ವದ ವಿರುದ್ಧ ಚುನಾವಣೆಗೆ ಹೋಗ್ತಿದೆ. ನಾವೆಲ್ಲ 30-40 ವರ್ಷಗಳಿಂದ ಶಕ್ತಿ‌ ಇಲ್ಲದಿದ್ದಾಗಲೂ ಹೋರಾಟ ಮಾಡಿದ್ದೇವೆ. ಶೇಷಾದ್ರಿಪುರಂ ಸಣ್ಣ ಕಚೇರಿಯಿಂದ ಕೆಲಸ ಮಾಡಿಕೊಂಡು ಬಂದಿದ್ದೇವೆ. ಯಾರಿಗೂ ಮುಜುಗರ ಆಗದಂತೆ ಎಚ್ಚರ ವಹಿಸಿದ್ದೇನೆ ಎಂದರು.

ರಾಜ್ಯದ ಪಕ್ಷಕ್ಕೂ ನನ್ನ ನಡೆ ಮುಜುಗರ ಆಗದಂತೆ‌ ಎಚ್ಚರ ವಹಿಸಿದ್ದೇನೆ. ಇಡೀ ರಾಜ್ಯದಿಂದ ನಂಗೆ ಫೋನ್ ಬರ್ತಿದೆ. ನೀವು ಪಕ್ಷವನ್ನು ಕಟ್ಟೋದಕ್ಕೆ ತುಂಬಾ ಕೆಲಸ ಮಾಡಿದ್ದೀರಾ?ನಿಮಗೆ ಯಾಕೆ ಹೀಗೆ ಅಂತ ಕೇಳಿದ್ದಾರೆ. ನನ್ನನ್ನೂ ಸೇರಿ ಅನೇಕರು ಮಾಡಿದ ಪ್ರಯತ್ನವೇ ಇವತ್ತಿನ ಬಿಜೆಪಿಗೆ ಕಾರಣ. ಸ್ವಾತಂತ್ರ್ಯಕ್ಕಾಗಿ ಹೋರಾಟ‌ ಮಾಡಿದ ಕಾಂಗ್ರೆಸ್ಸಿಗರು ಸ್ವರ್ಗದಲ್ಲಿದ್ದಾರೆ. ಅವರ ಅಪೇಕ್ಷೆ ಇದ್ದಿದ್ದು ರಾಷ್ಟ್ರವನ್ನು ಉಳಿಸುವುದಾಗಿತ್ತು ಎಂದು ಈಶ್ವರಪ್ಪ ಹೇಳಿದರು.

ಅವರಿಗೆ ಈಗಿನ ಕಾಂಗ್ರೆಸ್ ಅಪಮಾನ ಮಾಡಬಾರದು. ನಾನು ಸಚಿವನಾಗದೇ ಇರೋದನ್ನು ಪಿತೂರಿ ಬಗ್ಗೆ ಪ್ರಸ್ತಾಪ ಮಾಡಲ್ಲ. ಪಕ್ಷವನ್ನು 2-3 ಭಾಗ ಮಾಡಲು ಇಷ್ಟ ಇಲ್ಲ. ರಾಜ್ಯದ ನಾಯಕರನ್ನು ಹೈಕಮಾಂಡ್ ನಿರ್ಲಕ್ಷ್ಯ ಮಾಡಿಲ್ಲ. ಬಿಎಸ್‌ವೈ‌ಗೆ ಕೇಂದ್ರದಲ್ಲಿ ಜಾಗ ಕೊಟ್ಟಿದ್ದಾರೆ. ಸಿಎಂ‌ ನೇರವಾಗಿ ಹೇಳಿಲ್ಲ. ಅವರು ಮಾಧ್ಯಮಕ್ಕೆ‌ ನೀಡಿದ ಹೇಳಿಕೆಯನ್ನು ನೋಡಿದ್ದೇನೆ ಎಂದರು.

ಸದನದಲ್ಲಿ ಪಾಲ್ಗೋಳ್ಳೋ ವಿಚಾರದ ಬಗ್ಗೆ ಇಂದು ರಾತ್ರಿ ನಿರ್ಧರಿಸುತ್ತೇನೆ. ಸಿಎಂ ನಂಬ್ತೀನಿ, ಅವರ ಹತ್ರ ಮಾತಾಡಿ ತೀರ್ಮಾನ ಮಾಡ್ತೀನಿ. ನಂಗೆ ಸಚಿವ ಆಗಬೇಕು ಅಂತ ಆಸೆ ಅಲ್ಲ. ಆಪಾದನೆ ಬಂದಿತ್ತು, ಅದರಿಂದ ಕ್ಲೀನ್ ಆಗಿ ಹೊರಬಂದಿದ್ದೇನೆ. ನನ್ನ ವಾಪಸ್ ಸಚಿವನನ್ನಾಗಿ ಮಾಡ್ತೀನಿ ಅಂತ ಬಿಎಸ್‌ವೈ, ಸಿಎಂ ಹಾಗು ಕಟೀಲ್‌ ಹೇಳಿದ್ರು. ಈಗ ಅದಕ್ಕಾಗಿ ಕೇಳುತ್ತಿದ್ದೇನೆ ಎಂದು ಕೆ ಎಸ್​ ಈಶ್ವರಪ್ಪ ವಿವರಿಸಿದರು.

ಇದನ್ನೂ ಓದಿ: 21 ಕಾಂಗ್ರೆಸ್​ ಮುಖಂಡರ ಮೇಲೆ ಇಡಿ ದಾಳಿಗೆ ಸಿದ್ಧತೆ: ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.