ETV Bharat / state

ಹಲವು ಹುದ್ದೆಗಳ ಫಲಿತಾಂಶ ಪ್ರಕಟಣೆಗೆ ವೇಗ ನೀಡಲು ಕೆಪಿಎಸ್​ಸಿ ನಿರ್ಧಾರ

author img

By

Published : May 31, 2022, 7:57 PM IST

106 ಕೆಎಎಸ್ ಹುದ್ದೆಗಳಿಗೆ ಸಂಬಂಧಿಸಿದಂತೆ ಅಂತಿಮಗೊಳ್ಳುತ್ತಿರುವ 1:3 ಪಟ್ಟಿಯ ಅಧಿಕೃತ ಪ್ರಕಟಣೆಯನ್ನು ಜೂನ್ ಮಾಸಾಂತ್ಯಕ್ಕೆ ಹೊರಡಿಸಲಾಗುತ್ತದೆ ಎಂಬ ಮಾಹಿತಿ ದೊರೆತಿದೆ.

KPSC
ಕೆಪಿಎಸ್​ಸಿ

ಬೆಂಗಳೂರು: ಜೂನ್ ಅಂತ್ಯದ ವೇಳೆಗೆ 2021ರ ಕೆಎಎಸ್ ಮುಖ್ಯ ಪರೀಕ್ಷೆಯ ಫಲಿತಾಂಶಗಳು ಪ್ರಕಟಗೊಳ್ಳಲಿವೆ. 106 ಕೆಎಎಸ್ ಹುದ್ದೆಗಳಿಗೆ ಸಂಬಂಧಿಸಿದಂತೆ ಅಂತಿಮಗೊಳ್ಳುತ್ತಿರುವ 1:3 ಪಟ್ಟಿಯ ಅಧಿಕೃತ ಪ್ರಕಟಣೆಯನ್ನು ಜೂನ್ ಮಾಸಾಂತ್ಯಕ್ಕೆ ಹೊರಡಿಸಲಾಗುತ್ತದೆ ಎಂಬ ಮಾಹಿತಿ ದೊರೆತಿದೆ. ಈ ಕುರಿತಂತೆ ಆಯೋಗದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ತಮಗೆ ಸ್ಪಷ್ಟ ಆಶ್ವಾಸನೆಯನ್ನು ನೀಡಿದ್ದಾರೆ ಎಂದು ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

ಮಾಜಿ ಸಚಿವರೊಂದಿಗೆ ದೂರವಾಣಿ ಮೂಲಕ ಆಯೋಗದ ಕಾರ್ಯದರ್ಶಿ ಮಾತನಾಡಿ ಮಾಹಿತಿ ನೀಡಿದ್ದಾರಂತೆ. ನಂತರ ಕೆಪಿಎಸ್​​ಸಿ ಅಧ್ಯಕ್ಷರು, ಆರು ಜನ ಸದಸ್ಯರು ಹಾಗೂ ಆಯೋಗದ ಇತರೆ ಅಧಿಕಾರಿಗಳೊಂದಿಗೆ ಅವರು ಸುದೀರ್ಘ ಚರ್ಚೆ ನಡೆಸಿದ್ದಾರಂತೆ. ಇದೇ ಸಂದರ್ಭದಲ್ಲಿ ಕೆಪಿಎಸ್​ಸಿ ಈ ಹಿಂದೆ ನಡೆಸಿರುವ ವಿವಿಧ ಪರೀಕ್ಷೆಗಳ ಫಲಿತಾಂಶಗಳ ಕುರಿತಾದ ಮಾಹಿತಿಯನ್ನು ಸುರೇಶ್ ಕುಮಾರ್ ಅವರಿಗೆ ನೀಡಿದೆ.

  • 150 ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳಿಗೆ ಮುಂದಿನ ಹತ್ತು ದಿನಗಳಲ್ಲಿ ಅಂತಿಮ ಆಯ್ಕೆ ಪಟ್ಟಿ ಪ್ರಕಟವಾಗಲಿದೆ.
  • 1,136 ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ 2022ರ ಜೂನ್ 10ರ ಒಳಗಾಗಿ ಪ್ರಕಟವಾಗಲಿದೆ.
  • ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪದವೀಧರ ಚಿತ್ರಕಲಾ ಶಿಕ್ಷಕರ ಹುದ್ದೆಗಳಿಗೆ 15 ದಿನಗಳ ಒಳಗಾಗಿ ಅಂತಿಮ ಆಯ್ಕೆ ಪಟ್ಟಿ ಪ್ರಕಟವಾಗಲಿದೆ.
  • ದ್ವಿತೀಯ ದರ್ಜೆ ಸಹಾಯಕರ 1,323 ಹುದ್ದೆಗಳಿಗೆ ಮೌಲ್ಯಮಾಪನ ಕಾರ್ಯವು ಪ್ರಗತಿಯಲ್ಲಿದ್ದು, ಮುಂದಿನ 40 ರಿಂದ 45 ದಿನಗಳಲ್ಲಿ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟವಾಗಲಿದೆ.
  • ಲೋಕೋಪಯೋಗಿ ಇಲಾಖೆಯ ಕಿರಿಯ ಅಭಿಯಂತರರು ಗ್ರೇಡ್-1 ಮತ್ತು ಸಹಾಯಕ ಅಭಿಯಂತರರ ಒಟ್ಟು 990 ಹುದ್ದೆಗಳಿಗೆ ಡಿಸೆಂಬರ್ 2021 ರಲ್ಲಿ ನಡೆದ ಪರೀಕ್ಷೆಯ ಮೌಲ್ಯಮಾಪನ ಕಾರ್ಯ ನಡೆಯುತ್ತಿದೆ. ಅತಿ ಶೀಘ್ರದಲ್ಲಿ ಪಟ್ಟಿ ಪ್ರಕಟವಾಗಲಿದೆ.
  • ಈ ಎಲ್ಲಾ ಹುದ್ದೆಗಳ ಫಲಿತಾಂಶ ಪ್ರಕಟಣೆ, ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಣೆ ಹಾಗೂ ಅಂತಿಮ ಆಯ್ಕೆ ಪಟ್ಟಿ ಪ್ರಕಟಣೆ ಕುರಿತು ಪ್ರಸ್ತುತ ಹಂತದ ವಿವರಗಳನ್ನು ಇಂದು ಅಥವಾ ನಾಳೆ ಸಂಜೆಯ ಒಳಗೆ ಆಯೋಗದ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗುತ್ತದೆ.

ಇದಕ್ಕೂ ಮುನ್ನ ನೂರಾರು ಉದ್ಯೋಗಾಂಕ್ಷಿಗಳು ಫಲಿತಾಂಶ ಶೀಘ್ರ ಹೊರಡಿಸಬೇಕೆಂದು ಸುರೇಶ್ ಕುಮಾರ್ ಅವರಿಗೆ ಮನವಿ ಮಾಡಿಕೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.