ETV Bharat / state

ಕೆಪಿಎಸ್​ಸಿ ನೇಮಕಾತಿಯಲ್ಲಿ ಅಕ್ರಮ ಆರೋಪ: ಟಿಸಿಎಸ್​ಗೆ ಹೈಕೋರ್ಟ್ ತುರ್ತು ನೋಟಿಸ್

author img

By

Published : Nov 20, 2020, 9:11 PM IST

428 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಟಾಟಾ ಕನ್ಸಲ್‌ಟೆಂಟ್ ಸರ್ವೀಸ್​ಗೆ (ಟಿಸಿಎಸ್) ತುರ್ತು ನೋಟಿಸ್ ಜಾರಿ ಮಾಡಿದೆ.

KPSC recruitment issue: High Court Emergency Notice to TCS
ಹೈಕೋರ್ಟ್

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ ಗೆಜೆಡೆಟ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ನಡೆಸಿದ್ದ ಲಿಖಿತ ಪರೀಕ್ಷೆಯ ಡಿಜಿಟಲ್ ಮೌಲ್ಯಮಾಪನದಲ್ಲಿ ಉತ್ತರ ಪತ್ರಿಕೆಗಳ ಅಂಕಗಳನ್ನು ತಿದ್ದಲಾಗಿದೆ ಎಂದು ಆಕ್ಷೇಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಟಾಟಾ ಕನ್ಸಲ್‌ಟೆಂಟ್ ಸರ್ವೀಸ್​ಗೆ (ಟಿಸಿಎಸ್) ಹೈಕೋರ್ಟ್ ತುರ್ತು ನೋಟಿಸ್ ಜಾರಿ ಮಾಡಿದೆ.

2015ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ 428 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದ್ದು, ಸಿಬಿಐ ತನಿಖೆಗೆ ವಹಿಸಲು ಸರ್ಕಾರಕ್ಕೆ ನಿರ್ದೇಶನ ಕೋರಿ ಬಿ.ಕೆ.ಸುಧನ್ವ ಬಂಡೋಲ್ಕರ್ ಸೇರಿದಂತೆ 14 ಅಭ್ಯರ್ಥಿಗಳು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ್ ಕುಮಾರ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ಟಿಸಿಎಸ್‌ಗೆ ತುರ್ತು ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಡಿಸೆಂಬರ್ 10ಕ್ಕೆ ಮುಂದೂಡಿತು.

ಅರ್ಜಿದಾರರ ಕೋರಿಕೆ: ಕೆಪಿಎಸ್​ಸಿ 2017ರಲ್ಲಿ 428 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು. 2017ರ ಆಗಸ್ಟ್ 20ರಂದು ಪ್ರಾಥಮಿಕ ಪರೀಕ್ಷೆ, ಡಿಸೆಂಬರ್ 16ರಿಂದ 23ರವರೆಗೆ ಮುಖ್ಯ ಪರೀಕ್ಷೆ ನಡೆಸಲಾಗಿತ್ತು. 2019ರ ಜನವರಿಯಲ್ಲಿ ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ್ದ ಕೆಪಿಎಸ್​ಸಿ ಆಗಸ್ಟ್ 2ರಂದು 2,123 ಅಭ್ಯರ್ಥಿಗಳನ್ನು 1.5 ಅನುಪಾತದಲ್ಲಿ ಸಂದರ್ಶನಕ್ಕೆ ಕರೆದಿತ್ತು. ಅಂತಿಮ ಆಯ್ಕೆ ಪಟ್ಟಿಯನ್ನು 2020ರ ಜನವರಿಯಲ್ಲಿ ಬಿಡುಗಡೆ ಮಾಡಲಾಗಿತ್ತು.

ಈ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಅಭ್ಯರ್ಥಿಗಳು, ಕೆಪಿಎಸ್​ಸಿ ಲಿಖಿತ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಡಿಜಿಟಲ್ ಮೌಲ್ಯಮಾಪನ ನಡೆಸುವ ಸಂದರ್ಭದಲ್ಲಿ ತಮಗೆ ಬೇಕಾದ ಅಭ್ಯರ್ಥಿಗಳ ಅಂಕ ತಿರುಚಲಾಗಿದೆ. ಸೂಪರ್ ಯೂಸರ್ ಕಂಟ್ರೋಲ್ ಘಟಕದ ಪಾಸ್‌ವರ್ಡ್ ಬಳಕೆ ಮಾಡಿ ಪದೇ ಪದೆ ಲಾಗಿನ್ ಮಾಡಿ ಅಕ್ರಮ ಎಸಗಲಾಗಿದೆ. ಸೂಪರ್ ಯೂಸರ್ ಕಂಟ್ರೋಲ್ ಘಟಕದ ಪಾಸ್‌ವರ್ಡ್​ಅನ್ನು ಪರೀಕ್ಷಾ ಮುಖ್ಯ ನಿಯಂತ್ರಕರು ಮಾತ್ರ ಉಪಯೋಗಿಸಲು ಅವಕಾಶವಿದೆ. ಆದರೆ ಹೆಚ್ಚು ಜನ ಇದರ ಪಾಸ್‌ವರ್ಡ್ ಬಳಕೆ ಮಾಡಿದ್ದಾರೆ.

ಹೀಗಾಗಿಯೇ ಅಭ್ಯರ್ಥಿಗಳ ಲಿಖಿತ ಪರೀಕ್ಷೆಯ ವೈಯಕ್ತಿಕ ಅಂಕಗಳನ್ನು ಕೆಪಿಎಸ್‌ಸಿ ನೀಡುತ್ತಿಲ್ಲ. ಮೌಲ್ಯಮಾಪನಕ್ಕೆ ಬಳಸಿರುವ ಸಾಫ್ಟ್‌ವೇರ್​ಅನ್ನು ಟಿಸಿಎಸ್ ನೀಡಿದ್ದು, ಅವರಿಂದಲೂ ಪ್ರಕರಣದ ಕುರಿತು ವಿವರಣೆ ಪಡೆಯಬೇಕಿದೆ. ಅಲ್ಲದೇ ಸಾಫ್ಟ್​ವೇರ್​ ಮತ್ತು ಮೌಲ್ಯಮಾಪನದ ದತ್ತಾಂಶವನ್ನು ಸಂರಕ್ಷಿಸಿಡಲು ನಿರ್ದೇಶಿಸಬೇಕಿದೆ. ಆದ್ದರಿಂದ ಅರ್ಜಿಯಲ್ಲಿ ಟಿಸಿಎಸ್‌ನನ್ನು ಪ್ರತಿವಾದಿಯಾಗಿ ಸೇರಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.