ETV Bharat / state

ಸಿಡಿ ಗಲಾಟೆ ನಡುವೆಯೇ ಬೆಳಗಾವಿಯತ್ತ ಕೆಪಿಸಿಸಿ ಅಧ್ಯಕ್ಷ ಡಿಕೆಶಿ!

author img

By

Published : Mar 28, 2021, 11:35 AM IST

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಅವರು ಇಂದು ಬೆಳಗಾವಿಗೆ ಪ್ರಯಾಣ ಬೆಳೆಸಲಿದ್ದಾರೆ. ಸಿಡಿ ಪ್ರಕರಣದಲ್ಲಿ ಹೆಸರು ಕೇಳಿಬಂದಿದ್ದರೂ ಸಹ ಎದೆಗುಂದದ ಕನಕಪುರ ಬಂಡೆ ಬೆಳಗಾವಿ ಪ್ರವಾಸ ಕೈಗೊಂಡಿದ್ದಾರೆ.

DK Shivakumar
ಕೆಪಿಸಿಸಿ ಅಧ್ಯಕ್ಷ ಡಿಕೆಶಿ

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ರಾಜ್ಯಾದ್ಯಂತ ದೊಡ್ಡಮಟ್ಟದ ಸುದ್ದಿಯಾಗುತ್ತಿದೆ. ಇದರ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೈವಾಡವಿದೆ ಎಂಬ ಆರೋಪ ಕೇಳಿಬಂದಿರುವ ಸಂದರ್ಭದಲ್ಲಿಯೇ ಡಿಕೆಶಿ ಬೆಳಗಾವಿ ಪ್ರವಾಸ ಕೈಗೊಂಡಿದ್ದಾರೆ.

ಇಂದು ಮಧ್ಯಾಹ್ನ ಬೆಂಗಳೂರಿನಿಂದ ಬೆಳಗಾವಿಯತ್ತ ಪ್ರಯಾಣ ಬೆಳೆಸಲಿರುವ ಶಿವಕುಮಾರ್, ಸಂಜೆ ಕಾಂಗ್ರೆಸ್ ಹಿರಿಯ ನಾಯಕರ ಸಭೆಯನ್ನು ಬೆಳಗಾವಿಯಲ್ಲಿ ನಡೆಸಲಿದ್ದು ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದು ಮಧ್ಯಾಹ್ನ ಒಂದು ಗಂಟೆಗೆ ಬೆಳಗಾವಿಗೆ ಪ್ರಯಾಣ ಬೆಳೆಸುವ ಶಿವಕುಮಾರ್ ಸಂಜೆ ಏಳು ಗಂಟೆಗೆ ನಡೆಯುವ ಹಿರಿಯ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಳಗಾವಿ ಲೋಕಸಭಾ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಸತೀಶ್ ಜಾರಕಿಹೊಳಿ ನಾಳೆ ಬೆಳಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಈ ಸಂದರ್ಭ ಹಿರಿಯ ಕಾಂಗ್ರೆಸ್ ನಾಯಕರ ಜೊತೆ ಡಿಕೆಶಿ ಭಾಗಿಯಾಗಲಿದ್ದಾರೆ.

ಇದನ್ನು ಓದಿ: ಕೈ ಕಾರ್ಯಕರ್ತರ ಪ್ರತಿಭಟನೆ ಸಾಧ್ಯತೆ: ಜಾರಕಿಹೊಳಿ ನಿವಾಸದ ಸುತ್ತ ಪೊಲೀಸ್ ಸರ್ಪಗಾವಲು

ಮಧ್ಯಾಹ್ನದವರೆಗೂ ಅಲ್ಲಿಯೇ ಇರುವ ಶಿವಕುಮಾರ್ ಆನಂತರ ಹೆಲಿಕ್ಯಾಪ್ಟರ್ ಮೂಲಕ ಮಸ್ಕಿಯತ್ತ ಪ್ರಯಾಣ ಬೆಳೆಸಲಿದ್ದಾರೆ. ನಾಳೆ ಸಂಜೆ ಕಲಬುರಗಿಯಲ್ಲಿ ವಾಸ್ತವ್ಯ ಹೂಡಲಿರುವ ಅವರು ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಬಸವನಗೌಡ ತುರುವಿಹಾಳ ಉಮೇದುವಾರಿಕೆ ನಾಮಪತ್ರ ಸಲ್ಲಿಕೆ ಮಾಡಲಿದ್ದು ಈ ಸಂದರ್ಭ ಉಪಸ್ಥಿತರಿರುತ್ತಾರೆ. ಸಂಜೆ ಕಲಬುರಗಿಗೆ ವಾಪಸಾಗಿ ವಾಸ್ತವ್ಯ ಹೂಡುವ ಅವರು ಮಂಗಳವಾರ ಬೆಳಗ್ಗೆ ಬಸವಕಲ್ಯಾಣಕ್ಕೆ ತೆರಳಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಲ್ಲಮ್ಮ ಬಿ. ನಾರಾಯಣರಾವ್ ಬೆಳಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಕೆ ಮಾಡಲಿದ್ದು ಈ ಸಂದರ್ಭ ಉಪಸ್ಥಿತರಿರುತ್ತಾರೆ.

ಈ ಎಲ್ಲಾ ಸಮಾರಂಭಗಳಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್​.ಆರ್​. ಪಾಟೀಲ, ಕೆಪಿಸಿಸಿ ಅಧ್ಯಕ್ಷರು ಹಾಗೂ ಹಿರಿಯ ಕಾಂಗ್ರೆಸ್ ನಾಯಕರು ಪಾಲ್ಗೊಳ್ಳಲಿದ್ದಾರೆ.

ಇಂದಿನ ಸಭೆ: ಇಂದು ಸಂಜೆ 7ಕ್ಕೆ ಬೆಳಗಾವಿಯಲ್ಲಿ ನಡೆಯುವ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ. ಸಭೆಯಲ್ಲಿ ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್, ಉಸ್ತುವಾರಿ ಎಂ.ಬಿ. ಪಾಟೀಲ ಸೇರಿದಂತೆ ಕಾಂಗ್ರೆಸ್ಸಿನ ಹಿರಿಯ ನಾಯಕರು ಸಭೆಯಲ್ಲಿ ಇರಲಿದ್ದಾರೆ.

ಬೆಳಗಾವಿಯಲ್ಲಿ ಕಾಂಗ್ರೆಸ್ ಸಾಮರ್ಥ್ಯ ಉತ್ತಮವಾಗಿದ್ದು ಈ ಉಪಚುನಾವಣೆ ಗೆಲ್ಲುವ ಮೂಲಕ ಬೆಳಗಾವಿಯಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯ ಸಾಬೀತುಪಡಿಸಬೇಕಿದೆ. ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯಕರ್ತರನ್ನು ಹುರಿದುಂಬಿಸುವ ಹಾಗೂ ಅವರಲ್ಲಿ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಇಂದಿನ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಶತಾಯಗತಾಯ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಗೆಲ್ಲಿಸಿಕೊಳ್ಳುವ ಮೂಲಕ ಬಿಜೆಪಿಗೆ ಮುಖಭಂಗ ಮಾಡುವ ಹಂಬಲ ಕಾಂಗ್ರೆಸ್ ಹೊಂದಿದೆ. ಕಾಂಗ್ರೆಸ್​ನ ಎಲ್ಲ ನಾಯಕರು ಒಟ್ಟಾಗಿ ಭಾಗವಹಿಸುವ ಮೂಲಕ ಪಕ್ಷ ಸಂಘಟಿತವಾಗಿದೆ ಎಂಬ ಭಾವನೆಯನ್ನು ಸಹ ಕಾರ್ಯಕರ್ತರಲ್ಲಿ ಹಾಗೂ ಮತದಾರರಲ್ಲಿ ಮೂಡಿಸುವ ಉದ್ದೇಶದಿಂದ ಇಂದು ಸಂಜೆ ಹಿರಿಯ ಕಾಂಗ್ರೆಸ್ ನಾಯಕರ ಸಭೆ ಕರೆಯಲಾಗಿದೆ. ಜೊತೆಗೆ ನಾಳೆ ಎಲ್ಲರೂ ಒಟ್ಟಾಗಿ ತೆರಳಿ ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಕೆ ಯಶಸ್ವಿಯಾಗಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಸ್ಪರ್ಧೆಗೆ ನಿರಾಕರಿಸಿದ್ದ ಸತೀಶ್ ಜಾರಕಿಹೊಳಿ ಮನೋಬಲ ವೃದ್ಧಿಸುವ ಹಾಗೂ ಪಕ್ಷದ ಕಾರ್ಯಕರ್ತರಿಗೆ ಒಂದು ಉತ್ತಮ ಸಂದೇಶ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕರೆಲ್ಲ ಒಂದಾಗಿ ಸೇರುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.