ETV Bharat / state

ಮೊದಲು ಸಮಿತಿಯ ವರದಿ ಪಡೆದು ಮೀಸಲಾತಿ ಬಗ್ಗೆ ಜನರಲ್ಲಿ ಭರವಸೆ ಮೂಡಿಸಬೇಕು: ಕೂಡಲಸಂಗಮ ಶ್ರೀ

author img

By

Published : Oct 21, 2021, 1:50 PM IST

Updated : Oct 21, 2021, 2:21 PM IST

ಸದ್ಯ ಎರಡು ಕಡೆ ಉಪ ಚುನಾವಣೆಗಳು ನಡೆಯುತ್ತಿವೆ. ಎರಡು ಕ್ಷೇತ್ರದಲ್ಲೂ ಪಂಚಮಸಾಲಿ ಮತಗಳಿದ್ದು, ವರದಿ ಬರದಿರುವುದಕ್ಕೆ ಜನರಲ್ಲಿ ಅಸಮಾಧಾನವಿದೆ. ಹೀಗಾಗಿ ಒಬಿಸಿ ಆಯೋಗದಿಂದ ಮೊದಲೇ ವರದಿ ಪಡೆಯಬೇಕು, ಮೀಸಲಾತಿ ನಂತರದಲ್ಲಿ ನೀಡಿದರೂ ಕೂಡ ಆದಷ್ಟು ಬೇಗ ಅದನ್ನು ಅನುಷ್ಠಾನ ಮಾಡಬೇಕು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದ್ದಾರೆ.

koodalasangama-swamiji-press-meet-on-2a-reservation-fight
ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ

ಬೆಂಗಳೂರು: ಮೀಸಲಾತಿ ನೀಡಲು‌ ಸಮಯ ಬೇಕಾಗುತ್ತದೆ, ಮೊದಲು ಸಮಿತಿಯ ವರದಿ ಪಡೆದುಕೊಂಡು ಜನರಲ್ಲಿ ಭರವಸೆ ಮೂಡಿಸಬೇಕು. ವರದಿ ಬೇಗ ತರಿಸಿಕೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ತರುತ್ತಿದ್ದೇವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ 30ರೊಳಗೆ ವರದಿಯನ್ನು ಮುಖ್ಯಮಂತ್ರಿಗಳು ತರಿಸಿಕೊಳ್ಳಬೇಕು. ಅಕ್ಟೋಬರ್ 1ರಂದು ಮೀಸಲಾತಿ ವಿಚಾರವಾಗಿ ಸಿಎಂ ಸಭೆ ಮಾಡಿದ್ದರು. ಹಿಂದುಳಿದ ಆಯೋಗದ ವರದಿ ಬಂದ ಮೇಲೆ ಮೀಸಲಾತಿ ನೀಡುತ್ತೇವೆ ಅಂದಿದ್ದರು ಎಂದರು.

ಸದ್ಯ ಎರಡು ಕಡೆ ಉಪ ಚುನಾವಣೆಗಳು ನಡೆಯುತ್ತಿವೆ. ಎರಡು ಕ್ಷೇತ್ರದಲ್ಲೂ ಪಂಚಮಸಾಲಿ ಮತಗಳಿದ್ದು, ವರದಿ ಬರದಿರುವುದಕ್ಕೆ ಜನರಲ್ಲಿ ಅಸಮಾಧಾನವಿದೆ. ಹೀಗಾಗಿ ಒಬಿಸಿ ಆಯೋಗದಿಂದ ಮೊದಲೇ ವರದಿ ಪಡೆಯಬೇಕು, ಮೀಸಲಾತಿ ನಂತರದಲ್ಲಿ ನೀಡಿದರೂ ಕೂಡ ಆದಷ್ಟು ಬೇಗ ಅದನ್ನು ಅನುಷ್ಠಾನ ಮಾಡಬೇಕು. ಇಲ್ಲದಿದ್ದರೆ ಜನರು ಆಕ್ರೋಶಗೊಳ್ಳುತ್ತಾರೆ ಎಂದು ಪರೋಕ್ಷವಾಗಿ ಸರ್ಕಾರಕ್ಕೆ ಶ್ರೀಗಳು ಎಚ್ಚರಿಕೆ ನೀಡಿದರು.

ಕೂಡಲಸಂಗಮ ಶ್ರೀಗಳಿಂದ ಮಾಧ್ಯಮಗೋಷ್ಠಿ

ಉಪ ಚುನಾವಣೆಗೂ ಮೀಸಲಾತಿಗೂ ಯಾವುದೇ ಸಂಬಂಧವಿಲ್ಲ. ಸರ್ಕಾರದ ಮೇಲೆ ಒತ್ತಡ ಹಾಕಿದರೆ ಮಾತ್ರ ಸರ್ಕಾರ ಕೆಲಸವಾಗಲು ಸಾಧ್ಯ. ಚುನಾವಣೆ ಮುಗಿಯುವವರೆಗೆ ನಾವು ಕಾಯುತ್ತೇವೆ, ಚುನಾವಣೆ ರಾಜಕಾರಣ ಮಾಡಲ್ಲ. ನಂತರ ಎರಡೂ ಕ್ಷೇತ್ರಕ್ಕೆ ಭೇಟಿ ನೀಡುತ್ತೇವೆ ಎಂದು ಸ್ವಾಮೀಜಿ ಹೇಳಿದರು.

ಮೀಸಲಾತಿ‌ ಚಳವಳಿಯಲ್ಲಿ‌ ಶಾಸಕ ಬಸನಗೌಡ ಪಾಟೀಲ್ ಮುಂಚೂಣಿಯಲ್ಲಿ ಇರುವುದರಿಂದ ಅವರ ವಿರುದ್ಧ ಅಪಪ್ರಚಾರದ ಪ್ರಯತ್ನಗಳು ನಡೆಯುತ್ತವೆ. ಇದರ ಬಗ್ಗೆ ಯತ್ನಾಳ್​ ಅವರೇ ಉತ್ತರ ಕೊಟ್ಟಿದ್ದು, ಹಾಗಾಗಿ ನಾನು ಹೆಚ್ಚು ಮಾತನಾಡುವುದಿಲ್ಲ ಎಂದರು.

ಮತ್ತೆ ಅಭಿಯಾನ :

2ಎ ಮೀಸಲಾತಿಗೆ ಹಕ್ಕೊತ್ತಾಯಿಸಿ ಮತ್ತೆ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ದ್ವಿತೀಯ ಅಭಿಯಾನ ಪ್ರಾರಂಭ ಮಾಡುತ್ತಿದ್ದೇವೆ. ಬೆಂಗಳೂರು ಭಾಗದಲ್ಲಿ ಅಭಿಯಾನ ‌ಆರಂಭಿಸುತ್ತಿದ್ದು, ಜನರಿಗೆ ಅರಿವು ಮೂಡಿಸುವ ಕೆಲಸ ನಡೆಯಲಿದೆ. ಸರ್ಕಾರ ಕಾಲಾವಕಾಶ ಕೇಳಿದ್ದರಿಂದ ಅಭಿಯಾನ ಮುಂದುವರೆಸುತ್ತಿದ್ದೇವೆ ಎಂದು ಸ್ವಾಮೀಜಿ ತಿಳಿಸಿದರು.

ಇದನ್ನೂ ಓದಿ: ಯತ್ನಾಳ್​​ ಬಳಿ ನನ್ನ ರಹಸ್ಯ ಇದ್ದರೆ ಬಹಿರಂಗಗೊಳಿಸಲಿ: HDK ಸವಾಲು

Last Updated : Oct 21, 2021, 2:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.