ETV Bharat / state

ಶಿಕ್ಷಕರ ನೇಮಕಾತಿ: ತಂದೆಯ ಆದಾಯ ಪ್ರಮಾಣಪತ್ರ ಪರಿಗಣಿಸಲು ಕೋರಿದ್ದ ಅರ್ಜಿ ವಜಾ

author img

By ETV Bharat Karnataka Team

Published : Dec 2, 2023, 10:48 PM IST

ಶಿಕ್ಷಕರ ನೇಮಕಾತಿ ಸಂಬಂಧ ತಮ್ಮ ತಂದೆಯ ಆದಾಯ ಪ್ರಮಾಣಪತ್ರ ಪರಿಗಣಿಸುವಂತೆ ಕೋರಿದ್ದ ಅಭ್ಯರ್ಥಿಗಳ ಅರ್ಜಿಯನ್ನು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ವಜಾಗೊಳಿಸಿದೆ.

ket-rejected-application-seeking-to-consider-income-certificate-of-father-in-teachers-recruitment
ಶಿಕ್ಷಕರ ನೇಮಕಾತಿ: ತಂದೆಯ ಆದಾಯ ಪ್ರಮಾಣಪತ್ರ ಪರಿಗಣಿಸಲು ಕೋರಿದ್ದ ಅರ್ಜಿ ವಜಾ

ಬೆಂಗಳೂರು : 13 ಸಾವಿರಕ್ಕೂ ಅಧಿಕ ಶಿಕ್ಷಕರ ನೇಮಕ ಕುರಿತಂತೆ ಹೈಕೋರ್ಟ್ ನಿರ್ದೇಶನದಂತೆ ತಮ್ಮ ತಂದೆಯ ಆದಾಯ ಪ್ರಮಾಣಪತ್ರ ಪರಿಗಣಿಸಬೇಕು ಎಂದು ಕೋರಿ ಕೆಲವು ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (ಕೆಎಟಿ) ವಜಾ ಮಾಡಿದೆ.

ಬೆಂಗಳೂರಿನ ಎಎಂಎಸ್ ಬಡಾವಣೆಯ ಎಂ. ನಳಿನ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮಂಡಳಿಯ ನ್ಯಾಯಾಂಗ ಸದಸ್ಯ ನಾರಾಯಣ ಮತ್ತು ಆಡಳಿತ ಸದಸ್ಯ ಎನ್. ಸಿವಶೈಲಂ ಅವರಿದ್ದ ಪೀಠವು ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಪೋಷಕರು ಅಥವಾ ಪತಿಯ ಆದಾಯ ಪ್ರಮಾಣಪತ್ರ ಪರಿಗಣಿಸುವ ಕುರಿತಂತೆ ಸುಪ್ರೀಂಕೋರ್ಟ್ ಬಡೆಂಗಾ ತಾಲೂಕುದಾರ್ ಮತ್ತು ಟಾಟಾ ಕೆಮಿಕಲ್ಸ್ ನಡುವಿನ ಪ್ರಕರಣದಲ್ಲಿ ನೀಡಿರುವ ತೀರ್ಪು ಈ ಪ್ರಕರಣಕ್ಕೆ ಅನ್ವಯವಾಗುತ್ತದೆ. ಅದರಂತೆ ಅರ್ಜಿದಾರರು ತಮ್ಮ ಮನವಿಗಳನ್ನು ಮಾನ್ಯ ಮಾಡಲು ಯಾವುದೇ ಅಗತ್ಯ ಕಾನೂನಾತ್ಮಕ ದಾಖಲೆಗಳನ್ನು ಅಥವಾ ಆಧಾರಗಳನ್ನು ಒದಗಿಸಿಲ್ಲ ಎಂದು ನ್ಯಾಯಮಂಡಳಿ ತನ್ನ ಆದೇಶದಲ್ಲಿ ತಿಳಿಸಿದೆ.

ಜೊತೆಗೆ, ಮದುವೆಯಾದವರು ತಮ್ಮ ಪತಿಯ ಜೊತೆ ಬೇರೆ ಕುಟುಂಬದಲ್ಲಿ ವಾಸಿಸುತ್ತಾರೆಯೇ ಹೊರತು, ಪೋಷಕರೊಂದಿಗೆ ವಾಸಿಸುವುದಿಲ್ಲ. ಹಾಗಾಗಿ ಅಭ್ಯರ್ಥಿಗಳ ಮನವಿ ಪುರಸ್ಕರಿಸಲಾಗದು ಎಂದು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ಹೇಳಿದೆ.

ವಿಚಾರಣೆ ವೇಳೆ, ಅರ್ಜಿದಾರರ ಪರ ವಕೀಲರು, ನಿಯಮದಂತೆ ತಂದೆಯ ಆದಾಯ ಪ್ರಮಾಣಪತ್ರವನ್ನು ಮಾತ್ರ ಪರಿಗಣಿಸಬೇಕೇ ಹೊರತು ಪತಿಯ ಆದಾಯವನ್ನಲ್ಲ. ಸುಪ್ರೀಂಕೋರ್ಟ್ ಕೂಡ ಎಲ್ಲ ಅಂಶಗಳನ್ನು ಪರಿಗಣಿಸಿ, ಸುರೇಂದ್ರಸಿಂಗ್ ವರ್ಸಸ್ ಪಂಜಾಬ್ ಎಲೆಕ್ಟ್ರಿಕ್‌ಸಿಟಿ ಬೋರ್ಡ್ ಅಂಡ್ ಅದರ್ಸ್​ ಪ್ರಕರಣದಲ್ಲಿ ಪೋಷಕರ ಆದಾಯವನ್ನು ಮಾತ್ರ ಪರಿಗಣಿಸಬೇಕು ಎಂದು ಆದೇಶಿಸಿದೆ. ಆದರೆ, ಸರ್ಕಾರ ಇದಕ್ಕೆ ವಿರುದ್ಧವಾದ ನಿಲುವು ಕೈಗೊಂಡಿದೆ ಎಂದರು.

ಅಲ್ಲದೇ, ಹುಟ್ಟಿನಿಂದ ಜಾತಿ ನಿರ್ಧಾರ ಆಗುತ್ತದೆ. ಒಂದು ಜಾತಿಯ ಅಭ್ಯರ್ಥಿ ಬೇರೊಂದು ಜಾತಿಯ ಅಭ್ಯರ್ಥಿಯನ್ನು ಮದುವೆ ಆಗುವುದರಿಂದ ಅವರ ಜಾತಿ ಬದಲಾಗುವುದಿಲ್ಲ. ಆಗ ತಂದೆಯ ಆದಾಯವೇ ಪರಿಗಣಿಸ್ಪಡುತ್ತದೆಯೇ ಹೊರತು, ಪತಿಯ ಆದಾಯವಲ್ಲ ಎಂದು ಅವರು ವಿವರಿಸಿದರು.

ಅಷ್ಟೇ ಅಲ್ಲದೆ, ರಾಜ್ಯ ಹೈಕೋರ್ಟ್ ಪ್ರಕರಣವೊಂದರಲ್ಲಿ ಪೋಷಕರ ಆದಾಯ ಪ್ರಮಾಣಪತ್ರವನ್ನೇ ಪರಿಗಣಿಸಬೇಕು ಎಂದು ತಿಳಿಸಿದೆ. ಅದರಂತೆ ಈ ಪ್ರಕರಣದಲ್ಲೂ ಸಹ ಅರ್ಜಿದಾರರು ಸಲ್ಲಿಸಿರುವ ತಂದೆಯ ಆದಾಯ ಪ್ರಮಾಣಪತ್ರ ಪರಿಗಣಿಸಿ ಅವರ ಹೆಸರನ್ನು ಆಯ್ಕೆ ಪಟ್ಟಿಯಲ್ಲಿ ಸೇರಿಸಬೇಕು ಮತ್ತು ಕೌನ್ಸೆಲಿಂಗ್​ನಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಕೋರಿದ್ದರು.

ಇದನ್ನೂ ಓದಿ: 13,352 ಶಿಕ್ಷಕರ ನೇಮಕಾತಿಗೆ ಹೈಕೋರ್ಟ್ ಅನುಮತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.