ETV Bharat / state

ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ವಾಟಾಳ್ ಪೊಲೀಸ್ ವಶಕ್ಕೆ; ನಾಳೆ ತಮಿಳುನಾಡು ಸಿಎಂ ಭೇಟಿ

author img

By ETV Bharat Karnataka Team

Published : Oct 17, 2023, 2:49 PM IST

ದಯವಿಟ್ಟು ತಮಿಳುನಾಡಿಗೆ ಕಾವೇರಿ ನೀರು ಬಿಡಬೇಡಿ ಎಂದು ಸರ್ಕಾರಕ್ಕೆ ಕೈ ಮುಗಿದು ಕೇಳಿಕೊಳ್ಳುತ್ತೇನೆ- ವಾಟಾಳ್​ ನಾಗರಾಜ್​

vatal nagaraj tried to besiege the vidhana soudha
ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ವಾಟಾಳ್ ನಾಗರಾಜ್

ಬೆಂಗಳೂರು: ತಮಿಳುನಾಡಿಗೆ ನಿರಂತರವಾಗಿ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಮಂಗಳವಾರ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸೇರಿದಂತೆ ಇತರ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಪೊಲೀಸ್ ಭದ್ರತೆ ಲೆಕ್ಕಿಸದೆ ವಿಧಾನಸೌಧಕ್ಕೆ ನುಗ್ಗಿದ ವಾಟಾಳ್ ನಾಗರಾಜ್ ಹಾಗೂ ಇತರರು ಘೋಷಣೆ ಕೂಗಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಲವರನ್ನು ವಶಕ್ಕೆ ಪಡೆದು ಕರೆದೊಯ್ದರು.

ಇದಕ್ಕೂ ಮುನ್ನ ವಾಟಾಳ್ ನಾಗರಾಜ್ ಮಾತನಾಡಿ, "ನಿರಂತರವಾಗಿ ತಮಿಳುನಾಡಿಗೆ ಕಾವೇರಿ ನೀರು ಬಿಡಲಾಗುತ್ತಿದೆ. ಹಲವು ಬಾರಿ ಕೇಳಿಕೊಂಡರೂ ನೀರು ಬಿಡುವುದನ್ನು ಸರ್ಕಾರ ನಿಲ್ಲಿಸಿಲ್ಲ. ತಮಿಳುನಾಡಿಗೆ ನೀರು ಹೋಗ್ತಿದೆ. ಹಾಗಾಗಿ ಅವರು ಗಲಾಟೆ ಮಾಡದೆ ಸುಮ್ಮನಿದ್ದಾರೆ" ಎಂದರು.

"ನಾನು ಹಲವಾರು ಮುಖ್ಯಮಂತ್ರಿಗಳನ್ನು ನೋಡಿದ್ದೇನೆ. ಸರ್ಕಾರ ಇರುತ್ತದೆ, ಹೋಗುತ್ತದೆ. ಕಬಿನಿ, ಹಾರಂಗಿ, ಹೇಮಾವತಿ ಜಲಾಶಯಗಳಲ್ಲಿ ನೀರಿಲ್ಲದಿದ್ದರೂ ನೀರು ಬಿಡಲಾಗುತ್ತಿದೆ. ಮಂತ್ರಿಗಳು, ಸಂಸದರು ಯಾರೂ ಕೂಡ ಮಾತಾಡ್ತಿಲ್ಲ. ಎಲ್ಲಿ ಹೋಗಿದ್ದಾರೋ ಗೊತ್ತಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು.

"ತಮಿಳುನಾಡಿನವರು ಕೊಡುತ್ತಿರುವ ಹಿಂಸೆ ಗೊತ್ತಿದ್ದರೂ ಪ್ರಧಾನಿ ಮೋದಿ ಸುಮ್ಮನಿದ್ದಾರೆ. ಕೂಡಲೇ ಸಿಎಂ ಅಧಿವೇಶನ ಕರೆಯಬೇಕು. ಅಧಿಕಾರ ಹೋದರೂ ಪರವಾಗಿಲ್ಲ, ನೀರು ಬಿಡುವುದನ್ನು ನಿಲ್ಲಿಸಬೇಕು" ಎಂದರು.

ಸಿಎಂ ಸ್ಟಾಲಿನ್ ಭೇಟಿ ಮಾಡಲಿರುವ ವಾಟಾಳ್: ನಾಳೆ ಹೊಸೂರಿನಲ್ಲಿ ಪ್ರತಿಭಟನೆ ನಡೆಸಲು ತಯಾರಿ ನಡೆಸಿರುವ ವಾಟಾಳ್ ನಾಗರಾಜ್, ನಾಳೆಯೇ ತಮಿಳುನಾಡಿಗೆ ತೆರಳಿ ಸಿಎಂ ಸ್ಟಾಲಿನ್ ಭೇಟಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಕೆಲವು ದಿನಗಳ ಹಿಂದೆ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಕೆಆರ್​ಎಸ್​ ಮುತ್ತಿಗೆ ಪ್ರಯತ್ನ ನಡೆದಿತ್ತು. ಆ ಸಂದರ್ಭದಲ್ಲಿ ಹೋರಾಟದ ಮುಂದಾಳತ್ವ ವಹಿಸಿದ್ದ ವಾಟಾಳ್​ ನಾಗರಾಜ್​ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಪೊಲೀಸ್​ ವಾಹನಕ್ಕೆ ಹತ್ತಿಸುವ ವೇಳೆ ವಾಟಾಳ್​​ ರಾಜ್ಯ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದರು."ರಾಜ್ಯ ಸರ್ಕಾರ ಪೊಲೀಸರ ಮೂಲಕ ತಮ್ಮ ಕಾವೇರಿ ಪರ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಸರ್ಕಾರ ಏನೇ ಮಾಡಿದರೂ ನಮ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಕಾವೇರಿ ನಮ್ಮದು, ಈ ಹೋರಾಟ ನಿರಂತರವಾಗಿರುತ್ತದೆ" ಎಂದಿದ್ದರು.

ಇದನ್ನೂ ಓದಿ: ಕಾವೇರಿ: ಕೆಆರ್​ಎಸ್​ಗೆ ಮುತ್ತಿಗೆ ಯತ್ನ; ವಾಟಾಳ್​ ನಾಗರಾಜ್​ ಪೊಲೀಸ್ ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.