ಎಸ್‌ಎಸ್‌ಎಲ್‌ಸಿ ಪಿಯುಸಿ ವಿಲೀನ: ಪಬ್ಲಿಕ್ ಪರೀಕ್ಷೆ ಬಗ್ಗೆ ಶಿಕ್ಷಣ ಸಚಿವ ನಾಗೇಶ್ ಮಾಹಿತಿ

author img

By

Published : Sep 22, 2022, 8:45 PM IST

Updated : Sep 22, 2022, 10:09 PM IST

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿಲೀನ

ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿಲೀನ. ಪಬ್ಲಿಕ್ ಪರೀಕ್ಷೆ ಯಥಾಸ್ಥಿತಿಯಲ್ಲಿಯೇ ನಡೆಯಲಿದೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಗೆ ಪ್ರತ್ಯೇಕ ಪರೀಕ್ಷೆ. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವಿಧೇಯಕ ಅಂಗೀಕಾರ.

ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮತ್ತು ಪದವಿ ಪೂರ್ವ ಶಿಕ್ಷಣ ಪರೀಕ್ಷಾ ಮಂಡಳಿಯನ್ನು ವಿಲೀನಗೊಳಿಸುವ ಸಂಬಂಧ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ತಿದ್ದುಪಡಿ) ವಿಧೇಯಕವನ್ನು ಧ್ವನಿಮತದ ಮೂಲಕ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ವಿಧೇಯಕವನ್ನು ಮಂಡಿಸಿ, ಅದರ ಉದ್ದೇಶಗಳನ್ನು ವಿವರಿಸಿ ಅಂಗೀಕಾರ ಪಡೆದುಕೊಂಡರು.

ಹೊಸ ಶಿಕ್ಷಣ ನೀತಿ ಅನ್ವಯ ಎರಡು ಪರೀಕ್ಷಾ ಮಂಡಳಿಯನ್ನು ವಿಲೀನಗೊಳಿಸಿ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಳಿ ಎಂದು ನಾಮಕರಣ ಮಾಡಲಾಗಿದೆ. ಹೊಸ ಶಿಕ್ಷಣ ನೀತಿಯನ್ವಯ ವಿಧೇಯಕವನ್ನು ತರಲಾಗಿದೆ. ಪಿಯುಸಿ ನಿರ್ದೇಶಕರಿಗೆ ಪರೀಕ್ಷೆ ಕಡೆ ಗಮನಹರಿಸಿಕೊಂಡು ಆಡಳಿತ ಮತ್ತು ಶೈಕ್ಷಣಿಕ ಚಟುವಟಿಕೆಗಳ ಕಡೆಯೂ ನೋಡಬೇಕಿದೆ.

ಇದರಿಂದ ಗುಣಮಟ್ಟದ ಶಿಕ್ಷಣ ನೀಡಲು ಕಷ್ಟಕರವಾಗಿದೆ. ಹೀಗಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮಂಡಳಿ ಮತ್ತು ಪದವಿ ಪೂರ್ವ ಶಿಕ್ಷಣ ಪರೀಕ್ಷಾ ಮಂಡಳಿಯನ್ನು ಒಗ್ಗೂಡಿಸಿ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಂದು ಮಾಡಲಾಗಿದೆ. ಮಂಡಳಿಗೆ ಒಬ್ಬರು ಐಎಎಸ್ ಅಧಿಕಾರಿಯನ್ನು ನೇಮಿಸಲಾಗಿದೆ. ಇದರಿಂದ ನಿರ್ದೇಶಕರು ಶೈಕ್ಷಣಿಕ ಚಟುವಟಿಕೆಗಳತ್ತ ಹೆಚ್ಚಿನ ಗಮನಹರಿಸಿ ಉತ್ತಮ ಗುಣಮಟ್ಟದ ಶಿಕ್ಷಣ ಕಲ್ಪಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ಶಿಕ್ಷಣ ಸಚಿವ ನಾಗೇಶ್ ಮಾಹಿತಿ

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿಲೀನ: ದೇಶದ ಕೆಲವು ರಾಜ್ಯಗಳಲ್ಲಿ 10, 11 ಮತ್ತು 12ನೇ ತರಗತಿ ಪ್ರತ್ಯೇಕವಾಗಿಲ್ಲ. ಆದರೆ, ನಮ್ಮ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪ್ರತ್ಯೇಕವಾಗಿದೆ. ಈಗ ಎರಡನ್ನು ವಿಲೀನಗೊಳಿಸಲಾಗುತ್ತಿದೆ. ಎನ್‌ಇಪಿ ಅನ್ವಯ ನಾಲ್ಕು ಹಂತದಲ್ಲಿ ಶೈಕ್ಷಣಿಕವನ್ನು ವಿಭಾಗಿಸಲಾಗಿದೆ. ಎಲ್‌ಕೆಜಿಯಿಂದ ಎರಡನೇ ತರಗತಿ, ಮೂರನೇ ತರಗತಿಯಿಂದ ಐದನೇ ತರಗತಿ, ಆರನೇ ತರಗತಿಯಿಂದ ಎಂಟನೇ ತರಗತಿ ಮತ್ತು ಒಂಬತ್ತನೇ ತರಗತಿಯಿಂದ 12ನೇ ತರಗತಿಯವರೆಗೆ ವಿಭಾಗಿಸಲಾಗಿದೆ.

ಪ್ರಸ್ತುತ ನಡೆಯುತ್ತಿರುವ ಪಬ್ಲಿಕ್ ಪರೀಕ್ಷೆಯನ್ನು ಯಥಾಸ್ಥಿತಿಯಲ್ಲಿಯೇ ನಡೆಸಲಾಗುತ್ತದೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಗೆ ಪ್ರತ್ಯೇಕವಾಗಿ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ತಿಳಿಸಿದರು. ಚರ್ಚೆಯಲ್ಲಿ ಸದಸ್ಯರಾದ ರಮೇಶ್‌ಕುಮಾರ್, ಶರತ್ ಬಚ್ಚೇಗೌಡ, ಅಭಯ್ ಪ್ರಸಾದ್. ಪಿ.ರಾಜೀವ್ ಸೇರಿದಂತೆ ಇತರರು ಮಾತನಾಡಿದರು.

(ಇದನ್ನೂ ಓದಿ: ಶಿಕ್ಷಕರ ವರ್ಗಾವಣೆ ಮಸೂದೆ ಅಂಗೀಕಾರ: ಪತಿ ಪತ್ನಿ ಮತ್ತು ಪರಸ್ಪರ ಶಿಕ್ಷಕರ ವರ್ಗಾವಣೆಗೆ ಅವಕಾಶ)

Last Updated :Sep 22, 2022, 10:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.