ETV Bharat / state

ಬಜೆಟ್ ಅಂದಾಜನ್ನೂ ಮೀರುತ್ತಿರುವ ಸಾಲದ ಹೊರೆ.. ಮೊದಲ ತ್ರೈಮಾಸಿಕದಲ್ಲೇ ಅಧಿಕ ಸಾಲ!

author img

By

Published : Sep 1, 2022, 4:02 PM IST

ಕರ್ನಾಟಕಕ್ಕೆ ಸಾಲದ ಹೊರೆ: ಕಳೆದ ಎರಡು ವರ್ಷದ ಕೋವಿಡ್ ಲಾಕ್​​ಡೌನ್​​ಗೆ ರಾಜ್ಯದ ಬೊಕ್ಕಸ ಕ್ಷೀಣಿಸಿತ್ತು. ಆದಾಯ ಸಂಗ್ರಹ ನಿರೀಕ್ಷಿತ ಪ್ರಮಾಣದಲ್ಲಿ ಸಾಧ್ಯವಾಗಿಲ್ಲ‌. ಹೀಗಾಗಿ ಸರ್ಕಾರ ಬಹುವಾಗಿ ಸಾಲವನ್ನೇ ನಂಬಬೇಕಾಯಿತು. 2022-23 ಸಾಲಿನಲ್ಲಿ ಆದಾಯ ಸಂಗ್ರಹದಲ್ಲಿ ನಿರೀಕ್ಷೆಗಿಂತ ಉತ್ತಮ ಪ್ರಗತಿ ಸಾಧಿಸಿದೆ. ಆದರೂ ಬಾಕಿ ಕೆಲಸಗಳು, ನೆರೆ ಪರಿಹಾರ ಕಾಮಗಾರಿ ಮತ್ತು ಬಜೆಟ್ ಯೋಜನೆಗಳ ಸಮರ್ಪಕ ಅನುಷ್ಠಾನದ ಅನಿವಾರ್ಯತೆಯಲ್ಲಿರುವ ಬೊಮ್ಮಾಯಿ ಸರ್ಕಾರ ಈ ಬಾರಿಯೂ ಸಾಲವನ್ನೇ ಬಹುವಾಗಿ ನೆಚ್ಚಿಕೊಳ್ಳಬೇಕಾಗಿದೆ.

ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಕೋವಿಡ್ ಲಾಕ್​ಡೌನ್ ನೀಡಿದ ಆರ್ಥಿಕ ಹೊಡೆತದಿಂದ ರಾಜ್ಯ ಸರ್ಕಾರ ಬಹುವಾಗಿ ಸಾಲವನ್ನೇ ನೆಚ್ಚಿಕೊಂಡಿದೆ. ಆದಾಯ ಸಂಗ್ರಹ ಸೊರಗಿದ ಕಾರಣ ಸಾಲದ ಮೊರೆ ಹೋದ ರಾಜ್ಯ ಸರ್ಕಾರ, ಕಳೆದ ಎರಡು ವರ್ಷ ಬಜೆಟ್​ ಅಂದಾಜಿಗಿಂತಲೂ ಹೆಚ್ಚಿನ ಸಾಲ ಮಾಡಿದೆ. ಈ ವರ್ಷ ಆದಾಯ ಸಂಗ್ರಹ ಉತ್ತಮವಾಗಿದ್ದರೂ ಸರ್ಕಾರ ಮೊದಲ ತ್ರೈಮಾಸಿಕದಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಸಾಲ ಮಾಡಿದೆ.

ಬೊಮ್ಮಾಯಿ ಸರ್ಕಾರಕ್ಕೆ ಇದು ಚುನಾವಣಾ ವರ್ಷವಾಗಿದೆ. ಬಜೆಟ್ ಅನುಷ್ಠಾನದ ಅನಿವಾರ್ಯತೆ ಬಿಜೆಪಿ ಸರ್ಕಾರದ್ದಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ, ಅತಿವೃಷ್ಟಿಯಿಂದಾದ ನಷ್ಟ, ಪರಿಹಾರಕ್ಕಾಗಿ ಈ ಬಾರಿ ಬೊಮ್ಮಾಯಿ‌ ಸರ್ಕಾರ ಅನುದಾನ ಬಿಡುಗಡೆ ಮಾಡಲೇಬೇಕಾದ ಒತ್ತಡದಲ್ಲಿದೆ. ಬಜೆಟ್ ಅನುಷ್ಠಾನ, ಅಭಿವೃದ್ಧಿ ಕಾರ್ಯದಲ್ಲಿ ಏರುಪೇರಾದರೆ ಬಿಜೆಪಿ ಸರ್ಕಾರ ಮುಂದಿನ ಹೊಸ್ತಿಲಲ್ಲಿರುವ ಬಿಬಿಎಂಪಿ ಚುನಾವಣೆ, ವಿಧಾನಸಭೆ ಚುನಾವಣೆಯಲ್ಲಿ ಎಡುವುದು ಖಚಿತ. ಇದೇ ಉದ್ದೇಶಕ್ಕೆ ಬೊಮ್ಮಾಯಿ‌ ಸರ್ಕಾರ ನೀಡಿದ ಭರವಸೆ, ಅಭಿವೃದ್ಧಿ ಕಾರ್ಯ ಈಡೇರಿಸಲೇಬೇಕಾಗಿದೆ.

ಕಳೆದ ಎರಡು ವರ್ಷದ ಕೋವಿಡ್ ಲಾಕ್​​ಡೌನ್​​ಗೆ ರಾಜ್ಯದ ಬೊಕ್ಕಸ ಕ್ಷೀಣಿಸಿತ್ತು. ಆದಾಯ ಸಂಗ್ರಹ ನಿರೀಕ್ಷಿತ ಪ್ರಮಾಣದಲ್ಲಿ ಸಾಧ್ಯವಾಗಿಲ್ಲ‌. ಹೀಗಾಗಿ ಸರ್ಕಾರ ಬಹುವಾಗಿ ಸಾಲವನ್ನೇ ನಂಬಬೇಕಾಯಿತು. 2022-23 ಸಾಲಿನಲ್ಲಿ ಆದಾಯ ಸಂಗ್ರಹದಲ್ಲಿ ನಿರೀಕ್ಷೆಗಿಂತ ಉತ್ತಮ ಪ್ರಗತಿ ಸಾಧಿಸಿದೆ. ಆದರೂ ಬಾಕಿ ಕೆಲಸಗಳು, ನೆರೆ ಪರಿಹಾರ ಕಾಮಗಾರಿ ಮತ್ತು ಬಜೆಟ್ ಯೋಜನೆಗಳ ಸಮರ್ಪಕ ಅನುಷ್ಠಾನದ ಅನಿವಾರ್ಯತೆಯಲ್ಲಿರುವ ಬೊಮ್ಮಾಯಿ ಸರ್ಕಾರ ಈ ಬಾರಿಯೂ ಸಾಲವನ್ನೇ ಬಹುವಾಗಿ ನೆಚ್ಚಿಕೊಳ್ಳಬೇಕಾಗಿದೆ. ಕಳೆದ ಎರಡು ವರ್ಷವೂ ಸರ್ಕಾರ ಬಜೆಟ್ ಅಂದಾಜಿಗಿಂತ ಹೆಚ್ಚಿನ ಸಾಲ ಮಾಡಿದೆ. ಅದೇ ರೀತಿ ಈ ಬಾರಿಯೂ ಬೊಮ್ಮಾಯಿ‌ ಸರ್ಕಾರ ಬಜೆಟ್ ಅಂದಾಜಿಗಿಂತಲೂ ಅಧಿಕ ಸಾಲ ಮಾಡುವುದು ಅನಿವಾರ್ಯ ಎಂದು ಆರ್ಥಿಕ ಇಲಾಖೆ ಮೂಲಗಳು ತಿಳಿಸಿವೆ.

ಬಜೆಟ್ ಅಂದಾಜು ಮೀರಿ ಸಾಲ: ಕಳೆದ ಎರಡು ವರ್ಷವೂ ರಾಜ್ಯ ಸರ್ಕಾರ ಬಜೆಟ್ ಅಂದಾಜು ಮೀರಿ ಸಾಲ ಮಾಡಿಕೊಂಡಿದೆ. ಆದಾಯ ಸಂಗ್ರಹದಲ್ಲಿ ಖೋತಾ ಆದ ಕಾರಣ ಹೇಳಿದ್ದಕ್ಕಿಂತ ಹೆಚ್ಚಿನ ಸಾಲ ಮಾಡಿ ಬೊಕ್ಕಸದ ಮೇಲಿನ ಹೊರೆಯನ್ನು ಹೆಚ್ಚಿಸಬೇಕಾಯಿತು. 2020-21ರಲ್ಲಿ ರಾಜ್ಯ ಸರ್ಕಾರ ಬಜೆಟ್​​ನಲ್ಲಿ ಅಂದಾಜು 52,918 ಕೋಟಿ ರೂ. ಸಾರ್ವಜನಿಕ‌ ಸಾಲ ಮಾಡುವುದಾಗಿ ಹೇಳಿತ್ತು. ಆದರೆ ಹಣಕಾಸು ವರ್ಷದ ಅಂತ್ಯಕ್ಕೆ ಕೋವಿಡ್ ಲಾಕ್ ಡೌನ್​​ನಿಂದ ಎದುರಾದ ಆರ್ಥಿಕ ಸಂಕಷ್ಟದಿಂದ ಪಾರಾಗಲು ರಾಜ್ಯ ಸರ್ಕಾರ ಬರೋಬ್ಬರಿ 84,528 ಕೋಟಿ ರೂ. ಸಾಲ ಮಾಡಿಕೊಂಡಿದೆ. ಅಂದರೆ ಬಜೆಟ್​ಗಿಂತ ರಾಜ್ಯ ಸರ್ಕಾರ 31,610 ಕೋಟಿ ರೂ. ಅಧಿಕ ಸಾಲವನ್ನು ಮಾಡಿಕೊಂಡಿದೆ.

(ಇದನ್ನೂ ಓದಿ: ರಾಜ್ಯಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆಗಮನ.. ಬೆಂಗಳೂರಿನಲ್ಲಿ ಕ್ಷೇಮವನ ಉದ್ಘಾಟನೆ)

ಆರ್ಥಿಕ ಇಲಾಖೆ ನೀಡಿರುವ ಅಂಕಿಅಂಶದ ಪ್ರಕಾರ 2021-22ರ ಬಜೆಟ್​​ನಲ್ಲಿ ಅಂದಾಜು 71,332 ಕೋಟಿ ರೂ. ಸಾಲ ಮಾಡುವುದಾಗಿ ಹೇಳಿತ್ತು. ಆದರೆ, ಆದಾಯ ಸಂಗ್ರಹ ಸೊರಗಿದ ಕಾರಣ ಆರ್ಥಿಕ ವರ್ಷದ ಅಂತ್ಯಕ್ಕೆ ಬೊಮ್ಮಾಯಿ ಸರ್ಕಾರ ಹೇಳಿದ್ದಕ್ಕಿಂತ ಅಧಿಕ ಸಾಲವನ್ನು ಎತ್ತುವಳಿ ಮಾಡಬೇಕಾಯಿತು. 2021-22ರಲ್ಲಿ ರಾಜ್ಯ ಸರ್ಕಾರ 80,633 ಕೋಟಿ ರೂ. ಅಧಿಕ ಸಾಲ ಮಾಡಿಕೊಂಡಿದೆ. ಆ ಮೂಲಕ 9,301 ಕೋಟಿ ರೂ‌. ಅಧಿಕ ಸಾಲ ಮಾಡಿದೆ.

ಮೊದಲ ತ್ರೈಮಾಸಿಕದಲ್ಲಿ ಅಧಿಕ ಸಾಲ: 2022-23ಸಾಲಿನಲ್ಲಿ ಆದಾಯ ಸಂಗ್ರಹ ಉತ್ತಮವಾಗಿದೆ. ಬಜೆಟ್ ನಿರೀಕ್ಷೆ ಮೀರಿ ಉತ್ತಮ ಆದಾಯ ಸಂಗ್ರಹ ಮಾಡಿದೆ. ಈ ಬಾರಿಯ ಬಜೆಟ್​​ನಲ್ಲಿ 72,000.46 ಕೋಟಿ ರೂ. ಸಾಲ ಮಾಡುವುದಾಗಿ ರಾಜ್ಯ ಸರ್ಕಾರ ಹೇಳಿಕೊಂಡಿದೆ. ಈವರೆಗೆ ಆರ್​​ಬಿಐ ಮೂಲಕ ರಾಜ್ಯ ಅಭಿವೃದ್ಧಿ ಸಾಲದ ಮೂಲಕ ಯಾವುದೇ ಸಾಲವನ್ನು ರಾಜ್ಯ ಸರ್ಕಾರ ಎತ್ತುವಳಿ ಮಾಡಿಲ್ಲ. ಮೂರನೇ ತ್ರೈಮಾಸಿಕದಿಂದ ಆರ್​​ಬಿಐ ಮೂಲಕ ಸಾಲ ಎತ್ತುವಳಿ ಮಾಡಲು ಮುಂದಾಗಿದೆ. ಆದರೆ, ಇತರ ಮೂಲಗಳಿಂದ ಸಾರ್ವಜನಿಕ ಸಾಲದ ರೂಪದಲ್ಲಿ ಕಳೆದ ತ್ರೈ ಮಾಸಿಕಗಿಂತ ಹೆಚ್ಚಿನ ಸಾಲ ಮಾಡಿಕೊಂಡಿದೆ.

ಆರ್ಥಿಕ ಇಲಾಖೆ ನೀಡಿರುವ ಅಂಕಿಅಂಶದಂತೆ 2022-23ಸಾಲಿನ ಮೊದಲ ತ್ರೈಮಾಸಿಕದಲ್ಲಿ ಬೊಮ್ಮಾಯಿ‌ ಸರ್ಕಾರ ಸಾರ್ವಜನಿಕ ಸಾಲದ ರೂಪದಲ್ಲಿ 765.05 ಕೋಟಿ ರೂ. ಸಾಲ ಮಾಡಿಕೊಂಡಿದೆ. ಅದೇ ಕಳೆದ ಆರ್ಥಿಕ ವರ್ಷದಲ್ಲಿ ಮೊದಲ ತ್ರೈಮಾಸಿಕದಲ್ಲಿ 267.83 ಕೋಟಿ ರೂ. ಸಾರ್ವಜನಿಕ ಸಾಲ ಮಾಡಿಕೊಂಡಿತ್ತು. ಅಂದರೆ ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ಬಾರಿ ಬೊಮ್ಮಾಯಿ‌ ಸರ್ಕಾರ ಶೇ.185.65 ಹೆಚ್ಚುವರಿ ಸಾಲ ಮಾಡಿಕೊಂಡಿದೆ.

ಮೊದಲ ತ್ರೈಮಾಸಿಕದಲ್ಲಿ ರಾಜ್ಯ ಬೊಕ್ಕಸಕ್ಕೆ ಸ್ವಂತ ತೆರಿಗೆ ರಾಜಸ್ವ ರೂಪದಲ್ಲಿ 34,066.93 ಕೋಟಿ ರೂ. ಆದಾಯ ಸಂಗ್ರಹ ಮಾಡಿದೆ. ಕಳೆದ ವರ್ಷಕ್ಕಿಂತ ಶೇ.46.98 ಅಧಿಕ ಆದಾಯ ಸಂಗ್ರಹವಾಗಿದೆ. ಅದೇ ಸ್ವಂತ ತೆರಿಗೆಯೇತರ ರಾಜಸ್ವ ಮೂಲಕ 2,426.94 ಕೋಟಿ ರೂ. ಆದಾಯ ಸಂಗ್ರಹಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.