ETV Bharat / state

ಶ್ರೀಮಂತ ಪಾಟೀಲ್​ಗೆ ಸಚಿವ ಸ್ಥಾನ ನೀಡುವಂತೆ ಮರಾಠ ಮಹಾ ಒಕ್ಕೂಟ ಒತ್ತಾಯ

author img

By

Published : Feb 9, 2022, 7:22 AM IST

ಮರಾಠ ಸಮುದಾಯದ ಶ್ರೀಮಂತ ಪಾಟೀಲ್​ರಿಗೆ ಸಚಿವ ಸ್ಥಾನ ನೀಡಬೇಕು ಮತ್ತು ಮರಾಠ ನಿಗಮ ಮಂಡಳಿಗೆ ಅಧ್ಯಕ್ಷರು, ನಿರ್ದೇಶಕರ ನೇಮಕ ಮಾಡಬೇಕು ಎಂಬೆಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಕ್ಷತ್ರಿಯ ಮಹಾ ಒಕ್ಕೂಟ ಸರ್ಕಾರಕ್ಕೆ ಮನವಿ ಮಾಡಿದೆ.

ಮರಾಠ ಮಹಾ ಒಕ್ಕೂಟ ಪತ್ರಿಕಾಗೋಷ್ಠಿ
ಮರಾಠ ಮಹಾ ಒಕ್ಕೂಟ ಪತ್ರಿಕಾಗೋಷ್ಠಿ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ವೇಳೆ ಮರಾಠ ಜನಾಂಗಕ್ಕೆ ಪ್ರಾತಿನಿಧ್ಯ, ಮರಾಠ ಅಭಿವೃದ್ಧಿ ನಿಗಮಕ್ಕೆ ನೇಮಕಾತಿ ಹಾಗು ಸಮುದಾಯದ ರಾಜಕೀಯ ಪರಿಸ್ಥಿತಿ ಕುರಿತು ಕರ್ನಾಟಕ ಕ್ಷತ್ರಿಯ ಮಹಾ ಒಕ್ಕೂಟದ ವತಿಯಿಂದ ನಗರದ ಖಾಸಗಿ ಹೋಟೆಲ್​ನಲ್ಲಿ ಮಾಧ್ಯಮಗೋಷ್ಠಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಕ್ಷತ್ರಿಯ ಮರಾಠ ಒಕ್ಕೂಟದ ಅಧ್ಯಕ್ಷರಾದ ಶ್ಯಾಮ್ ಸುಂದರ್ ಗಾಯಕ್ ವಾಡ್, ಮರಾಠ ಸಮಾಜವು ಬಹಳ ಬಡತನದಲ್ಲಿದೆ. ಕರ್ನಾಟಕ ರಾಜ್ಯದ ಮೂಲೆ ಮೂಲೆಗಳಲ್ಲಿ 50 ಲಕ್ಷಕ್ಕೂ ಹೆಚ್ಚು ಜನ ನೆಲೆಸಿದ್ದಾರೆ. 50ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರದಲ್ಲಿ ನಿರ್ಣಾಯಕರಾಗಿದ್ದಾರೆ. ಕಳೆದ 20 ವರ್ಷಗಳಿಂದ ಹಲವಾರು ಬೇಡಿಕೆಗಳಿಗೆ ಮನವಿ ಮಾಡುತ್ತಿದ್ದೇವೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರ ಆಶ್ವಾಸನೆ ನೀಡಿ ಕಾಲ ಕಳೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


'ಮರಾಠ ಸಮಾಜವನ್ನು 3ಬಿ ಯಿಂದ 2ಎಗೆ ಸೇರ್ಪಡೆಗೊಳಿಸಿ': ಮರಾಠ ಸಮುದಾಯದ ಶ್ರೀಮಂತ ಪಾಟೀಲ್​ರಿಗೆ ಸಚಿವ ಸ್ಥಾನ ಮತ್ತು ಮರಾಠ ನಿಗಮ ಮಂಡಳಿಗೆ ಅಧ್ಯಕ್ಷರು, ನಿರ್ದೇಶಕರ ನೇಮಕ ಮಾಡಬೇಕು. ಮರಾಠ ಸಮಾಜವನ್ನು 3ಬಿ ಯಿಂದ 2ಎ ಸೇರ್ಪಡೆ ಮಾಡಬೇಕು. ವಿಧಾನಸಭೆ, ನಗರ ಪಾಲಿಕೆ, ಪಂಚಾಯತ್​, ತಾಲೂಕ್ ಪಂಚಾಯತ್​ನಲ್ಲಿ​ ಮರಾಠ ಸಮಾಜದ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟರು.

'24 ಗಂಟೆಯೊಳಗೆ ಬೇಡಿಕೆ ಈಡೇರಿಸುತ್ತೇವೆ': ಬಿಜೆಪಿ ಸರ್ಕಾರ ಬಂದ 24 ಗಂಟೆಯೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸುತ್ತೇವೆಂದು ವಾಗ್ದಾನ ನೀಡಿದ ಬಿ.ಎಸ್.ಯಡಿಯೂರಪ್ಪ 24 ತಿಂಗಳು ಮುಖ್ಯಮಂತ್ರಿ ಪದವಿಯಲ್ಲಿದ್ದರು. ಮರಾಠ ಸಮಾಜದ ಯಾವುದೇ ಒಂದು ಬೇಡಿಕೆಯನ್ನೂ ಅವರು ಈಡೇರಿಸಲಿಲ್ಲ. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಡುತ್ತೇವೆಂದು ಹೇಳಿ 5 ತಿಂಗಳಾದರೂ ನಮ್ಮ ಬೇಡಿಕೆಗಳನ್ನು ಈಡೇರಿಸಲಿಲ್ಲ. ಇದರಿಂದ ಕರ್ನಾಟಕ ಮರಾಠ ಸಮಾಜ ಬಹಳ ನೊಂದಿದೆ. ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ ಎಂದರು.

ಇದನ್ನೂ ಓದಿ: 'ಹಿಜಾಬ್​ ಕಾರಣಕ್ಕಾಗಿ ಹೆಣ್ಣು ಮಕ್ಕಳಿಗೆ ಶಾಲಾ ಪ್ರವೇಶ ನೀಡದಿರುವುದು ಅತ್ಯಂತ ಭೀಕರ':ಹಿಜಾಬ್​ ವಿವಾದಕ್ಕೆ ಮಲಾಲಾ ಪ್ರತಿಕ್ರಿಯೆ

ಮರಾಠ ಸಮಾಜ ಬಿಜೆಪಿ ಪಕ್ಷದ ಕುರಿತು ಒಲವು ಹೊಂದಿದೆ. ಬೆಳಗಾವಿ ಲೋಕಸಭಾ ಉಪ ಚುನಾವಣೆ, ಹಾನಗಲ್​ ವಿಧಾನಸಭಾ ಉಪ ಚುನಾವಣೆ ಹಾಗೂ ಬೆಳಗಾವಿ ವಿಧಾನ ಪರಿಷತ್ ಚುನಾವಣೆಯಲ್ಲಿ ಸಮುದಾಯ ಬಿಜೆಪಿಗೆ ಮತ ನೀಡಿ ಗೆಲುವಿಗೆ ಕಾರಣವಾಯ್ತು. ಮರಾಠ ಸಮುದಾಯಕ್ಕೆ ಆದ ಆನ್ಯಾಯವನ್ನು ಮುಖ್ಯಮಂತ್ರಿಗಳು ಸರಿಪಡಿಸಬೇಕು. ಬೇಡಿಕೆಗಳನ್ನು ಫೆಬ್ರವರಿ ಅಂತ್ಯದೊಳಗೆ ಈಡೇರಿಸಬೇಕು. ಶಿವಾಜಿ ಜಯಂತಿಯಂದು ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಅವರು ಹೇಳಿದರು.

ಮಾಧ್ಯಮಗೋಷ್ಟಿಯಲ್ಲಿ ಕರ್ನಾಟಕ ಕ್ಷತ್ರಿಯ ಮರಾಠ ಒಕ್ಕೂಟದ ಉಪಾಧ್ಯಕ್ಷ ಭಾಹೂಸಾಹೇಬ್, ಚಿಕ್ಕೋಡಿ ಜಿಲ್ಲಾಧ್ಯಕ್ಷ ವಿನಾಯಕ ದೇಸಾಯಿ, ಗದಗ್ ಜಿಲ್ಲಾಧ್ಯಕ್ಷ ವಿನಿತಾ ಕುಮಾರ್ ಮತ್ತು ವಿಜಯಪುರ ಜಿಲ್ಲಾಧ್ಯಕ್ಷ ರಾಹುಲ್ ಜಾಧವ್ ಪಾಲ್ಗೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.