ETV Bharat / state

ದೇಶದಲ್ಲೇ ಕರ್ನಾಟಕ ಪ್ರಗತಿಪರ ರಾಜ್ಯ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

author img

By

Published : Feb 10, 2023, 2:29 PM IST

ದೇಶದ ಮುಂಚೂಣಿ ರಾಜ್ಯಗಳಲ್ಲಿ ಕರ್ನಾಟಕ ಒಂದಾಗಿದೆ. ಇಲ್ಲಿನ ಸರ್ಕಾರ ಪ್ರಗತಿಪರ, ಪ್ರಜಾಸ್ನೇಹಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ. ಸದಸ್ಯರೆಲ್ಲರೂ ರಚನಾತ್ಮಕ ಮತ್ತು ಗುಣಾತ್ಮಕ ಚರ್ಚೆಯಲ್ಲಿ ಪಾಲ್ಗೊಂಡು ಮತ್ತಷ್ಟು ಪ್ರಗತಿಪರದತ್ತ ಸಾಗಲಿ-ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್.

Governor Thawar Chand Gehlot
ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡಿದ ರಾಜ್ಯಪಾಲರು

ಬೆಂಗಳೂರು: ದೇಶದಲ್ಲೇ ಕರ್ನಾಟಕ ಇತರ ರಾಜ್ಯಗಳಿಗಿಂತಲೂ ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿಪರ ರಾಜ್ಯವಾಗಿದ್ದು, ಅಭಿವೃದ್ಧಿ ಕಾರ್ಯಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಜನಹಿತ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ರಾಜ್ಯ ಬಿಜೆಪಿ ಸರ್ಕಾರವನ್ನು ಹೊಗಳಿದ್ದಾರೆ. ಇಂದು ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡಿದ ರಾಜ್ಯಪಾಲರು, ತಮ್ಮ 34 ಪುಟಗಳ ಭಾಷಣದಲ್ಲಿ ಸರ್ಕಾರದ ಸಾಧನೆಗಳ ಸಿಂಹಾವಲೋಕನ ಮಾಡಿದರು.

ಯಾವುದೇ ಹೊಸ ಯೋಜನೆಗಳನ್ನು ಘೋಷಣೆ ಮಾಡದ ರಾಜ್ಯಪಾಲರು, ದೇಶದ ಮುಂಚೂಣಿ ರಾಜ್ಯಗಳಲ್ಲಿ ಕರ್ನಾಟಕ ಒಂದಾಗಿದೆ. ಇಲ್ಲಿನ ಸರ್ಕಾರ ಪ್ರಗತಿಪರ, ಪ್ರಜಾಸ್ನೇಹಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ. ಸದಸ್ಯರೆಲ್ಲರೂ ರಚನಾತ್ಮಕ ಮತ್ತು ಗುಣಾತ್ಮಕ ಚರ್ಚೆಯಲ್ಲಿ ಪಾಲ್ಗೊಂಡು ಮತ್ತಷ್ಟು ಪ್ರಗತಿಪರದತ್ತ ಸಾಗಲಿ ಎಂದು ಆಶಿಸಿದರು.

Governor Thawar Chand Gehlot
ವಿಧಾನ ಮಂಡಲದ ಜಂಟಿ ಅಧಿವೇಶನ

ಪ್ರಗತಿ ಪಥ ಕ್ರಮಿಸುವ ವಿಶ್ವಾಸ: ರೈತರು, ಬಡವರು, ದುರ್ಬಲ ವರ್ಗದವರು ಮತ್ತು ಅವಕಾಶ ವಂಚಿತರ ಕಲ್ಯಾಣಕ್ಕಾಗಿ ಸರ್ಕಾರ ಬದ್ಧವಾಗಿ ಕೆಲಸ ಮಾಡುತ್ತಿದೆ. ಅಭಿವೃದ್ಧಿ ಪಥದಲ್ಲಿ ಮುಂಚೂಣಿ ರಾಜ್ಯವಾಗಿ ಹೊರ ಹೊಮ್ಮಿದೆ ಎಂದು ಅವರು ಬಣ್ಣಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ ಮುಂದಿನ 25 ವರ್ಷಗಳ ಅಮೃತ ಕಾಲದಲ್ಲಿ ಹಾಕಿಕೊಟ್ಟ ಪ್ರಗತಿ ಪಥ ಕ್ರಮಿಸುವ ವಿಶ್ವಾಸವಿದೆ ಎಂದು ಅವರು ಹೇಳಿದರು.

271 ನಮ್ಮ ಕ್ಲಿನಿಕ್​ಗಳು ಕಾರ್ಯಾರಂಭ: ನಗರ ಪ್ರದೇಶಗಳಲ್ಲಿ 438 ನಮ್ಮ ಕ್ಲಿನಿಕ್​ಗಳನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿದೆ. 271 ನಮ್ಮ ಕ್ಲಿನಿಕ್​ಗಳು ಕಾರ್ಯಾರಂಭ ಮಾಡಿವೆ. ಅನುಮೋದನೆ ಆಗಿರುವ 128 ಮಹಿಳಾ ಸ್ವಾಸ್ಥ್ಯ ಕೇಂದ್ರಗಳಲ್ಲಿ 53 ಮಹಿಳಾ ಸ್ವಾಸ್ಥ್ಯ ಕೇಂದ್ರಗಳು ಸಾರ್ವಜನಿಕ ಸೇವೆಗೆ ಶೀಘ್ರವೇ ಲೋಕಾರ್ಪಣೆಗೊಳಿವೆ.

Governor Thawar Chand Gehlot
ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡಿದ ರಾಜ್ಯಪಾಲರು

9 ಹೊಸ ರೈಲು ಮಾರ್ಗ ಯೋಜನೆ: ಕೇಂದ್ರ ರೈಲ್ವೆ ಸಚಿವಾಲಯದೊಂದಿಗೆ ಶೇ.50:50 ಪಾಲುದಾರಿಕೆಯೊಂದಿಗೆ 9 ಹೊಸ ರೈಲು ಮಾರ್ಗಗಳ ಯೋಜನೆ ಕೈಗೆತ್ತಿಕೊಳ್ಳಲಾಗುತ್ತದೆ. ಮೈಸೂರು-ಬೆಂಗಳೂರು-ಚನ್ನೈ ನಡುವೆ ಸೆಮಿ ಹೈಸ್ಪೀಡ್ ರೈಲು ಸೇವೆ ಹಾಗೂ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆ ಪ್ರಾರಂಭಿಸಲಾಗಿದೆ ಎಂದರು.

ಅನೇಕ ಯೋಜನೆ ಜಾರಿ: ರೈತರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದ್ದು, ಅನೇಕ ಯೋಜನೆ, ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೇವೆ. ಮುಖ್ಯಮಂತ್ರಿ ರೈತ ವಿದ್ಯಾನಿಧಿಯನ್ನು ನೇಕಾರರು, ಕೃಷಿ ಕಾರ್ಮಿಕರು ಮತ್ತಿತರಿಗೆ ವಿಸ್ತರಣೆ ಮಾಡಲಾಗಿದೆ. 10.79 ಲಕ್ಷ ವಿದ್ಯಾರ್ಥಿಗಳಿಗೆ 484 ಕೋಟಿ ರೂ. ವಿದ್ಯಾರ್ಥಿ ವೇತನವನ್ನು ನೇರ ನಗದು ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದರು.

160 ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ: ಕೃಷಿ ಸಂಜೀವಿನಿ ಯೋಜನೆಯಡಿ 160 ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಅಲ್ಲದೇ ಪ್ರಸಕ್ತ ವರ್ಷ ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ ಅನುಷ್ಠಾನ ಮಾಡುವುದಾಗಿ ರಾಜ್ಯಪಾಲರು ಘೋಷಿಸಿದರು.

ಪುಣ್ಯಕೋಟಿ ದತ್ತು ಯೋಜನೆ: ಅಶಕ್ತ, ಅನಾರೋಗ್ಯ ಪೀಡಿತ, ನಿರ್ಗತಿಕ ಜಾನುವಾರು ಸಂರಕ್ಷಣೆ ಮಾಡಲು ರಾಜ್ಯ ಸರ್ಕಾರದಿಂದ 100 ಹೊಸ ಸರ್ಕಾರಿ ಗೋಶಾಲೆಗಳನ್ನು ನಿರ್ಮಿಸಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಗೋಶಾಲೆಗಳಲ್ಲಿರುವ ಜಾನುವಾರು ಸಂರಕ್ಷಿಸಲು ಸಾರ್ವಜನಿಕ ಸಹಭಾಗಿತ್ವ ಪ್ರೋತ್ಸಾಹಿಸುವ 'ಪುಣ್ಯಕೋಟಿ ದತ್ತು ಯೋಜನೆ'ಯನ್ನು ಜಾರಿಗೊಳಿಸಲಾಗಿದೆ. ಜಾನುವಾರುಗಳಲ್ಲಿ ಕಾಣಿಸಿಕೊಂಡಿರುವ ಚರ್ಮಗಂಟು ರೋಗ ನಿಯಂತ್ರಣಕ್ಕಾಗಿ ಒಂದು ಕೋಟಿಗೂ ಹೆಚ್ಚು ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ಮರಣ ಹೊಂದಿದ ಕರು, ದನ, ಎತ್ತುಗಳಿಗೆ ಪರಿಹಾರ ನೀಡಲು ಸರ್ಕಾರದಿಂದ 37 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.

50 ಲಕ್ಷ ಜನರಿಗೆ ಉದ್ಯೋಗ: ಕೇಂದ್ರ ಪುರಷ್ಕೃತ ಯೋಜನೆಗಳಡಿ ಮುಂದಿನ 3 ವರ್ಷಗಳಲ್ಲಿ ರಾಜ್ಯದ 640 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಪ್ರತಿ ಸಂಘಕ್ಕೆ 3.99 ಲಕ್ಷ ರೂ.ಗಳಂತೆ ಒಟ್ಟು 193 ಕೋಟಿ ರೂ. ವೆಚ್ಚದಲ್ಲಿ ಗಣಕೀಕರಣ ಮಾಡಲಾಗಿದೆ. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ 638.98 ಕೋಟಿ ರೂ.ಗಳ ವೆಚ್ಚದಲ್ಲಿ 27.85 ಲಕ್ಷ ಕುಟುಂಬಗಳ 50 ಲಕ್ಷ ಜನರಿಗೆ ಉದ್ಯೋಗ ನೀಡಲಾಗಿದೆ. ಜಲಜೀವನ್ ಮಿಷನ್ ಅಡಿಯಲ್ಲಿ 37.54 ಲಕ್ಷ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಭೂಕಬಳಿಕೆ ಕಾಯ್ದೆ ಅನುಷ್ಠಾನ: 2011 ಕರ್ನಾಟಕ ಭೂ ಕಬಳಿಕೆ ಅಧಿನಿಯಮಕ್ಕೆ ತಿದ್ದುಪಡಿ ತಂದು ಬಿಬಿಎಂಪಿ ವ್ಯಾಪ್ತಿಯ 18 ಕಿ.ಮೀ., ಮಹಾನಗರ ಪಾಲಿಕೆ 10 ಕಿ.ಮೀ., ನಗರಪಾಲಿಕೆ ವ್ಯಾಪ್ತಿಯ 5 ಕಿ.ಮೀ, ಪುರಸಭೆ ವ್ಯಾಪ್ತಿಯ 3 ಕಿ.ಮೀ.ಗೆ ಸೀಮಿತಗೊಳಿಸಿ ಭೂಕಬಳಿಕೆ ಕಾಯ್ದೆ ಅನುಷ್ಠಾನ ಮಾಡಿದೆ. ಎತ್ತಿನ ಹೊಳೆ ಸಮಗ್ರ ಕುಡಿಯು ನೀರಿನ ಯೋಜನೆಯಡಿ, ಹಾಸನ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ 527 ಕೆರೆಗಳಿಗೆ ನೀರು ತುಂಬಿಸಲಾಗುವುದು. ಕಳಸಾ-ಬಂಡೂರ ನಾಲಾ ತಿರುವ ಯೋಜನೆಯ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ ಸಮ್ಮತಿಸಿದೆ ಎಂದು ರಾಜ್ಯಪಾಲರು ವಿವರಿಸಿದರು.

ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ: ಸರ್ಕಾರವು ಉನ್ನತ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದರನ್ವಯ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿಗೆ ತಂದಿದೆ. ಬೀದರ್, ಹಾವೇರಿ, ಚಾಮರಾಜನಗರ, ಬಾಗಲಕೋಟೆ, ಕೊಡಗು, ಕೊಪ್ಪಳ ಮತ್ತು ಹಾಸನದಲ್ಲಿ 7 ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದ್ದು, 7 ಇಂಜಿನಿಯರಿಂಗ್ ರ್ಕಾಲೇಜುಗಳನ್ನು ಐ.ಐ.ಟಿ. ಮಾದರಿಯಲ್ಲಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಗುಣಮಟ್ಟ ಮತ್ತು ಪಾರದರ್ಶಕತೆ ತರಲು ನನ್ನ ಸರ್ಕಾರವು ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ಅನುಷ್ಠಾನಗೊಳಿಸಿದೆ.

ಸಮಾಜದಲ್ಲಿ ಅನ್ಯಾಯಕ್ಕೆ ಒಳಗಾಗಿರುವ ಸಮುದಾಯವನ್ನು ಮೇಲೆತ್ತಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರನ್ವಯ, ಶಿಕ್ಷಣ ಮತ್ತು ನೇಮಕಾತಿಯಲ್ಲಿ ಪರಿಶಿಷ್ಟ ಜಾತಿಯವರಿಗೆ ಶೇ.15 ರಿಂದ 17ಕ್ಕೆ ಪರಿಶಿಷ್ಟ ಪಂಗಡದವರಿಗೆ ಶೇ.3 ರಿಂದ 7ಕ್ಕೆ ಮೀಸಲಾತಿಯನ್ನು ಹೆಚ್ಚಳ ಮಾಡಿ ಐತಿಹಾಸಿಕ ಕ್ರಮ ಕೈಗೊಳ್ಳಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರ ಅಭಿವೃದ್ಧಿಗಾಗಿ ಪುಸಕ್ತ ಸಾಲಿನಲ್ಲಿ ಎಸ್.ಸಿ.ಪಿ. ಟಿ.ಎಸ್.ಪಿ ಅಡಿ 29 ಸಾವಿರ ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

ಉಚಿತ ವಿದ್ಯುತ್: ಅಮೃತ ಜ್ಯೋತಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಬಿಪಿಎಲ್ ಕುಟುಂಬಗಳಿಗೆ ಮಾಸಿಕ 75 ಯೂನಿಟ್ ಗಳಷ್ಟು ಉಚಿತ ವಿದ್ಯುತ್ ನೀಡಲಾಗುತ್ತಿದೆ. ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೀಡಲಾಗುವ ಸಹಾಯಧನವನ್ನು 1.75 ಲಕ್ಷ ರೂಗಳಿಂದ 2 ಲಕ್ಷ ರೂಗಳಿಗೆ ಹೆಚ್ಚಿಸಲಾಗಿದೆ. 100 ಅಂಬೇಡ್ಕರ್ ಹಾಸ್ಟೆಲ್‌ಗಳ ನಿರ್ಮಾಣವನ್ನೂ ಕೈಗೆತ್ತಿಕೊಳ್ಳಲಾಗಿದೆ. ಪುಬುದ್ಧ ಯೋಜನೆಯಡಿ ಪರಿಶಿಷ್ಟಜಾತಿ ಮತ್ತು ಪಂಗಡದ 133 ವಿದ್ಯಾರ್ಥಿಗಳನ್ನು ವಿಶ್ವವಿದ್ಯಾಲಯಗಳಲ್ಲಿ ಉನ್ನತ ಪ್ರಾಯೋಜಿಸಲಾಗಿದೆ. ವಿವಿಧ ಇಲಾಖೆಗಳ ಅಭಿವೃದ್ಧಿ ನಿಗಮಗಳ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪರಿಶಿಷ್ಟಜಾತಿ / ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಶೇ. 25 ರಷ್ಟು ಪಾಲನ್ನು ಮೀಸಲಿರಿಸಲಾಗಿದೆ.

ಓಬವ್ವ ಆತ್ಮ ರಕ್ಷಣಾ ಕಲೆ: ಭೂ ಒಡೆತನ ಯೋಜನೆಯಡಿ ಘಟಕ ವೆಚ್ಚ 15 ಲಕ್ಷ ಮತ್ತು 20 ಲಕ್ಷ ರೂಪಾಯಿಗಳಿದ್ದು, ಅದನ್ನು 20 ಲಕ್ಷ ರೂಪಾಯಿ ಹಾಗೂ 25 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಪರಿಶಿಷ್ಟಜಾತಿ ಮತ್ತು ಪಂಗಡದ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಮತ್ತು ವಸತಿ ಶಾಲೆಗಳ ವಿದ್ಯಾರ್ಥಿನಿಯರಿಗೆ ಆತ್ಮಸೈರ್ಯ ಹೆಚ್ಚಿಸಲು 'ಓಬವ್ವ ಆತ್ಮ ರಕ್ಷಣಾ ಕಲೆ' ತರಬೇತಿಯನ್ನು ಪ್ರಾರಂಭಿಸಲಾಗಿದೆ. ಮೆಟ್ರಿಕ್-ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಹೆಚ್ಚಿನ ಬೇಡಿಕೆ ಇದ್ದುದರಿಂದ, 2022-23ನೇ ಸಾಲಿನಲ್ಲಿ ಶೇ. 25 ರಂತೆ ಸಂಖ್ಯಾಬಲವನ್ನು ಹೆಚ್ಚಳ ಮಾಡಿ, ಹಾಲಿ ಮಂಜೂರಾತಿ ಸಂಖ್ಯೆಗೆ ಹೆಚ್ಚುವರಿಯಾಗಿ 30000 ವಿದ್ಯಾರ್ಥಿಗಳಿಗೆ ಪುವೇಶಾತಿ ಸೌಲಭ್ಯವನ್ನು ಕಲ್ಪಿಸಲಾಗಿರುತ್ತದೆ.

150 ಕೋಟಿ ರೂ.ಗಳ ಅನುದಾನ: ಇಲಾಖಾ ವಿದ್ಯಾರ್ಥಿ ನಿಲಯಗಳ ಸ್ವಂತ ಕಟ್ಟಡ ನಿರ್ಮಾಣಕ್ಕೆ 150 ಕೋಟಿ ರೂ.ಗಳ ಅನುದಾನ ಒದಗಿಸಿದ್ದು, ಈ ಪೈಕಿ ಡಿಸೆಂಬರ್ ಅಂತ್ಯಕ್ಕೆ ಬಿಡುಗಡೆಯಾದ 129.00 ಕೋಟಿ ರೂ.ಗಳ ಅನುದಾನದಲ್ಲಿ 101.68 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದ್ದು, 50 ವಿದ್ಯಾರ್ಥಿ ನಿಲಯಗಳ ಸ್ವಂತ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡಿರುತ್ತದೆ. 2022-233 ಸಾಲಿನಲ್ಲಿ 250 ಕೋಟಿ ರೂ.ಗಳ ವೆಚ್ಚದಲ್ಲಿ 100 ಸಂಖ್ಯಾಬಲದ 50 ಕನಕದಾಸ ಮೆಟ್ರಿಕ್ ನಂತರ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಇತರೆ ವರ್ಗದ ಮಕ್ಕಳಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸಲು "ದೀನ ದಯಾಳ್ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿ ನಿಲಯ" ಎಂಬ ಹೊಸ ಯೋಜನೆಯಡಿ ಶೈಕ್ಷಣಿಕ ಕೇಂದ್ರಗಳಾದ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮಂಗಳೂರು ಮತ್ತು ಮೈಸೂರಿನಲ್ಲಿ ತಲಾ 1000 ಸಾಮರ್ಥ್ಯದ ಬಹುಮಹಡಿಯ ವಿದ್ಯಾರ್ಥಿ ನಿಲಯ ಸಮುಚ್ಚಯಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಕೇಂದ್ರ ರಕ್ಷಣಾ ಸಚಿವಾಲಯದ ಸಹಯೋಗದೊಂದಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯನ್ನು ಸ್ಥಾಪಿಸಲಾಗಿದೆ ಎಂದು ರಾಜ್ಯಪಾಲರು ತಿಳಿಸಿದರು.

ಇದನ್ನೂ ಓದಿ: ಪ್ರಜಾಧ್ವನಿ ಯಾತ್ರೆಯಲ್ಲಿ ಸಿದ್ದರಾಮಯ್ಯ; ಮೊದಲ ದಿನವೇ ಕಲಾಪಕ್ಕೆ ಗೈರಾದ ಪ್ರತಿಪಕ್ಷ ನಾಯಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.