ETV Bharat / state

ಸಿರಿಧಾನ್ಯಗಳ ಉತ್ಪಾದನೆ ಮತ್ತು ಸೇವನೆಯಲ್ಲಿ ಕರ್ನಾಟಕವೇ ಮುಂಚೂಣಿಯಲ್ಲಿ

author img

By

Published : Jan 11, 2023, 8:49 PM IST

Updated : Jan 11, 2023, 9:22 PM IST

ಸಿರಿಧಾನ್ಯಗಳ ಉತ್ಪಾದನೆ ಮತ್ತು ಸೇವನೆಯಲ್ಲಿ ಕರ್ನಾಟಕ ಮುಂಚೂಣಿ - 26 ನೇ ರಾಷ್ಟ್ರೀಯ ಯುವ ಜನೋತ್ಸವದಲ್ಲಿ ಸಿರಿ ಧಾನ್ಯಕ್ಕೆ ಹೆಚ್ಚಿನ ಮಹತ್ವ - ವಿವಿಧ ರಾಜ್ಯಗಳಿಂದ ಆಗಮಿಸುವ ಪ್ರತಿನಿಧಿಗಳು ಮತ್ತು ಗಣ್ಯರಿಗೆ ಸಿರಿಧಾನ್ಯಗಳ ವಿಶೇಷತೆಗಳನ್ನು ಪರಿಚಯ ಮಾಡಿಲಾಗುತ್ತದೆ.

Production and consumption of cereals
ಸಿರಿಧಾನ್ಯಗಳ ಉತ್ಪಾದನೆ ಮತ್ತು ಸೇವನೆಯಲ್ಲಿ ಕರ್ನಾಟಕ ಮುಂಚೂಣಿ!

ಬೆಂಗಳೂರು: ಕರ್ನಾಟಕ ಸಿರಿಧಾನ್ಯಗಳನ್ನು ಬೆಳೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಸಿರಿ ಧಾನ್ಯ ವಲಯದಲ್ಲಿ ನವೋದ್ಯಮಗಳಿಗೂ ಸಹ ಹೆಚ್ಚಿನ ಅವಕಾಶಗಳಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಲು ಸರ್ಕಾರ ವ್ಯಾಪಕ ಕ್ರಮಗಳನ್ನು ಕೈಗೊಂಡಿದೆ. ಸಿರಿ ಧಾನ್ಯಗಳ ಉತ್ಪಾದನೆ ಮತ್ತು ಸೇವನೆಯಲ್ಲಿ ಕರ್ನಾಟಕ ಮಂಚೂಣಿಯಲ್ಲಿದೆ. ರಾಜ್ಯದ ಒಟ್ಟಾರೆ 16.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಿರಿ ಧಾನ್ಯ ಬೆಳೆಯಲಾಗುತ್ತಿದೆ.

ಇದರಲ್ಲಿ 8.46 ಲಕ್ಷ ಹೆಕ್ಟೇರ್ ನಲ್ಲಿ ರಾಗಿ, 6.16 ಲಕ್ಷ ಹೆಕ್ಟೇರ್ ನಲ್ಲಿ ಜೋಳ, 1.48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಜ್ಜೆ, 0.29 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಕಿರು ಧಾನ್ಯ, ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದು, ಒಟ್ಟಾರೆ 20.55 ಲಕ್ಷ ಟನ್ ಸಿರಿ ಧಾನ್ಯ ಉತ್ಪಾದನೆಯಾಗುತ್ತಿದೆ. ಈ ವರ್ಷವನ್ನು ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಘೋಷಿಸಿದ್ದು, ಇದರಿಂದ ರೈತರ ಆದಾಯ ಹೆಚ್ಚುವುದಲ್ಲದೇ ಕೃಷಿ ಸಮುದಾಯಕ್ಕೂ ಅನುಕೂಲವಾಗಲಿದ್ದು, ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಇದೇ ಆಶಯದಿಂದ ಅವಳಿ ನಗರದಲ್ಲಿ ಸಿರಿಧಾನ್ಯ ಉತ್ಸವ ಏರ್ಪಡಿಸಲಾಗಿದೆ.

ರಾಜ್ಯದ ಹಲವೆಡೆ ಬೆಳೆಯುತ್ತಿರುವ ಹಾರಕ. ಸಾಮೆ, ಊದಲು, ಕೊರಲು, ಬರಗು, ನವಣೆಯಂತಹ ವೈವಿಧ್ಯಮಯ ಸಿರಿಧಾನ್ಯಗಳ ಮಾರಾಟ ಮತ್ತು ಖಾದ್ಯಗಳ ಮಳಿಗೆಗಳನ್ನು ಆಕರ್ಷಣೀಯವಾಗಿ ರೂಪಿಸಲಾಗುತ್ತಿದೆ. ಸಿರಿ ಧಾನ್ಯಗಳ ಸಂಸ್ಕರಣೆ, ಮಾರುಕಟ್ಟೆಗೆ ಸಂಬಂಧಿಸಿದಂತೆ ಸರ್ಕಾರ ವಿವಿಧ ಕಾರ್ಯಚಟುವಟಿಕೆಗಳನ್ನು ಕೈಗೊಂಡಿದ್ದು, 9 ಪ್ರಾಂತೀಯ ಒಕ್ಕೂಟಗಳ ಮೂಲಕ ಈ ಪ್ರಕ್ರಿಯೆ ನಡೆಯುತ್ತಿದೆ. ರೈತ ಸಿರಿ ಯೋಜನೆ ಮೂಲಕ ಸಿರಿ ಧಾನ್ಯಗಳನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡುತ್ತಿದ್ದು, ಇದರಿಂದ ಬೇಡಿಕೆ ಹೆಚ್ಚಾಗಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರಿಗೆ ಹೆಚ್ಚಿನ ಬೆಲೆ ದೊರಕಿಸಿಕೊಡಲು ಸಿರಿಧಾನ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.

ಆರೋಗ್ಯ ವರ್ಧಕ ಉತ್ಪನ್ನಗಳಿಗೆ ವಿಶೇಷ ಮನ್ನಣೆ: ಸಿರಿಧಾನ್ಯ ಮೌಲ್ಯವರ್ಧಿತ ಉತ್ಪನ್ನಗಳಾದ ಮಿಲೆಟ್ ಮಿಕ್ಸ್, ಇಡ್ಲಿ ದೋಸಾ ಮಿಕ್ಸ್, ಡಯಾಬಿಟಿಕ್ ಮಿಕ್ಸ್ ಸೇರಿ ಸವಿಯಲು ಸಿದ್ಧವಾದ ಉತ್ಪನ್ನಗಳು, ಬೇಕರಿ ಉತ್ಪನ್ನಗಳಾದ ಬಿಸ್ಕತ್ತು, ರಸ್ಕು ಸಿರಿಧಾನ್ಯ ಮೇಳದ ವೈಶಿಷ್ಟ್ಯ ಆರೋಗ್ಯ‌ ವರ್ಧನೆಗಾಗಿ ಡಯಾಬಿಟಿಕ್ ಹಾಗೂ ಪಿಸಿಒಡಿ ಕಿಟ್ ಕೂಡ ಒಂದು ವಿಶೇಷ ಆಕರ್ಷಣೆಯಾಗಿದೆ.

ಸಿರಿಧಾನ್ಯಗಳ ಹಲವಾರು ಉತ್ಪನ್ನಗಳು ಈ ಕಿಟ್ ನಲ್ಲಿದ್ದು, ಇವು ಡಯಾಬಿಟಿಕ್ ಹಾಗೂ ಪಿಸಿಒಡಿ ನಿಯಂತ್ರಿಸಲು ಸಹಾಯಮಾಡುತ್ತವೆ. ನಾರಿನಾಂಶ ಹೆಚ್ಚಿರುವ ಕಾರಣ ಇದು ಹೃದಯ ಸಂಬಂಧಿ ಸಮಸ್ಯೆ ನಿವಾರಣೆ ಮತ್ತು ಮಧುಮೇಹದಿಂದಲೂ ರಕ್ಷಣೆ ನೀಡುತ್ತದೆ. ಸಿರಿಧಾನ್ಯಗಳಲ್ಲಿ ಖನಿಜ, ಲವಣಾಂಶ ಹೆಚ್ಚಿರುವುದರಿಂದ ಮಾನವನ ಆರೋಗ್ಯಕ್ಕೆ ಇದು ಪೂರಕವಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ರಾಷ್ಟ್ರೀಯ ಯುವ ಜನೋತ್ಸವದಲ್ಲಿ ಸಿರಿಧಾನ್ಯ ವೈಭವ: ಜ.12 ನಾಳೆಯಿಂದ ಜ.16 ರವರೆಗೆ ಹುಬ್ಬಳ್ಳಿ - ಧಾರವಾಡದಲ್ಲಿ ನಡೆಯಲಿರುವ 26 ನೇ ರಾಷ್ಟ್ರೀಯ ಯುವ ಜನೋತ್ಸವದಲ್ಲಿ ಸಿರಿ ಧಾನ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಸದೃಢ ದೇಹವಿದ್ದರೆ ಸದೃಢ ಮನಸ್ಸಿರುತ್ತದೆ, ದೃಢ ಮನಸ್ಸಿನಿಂದ ಅಸಾಧಾರಣ ಸಾಧನೆ ಸಾಧ್ಯ ಎಂಬ ನಾಣ್ಣುಡಿಯಂತೆ ಯುವ ಜನಾಂಗದ ಆರೋಗ್ಯ ರಕ್ಷಣೆಗೆ ಸಿರಿ ಧಾನ್ಯಗಳ ಮಹತ್ವ ಕುರಿತು ಮೇಳದಲ್ಲಿ ವಿಶೇಷ ಬೆಳಕು ಚೆಲ್ಲಲಾಗುತ್ತಿದೆ. ಸಿರಿಧಾನ್ಯಗಳ ತವರೂರಾದ ಕರ್ನಾಟಕದ ವೈಶಿಷ್ಟ್ಯಗಳನ್ನು ಇಲ್ಲಿ ಅನಾವರಣಗೊಳಿಸಲಾಗುತ್ತಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಲಿರುವ ಯುವ ಜನೋತ್ಸವ: ನಾಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿರುವ ಯುವ ಜನೋತ್ಸವದಲ್ಲಿ ಸಿರಿ ಧಾನ್ಯಕ್ಕೆ ವಿಶೇಷ ಒತ್ತು ನೀಡಿದ್ದು, ವಿವಿಧ ರಾಜ್ಯಗಳಿಂದ ಆಗಮಿಸುವ ಪ್ರತಿನಿಧಿಗಳು ಮತ್ತು ಗಣ್ಯರಿಗೆ ಸಿರಿ ಧಾನ್ಯಗಳ ವಿಶೇಷತೆಗಳನ್ನು ಪರಿಚಯಿಸುಲಾಗುತ್ತಿದೆ. ಕರ್ನಾಟಕ ಸಿರಿ ಧಾನ್ಯಗಳ ಕಣಜವಾಗಿದ್ದು, ಇಲ್ಲಿನ ಉತ್ಪನ್ನಗಳ ಮಾರಾಟಕ್ಕೆ 20 ಕ್ಕೂ ಹೆಚ್ಚು ವಿಶೇಷ ಮಳಿಗೆಗಳನ್ನು ಸಜ್ಜುಗೊಳಿಸಲಾಗಿದೆ. ಪ್ರತಿನಿಧಿಗಳು ಮತ್ತು ಗಣ್ಯರಿಗೆ ಪೌಷ್ಟಿಕ ಆಹಾರದ ಪರಿಚಯ ಮಾಡಲಾಗುತ್ತಿದೆ. ತುಮಕೂರು, ಉತ್ತರ ಕನ್ನಡ, ವಿಜಯಪುರ, ರಾಯ್ಪುರದ ಸಿರಿಧಾನ್ಯಗಳ ವಿಶೇಷ ಸಹ ಉತ್ಪನ್ನಗಳ ಉತ್ಪಾದಕರು ತಮ್ಮ ವಿಶೇಷತೆಗಳೊಂದಿಗೆ ಈಗಾಗಲೇ ಆಗಮಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿರಿಧಾನ್ಯಗಳನ್ನು ಭವಿಷ್ಯದ ಆಹಾರವನ್ನಾಗಿಸಲು ವ್ಯಾಪಕ ಕಾರ್ಯಕ್ರಮ:ವಿವಿಧ ಕಾರ್ಯಕ್ರಮಗಳ ಮೂಲಕ ಸಿರಿಧಾನ್ಯಗಳನ್ನು ಭವಿಷ್ಯದ ಆಹಾರವನ್ನಾಗಿಸಲು ವ್ಯಾಪಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿಶೇಷವಾಗಿ ಇದನ್ನು ಸ್ಮಾರ್ಟ್ ಆಹಾರವಾಗಿ ಪ್ರಚಾರ ಮಾಡುತ್ತಿದ್ದು, ರಾಷ್ಟ್ರೀಯ ಯುವ ಜನೋತ್ಸವದಲ್ಲಿ ರಾಜ್ಯದ ಸಿರಿ ಧಾನ್ಯದ ಸಿರಿಯನ್ನು ವೈಭದಿಂದ ಪ್ರದರ್ಶಿಸಲಾಗುತ್ತಿದೆ. ಸಿರಿ ಧಾನ್ಯಗಳು ಪೌಷ್ಠಿಕ ಆಹಾರವಾಗಿದ್ದು, ಅಪೌಷ್ಟಿಕತೆಯಂತಹ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿವಾರಿಸಲಿದೆ. ಹೀಗಾಗಿ ಇವು ಗ್ರಾಹಕರಿಗೆ ಉತ್ತಮವಾಗಿವೆ, ಪರಿಸರಕ್ಕೆ ಒಳ್ಳೆಯದು, ರೈತರ ಆದಾಯ ಹೆಚ್ಚಳಕ್ಕೆ ಪೂರಕವಾಗಿದೆ.

ಬೆಂಗಳೂರಿನಲ್ಲೂ ಸಿರಿಧಾನ್ಯ ಮೇಳ: ಜನವರಿ 20 ರಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸಿರಿ ಧಾನ್ಯ ಮೇಳ ಆಯೋಜಿಸುತ್ತಿದ್ದು, ಬರುವ ತಿಂಗಳು ಬೆಂಗಳೂರಿನಲ್ಲಿ ಭಾರತ ಅಧ್ಯಕ್ಷತೆ ವಹಿಸಿರುವ ಜಿ.20 ಶೃಂಗ ಸಭೆಯ ಕೇಂದ್ರೀಯ ಬ್ಯಾಂಕ್ ಗಳ ಗವರ್ನರ್ ಗಳ ಸಭೆಯ ನಿಮಿತ್ತ ಸಿರಿಧಾನ್ಯ ನವೋದ್ಯಮಗಳಿಗೆ ಪ್ರೋತ್ಸಾಹ ನೀಡಲು ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕೂ ಮುನ್ನ ಹುಬ್ಬಳ್ಳಿ – ಧಾರವಾಡದ ಯುವಜನೋತ್ಸವದಲ್ಲಿ ಸಿರಿ ಧಾನ್ಯ ಉತ್ಸವ ಆಚರಿಸುತ್ತಿರುವುದು ವಿಶೇಷವಾಗಿದೆ.

20ಕ್ಕೂ ಹೆಚ್ಚು ಮಳಿಗೆಗಳು ಸಜ್ಜು: ಆರ್.ಎನ್.ಶೆಟ್ಟಿ ಕಾಲೇಜು ಮೈದಾನದಲ್ಲಿ ಸಿರಿಧಾನ್ಯ ಮೇಳಕ್ಕಾಗಿ ವಿಶೇಷ ವ್ಯವಸ್ಥೆ ಮಾಡಿದ್ದು, 20 ಕ್ಕೂ ಹೆಚ್ಚು ಮಳಿಗೆಗಳನ್ನು ಸಜ್ಜುಗೊಳಿಸಲಾಗಿದೆ. ಧಾರವಾಡ ಕೃಷಿ ವಿವಿ, ಹಾವೇರಿ ಕೃಷಿ ವಿಜ್ಞಾನ ಕೇಂದ್ರ ಸೇರಿ ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಮೇಳ ಆಯೋಜಿಸಲಾಗಿದೆ. ಧಾರವಾಡದ ಕೃಷಿ ವಿವಿ ನೆರವಿನಿಂದ ಸಿರಿಧಾನ್ಯ ಕೈಗಾರಿಕೆ ನಡೆಸುತ್ತಿರುವ 2 ನವೋದ್ಯಮಗಳಿಗೆ ಸಿರಿಧಾನ್ಯ ಮತ್ತು ಸಿರಿಧಾನ್ಯ ಉಪ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಾಡಲು ವೇದಿಕೆ ಕಲ್ಪಿಸಲಾಗಿದೆ. ರಾಜ್ಯದ ಪ್ರಮುಖ ತೃಣಧಾನ್ಯ ಉತ್ಪನ್ನಗಳ ಮಾರಾಟ ಮತ್ತದರ ವಿಶೇಷತೆಗಳ ಕುರಿತು ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ:ಇಂದಿನ ಮಾರುಕಟ್ಟೆ ಮಾಹಿತಿ: ತರಕಾರಿ ದರ ಹೀಗಿದೆ

Last Updated :Jan 11, 2023, 9:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.