ETV Bharat / state

ಆಂತರಿಕ ಭದ್ರತಾ ವಿಭಾಗದ ಡಿಜಿಪಿಯಾಗಿ ಪ್ರತಾಪ್​ ರೆಡ್ಡಿ, ಬೆಂಗಳೂರು ಪೊಲೀಸ್ ಆಯುಕ್ತರಾಗಿ ದಯಾನಂದ್ ನೇಮಕ

author img

By

Published : May 30, 2023, 12:51 PM IST

Updated : May 30, 2023, 1:42 PM IST

ಕಾಂಗ್ರೆಸ್‌ ಸರ್ಕಾರ ಆಡಳಿತಕ್ಕೆ ಮೇಜರ್‌ ಸರ್ಜರಿ ಮಾಡಿದೆ.

Karnataka IPS Officers transfers
ಪಿಎಸ್​ಐ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ರಾಜ್ಯ ಸರ್ಕಾರ ಆಡಳಿತಕ್ಕೆ ಚುರುಕು ಮುಟ್ಟಿಸಲು ಮುಂದಾಗಿದೆ. ಪೊಲೀಸ್‌ ಇಲಾಖೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿ ಇಂದು ಆದೇಶಿಸಿದೆ. ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಆಗಿ ಸಿ. ಹೆಚ್. ಪ್ರತಾಪ್​ ರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ. ಎಂ.ಎ.ಸಲೀಂ ಅವರನ್ನು ಸಿಐಡಿ ಡಿಜಿಪಿ ಆಗಿ ವರ್ಗಾವಣೆ ಮಾಡಲಾಗಿದೆ. ಬಿ.ದಯಾನಂದ್ ಅವರನ್ನು ಬೆಂಗಳೂರು ಪೊಲೀಸ್​ ಆಯುಕ್ತರನ್ನಾಗಿ ಸರ್ಕಾರ ನೇಮಿಸಿದೆ. ಕೆ.ವಿ.ಶರತ್​ ಚಂದ್ರ ಅವರನ್ನು ಗುಪ್ತಚರ ಎಡಿಜಿಪಿ ಆಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಇದಕ್ಕೂ ಮುನ್ನ ಸಿ.ಹೆಚ್. ಪ್ರತಾಪ್​ ರೆಡ್ಡಿ ಅವರು ಬೆಂಗಳೂರು ಪೊಲೀಸ್​ ಆಯುಕ್ತರಾಗಿಯೂ, ಎಂ.ಎ.ಸಲೀಂ ಬೆಂಗಳೂರು ಸಂಚಾರ ವಿಭಾಗದ ವಿಶೇಷ ಆಯುಕ್ತರಾಗಿಯೂ, ಬಿ.ದಯಾನಂದ್‌ ಅವರು ಗುಪ್ತಚರ ವಿಭಾಗದ ಎಡಿಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅದೇ ರೀತಿ, ಕೆ.ವಿ.ಶರತ್‌ಚಂದ್ರ ಸಿಐಡಿ ಎಡಿಜಿಪಿಯಾಗಿದ್ದರು. ಭದ್ರತಾ ವಿಭಾಗದ ಡಿಜಿಪಿ ಹುದ್ದೆಗೆ ಸಿಐಡಿ ಡಿಜಿಪಿ ಕೇಡರ್​ ಹುದ್ದೆಯ ಸ್ಥಾನಮಾನ ಮತ್ತು ಜವಾಬ್ದಾರಿಯನ್ನು ವಹಿಸಲಾಗಿದೆ. ಎಡಿಜಿಪಿ ಆಗಿದ್ದ ಸಲೀಂ ಅವರಿಗೆ ಡಿಜಿಪಿ ಹುದ್ದೆಗೆ ಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದೆ.

ದಯಾನಂದ್ ಹಿನ್ನೆಲೆ: ಬೆಂಗಳೂರು ನಗರದ ನೂತನ ಪೊಲೀಸ್ ಆಯುಕ್ತರಾಗಿ ನೇಮಕವಾದ ಬಿ.ದಯಾನಂದ್ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಮೂಲದವರು. 1994ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾದ ಇವರು ಈ ಹಿಂದೆ ಮೈಸೂರು ನಗರ ಪೊಲೀಸ್ ಆಯುಕ್ತರಾಗಿ, ಬೆಂಗಳೂರಿನಲ್ಲಿ ಅಪರಾಧ ವಿಭಾಗದ ಜಂಟಿ ಆಯುಕ್ತರಾಗಿ, ಸಂಚಾರ ವಿಭಾಗದ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ರಾಜ್ಯ ಗುಪ್ತಚರ ಇಲಾಖೆಯ ಎಡಿಜಿಪಿಯಾಗಿದ್ದರು.

ಪೊಲೀಸ್ ಇಲಾಖೆ ಗೃಹ ಇಲಾಖೆಯ ಅಧೀನದಲ್ಲಿದ್ದರೂ ಸಹ ಗುಪ್ತಚರ ಇಲಾಖೆಯನ್ನು ಸಾಮಾನ್ಯವಾಗಿ ಮುಖ್ಯಮಂತ್ರಿಗಳು ತಮ್ಮ ಅಧೀನದಲ್ಲಿರಿಸಿಕೊಂಡಿರುತ್ತಾರೆ. ತಮಗೆ ಅತ್ಯಂತ ನಂಬಿಕರ್ಹ ಅಧಿಕಾರಿಯನ್ನ ನೇಮಿಸಿಕೊಳ್ಳುತ್ತಾರೆ. ಈ ಹಿಂದೆ ಸಿದ್ಧರಾಮಯ್ಯ, ಕುಮಾರಸ್ವಾಮಿ ಹಾಗೂ ಯಡಿಯೂರಪ್ಪನವರ ಅಧಿಕಾರವಧಿಯಲ್ಲಿ ರಾಜ್ಯ ಗುಪ್ತಚರ ಇಲಾಖೆಯ ಉಸ್ತುವಾರಿಯನ್ನು ದಯಾನಂದ ವಹಿಸಿದ್ದರು. ಹೀಗಾಗಿ ಮೂವರಿಗೂ ಇವರು ನಂಬಿಕಸ್ಥರೆನಿಸಿದ್ದರು.

ಇದನ್ನೂ ಓದಿ: ನೂತನ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಡಾ.ಅಲೋಕ್ ಮೋಹನ್ ನೇಮಕ

ಇತ್ತೀಚೆಗೆ ಡಿಜಿ ಮತ್ತು ಐಜಿಪಿ ನೇಮಕ: ಇದೇ 21ರಂದು ಹಿರಿಯ ಐಪಿಎಸ್ ಅಧಿಕಾರಿ ಡಾ.ಅಲೋಕ್ ಮೋಹನ್ ಅವರಿಗೆ ಹೆಚ್ಚುವರಿ ಹೊಣೆಯಾಗಿ ರಾಜ್ಯ ಪೊಲೀಸ್ ಮುಖ್ಯಸ್ಥರಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿದ್ದ​ ಪ್ರವೀಣ್ ಸೂದ್ ಅವರು ಕೇಂದ್ರೀಯ ತನಿಖಾ ದಳ (ಸಿಬಿಐ) ನಿರ್ದೇಶಕರಾಗಿ ನೇಮಕಗೊಂಡ ಕಾರಣ ಅಲೋಕ್ ಮೋಹನ್ ಅವರಿಗೆ ಹೆಚ್ಚುವರಿ ಹೊಣೆ ವಹಿಸಲಾಗಿದೆ.

1987ನೇ ಬ್ಯಾಚ್‌ನ ಅಧಿಕಾರಿ ಹಾಗೂ ಪ್ರಸ್ತುತ ರಾಜ್ಯ ಅಗ್ನಿಶಾಮಕ ದಳ ಮತ್ತು ಗೃಹ ರಕ್ಷಕದಳದ ಮುಖ್ಯಸ್ಥರಾಗಿ ಅಲೋಕ್ ಮೋಹನ್ ಸೇವೆ ಸಲ್ಲಿಸಿದ್ದು, ಸೇವಾ ಹಿರಿತನದ ಆಧಾರದ ಮೇಲೆ ಡಿಜಿ ಮತ್ತು ಐಜಿಪಿಯಾಗಿ ಆಯ್ಕೆ ಮಾಡಲಾಗಿದೆ. ಬಿಹಾರ ರಾಜ್ಯದ ಪಾಟ್ನಾ ಮೂಲದವರಾದ ಅಲೋಕ್ ಮೋಹನ್ ಉತ್ತರಾಖಂಡದ ಐಐಟಿಯಲ್ಲಿ ಎಂಎಸ್‌ಸಿ, ಭಾರತೀಯ ಆಂತರಿಕಾ ಭದ್ರತೆ ಬಗ್ಗೆೆ ಪಿಎಚ್‌ಡಿ ಪಡೆದುಕೊಂಡಿದ್ದಾರೆ. ವಿವಿಧ ಜಿಲ್ಲೆಗಳ ಎಸ್​ಪಿ ಹಾಗೂ ಸಿಐಡಿ ಡಿಜಿಪಿ, ಬೆಂಗಳೂರು ಸಿಸಿಬಿಯ ಜಂಟಿ ಪೊಲೀಸ್ ಆಯುಕ್ತರಾಗಿ ಮಂಗಳೂರು ಪಶ್ಚಿಮ ವಲಯ ಐಜಿಪಿಯಾಗಿ ಕಾರ್ಯ ನಿರ್ವಹಿಸಿದ್ದರು. ಎಡಿಜಿಪಿ ಆಡಳಿತ ಹಾಗೂ ಕಾರಾಗೃಹ ಮತ್ತು ಅಗ್ನಿಶಾಮಕ ದಳ ಡಿಜಿಪಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.

Last Updated : May 30, 2023, 1:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.