ETV Bharat / state

ಅಕ್ರಮ ಆಸ್ತಿ ಗಳಿಕೆ: ಶಿಕ್ಷೆಗೆ ಗುರಿಯಾಗಿದ್ದ ಪೊಲೀಸ್ ಅಧಿಕಾರಿ ವಿರುದ್ಧದ ಪ್ರಕರಣ ರದ್ದು

author img

By

Published : Nov 22, 2022, 8:08 AM IST

ಅನುಮತಿಯಿಲ್ಲದೆ ಮನೆ ಮೇಲೆ ದಾಳಿ. ಅಕ್ರಮ ಆಸ್ತಿಗಳಿಸಿದ ಆರೋಪದ ಶಿಕ್ಷೆಗೆ ಗುರಿಯಾಗಿದ್ದ ಪೊಲೀಸ್ ಅಧಿಕಾರಿ ವಿರುದ್ಧದ ಪ್ರಕರಣ ರದ್ದುಗೊಳಿಸಿ ಹೈಕೋರ್ಟ್ ಆದೇಶ

High Court
ಹೈಕೋರ್ಟ್

ಬೆಂಗಳೂರು: ಸುಮಾರು 10 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಪೊಲೀಸ್ ಇನ್ಸ್​​ಪೆಕ್ಟರ್ ಒಬ್ಬರಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಹೈಕೋರ್ಟ್ ರದ್ದುಪಡಿಸಿದೆ.

ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ಮತ್ತು ಪ್ರಕರಣ ರದ್ದು ಕೋರಿ ಉಡುಪಿಯ ಕರ್ನಾಟಕ ಕರಾವಳಿ ಭದ್ರತಾ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಇನ್ಸ್​ಪೆಕ್ಟರ್ ವೈ.ಗಂಗಿರೆಡ್ಡಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್, ಆರೋಪಿಯಾಗಿರುವ ಪೊಲೀಸ್ ಇನ್ಸ್​ಪೆಕ್ಟರ್ ವಿರುದ್ಧ ಲಂಚ ಆರೋಪದಲ್ಲಿ ತನಿಖೆ ಪ್ರಾರಂಭಿಸಲಾಗಿದ್ದು, ಮನೆಯ ಮೇಲೆ ದಾಳಿ ನಡೆಸಿ ಕೆಲವು ದಾಖಲೆಗಳನ್ನು ಸಂಗ್ರಹಿಸಲಾಗಿತ್ತು. ಈ ಆಧಾರದಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ. ತನಿಖಾಧಿಕಾರಿಗಳು ವ್ಯಾಪ್ತಿ ಮೀರಿ ತನಿಖೆ ನಡೆಸಿದ್ದಾರೆ ಎಂದು ತಿಳಿಸಿ ಪ್ರಕರಣ ರದ್ದುಪಡಿಸಿದರು.

ಪ್ರಕರಣದ ಹಿನ್ನೆಲೆ: ಶ್ರೀನಿವಾಸ್ ಪ್ರಸಾದ್ ಎಂಬುವರು ತಮ್ಮ ವಾಹನ ಕಳುವಾಗಿರುವ ಸಂಬಂಧ ದೂರು ದಾಖಲಿಸಲು ಬೆಳ್ತಂಗಡಿ ಪೊಲೀಸ್ ಠಾಣೆಗೆ ಹೋಗಿದ್ದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕರಾಗಿದ್ದ ಗಂಗಿರೆಡ್ಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲು 30 ಸಾವಿರ ರೂ. ಬೇಡಿಕೆಯಿಟ್ಟಿದ್ದರು. ಈ ಸಂಬಂಧ ಸಂಭಾಷಣೆ ನಡೆಸಿದ್ದ ಧ್ವನಿಯನ್ನು ರೆಕಾರ್ಡಿಂಗ್ ಮಾಡಿಕೊಂಡಿದ್ದ ಶ್ರೀನಿವಾಸ್ ಪ್ರಸಾದ್, ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಇದಾದ ಬಳಿಕ ಗಂಗಿರೆಡ್ಡಿ ಅವರಿಂದ ವಾಯ್ಸ್​ ರೆಕಾರ್ಡಿಂಗ್‌ ಕಸಿದುಕೊಂಡು ನಾಶಪಡಿಸಿದ್ದರು ಎಂದು ಆರೋಪಿಸಿದ್ದರು.

ದೂರು ದಾಖಲಾದ ಒಂದು ದಿನದ ಬಳಿಕ ಲೋಕಾಯುಕ್ತ ಪೊಲೀಸರು ಗಂಗಿರೆಡ್ಡಿ ಮನೆಯ ಮೇಲೆ ದಾಳಿ ನಡೆಸಿ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ದಾಳಿಯಲ್ಲಿ ದೂರಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳು ಲಭ್ಯವಾಗಿರಲಿಲ್ಲ. ಹೀಗಾಗಿ ಪ್ರಕರಣ ಸಂಬಂಧ ಸಿ ರಿಪೋರ್ಟ್ ಸಲ್ಲಿಸಿದ್ದರು. ಆದರೆ, ಮನೆಯಲ್ಲಿ ಶೋಧ ನಡೆಸಿದ ಸಂದರ್ಭದಲ್ಲಿ ಪತ್ತೆಯಾಗಿದ್ದ ದಾಖಲೆಗಳ ಆಧಾರದಲ್ಲಿ ರೆಡ್ಡಿ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ್ದ ದಕ್ಷಿಣ ಕನ್ನಡ ಜಿಲ್ಲೆ ವಿಶೇಷ ನ್ಯಾಯಾಲಯ ಆರೋಪಿಯನ್ನು ದೋಷಿ ಎಂದು ಘೋಷಣೆ ಮಾಡಿ ಶಿಕ್ಷೆ ವಿಧಿಸಿತ್ತು.

ಇದನ್ನು ಪ್ರಶ್ನಿಸಿ ಗಂಗಿರೆಡ್ಡಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅಲ್ಲದೇ ಪ್ರಕರಣವೊಂದರಲ್ಲಿ ತನಿಖಾಧಿಕಾರಿಯಾಗಿರುವರಿಗೆ ಮತ್ತೊಂದು ಪ್ರಕರಣದಲ್ಲಿ ಆರೋಪಿತರ ಮನೆ ಮೇಲೆ ದಾಳಿ ಮಾಡಿ ತನಿಖೆ ನಡೆಸಲು ಅವಕಾಶವಿಲ್ಲ. ಜತೆಗೆ ದಾಳಿ ನಡೆಸಿ ತನಿಖೆ ಕೈಗೊಳ್ಳಲು ಪೂರ್ವಾನುಮತಿ ಪಡೆದಿರಲಿಲ್ಲ. ಅಲ್ಲದೇ ಅಕ್ರಮ ಆಸ್ತಿ ಗಳಿಕೆ ಆರೋಪ ಸಂಬಂಧದ ಪ್ರಕರಣದಲ್ಲಿ ಆರೋಪಿ ಕೃಷಿ ಆಧಾಯವನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಿಲ್ಲ. ಹೀಗಾಗಿ ಶಿಕ್ಷೆ ರದ್ದುಪಡಿಸುತ್ತಿರುವುದಾಗಿ ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಇದನ್ನೂ ಓದಿ: ಸಚಿವಾಲಯದ ಕಾರು ಬಳಸಿ ಸುಮಾರು ಕೋಟಿ ರೂ.ವಂಚನೆ: ಆರೋಪ ಮುಕ್ತಿಗೊಳಿಸಲು ಹೈಕೋರ್ಟ್ ನಿರಾಕರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.