ETV Bharat / state

ಕಾಂಗ್ರೆಸ್ ಪಾಲಿಗೆ ಕರ್ನಾಟಕ ಸರ್ಕಾರ ಖಜಾನೆ ಇದ್ದಂತೆ : ಎನ್ ರವಿಕುಮಾರ್

author img

By

Published : Jul 2, 2023, 5:23 PM IST

ಅಧಿಕಾರಕ್ಕೆ ಬರುವ ಮುಂಚೆ ಎಲ್ಲರಿಗೂ ಗ್ಯಾರಂಟಿ ಎಂದಿದ್ದ ಕಾಂಗ್ರೆಸ್​ ಸರ್ಕಾರ ಇದೀಗ ಎಲ್ಲದಕ್ಕೂ ಕಂಡೀಷನ್​ಗಳನ್ನು ಹಾಕುತ್ತಿದ್ದಾರೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್ ತಿಳಿಸಿದ್ದಾರೆ.

ಎನ್ ರವಿಕುಮಾರ್
ಎನ್ ರವಿಕುಮಾರ್

ಬೆಂಗಳೂರು : ರಾಜ್ಯದಲ್ಲಿ ಬರೀ ವೈಎಸ್‍ಟಿ ಅಲ್ಲ; ವಿಎಸ್‍ಟಿಯೂ ಇದೆ. ಮೊದಲನೆಯದ್ದು ಯತೀಂದ್ರ- ಸಿದ್ದರಾಮಯ್ಯ ಟ್ಯಾಕ್ಸ್ ಆದರೆ ಎರಡನೆಯದು ವೇಣುಗೋಪಾಲ್-ಸಿದ್ದರಾಮಯ್ಯ ಟ್ಯಾಕ್ಸ್ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್ ಆರೋಪಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಅಧಿಕೃತವಾಗಿ ಮತ್ತು ಅನಧಿಕೃತವಾಗಿ ವಸೂಲಿ ಮಾಡುವ ತೆರಿಗೆ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಗೊತ್ತಿದೆ. ಸಿದ್ದರಾಮಯ್ಯನವರು ದೇವೇಗೌಡರ, ಕುಮಾರಸ್ವಾಮಿಯವರ ಜೊತೆಗೆ ಇದ್ದವರು. ಜೆಡಿಎಸ್‍ನಲ್ಲಿ ಹಿಂದೆ ಇದ್ದವರು. ಹಾಗಾಗಿ ಸಿದ್ದರಾಮಯ್ಯ ಏನೆಂದು ಅವರಿಗೆ ಚೆನ್ನಾಗಿ ಗೊತ್ತಿದೆ. ವೈಎಸ್‍ಟಿ ವಿಷಯ ತಿಳಿಸಿದ ಕುಮಾರಸ್ವಾಮಿಯವರಿಗೆ ಅಭಿನಂದನೆಗಳು. ಸಿದ್ದರಾಮಯ್ಯರು ಹಾಕಿದ ತೆರಿಗೆಯನ್ನು ಯತೀಂದ್ರರು ವಸೂಲಿ ಮಾಡುತ್ತಿದ್ದಾರೆ. ಮೈಸೂರು, ಹುಬ್ಬಳ್ಳಿ ಮತ್ತಿತರ ಕಡೆ ಹಾಗೂ ರಾಜ್ಯದ ವಿವಿಧೆಡೆ ಇದರ ಕುರಿತು ಮಾತನಾಡುತ್ತಿದ್ದಾರೆ. ಬರೀ ವೈಎಸ್‍ಟಿ ಅಲ್ಲ; ವಿಎಸ್‍ಟಿಯೂ ಇದೆ. ವೇಣುಗೋಪಾಲ್-ಸಿದ್ದರಾಮಯ್ಯ ಟ್ಯಾಕ್ಸ್ ಇದೆ. ವಿಎಸ್‍ಟಿಯನ್ನು ವೇಣುಗೋಪಾಲ್ ಸಂಗ್ರಹಿಸುತ್ತಾರೆ. ಇದು ವಿಎಸ್‍ಟಿ ಸರ್ಕಾರ ಎಂದು ಆರೋಪಿಸಿದರು.

ವೈಎಸ್‍ಟಿ, ವಿಎಸ್‍ಟಿ ಬಗ್ಗೆ ಜನರು ಜಾಗೃತರಾಗಬೇಕೆಂದು ಅವರು ಮನವಿ ಮಾಡಿದರು. ಇಲ್ಲಿ ಸಿದ್ದರಾಮಯ್ಯರು ವಿಧಿಸಿದ ತೆರಿಗೆಯನ್ನು ವೇಣುಗೋಪಾಲ್ ಡ್ರಾ ಮಾಡುತ್ತಾರೆ. ಕಾಂಗ್ರೆಸ್ ಪಾಲಿಗೆ ಕರ್ನಾಟಕ ಸರ್ಕಾರ ಖಜಾನೆ ಇದ್ದಂತೆ ಎಂದು ಟೀಕಿಸಿದ ಅವರು, ಈ ಗ್ಯಾರಂಟಿ ಎಂದರೆ ಒಂದು ಕೈಯಲ್ಲಿ ತೆಗೆದುಕೊಂಡು ಇನ್ನೊಂದು ಕೈಯಲ್ಲಿ ಕೊಡುವುದು. ಇದು ಮೋಸದ ಯೋಜನೆ ಎಂದು ಅವರು ಆಕ್ಷೇಪಿಸಿದರು. 2022-23ರಲ್ಲಿ ಉತ್ತೀರ್ಣರಾದವರಿಗೆ ಮಾತ್ರ ಯಾಕೆ ನಿರುದ್ಯೋಗ ಭತ್ಯೆ ಎಂದು ಪ್ರಶ್ನಿಸಿದ ಅವರು, ನಿರುದ್ಯೋಗಿ ಯುವಕರು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ದಂಗೆ ಏಳಲಿ ಎಂದು ತಿಳಿಸಿದರು.

ಶಾಲಾ ಮಕ್ಕಳು ಬಸ್ ಹತ್ತಲಾಗುತ್ತಿಲ್ಲ: ಕರೆಂಟ್ ವಿಚಾರದಲ್ಲೂ ಮೋಸ ಮಾಡುತ್ತಿದ್ದಾರೆ. ಭರವಸೆಯಂತೆ 200 ಯೂನಿಟ್ ಉಚಿತ ವಿದ್ಯುತ್ ಕೊಡಿ ಎಂದು ಆಗ್ರಹಿಸಿದರು. ಪ್ರತಿ ಮಹಿಳೆಗೆ 2 ಸಾವಿರ ಎಂದಿದ್ದು (ಗೃಹಲಕ್ಷ್ಮಿ) ಮನೆಯೊಡತಿಗೆ ಎಂದು ಬದಲಿಸಿ ಮನೆಮನೆಯಲ್ಲೂ ಜಗಳ ತಂದಿಟ್ಟ ಸರ್ಕಾರ ಇದು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯಿಂದ ಬಸ್‍ಗಳು ತುಂಬಿರುತ್ತವೆ. ಶಾಲಾ ಮಕ್ಕಳು ಬಸ್ ಹತ್ತಲಾಗುತ್ತಿಲ್ಲ. ವಿದ್ಯಾರ್ಥಿಗಳು ಶಾಲೆ- ಕಾಲೇಜಿಗೆ ಹೋಗಲಾಗದ ದುಸ್ಥಿತಿ ಬಂದಿದೆ. ಮಕ್ಕಳ ಕಣ್ಣೀರು, ಯುವಕರ ಕಣ್ಣೀರು ಈ ಸಿದ್ದರಾಮಯ್ಯ ಸರ್ಕಾರಕ್ಕೆ ತಟ್ಟಲಿದೆ. ಮಹಿಳೆಯರಿಗೂ ಸಾಕಷ್ಟು ಬಸ್ಸಿಲ್ಲದ ಸ್ಥಿತಿ ಇದೆ ಎಂದ ಅವರು, 5 ಗ್ಯಾರಂಟಿ ಯೋಜನೆಗಳ ಕಂಡಿಷನ್ ತೆಗೆದುಹಾಕಿ ಎಂದು ಆಗ್ರಹಿಸಿದರು.

ಎರಡೂ ಕಡೆ ಬಿಜೆಪಿ ಹೋರಾಟ ಮಾಡಲಿದೆ : ಅಧಿಕಾರಕ್ಕೆ ಬರುವವರೆಗೂ ಎಲ್ಲರಿಗೂ ಗ್ಯಾರಂಟಿ ಎಂದಿದ್ದ ಕಾಂಗ್ರೆಸ್ ನಾಯಕರು ಎಲ್ಲರಿಗೂ ಫ್ರೀ ಎಲ್ಲರಿಗೂ ಫ್ರೀ ಎಂದು ಈಗ ಕಂಡೀಷನ್​ಗಳನ್ನು ಹಾಕುತ್ತಿದ್ದಾರೆ. ಹಾಗಾಗಿ ಬೇಷರತ್ ಗ್ಯಾರಂಟಿ ಜಾರಿಗೆ ಒತ್ತಾಯಿಸಿ ಸದನದ ಹೊರಗೆ ಮತ್ತು ಒಳಗೆ ಎರಡೂ ಕಡೆ ಬಿಜೆಪಿ ಹೋರಾಟ ಮಾಡಲಿದೆ ಎಂದರು.

ಇದನ್ನೂ ಓದಿ: ಕಾಂಗ್ರೆಸ್​ ಗ್ಯಾರಂಟಿಗಳ ಬೇಷರತ್ ಜಾರಿಗೆ ಆಗ್ರಹ: ಸದನದೊಳಗೆ ಶಾಸಕರಿಂದ, ಹೊರಗೆ ಬಿಎಸ್​ವೈ ನೇತೃತ್ವದಲ್ಲಿ ಬಿಜೆಪಿ ಹೋರಾಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.