ETV Bharat / state

ಕರ್ನಾಟಕ ವಿಧಾನಸಭೆ ಚುನಾವಣೆ: ಮೇ 10ಕ್ಕೆ ಮತದಾನ, 13ಕ್ಕೆ ಫಲಿತಾಂಶ

author img

By

Published : Mar 29, 2023, 12:08 PM IST

Updated : Mar 29, 2023, 3:12 PM IST

ಕರ್ನಾಟಕ ವಿಧಾನಸಭೆ ಚುನಾವಣೆಯ ಘೋಷಣೆಯಾಗಿದೆ. ಇಂದಿನಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರಲಿದೆ.

ಕರ್ನಾಟಕ ಚುನಾವಣೆಗೆ ದಿನಾಂಕ ಘೋಷಣೆ
ಕರ್ನಾಟಕ ಚುನಾವಣೆಗೆ ದಿನಾಂಕ ಘೋಷಣೆ

ಚುನಾವಣೆ ಕುರಿತು ಆಯುಕ್ತ ರಾಜೀವ್​ ಕುಮಾರ್​ ಮಾತು

ನವದೆಹಲಿ: ಬಹುನಿರೀಕ್ಷಿತ ಕರ್ನಾಟಕ ವಿಧಾನಸಭೆ 2023ರ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್​ ಕುಮಾರ್​ ಅವರಿಂದು ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ದಿನಾಂಕ ಪ್ರಕಟಿಸಿದರು. ವಿಧಾನಸಭೆಯ 224 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮೇ 10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ. ಇಂದಿನಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಾಗಲಿದೆ.

ಚುನಾವಣೆ ವೇಳಾಪಟ್ಟಿ​ ಹೀಗಿದೆ:
ಅಧಿಸೂಚನೆ ಪ್ರಕಟ-ಏಪ್ರಿಲ್​ 13
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ- ಏಪ್ರಿಲ್​ 20
ನಾಮಪತ್ರ ಪರಿಶೀಲನೆ- ಏಪ್ರಿಲ್​ 21
ನಾಮಪತ್ರ ವಾಪಸ್​ಗೆ ಕೊನೆಯ ದಿನ- ಏಪ್ರಿಲ್​ 24
ಮತದಾನದ ದಿನಾಂಕ- ಮೇ 10
ಫಲಿತಾಂಶ ಪ್ರಕಟ- ಮೇ 13

"ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ 5 ಕೋಟಿ 21 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಇದರಲ್ಲಿ ಪುರುಷರು 2 ಕೋಟಿ 62 ಲಕ್ಷ ಇದ್ದರೆ, 2 ಕೋಟಿ 59 ಲಕ್ಷ ಮಹಿಳಾ ಮತದಾರರು ಇದ್ದಾರೆ. ಮೊದಲ ಬಾರಿಗೆ 80 ವರ್ಷ ವಯಸ್ಸಿನ ಮತದಾರರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ" ಎಂದು ಚುನಾವಣಾ ಆಯುಕ್ತರು​ ತಿಳಿಸಿದರು.

ಕರ್ನಾಟಕ ವಿಧಾನಸಭೆ ಚುನಾವಣೆ
ಕರ್ನಾಟಕ ವಿಧಾನಸಭೆ ಚುನಾವಣೆ

"ಮತದಾನ ಪ್ರಮಾಣ ಹೆಚ್ಚಳಕ್ಕಾಗಿ ಜಾಗೃತಿ ಅಭಿಯಾನದ ಅಂಗವಾಗಿ ಹಲವಾರು ವಿಶ್ವವಿದ್ಯಾಲಯ, ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಕಳೆದ ಬಾರಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ ಕಡಿಮೆ ಮತದಾನವಾಗಿತ್ತು. ಐಟಿ ಹಬ್​ ಆಗಿರುವ ಬೆಂಗಳೂರಿನಲ್ಲಿ ಹಲವಾರು ಸಂಸ್ಥೆಗಳ ಸಹಭಾಗಿತ್ವದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅಭ್ಯರ್ಥಿಗಳ ಪೂರ್ಣ ಮಾಹಿತಿಯುಳ್ಳ ಪ್ರಮಾಣಪತ್ರ ವೆಬ್​ಸೈಟ್​ನಲ್ಲಿ ಲಭ್ಯವಿರಲಿದೆ" ಎಂದು ರಾಜೀವ್​ ಕುಮಾರ್ ತಿಳಿಸಿದರು. ಇದೇ ವೇಳೆ, "ಚುನಾವಣೆ ಘೋಷಣೆಗೂ ಮುನ್ನವೇ ಮತದಾರರಿಗೆ ಆಮಿಷ ನೀಡಲು ಸಂಗ್ರಹಿಸಲಾಗಿದ್ದ ವಸ್ತುಗಳು, ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಹಣ, ಮದ್ಯವನ್ನು ವಶಕ್ಕೆ ಪಡೆಯಲಾಗಿದೆ" ಎಂದರು.

ಸುಗಮ ಮತದಾನಕ್ಕಾಗಿ ರಾಜ್ಯದಲ್ಲಿ 58,282 ಒಟ್ಟು ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಇದರಲ್ಲಿ ನಗರ ಭಾಗದಲ್ಲಿ 24,063 ಮತಗಟ್ಟೆ, ಗ್ರಾಮೀಣ ಭಾಗದಲ್ಲಿ 34,219 ಮತಗಟ್ಟೆಗಳಿರಲಿವೆ. 1,320 ಮಹಿಳಾ ಸಿಬ್ಬಂದಿ ನಿರ್ವಹಿಸುವ ಮತಗಟ್ಟೆ, 226 ಯುವಕರು ನಿರ್ವಹಿಸುವ ಮತಗಟ್ಟೆ, 12,000 ಸೂಕ್ಷ ಮತಗಟ್ಟೆಗಳನ್ನಾಗಿ ಗುರುತಿಸಲಾಗಿದೆ. ಚುನಾವಣಾ ಅಕ್ರಮ ತಡೆಗೆ 2400 ವಿಶೇಷ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 2400 ವೀಕ್ಷಕರು, 2016 ಫ್ಲೈಯಿಂಗ್ಸ್​ ಸ್ವ್ಕಾಡ್​ ಸದಸ್ಯರು, 224 ಮತಗಟ್ಟೆಯಲ್ಲಿ ತಲಾ 1 ಯುವ ಮತಗಟ್ಟೆ, 240 ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.

80 ವರ್ಷ ಮೇಲ್ಪಟ್ಟವರಿಗೆ ವಿಶೇಷ ಆದ್ಯತೆ: ಈ ಬಾರಿಯ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟ ವಯೋವೃದ್ಧರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಮಾಡಿಕೊಡಲಾಗಿದೆ. ವಿಕಲಚೇತನರಿಗೂ ಈ ಸೌಲಭ್ಯವಿದೆ. ರಾಜ್ಯದಲ್ಲಿ 5.55 ಲಕ್ಷ ವಿಕಲಚೇತನರಿದ್ದಾರೆ.

  • By-elections in 04-Jalandhar parliamentary constituency in Punjab and Assembly constituencies of 07-Jharsuguda, Odisha, 395-Chhanbey and 34-Suar, UP & 23-Sohiong, Meghalaya to be held on May 10; result on May 13 pic.twitter.com/oWkLYEyB5F

    — ANI (@ANI) March 29, 2023 " class="align-text-top noRightClick twitterSection" data=" ">

ವಿಧಾನಸಭೆಯ 224 ಕ್ಷೇತ್ರಗಳಲ್ಲಿ 36 ವಿಧಾನಸಭಾ ಕ್ಷೇತ್ರಗಳು ಪರಿಶಿಷ್ಟ ಜಾತಿಗೆ ಮೀಸಲಿದ್ದರೆ, 15 ಪರಿಶಿಷ್ಟ ಪಂಗಡ, 173 ಸಾಮಾನ್ಯ ಕ್ಷೇತ್ರಗಳಾಗಿವೆ. ಪ್ರಸ್ತುತ ಪಕ್ಷಗಳ ಬಲಾಬಲದಲ್ಲಿ ಕಾಂಗ್ರೆಸ್​ 69 ಸ್ಥಾನಗಳನ್ನು ಹೊಂದಿದ್ದರೆ, ಆಡಳಿತಾರೂಢ ಬಿಜೆಪಿ 118 ಸ್ಥಾನಗಳನ್ನು ಹೊಂದಿದೆ. ಜೆಡಿಎಸ್​ 32, ಇತರೆ 2, ಖಾಲಿ ಸ್ಥಾನಗಳು 2 ಇವೆ.

ಪ್ರಸ್ತುತ ವಿಧಾನಸಭೆಯಲ್ಲಿನ ಪಕ್ಷಗಳ ಬಲಾಬಲ:
ಒಟ್ಟು ಕ್ಷೇತ್ರ 224
ಮ್ಯಾಜಿಕ್ ಫಿಗರ್ -113
ಬಿಜೆಪಿ-118
ಕಾಂಗ್ರೆಸ್- 69
ಜೆಡಿಎಸ್- 32
ಬಿಎಸ್‌ಪಿ- 1
ಪಕ್ಷೇತರರು- 2
ಖಾಲಿ- 2

224 ಸದಸ್ಯರನ್ನು ಹೊಂದಿರುವ ಕರ್ನಾಟಕ ವಿಧಾನಸಭೆಯ ಅವಧಿ ಮೇ 24ಕ್ಕೆ ಮುಗಿಯುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕ್ರಮವಾಗಿ 124 ಮತ್ತು 93 ಅಭ್ಯರ್ಥಿಗಳನ್ನು ಹೊಂದಿರುವ ಮೊದಲ ಪಟ್ಟಿ ಬಿಡುಗಡೆ ಮಾಡಿವೆ. ಕಳೆದ ವಾರ ಎರಡು ಹೊಸ ಕೆಟಗರಿ ಮೂಲಕ ಲಿಂಗಾಯತ ಮತ್ತು ಒಕ್ಕಲಿಗರಿಗೆ ಶಿಕ್ಷಣ ಮತ್ತು ಮೀಸಲಾತಿಯಲ್ಲಿ ಬಿಜೆಪಿ ನೇತೃತ್ವದ ಬೊಮ್ಮಾಯಿ ಸರ್ಕಾರ ಮೀಸಲಾತಿ ಘೋಷಿಸಿದೆ. ಚುನಾವಣೆಯಲ್ಲಿ ಇದು ಮಹತ್ವದ ವಿಚಾರವಾಗಬಹುದು.

ಮತದಾರರ ವಿವರ:
2.59 ಕೋಟಿ ಮಹಿಳಾ ಮತದಾರರು
2.62 ಕೋಟಿ ಪುರುಷ ಮತದಾರರು
4,699 ತೃತೀಯ ಲಿಂಗಿಗಳು
ಒಟ್ಟು 5 ಕೋಟಿ 21 ಲಕ್ಷ ಮತದಾರರು

ಇದನ್ನೂ ಓದಿ: ಇಂದು 11.30ಕ್ಕೆ ಕರ್ನಾಟಕ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಪ್ರಕಟ

Last Updated :Mar 29, 2023, 3:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.