ETV Bharat / state

ಅಭ್ಯರ್ಥಿಗಳ ಆಯ್ಕೆಗೆ ಮುಂದುವರಿದ ಕಸರತ್ತು.. ಇಂದು ಅಥವಾ ನಾಳೆ ಬಿಜೆಪಿ ಪಟ್ಟಿ ಬಿಡುಗಡೆ ಎಂದ ಸಿಎಂ

author img

By

Published : Apr 11, 2023, 9:48 AM IST

Updated : Apr 11, 2023, 10:41 AM IST

ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ ಹುರಿಯಾಳುಗಳ ಪಟ್ಟಿಗೆ ಕಸರತ್ತು ನಡೆಸುತ್ತಿದ್ದು, ಇಂದು ಅಥವಾ ನಾಳೆ ಪಟ್ಟಿ ಫೈನಲ್​ ಆಗಲಿದೆ ಎಂದು ತಿಳಿದುಬಂದಿದೆ.

ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ನವದೆಹಲಿ: ಅಭ್ಯರ್ಥಿಗಳ ಪಟ್ಟಿಗೆ ಕಸರತ್ತು ನಡೆಸುತ್ತಿರುವ ಬಿಜೆಪಿ, ದೆಹಲಿಯಲ್ಲಿ 2 ದಿನಗಳಿಂದ ಸರಣಿ ಸಭೆಗಳಲ್ಲಿ ತೊಡಗಿದೆ. ಈ ಮಧ್ಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು "ಅಭ್ಯರ್ಥಿಗಳನ್ನು ಪ್ರಜಾಪ್ರಭುತ್ವ ಮಾದರಿಯಲ್ಲಿ ಆಯ್ಕೆ ಮಾಡಲಾಗುವುದು. ಕಾಂಗ್ರೆಸ್​ನಂತೆ ಸರ್ವಾಧಿಕಾರದ ದರ್ಪ ತೋರಿಸಲ್ಲ" ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ಮೊದಲು ಕೂಲಂಕಷವಾಗಿ ಚರ್ಚೆ ಮಾಡಲಾಗುವುದು. ವಿವರ ಮಾಹಿತಿ ಪಡೆದು ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದು ಎಂದು ಹೇಳಿದರು.

"ಕಾಂಗ್ರೆಸ್ ಸರ್ವಾಧಿಕಾರ ಧೋರಣೆಯ ಪಕ್ಷವಾಗಿದೆ. ಆದರೆ, ಹಾಗಲ್ಲ. ಪ್ರಜಾಪ್ರಭುತ್ವದ ಎಲ್ಲ ಮಾದರಿಗಳನ್ನು ಅಳವಡಿಸಿಕೊಂಡ ಪಕ್ಷವಾಗಿದೆ. ಎಲ್ಲಾ ಆಯಾಮಗಳನ್ನು ಪರಿಗಣನೆಗೆ ತೆಗೆದುಕೊಂಡು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು. ಇಂದು ಮತ್ತೊಂದು ಆಂತರಿಕ ಸಭೆ ನಡೆಯಲಿದೆ. ಬಳಿಕ ತಡರಾತ್ರಿ ಬಿಡುಗಡೆ ಮಾಡಲಾಗುತ್ತದೆ" ಎಂದು ಅವರು ಹೇಳಿದರು.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಹಲವು ಪ್ರಮುಖ ಸಭೆಗಳಲ್ಲಿ ಪಾಲ್ಗೊಂಡಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿದ್ದಾರೆ. ಪ್ರತಿಯೊಂದು ಸಲಹೆಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತೇವೆ. ಚುನಾವಣಾ ತಂತ್ರದ ಬಗ್ಗೆಯೂ ಚರ್ಚೆ ನಡೆಸಲಾಗುತ್ತಿದೆ. ಇದೆಲ್ಲವನ್ನೂ ಅಳೆದು ತೂಗಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದರು.

ದಿನದ ಹಿಂದೆ ಮಾಜಿ ಮುಖ್ಯಮಂತ್ರಿ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಹಿರಿಯ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಅವರು ಮಾತನಾಡಿ, ಪಕ್ಷ ಸುಮಾರು 170- 180 ಸ್ಥಾನಗಳಿಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದರು. ಆದರೆ, ಕೇಂದ್ರ ಮತ್ತು ರಾಜ್ಯ ನಾಯಕರ ಮಧ್ಯೆ ಅಭ್ಯರ್ಥಿಗಳ ವಿಚಾರದಲ್ಲಿ ಒಮ್ಮತ ಮೂಡದ ಕಾರಣ ನಿನ್ನೆ ಪಟ್ಟಿ ಅಂತಿಮಗೊಳ್ಳಲಿಲ್ಲ ಎಂದು ತಿಳಿದುಬಂದಿದೆ.

ಕರ್ನಾಟಕ ವಿಧಾನಸಭೆ ಚುನಾವಣೆಗಾಗಿ ಅಭ್ಯರ್ಥಿಗಳ ಅಂತಿಮಪಟ್ಟಿ ಸಿದ್ಧತೆಗಾಗಿ ಕೇಂದ್ರ ಸಂಸದೀಯ ಸಮಿತಿ ಸಭೆಯಲ್ಲಿ ಬಿಜೆಪಿಯ ಹಿರಿಯ ನಾಯಕರು ಭಾಗವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ, ಮಾಜಿ ಸಿಎಂ ಬಿ ಎಸ್​ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಅವರು ಭಾಗವಹಿಸಿದ್ದರು.

ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ದೆಹಲಿಯ ತಮ್ಮ ನಿವಾಸದಲ್ಲಿ ಸಿಎಂ ಬೊಮ್ಮಾಯಿ ಅವರೊಂದಿಗೆ ಚುನಾವಣೆ ಕುರಿತು ಪ್ರತ್ಯೇಕವಾಗಿ ಸಭೆ ನಡೆಸಿದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸೋಮವಾರ ಸಂಜೆಯೊಳಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಅವರು ಚರ್ಚೆ ನಡೆಸಿದರು. ಆದರೆ, ಯಾವುದೂ ಸರಿ ಹೊಂದದ ಕಾರಣ ಪಟ್ಟಿ ಬಿಡುಗಡೆ ವಿಳಂಬ ಮುಂದುವರೆದಿದೆ.

ಓದಿ: ರಾಜ್ಯ ಮಾತ್ರವಲ್ಲ, ದಕ್ಷಿಣ ಭಾರತದಲ್ಲೇ ಬಿಜೆಪಿ ಅಧಿಕಾರಕ್ಕೆ ಬರುವುದು ಅಸಾಧ್ಯ: ಎಚ್.ವಿಶ್ವನಾಥ್

Last Updated : Apr 11, 2023, 10:41 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.