ETV Bharat / state

ಬಜೆಟ್​ನಲ್ಲಿ ಪ್ರವಾಸೋದ್ಯಮ: ರಾಮನಗರದಲ್ಲಿ ರಾಮಮಂದಿರ, ಅಂಜನಾದ್ರಿ ಅಭಿವೃದ್ಧಿಗೆ ₹100 ಕೋಟಿ

author img

By

Published : Feb 17, 2023, 11:45 AM IST

Updated : Feb 17, 2023, 5:01 PM IST

ಪ್ರವಾಸೋದ್ಯಮಕ್ಕೆ ಬಂಪರ್​ ಕೊಡುಗೆ - ರಾಮನಗರದಲ್ಲಿ ರಾಮಮಂದಿರ ನಿರ್ಮಾಣ - ನಂದಿ ಬೆಟ್ಟಕ್ಕೆ ಖಾಸಗಿ-ಸರ್ಕಾರಿ ಸಹಭಾಗಿತ್ವದಲ್ಲಿ ರೋಪ್‌ ವೇ ನಿರ್ಮಾಣ

Karnataka budget 2023 Tourism
ಪ್ರವಾಸೋಧ್ಯಮಕ್ಕೆ ಬಂಪರ್​

ಬೆಂಗಳೂರು: 2023-24ರ ಬಜೆಟ್​ನಲ್ಲಿ ಪ್ರವಾಸೋದ್ಯಮಕ್ಕೆ ಬೊಮ್ಮಾಯಿ ಅವರು ಹಲವಾರು ಘೋಷಣೆಗಳನ್ನು ಮಾಡಿದ್ದು, ನಂದಿ ಗಿರಿಧಾಮ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ, ನಂದಿಬೆಟ್ಟಕ್ಕೆ ಖಾಸಗಿ-ಸರ್ಕಾರಿ ಸಹಭಾಗಿತ್ವದಲ್ಲಿ ರೋಪ್‌ ವೇ ನಿರ್ಮಾಣ, ಪ್ರವಾಸಿ ಗೈಡ್‌ಗಳ ಮಾಸಿಕ ಪ್ರೋತ್ಸಾಹ ಧನ 2 ರಿಂದ 5 ಸಾವಿರ ರೂ.ಗೆ ಏರಿಕೆ, ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ರೂ. ಕೋಟಿ ಬಿಡುಗಡೆ ಮಾಡಿದ್ದಾರೆ.

ಅಂಜನಾದ್ರಿ 100 ಕೋಟಿ ರೂ: ಆಂಜನೇಯನ ಜನ್ಮ ಸ್ಥಳವಾದ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿಯನ್ನು ಬಜೆಟ್​ನಲ್ಲಿ ಮೀಸಲಿಡಲಾಗಿದೆ. ಪ್ರವಾಸೋದ್ಯಮ ಕೇಂದ್ರವಾಗಿ ಮಾಡುವ ಉದ್ದೇಶದಿಂದ ರಸ್ತೆ ಹಾಗು ಇನ್ನಿತರ ಅಭಿವೃದ್ಧಿಗೆ ಈ ಹಣ ವಿನಿಯೋಗವಾಗಲಿದೆ.

ರಾಮಮಂದಿರ ನಿರ್ಮಾಣ: ರಾಮನಗರದ ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಘೋಷಣೆ ಮಾಡಲಾಗಿದೆ. ಚಾಮುಂಡಿ ಬೆಟ್ಟದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಮ್ಯೂಸಿಯಂ, ಕಲಾ ಗ್ಯಾಲರಿ ನಿರ್ಮಾಣ ಮಾಡಲಾಗುವುದು. ಹೊನ್ನಾವರದಲ್ಲಿ ಚೆನ್ನಭೈರಾದೇವಿ ಸ್ಮಾರಕ ಪಾರ್ಕ್‌ ನಿರ್ಮಾಣ ಮಾಡಲಾಗುವುದು.

ಭುವನೇಶ್ವರಿ ತಾಯಿಯ ಬೃಹತ್ ಮೂರ್ತಿ: 'ಶ್ರೀ ಭುವನೇಶ್ವರಿ ತಾಯಿಯ ಬೃಹತ್ ಮೂರ್ತಿ ಹಾಗೂ ಥೀಮ್ ಪಾರ್ಕ್' ಅನ್ನು ಬೆಂಗಳೂರು ನಗರದಲ್ಲಿ ಅಭಿವೃದ್ಧಿಪಡಿಸುವ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ.

ಬಂಕಾಪೂರ ಪ್ರವಾಸಿ ತಾಣವಾಗಿ ಅಭಿವೃದ್ಧಿ: ನಾಡಪ್ರಭು ಕೆಂಪೇಗೌಡರ ಐತಿಹಾಸಿಕ ಕುರುಹುಗಳಿರುವ ತಾಣಗಳ ಪ್ರವಾಸಿ ಸರ್ಕಿಟ್​ ಒಂದನ್ನು ಈ ವರ್ಷದಿಂದದ ಪ್ರಾರಂಭಿಸಲು ಬಜೆಟ್​ನಲ್ಲಿ ತಿಳಿಸಲಾಗಿದೆ. ದಾವಣಗೆರೆಯ ಚನ್ನಗಿರಿಯ ಹೊದಿಗೆರೆಯಲ್ಲಿರುವ ಷಹಾಜಿ ಮಹಾರಾಜ್​ ಸಮಾಧಿ ಅಭಿವೃದ್ಧಿಗೆ 5 ಕೋಟಿ ಮೀಸಲಿಡಲಾಗಿದೆ. ಹಾವೇರಿಯ ಬಂಕಾಪೂರದಲ್ಲಿ ಐತಿಹಾಸಿಕ 101 ಕಂಬಗಳ ನಗರೇಶ್ವರ ದೇವಸ್ಥಾನ ಪ್ರದೇಶವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಬಗ್ಗೆ ಘೋಷಿಸಲಾಗಿದೆ.

ಚಿಕ್ಕಬಳ್ಳಾಪುರದ ನಂದಿ ಬೆಟ್ಟ ರೋಪ್​ ವೇ: ಚಿಕ್ಕಬಳ್ಳಾಪುರದ ನಂದಿ ಬೆಟ್ಟದಲ್ಲಿ ಸರ್ಕಾರಿ- ಖಾಸಗಿ ಸಹಭಾಗಿತ್ವದಲ್ಲಿ ರೋಪ್​ ವೇ ನಿರ್ಮಾಣ ಕಾಮಗಾರಿಗೆ ಬಜೆಟ್​ನಲ್ಲಿ ಹಣ ಮೀಸಲಿಡಲಾಗಿದೆ.

ದೇವಾಲಯಗಳ ಅಭಿವೃದ್ಧಿಗೆ ವಿಶೇಷ ಅನುದಾನ: ಹಂಪಿಯ ವಿಜಯ ವಿಠ್ಠಲ ದೇವಾಲಯ, ಪುರಂದರ ಮಂಟಪ, ವಿಜಯಪುರದ ಗೋಲ್​ಗುಂಬಜ್​, ಚಿಕ್ಕಬಳ್ಳಾಪುರದ ಭೋಗ ನಂದೀಶ್ವರ ದೇವಾಲಯ, ಬಾದಾಮಿ ಗುಹೆಗಳು, ಕಿತ್ತೂರು ಹಾಗೂ ಬೀದರ್​ ಕೋಟೆ ಅಭಿವೃದ್ಧಿ. ಈ ಸ್ಥಳಗಳಲ್ಲಿ ಅತ್ಯಾಧುನಿಕ ಬೆಳಕಿನ ವ್ಯವಸ್ಥೆಯ 3ಡಿ ಪ್ರೊಜೆಕ್ಷನ್​ ಮ್ಯಾಪಿಂಗ್​​, ಧ್ವನಿ ಮತ್ತು ಬೆಳಕು ಪ್ರದರ್ಶನಕ್ಕೆ 60 ಕೋಟಿ ಅನುದಾನ ಮೀಸಲಿಡಲಾಗಿದೆ.

ರಾಣಿ ಚೆನ್ನಭೈರಾದೇವಿ ಸ್ಮಾರಕ: ರಾಣಿ ಚೆನ್ನಭೈರಾದೇವಿ ಅವರ ಹೆಸರನ್ನು ಶಾಶ್ವತಗೊಳಿಸಲು ಹೊನ್ನಾವರದಲ್ಲಿ ಚೆನ್ನಭೈರಾದೇವಿ ಸ್ಮಾರಕ ಉದ್ಯಾನವನ ನಿರ್ಮಾಣಕ್ಕೆ ಅನುದಾನ ಘೋಷಣೆ.

ಅಂತಾರಾಷ್ಟ್ರೀಯ ಕಲಾ ಗ್ಯಾಲರಿ: ಮೈಸೂರಿನ ಚಾಮುಂಡಿ ವಿಹಾರದ ಕ್ರೀಡಾಂಗಣದಲ್ಲಿ 2ವರೆ ಎಕರೆ ಜಾಗದಲ್ಲಿ ಅಂತಾರಾಷ್ಟ್ರೀಯ ಮಟ್ಟದ ರಾಜ್ಯ ವಸ್ತು ಸಂಗ್ರಹಾಲಯ, ಕಲಾ ಗ್ಯಾಲರಿ ನಿರ್ಮಾಣಕ್ಕೆ 10 ಕೋಟಿ ರೂ ವ್ಯಯ ಮಾಡಲಾಗುವುದು ಎಂದು ಬಜೆಟ್​ನಲ್ಲಿ ಘೋಷಿಸಲಾಗಿದೆ. ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ರೋರಿಚ್​ ಹಾಗೂ ದೇವಿಕ ರಾಣಿ ಎಸ್ಟೇಟ್​ನಲ್ಲಿ ವಿವಿಧ ಮೂಲಭೂತ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಮಂಚನಬೆಲೆ ಜಲಾಶಯದ ಹಿನ್ನೀರಿನ ಸ್ಥಳದಲ್ಲಿ 10 ಕೋಟಿ ರೂ ವೆಚ್ಚದಲ್ಲಿ ಜಂಗಲ್​ ಲಾಡ್ಜ್​ ಅಂಡ್​ ರೆಸಾರ್ಟ್​ ನಿರ್ಮಾಣಕ್ಕೆ ಅನುದಾನ ಒದಗಿಸಲಾಗಿದೆ.

ಇದನ್ನೂ ಓದಿ: Karnataka Budget 2023: ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ: ಸಚಿವ ಸಂಪುಟ ಸಭೆ ಪ್ರಾರಂಭ

Last Updated : Feb 17, 2023, 5:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.