ETV Bharat / state

ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ

author img

By

Published : Aug 12, 2022, 6:58 AM IST

Updated : Aug 12, 2022, 9:22 AM IST

ಕನ್ನಡಕ್ಕೆ ಮೊದಲ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

Shivamogga Subbanna
ಶಿವಮೊಗ್ಗ ಸುಬ್ಬಣ್ಣ

ಬೆಂಗಳೂರು: ಕನ್ನಡದ ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ( 83 ) ಗುರುವಾರ ರಾತ್ರಿ ನಗರದ ಜಯದೇವ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.

'ಕಾಡುಕುದುರೆ' ಚಿತ್ರದ 'ಕಾಡು ಕುದುರೆ ಓಡಿ ಬಂದಿತ್ತ' ಹಾಡಿನ ಹಿನ್ನೆಲೆ ಗಾಯನಕ್ಕೆ ಶಿವಮೊಗ್ಗ ಸುಬ್ಬಣ್ಣ ಅವರಿಗೆ ರಾಷ್ಟ್ರ ಪ್ರಶಸ್ತಿ ದೊರಕಿತ್ತು. ಈ ಮೂಲಕ ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಎಂಬ ಖ್ಯಾತಿ ಪಡೆದಿದ್ದಾರೆ. ಅಷ್ಟೇ ಅಲ್ಲದೆ, ಹಲವಾರು ಪ್ರಶಸ್ತಿ ಮತ್ತು ಗೌರವಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕನ್ನಡದ ಕಾವ್ಯವನ್ನು ಸಂಗೀತಕ್ಕೆ ಹೊಂದಿಸುವ ಪ್ರಕಾರವಾದ 'ಸುಗಮ ಸಂಗೀತ' ಕ್ಷೇತ್ರದಲ್ಲಿ ಹೆಸರುವಾಸಿಯಾದ ಸುಬ್ಬಣ್ಣ ಅವರು ಕುವೆಂಪು ಮತ್ತು ದ.ರಾ.ಬೇಂದ್ರೆಯಂತಹ ಪ್ರಸಿದ್ಧ ಕವಿಗಳ ಕವನಗಳಿಗೆ ಕೆಲಸ ಮಾಡಿದ್ದಾರೆ ಮತ್ತು ಹಾಡಿದ್ದಾರೆ. ವಕೀಲರಾಗಿ ವೃತ್ತಿ ಬದುಕು ಆರಂಭಿಸಿದ ಇವರು ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಗಾಯಕರಾಗಿದ್ದರು. ಮೃತರು ಮಕ್ಕಳಾದ ಶ್ರೀರಂಗ ಮತ್ತು ಬಾಗೇಶ್ರೀ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಶುಕ್ರವಾರ ಬೆಳಿಗ್ಗೆ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಸಾರ್ವಜನಿಕರಿಗಾಗಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಸಲಾಗಿದೆ.

ಇದನ್ನೂ ಓದಿ: 'ರಾಣಾ'ನಿಗೆ ಸರ್ಕಾರಿ ಗೌರವದೊಂದಿಗೆ ಅಂತಿಮ ವಿದಾಯ: ಪತ್ತೆ ಕಾರ್ಯದಲ್ಲಿ ಪ್ರಚಂಡ ಅರಣ್ಯ ಇಲಾಖೆಯ ಈ ಶ್ವಾನ!

ಸುಗಮ ಸಂಗೀತದಲ್ಲಿ ಕನ್ನಡಕ್ಕೆ ಮೊದಲ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಹಿರಿಮೆ ಶಿವಮೊಗ್ಗ ಸುಬ್ಬಣ್ಣ ಅವರದ್ದಾಗಿದೆ. "ಕಾಡುಕುದುರೆ" ಚಿತ್ರದ ಹಿನ್ನೆಲೆ ಗಾಯನಕ್ಕೆ ಶಿವಮೊಗ್ಗ ಸುಬ್ಬಣ್ಣ ಅವರಿಗೆ 1974 ರಲ್ಲಿ ರಾಷ್ಟ್ರ ಪ್ರಶಸ್ತಿ "ರಜತ ಕಮಲ" ದೊರಕಿತ್ತು.

ಶಿವಮೊಗ್ಗ ಜಿಲ್ಲೆಯ ನಗರ ಊರಿನಲ್ಲಿ 1938ರಲ್ಲಿ ಜನಿಸಿದ ಶಿವಮೊಗ್ಗ ಸುಬ್ಬಣ್ಣನವರ ನಿಜವಾದ ಹೆಸರು ಜಿ.ಸುಬ್ರಹ್ಮಣ್ಯಂ. ಗಣೇಶ್ ರಾವ್ ಹಾಗೂ ರಂಗನಾಯಕಮ್ಮನವರ ಮುದ್ದಿನ ಮಗನಾದ ಸುಬ್ಬಣ್ಣ ಮನೆಯಲ್ಲಿ ನಿತ್ಯವೂ ಪೂಜೆ, ಪುನಸ್ಕಾರ, ವೇದ ಮಂತ್ರಗಳ ಝೇಂಕಾರ ಕೇಳಿ ಬೆಳೆದವರು. ಇವರ ತಾತ ಶಾಮಣ್ಣನವರು ಸಂಗೀತದಲ್ಲಿ ಪ್ರಸಿದ್ಧ ವಿದ್ವಾಂಸರಾಗಿದ್ದರು. ತಾತನ ಬಳಿಯಲ್ಲಿಯೇ ಸಂಗೀತಾಭ್ಯಾಸ ಆರಂಭಿಸಿದರು. ನಂತರ ಪ್ರಭಾಕರ ಅವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಸಿಸಿ ಕುವೆಂಪು, ದರಾ ಬೇಂದ್ರೆ ಸೇರಿದಂತೆ ಹೆಸರಾಂತ ಕವಿಗಳ ಕವಿತೆಗಳಿಗೆ ರಾಗ ಸಂಯೋಜನೆ ಮಾಡಿ ಹೆಸರಾದರು.

ಆರಂಭದಲ್ಲಿ ಕೆಲವು ವರ್ಷಗಳ ಕಾಲ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ ನಂತರ ತಮ್ಮ ವ್ಯಾಸಂಗದ ಕಡೆ ಹೆಚ್ಚಿನ ಗಮನ ಹರಿಸಿದರು. ಬಿ.ಎ, ಬಿ.ಕಾಂ, ಎಲ್.ಎಲ್.ಬಿ ಪದವೀಧವಿ ಪಡೆದು ವಕೀಲಕಿ ವೃತ್ತಿ ಆರಂಭಿಸಿದರು. ಹೈಕೋರ್ಟ್​ನಲ್ಲಿ ನ್ಯಾಯವಾದಿಯಾಗಿ ಪ್ರಾಕ್ಟೀಸ್ ಮಾಡಿದರು. ನೋಟರಿಯಾಗಿ ನೇಮಕಗೊಂಡು ಕಾರ್ಯನಿರ್ವಹಿಸಿದ್ದರು. ಆದರೂ ಸಂಗೀತ ಆಗಾಗ ಇವರನ್ನು ಎಚ್ಚರಿಸಿ ಶಾಲಾ ಸಮಾರಂಭಗಳಲ್ಲಿ ಹಾಡುವಂತೆ ಪ್ರೇರೇಪಿಸುತ್ತಿತ್ತು. ಹೀಗೆ ಸಭೆ ಸಮಾರಂಭಗಳಲ್ಲಿ ಮೋಹಕ ಕಂಠದಿಂದ ಹಾಡುತ್ತಾ ಕನ್ನಡ ಗಾಯನ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡರು.

ಶಿವಮೊಗ್ಗ ಸುಬ್ಬಣ್ಣ 1963ರಲ್ಲಿ ಆಕಾಶವಾಣಿಯ ಗಾಯಕರಾಗಿಯೂ ಆಯ್ಕೆಯಾದರು. ಕನ್ನಡ ಚಿತ್ರ ರಂಗಕ್ಕೆ ಹಿನ್ನೆಲೆ ಗಾಯಕರಾಗಿ ಪ್ರವೇಶಿಸಿದರು. ಖ್ಯಾತ ನಾಟಕಕಾರ, ಚಿತ್ರ ನಿರ್ದೇಶಕ ಕವಿ ಚಂದ್ರಶೇಖರ ಕಂಬಾರರ 'ಕರಿಮಾಯಿ' ಮೂಲಕ ಅಂದಿನ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಅವರಿಂದ ರಜತಕಮಲ ಪ್ರಶಸ್ತಿ ಸ್ವೀಕರಿಸಿದ ಸುಬ್ಬಣ್ಣ ಯಶಸ್ಸಿನ ಕುದುರೆಯೇರಿ ಸಂಗೀತ ಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆದರು.

ಆಕಾಶವಾಣಿ ಎಂ.ಎಸ್.ಐ.ಎಲ್. ಪ್ರಾಯೋಜಕತ್ವದಲ್ಲಿ ಪ್ರಸಾರ ಮಾಡಿದ ಜನಪ್ರಿಯ ಕಾರ‍್ಯಕ್ರಮದಲ್ಲಿ ಶಿಶುನಾಳ ಷರೀಫರ ರಚನೆಯ ಕೋಡಗನ ಕೋಳಿ ನುಂಗಿತ್ತಾ.., ಅಳಬೇಡಾ ತಂಗಿ ಅಳಬೇಡ… ಬಿದ್ದೀಯಬ್ಬೇ ಮುದುಕಿ.. ಪ್ರಸಿದ್ಧ ಗೀತೆಗಳಿಗೆ ಧ್ವನಿ ನೀಡಿ ಮತ್ತಷ್ಟು ಜನಪ್ರಿಯ ಗಾಯಕರೆನಿಸಿದರು. ಆಕಾಶವಾಣಿ ಮತ್ತು ದೂರದರ್ಶನದ 'ಎ ದರ್ಜೆ'ಯ ಗಾಯಕರಾಗಿಯೂ ಗುರುತಿಸಿಕೊಂಡಿದ್ದರು.

ರಾಜ್ಯ ಸರ್ಕಾರವು ಶಿವಮೊಗ್ಗ ಸುಬ್ಬಣ್ಣ ಅವರ ಸುಗಮ ಸಂಗೀತ ಕ್ಷೇತ್ರದ ಸಾಧನೆಗೆ ಪ್ರತಿಷ್ಠಿತ ಸಂತ ಶಿಶುನಾಳ ಶರೀಫ್ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಂಗೀತ ಅಕಾಡೆಮಿಯ ಕರ್ನಾಟಕ ಕಲಾ ತಿಲಕ ಪ್ರಶಸ್ತಿ ನೀಡಿ ಗೌರವಿಸಿದೆ. ಸಂಘ ಸಂಸ್ಥೆಗಳು, ಅಭಿಮಾನಿಗಳು ಸುಬ್ಬಣ್ಣ ಅವರಿಗೆ ನೂರಾರು ಪ್ರಶಸ್ತಿ - ಪುರಸ್ಕಾರ ನೀಡಿ ಸನ್ಮಾನಿಸಿವೆ. ದೇಶ-ವಿದೇಶಗಳಲ್ಲಿಯೂ ಸುಬ್ಬಣ್ಣನವರ ಹಾಡಿನ ಕಂಪು ಹರಡಿತ್ತು. ಅಮೆರಿಕ, ಸಿಂಗಪೂರ ಮುಂತಾದೆಡೆ ಜನಪ್ರಿಯ ಗೀತೆಗಳನ್ನು ಹಾಡಿ ಮೆಚ್ಚುಗೆ ಗಳಿಸಿದ್ದರು. ಸುಬ್ಬಣ್ಣನವರ ಹತ್ತು ಹಲವಾರು ಧ್ವನಿ ಸುರಳಿಗಳು ನಾಡಿನಲ್ಲಿ ಪ್ರಸಿದ್ಧಿ ಪಡೆದಿವೆ.

Last Updated : Aug 12, 2022, 9:22 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.