ETV Bharat / state

ದೇವೇಗೌಡರಿಗೆ ಕೃತಜ್ಞತೆ ಸಲ್ಲಿಸಿದ ಕಾಡುಗೊಲ್ಲ ಸಮುದಾಯದ ಮುಖಂಡರು

author img

By ETV Bharat Karnataka Team

Published : Dec 28, 2023, 9:54 PM IST

ಕಾಡುಗೊಲ್ಲ, ಅಡವಿಗೊಲ್ಲ ಮತ್ತು ಹಟ್ಟಿಗೊಲ್ಲ ಸಮುದಾಯಗಳನ್ನು ಎಸ್ಟಿ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಇತ್ತೀಚೆಗೆ ಪ್ರಧಾನಿ ಮೋದಿ ಅವರನ್ನು ದೇವೇಗೌಡರು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.

Kadugolla community leaders meet Devegowda
ದೇವೇಗೌಡರ ನಿವಾಸಕ್ಕೆ ತೆರಳಿ ಕಾಡುಗೊಲ್ಲ ಸಮುದಾಯ ಮುಖಂಡರು ಕೃತಜ್ಞತೆ ಸಲ್ಲಿಸಿದರು.

ಬೆಂಗಳೂರು: ಕಾಡುಗೊಲ್ಲ, ಅಡವಿಗೊಲ್ಲ ಮತ್ತು ಹಟ್ಟಿಗೊಲ್ಲ ಸಮುದಾಯಗಳ ಜನರನ್ನು ಪರಿಶಿಷ್ಠ ವರ್ಗದ (ಎಸ್‌ಟಿ) ಪಟ್ಟಿಗೆ ಸೇರಿಸುವ ಕುರಿತು ಡಿಸೆಂಬರ್ 21ರಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಭೇಟಿಯಾಗಿ ಮನವಿ ಮಾಡಿದ್ದರು. ಇಂದು ದೇವೇಗೌಡರ ನಿವಾಸಕ್ಕೆ ಆಗಮಿಸಿದ ಸಮುದಾಯದ ಮುಖಂಡರು ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಭೇಟಿ ವೇಳೆ ಸಮುದಾಯದ ಮುಖಂಡರೊಂದಿಗೆ ಚರ್ಚಿಸಿದ ದೇವೇಗೌಡರು, ನನ್ನ ಮನವಿಗೆ ಕೇಂದ್ರ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರು ನಾನು ಸಲ್ಲಿಸಿದ ಮನವಿ ಪತ್ರವನ್ನು ಬುಡಕಟ್ಟು ಸಮುದಾಯ ವ್ಯವಹಾರಗಳ ಖಾತೆ ಸಚಿವ ಅರ್ಜುನ್ ಮುಂಡಾ ಅವರಿಗೆ ಕಳುಹಿಸಿಕೊಟ್ಟರು.

ಕೇಂದ್ರ ಸಚಿವರು ತಮ್ಮ ಮನವಿಯನ್ನು ಪರಿಗಣಿಸಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ನನಗೆ ಪತ್ರದ ಮುಖೇನ ತಿಳಿಸಿದ್ದಾರೆ. ಅಲ್ಲದೇ ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಪತ್ರ ಬರೆದು ಮನವಿ ಮಾಡಿಕೊಂಡಿದ್ದೆ. ಅವರೂ ಕೂಡ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಉತ್ತರ ಬರೆದಿದ್ದಾರೆ ಎಂದರು.

ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಅಲಕ್ಷ್ಯಕ್ಕೆ ತುತ್ತಾಗಿರುವ ಅಡವಿಗೊಲ್ಲ ಸಮುದಾಯಕ್ಕೆ ರಾಜಕೀಯವಾಗಿಯೂ ಪ್ರಾತಿನಿಧ್ಯ ಸಿಕ್ಕಿಲ್ಲ. ದೇವೇಗೌಡರ ಈ ಪ್ರಯತ್ನದಿಂದ ನಮ್ಮ ಸಮುದಾಯಕ್ಕೆ ದೊಡ್ಡ ಆಶಾಕಿರಣ ಮೂಡಿದಂತಾಗಿದೆ. ನಮ್ಮ ಸಮುದಾಯದ ಮಕ್ಕಳಿಗೆ ಉತ್ತಮ ಭವಿಷ್ಯ ಸಿಗುತ್ತದೆ ಎನ್ನುವ ವಿಶ್ವಾಸ ಹೊಂದಿದ್ದೇವೆ ಎಂದು ಮುಖಂಡರು ದೇವೇಗೌಡರನ್ನು ಅಭಿನಂದಿಸಿದರು.

ಇದನ್ನೂಓದಿ: ಚಾಮುಂಡಿ ಬೆಟ್ಟಕ್ಕೆ ರೋಪ್ ವೇ: ಪರಿಸರಪ್ರೇಮಿಗಳ ವಿರೋಧವೇಕೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.