ETV Bharat / state

ಸಚಿವ ಸ್ಥಾನಕ್ಕಾಗಿ ಈಶ್ವರಪ್ಪ ಪಟ್ಟು: ಅಧಿವೇಶನಕ್ಕೆ ಗೈರಾಗುವ ಟ್ರಂಪ್ ಕಾರ್ಡ್​ಗೆ ಮಣಿಯುತ್ತಾ ಹೈಕಮಾಂಡ್?

author img

By

Published : Dec 19, 2022, 8:09 PM IST

ಸಂಘ ಪರಿವಾರದ ಹಿನ್ನೆಲೆ ಹಾಗು ಪಕ್ಷದ ಶಿಸ್ತಿನ ನಾಯಕರಾಗಿರುವ ಕೆ ಎಸ್ ಈಶ್ವರಪ್ಪ ಮೌನ ಮುರಿದಿದ್ದು, ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಡೆ ಖಂಡಿಸಿ ಅಧಿವೇಶನಕ್ಕೆ ಗೈರಾಗಿದ್ದು, ಈ ವಿಚಾರವನ್ನು ಸ್ವತಃ ಮಾಧ್ಯಮಗೋಷ್ಟಿ ನಡೆಸುವ ಮೂಲಕ ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೆ ಎಸ್​ ಈಶ್ವರಪ್ಪ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೆ ಎಸ್​ ಈಶ್ವರಪ್ಪ

ಬೆಂಗಳೂರು: ಕುಂದಾನಗರಿಯಲ್ಲಿ ಆರಂಭಗೊಂಡಿರುವ ಚಳಿಗಾಲದ ಅಧಿವೇಶನದ ಮೊದಲ ದಿನವೇ ಪಕ್ಷದ ಹಿರಿಯ ನಾಯಕ, ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಗೈರಾಗಿ ನೇರವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಪ್ರತಿಪಕ್ಷಗಳ ಟೀಕೆ ಎದುರಿಸಲು ಸಜ್ಜಾಗಿದ್ದ ಬಿಜೆಪಿಗೆ ಸ್ವಪಕ್ಷೀಯರ ಅಸಮಾಧಾನವನ್ನು ಶಮನಗೊಳಿಸುವುದೇ ಇದೀಗ ಹೊಸ ಸವಾಲಾಗಿ ಪರಿಣಮಿಸಿದೆ.

ಪ್ರತಿಪಕ್ಷಗಳಿಗೆ ಮತ್ತೊಂದು ಅಸ್ತ್ರ: ಸಂಘ ಪರಿವಾರದ ಹಿನ್ನೆಲೆ ಹಾಗು ಪಕ್ಷದ ಶಿಸ್ತಿನ ನಾಯಕರಾಗಿರುವ ಕೆ ಎಸ್ ಈಶ್ವರಪ್ಪ ಮೌನ ಮುರಿದಿದ್ದು, ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಡೆ ಖಂಡಿಸಿ ಅಧಿವೇಶನಕ್ಕೆ ಗೈರಾಗಿದ್ದು, ಈ ವಿಚಾರವನ್ನು ಸ್ವತಃ ಮಾಧ್ಯಮಗೋಷ್ಟಿ ನಡೆಸಿ ಹೇಳಿದ್ದಾರೆ. ಸದನದಲ್ಲಿ ಸರ್ಕಾರದ ಸಮರ್ಥನೆಗೆ ನಿಲ್ಲಬೇಕಿದ್ದ ಹಿರಿಯ ಶಾಸಕರೇ ಹೀಗೆ ತಮ್ಮ ಅಸಮಾಧಾನ ಬಹಿರಂಗವಾಗಿ ತೋಡಿಕೊಂಡು ಕಲಾಪದಿಂದ ದೂರ ಉಳಿಯುತ್ತಿರುವುದು ಪ್ರತಿಪಕ್ಷಗಳಿಗೆ ಮತ್ತೊಂದು ಅಸ್ತ್ರ ಸಿಗುವಂತೆ ಮಾಡಿದೆ.

ಬಿಎಸ್​ವೈ ಅವರೊಂದಿಗೆ ಕೆ ಎಸ್​ ಈಶ್ವರಪ್ಪ
ಬಿಎಸ್​ವೈ ಅವರೊಂದಿಗೆ ಕೆ ಎಸ್​ ಈಶ್ವರಪ್ಪ

ಈಶ್ವರಪ್ಪ ಕುಪಿತಗೊಳ್ಳಲು ಕಾರಣ: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಅಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಈಶ್ವರಪ್ಪ ಪಕ್ಷದ ನಾಯಕರ ಒತ್ತಾಯಕ್ಕೆ ಮಣಿದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಕ್ಕ ನಂತರ ಸಚಿವ ಸ್ಥಾನ ನೀಡಲು ಆಸಕ್ತಿ ತೋರದ್ದಕ್ಕೆ ಅಸಮಧಾನಗೊಂಡಿದ್ದಾರೆ. ಅಲ್ಲದೆ ಅಂದು ರಾಜೀನಾಮೆಗೆ ಸಲಹೆ ನೀಡಿದ್ದವರೆಲ್ಲಾ ಇಂದು ಮೌನವಾಗಿರುವುದು ಈಶ್ವರಪ್ಪ ಕುಪಿತಗೊಳ್ಳಲು ಕಾರಣವಾಗಿದೆ.

ಅಧಿವೇಶನದಿಂದ ದೂರ ಉಳಿದು ತಮ್ಮ ಅಸಮಾಧಾನವನ್ನು ಹೈಕಮಾಂಡ್ ಗೆ ತಲುಪಿಸಬೇಕು ಎನ್ನುವುದು ಈಶ್ವರಪ್ಪ ಲೆಕ್ಕಾಚಾರವಾಗಿದೆ. ಹಾಗಾಗಿಯೇ ಮೊದಲ ದಿನದ ಕಲಾಪಕ್ಕೆ ಗೈರಾಗಿದ್ದು, ಎರಡನೇ ದಿನದ ಕಲಾಪ ಆರಂಭಕ್ಕೂ ಮೊದಲೇ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿಯಾಗಿ ಕಲಾಪಕ್ಕೆ ಗೈರಾಗಲು ಅನುಮತಿ ಕೋರಲಿದ್ದಾರೆ. ನಂತರ ಬೆಳಗಾವಿಯಿಂದ ನಿರ್ಗಮಿಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೆ ಎಸ್​ ಈಶ್ವರಪ್ಪ
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೆ ಎಸ್​ ಈಶ್ವರಪ್ಪ

ಹೈಕಮಾಂಡ್ ವಿರುದ್ಧ ಅಸಮಾಧಾನ: ಚುನಾವಣೆಗೆ ಇನ್ನೈದು ತಿಂಗಳು ಮಾತ್ರ ಬಾಕಿ ಇದೆ. ನನ್ನ ಮೇಲಿನ ಆರೋಪ ನಿರಾಧಾರವಾದದ್ದು, ಇದಕ್ಕೆ ಕ್ಲೀನ್ ಚಿಟ್ ಸಿಕ್ಕಿರುವುದೇ ನಿದರ್ಶನ. ಹಾಗಿದ್ದರೂ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳದಿದ್ದರೆ ಆರೋಪ ಹಾಗೆಯೇ ಉಳಿದುಬಿಡಲಿದೆ. ಜನರಲ್ಲಿ ಸಂಶಯ ಉಳಿದುಕೊಳ್ಳಲಿದೆ ಎನ್ನುವುದು ಈಶ್ವರಪ್ಪ ಅವರ ವಾದ. ಆರೋಪ ಬಂದ ಕೂಡಲೇ ರಾಜೀನಾಮೆ ನೀಡಿದ್ದೆ. ಅದರಂತೆ ಆರೋಪ ಮುಕ್ತನಾದ ಕೂಡಲೇ ಸಂಪುಟಕ್ಕೆ ತೆಗೆದುಕೊಳ್ಳಬೇಕಿತ್ತು ಎಂದು ನೇರವಾಗಿ ಬೊಮ್ಮಾಯಿ ಮತ್ತು ಹೈಕಮಾಂಡ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ರಾಜೀನಾಮೆ ಪತ್ರ
ರಾಜೀನಾಮೆ ಪತ್ರ

ಕುರುಬ ಸಮಾಜದ ಮುಖಂಡ ಕೆ ಎಸ್‌ ಈಶ್ವರಪ್ಪ ಅವರಿಗೆ ಪುನಃ ಸಚಿವ ಸ್ಥಾನ ನೀಡಬೇಕು. ವಿಧಾನ ಪರಿಷತ್ತಿನ ಹಂಗಾಮಿ ಸಭಾಪತಿ ರಘುನಾಥರಾವ್‌ ಮಲ್ಕಾಪುರೆ ಅವರ ಸದಸ್ಯತ್ವ ಅವಧಿ ಮುಗಿಯುವವರೆಗೂ ಪರಿಷತ್ತಿನ ಸಭಾಪತಿಯಾಗಿ ಮುಂದುವರೆಸಬೇಕು ಎಂದು ಹಿಂದುಳಿದ ದಲಿತ ಸಮುದಾಯಗಳ (ಹಿಂದ) ಒಕ್ಕೂಟ ಅಧ್ಯಕ್ಷ ಕೆ ಮುಕುಡಪ್ಪ ಆಗ್ರಹಿಸಿದ್ದರು.

ಬಿಜೆಪಿ ಹೈಕಮಾಂಡ್ ಸೊಪ್ಪು ಹಾಕಿಲ್ಲ: ಬೇಡಿಕೆ ಕಡೆಗಣಿಸಿದರೆ ಚುನಾವಣೆಯಲ್ಲಿ ಬಿಜೆಪಿಯಿಂದ ದೂರ ಸರಿಯುವುದಾಗಿ ಎಚ್ಚರಿಕೆ ನೀಡಿದ್ದರು. ಇದರ ಹಿಂದೆ ಈಶ್ವರಪ್ಪ ಇದ್ದರು ಎನ್ನುವುದು ಗುಟ್ಟಾಗಿಯೇನು ಉಳಿದಿಲ್ಲ. ಸಮುದಾಯದ ನಾಯಕರನ್ನು ಮುಂದೆ ಬಿಟ್ಟು ಸಚಿವ ಸ್ಥಾನದ ಬೇಡಿಕೆಯನ್ನು ಬಿಜೆಪಿ ಮುಂದೆ ಇಡಿಸಿದ್ದರು. ಆದರೆ, ಆ ಬೇಡಿಕೆಗೆ ಬಿಜೆಪಿ ಹೈಕಮಾಂಡ್ ಸೊಪ್ಪು ಹಾಕಿಲ್ಲ. ಸಂಪುಟ ವಿಸ್ತರಣೆ, ಪುನಾರಚನೆಯಂತಹ ಪ್ರಯತ್ನಕ್ಕೆ ಹೋಗಿಲ್ಲ. ಇದರಿಂದ ಈಶ್ವರಪ್ಪ ಅಸಮಧಾನಗೊಂಡಿದ್ದು, ನೇರವಾಗಿಯೇ ಇಂದು ತಮ್ಮ ಅಸಮಧಾನವನ್ನು ಹೊರಹಾಕಿದ್ದಾರೆ.

75 ವರ್ಷದ ಅಲಿಖಿತ ನಿಯಮ ಪಾಲನೆ ಬಿಜೆಪಿಯಲ್ಲಿ ಜಾರಿಯಲ್ಲಿದೆ. ಯಡಿಯೂರಪ್ಪ ಅವರಿಗೆ ವಿನಾಯಿತಿ ನೀಡಿದ್ದರೂ ಆ ಅಸ್ತ್ರ ಪ್ರಯೋಗವನ್ನು ಅವರ ವಿರುದ್ಧವೂ ಮಾಡಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಗಿದೆ. ಇದೀಗ 74 ವರ್ಷ. ಮುಂದಿನ ವರ್ಷ 75 ವರ್ಷದ ನಿಯಮಕ್ಕೆ ಈಶ್ವರಪ್ಪ ಕೂಡ ಒಳಗಾಗಲಿದ್ದಾರೆ.

ಈಶ್ವರಪ್ಪ ಲೆಕ್ಕಾಚಾರ: ಹಾಗಾಗಿ, 2023ಕ್ಕೆ ಚುನಾವಣೆಗೆ ಸ್ಪರ್ಧಿಸಿದರೂ ಸಂಪುಟದಲ್ಲಿ ಸ್ಥಾನ ಸಿಗುವುದು ಕಷ್ಟ ಸಾಧ್ಯ. ಹಾಗಾಗಿ ಉಳಿದ ಐದಾರು ತಿಂಗಳ ಮಟ್ಟಿಗಾದರೂ ಸಚಿವ ಸ್ಥಾನದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಬೇಕು ಎನ್ನುವುದು ಈಶ್ವರಪ್ಪ ಲೆಕ್ಕಾಚಾರವಾಗಿದೆ. ಯಡಿಯೂರಪ್ಪ ಅವರನ್ನೇ ಬಿಡದ ಹೈಕಮಾಂಡ್ ನಾಯಕರು 75 ವರ್ಷದ ನಿಯಮದ ವಿಚಾರದಲ್ಲಿ ತಮ್ಮನ್ನು ಬಿಡುವುದಿಲ್ಲ ಎನ್ನುವುದು ಪಕ್ಕಾ ಆಗಿರುವುದರಿಂದ ಶತಾಯ ಗತಾಯ ಸಂಪುಟಕ್ಕೆ ಸೇರಲು ಇದೀಗ ಅಧಿವೇಶನ ಗೈರು ಎನ್ನುವ ಟ್ರಂಪ್ ಕಾರ್ಡ್ ಪ್ರಯೋಗಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಬಿಜೆಪಿ ಆತಂಕಕ್ಕೆ ಕಾರಣ: ಈಶ್ವರಪ್ಪ ಗೈರು ವಿಚಾರ ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಸದನದಲ್ಲಿ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬೀಳಲು ಇಷ್ಟು ವಿಷಯ ಸಾಕು ಎನ್ನುವುದು ಬಿಜೆಪಿ ಆತಂಕಕ್ಕೆ ಕಾರಣವಾಗಿದೆ. ಹಲವಾರು ವಿಷಯಗಳಲ್ಲಿ ಸರ್ಕಾರದ ಸಮರ್ಥನೆಗೆ ನಿಲ್ಲುವ ಬಿಜೆಪಿ ಸದಸ್ಯರಿಗೆ ಪ್ರತಿಪಕ್ಷಗಳು ಟಾಂಗ್ ನೀಡಲು ಈಶ್ವರಪ್ಪ ಗೈರು ಅಸ್ತ್ರ ಬಳಕೆ ಮಾಡಿಕೊಳ್ಳಲಿವೆ. ಇದನ್ನು ಅರಿತೇ ಈಶ್ವರಪ್ಪ ಕಲಾಪಕ್ಕೆ ಗೈರಾಗುವ ನಿರ್ಧಾರ ಪ್ರಕಟಿಸಿದ್ದಾರೆ.

ಈಶ್ವರಪ್ಪ ನಡೆ ಬಗ್ಗೆ ರಾಜ್ಯದ ನಾಯಕರು ಈಗಾಗಲೇ ಹೈಕಮಾಂಡ್ ಗಮನಕ್ಕೆ ತಂದಿದ್ದು, ಮನವೊಲಿಕೆ ಕಾರ್ಯ ಮಾಡುವಂತೆ ಮನವಿ ಮಾಡಿದ್ದಾರೆ. ಕಲಾಪದಲ್ಲಿ ಪ್ರತಿಪಕ್ಷಗಳಿಗೆ ಆಹಾರವಾಗುವಂತಾಗಬಾರದು ಎನ್ನುವ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಮೂಲಕ ವಿಷಯವನ್ನು ಹೈಕಮಾಂಡ್​ಗೆ ತಲುಪಿಸಿದ್ದು, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್ ಸಂತೋಷ್ ಮೂಲಕ ಈಶ್ವರಪ್ಪಗೆ ಹೈಕಮಾಂಡ್​ನಿಂದ ಸಂದೇಶ ಬರಬಹುದು ಎನ್ನಲಾಗ್ತಿದೆ.

ಸಚಿವ ಸ್ಥಾನಕ್ಕಾಗಿ ಈಶ್ವರಪ್ಪ ಬಳಸಿರುವ ಅಧಿವೇಶನಕ್ಕೆ ಗೈರು ಎನ್ನುವ ಟ್ರಂಪ್ ಕಾರ್ಡ್ ಪ್ರಯೋಗಕ್ಕೆ ಹೈಕಮಾಂಡ್ ಮಣಿಯುತ್ತಾ? ಈಶ್ವರಪ್ಪಗೆ ಯಾವ ಸಂದೇಶ ಸಿಗಲಿದೆ. ಬೊಮ್ಮಾಯಿ ಸಂಪುಟ ಕಲಾಪದಲ್ಲಿ ಈಶ್ವರಪ್ಪ ಗೈರನ್ನು ಯಾವ ರೀತಿ ಸಮರ್ಥಿಸಿಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಓದಿ: ಚುನಾವಣೆ ಬಳಿಕ ಬಿಜೆಪಿ ನಮ್ಮ ಪಕ್ಷದ ಬಾಗಿಲಿಗೇ ಬರಬೇಕು: ಹೆಚ್​ಡಿಕೆಯಿಂದ ಸಮ್ಮಿಶ್ರ ಸರ್ಕಾರ ರಚನೆ ಸುಳಿವು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.