ETV Bharat / state

ವೈನ್​​​​ ಶಾಪ್ ಪಕ್ಕ ಹೊಸ ಅಂಗಡಿ ತೆರೆಯಲು ಸಿಎಂ ಜೊತೆ ಚರ್ಚಿಸಿ ತೀರ್ಮಾನ: ಸಚಿವ ಗೋಪಾಲಯ್ಯ

author img

By

Published : Feb 9, 2021, 3:39 PM IST

2020-21ಸಾಲಿನನಲ್ಲಿ 19,433.76 ಕೋಟಿ ರೂ. ಅಬಕಾರಿ ತೆರಿಗೆ ಸಂಗ್ರಹವಾಗಿದೆ. 22,700 ಕೋಟಿ ರೂ. ವಾರ್ಷಿಕ ಗುರಿ ಹೊಂದಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ 822.66 ಕೋಟಿ ರೂ. ಹೆಚ್ಚಿನ ಅಬಕಾರಿ ತೆರಿಗೆ ಸಂಗ್ರಹಿಸಲಾಗಿದೆ ಎಂದಿದ್ದಾರೆ.

K Gopalayiah talks about news liquor shops license
ಸಚಿವ ಗೋಪಾಲಯ್ಯ

ಬೆಂಗಳೂರು: ವೈನ್​​​​ ಶಾಪ್ ಜೊತೆಗೆ ಪಕ್ಕದಲ್ಲಿ ಹೊಸ ಅಂಗಡಿ ತೆರೆಯಲು ಬೇಡಿಕೆ ಇದ್ದು, ಸಿಎಂ ಜೊತೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ.

ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ‌ ಮಾತನಾಡಿದ ಅವರು, ಹೊಸ ಲೈಸನ್ಸ್ ಕೊಡುವುದಿಲ್ಲ. ಸಿಎಲ್ 7 ಮಳಿಗೆಗಳಿಗೆ ಕಾನೂನು ಪ್ರಕಾರ ಅನುಮತಿ ನೀಡಲಾಗುತ್ತಿದೆ. 950 ಎಂಎಸ್​​ಐಎಲ್ ಪರವಾನಗಿ ನೀಡಲಾಗುತ್ತಿದೆ. ಸಿಎಲ್ 7 ಹೊರತುಪಡಿಸಿ ಬೇರೆ ಮಾದರಿಗೆ ಅನುಮತಿ ನೀಡುವುದಿಲ್ಲ. ಇನ್ನು ಆನ್‌ಲೈನ್ ಮದ್ಯ ಮಾರಾಟ ಮಾಡುವ ಪ್ರಸ್ತಾವನೆಯೇ ನಮ್ಮ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಹೊಸ ಮದ್ಯದಂಗಡಿ ತೆರೆಯುವ ಕುರಿತು ಮಾಹಿತಿ ನೀಡಿದ ಸಚಿವ ಗೋಪಾಲಯ್ಯ

2020-21ಸಾಲಿನನಲ್ಲಿ 19,433.76 ಕೋಟಿ ರೂ. ಅಬಕಾರಿ ತೆರಿಗೆ ಸಂಗ್ರಹವಾಗಿದೆ. 22,700 ಕೋಟಿ ರೂ. ವಾರ್ಷಿಕ ಗುರಿ ಹೊಂದಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ 822.66 ಕೋಟಿ ರೂ. ಹೆಚ್ಚಿನ ಅಬಕಾರಿ ತೆರಿಗೆ ಸಂಗ್ರಹಿಸಲಾಗಿದೆ ಎಂದಿದ್ದಾರೆ.

ಕಳೆದ ವರ್ಷ ಇದೇ ಅವಧಿಯಲ್ಲಿ 515.99 ಮದ್ಯ ಬಾಕ್ಸ್ ಎತ್ತುವಳಿಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 33.29 ಲಕ್ಷ ಮದ್ಯದ ಬಾಕ್ಸ್ ಎತ್ತುವಳಿ ಕಡಿಮೆಯಾಗಿದೆ. ಇನ್ನು 61.55 ಲಕ್ಷ ಬಿಯರ್ ಪೆಟ್ಟಿಗೆಗಳ ಎತ್ತುವಳಿ ಕಡಿಮೆಯಾಗಿದೆ ಎಂದು ವಿವರಿಸಿದರು.

ಅಬಕಾರಿ ಅಧಿಕಾರಿಗಳಿಗೆ ವೆಪನ್

ಅಬಕಾರಿ ಅಧಿಕಾರಿಗಳಿಗೆ ವೆಪನ್ ನೀಡಲು ನಿರ್ಧರಿಸಲಾಗಿದೆ ಎಂದು ಸಚಿವ ಗೋಪಾಲಯ್ಯ ತಿಳಿಸಿದ್ದಾರೆ. ಇಲಾಖೆ ಇನ್ಸ್‌ಪೆಕ್ಟರ್​​​​ಗಳಿಗೆ 300 ಬೈಕ್ ನೀಡಲಾಗಿದೆ. 70 ಜೀಪ್ ಕೊಳ್ಳಲು ನಿರ್ಧರಿಸಲಾಗಿದೆ. ಅಬಕಾರಿ ಜಿಲ್ಲಾಧಿಕಾರಿ ಕಚೇರಿಗಳಿಗೆ 4 ವೆಪನ್ ನೀಡಲಾಗುವುದು. ಮಾದಕ ವಸ್ತು ತಡೆಯಲು ಅಬಕಾರಿ ಇಲಾಖೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಗಾಂಜಾ, ಡ್ರಗ್ಸ್ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಜೊತೆ ಸೇರಿ ನಿಯಂತ್ರಿಸಲು ಕ್ರಮ ವಹಿಸಲಾಗುವುದು. ಅಧಿಕಾರಿಗಳಿಗೆ ಬಿಎಸ್​​​ಎನ್​​ಎಲ್ ಸಿಮ್ ನೀಡಲಾಗುವುದು ಎಂದರು.

2020-21 ಸಾಲಿನಲ್ಲಿ ಡಿಸೆಂಬರ್​​ವರೆಗೆ ರಾಜ್ಯದಾದ್ಯಂತ 37,950 ದಾಳಿ ನಡೆಸಲಾಗಿದೆ. ಅಬಕಾರಿ ಕಾಯ್ದೆ ಉಲ್ಲಂಘನೆಗಾಗಿ 1,41,325ರಷ್ಟು ತಪಾಸಣೆ ಮಾಡಿ, 19,406 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು. ಈ ವೇಳೆ 12,239 ಮಂದಿಯನ್ನು ಬಂಧಿಸಿದ್ದು, 928 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. 86,143 ಲೀಟರ್ ಮದ್ಯ, 32,679 ಲೀಟರ್​​ ಬಿಯರ್, 5,711 ಲೀಟರ್​​ ವೈನ್, 26,650 ಲೀಟರ್​​ ಮದ್ಯಸಾರವನ್ನು ವಶಪಡಿಸಿಕೊಳ್ಳಲಾಗಿದೆ. 3,423 ಲೀಟರ್​ ಕಳ್ಳಭಟ್ಟಿ ಹಾಗೂ 14,473 ಲೀಟರ್​ ಬೆಲ್ಲದ ಕೊನೆಯನ್ನು ನಾಶಪಡಿಸಲಾಗಿದೆ ಎಂದು ವಿವರಿಸಿದರು.

ಎನ್​​ಡಿಪಿಎಸ್ ಕಾಯ್ದೆಯಡಿ ಜುಲೈ 2020ರಿಂದ ಡಿಸೆಂಬರ್ ಅಂತ್ಯದವರೆಗೆ 175 ಪ್ರಕರಣ ದಾಖಲಿಸಿ, ಒಟ್ಟು 426 ಆರೋಪಿಗಳನ್ನು ಬಂಧಿಸಲಾಗಿದೆ. 1,320.385 ಕೆಜಿ ಗಾಂಜಾ, 486.803 ಕೆಜಿ ಹಸಿ ಗಾಂಜಾ, 2,539 ಗಾಂಜಾ ಗಿಡಗಳು, 12 ಕೆಜಿ 500 ಗ್ರಾಂ ಅಫೀಮು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಇನ್ನು ಚಿಲ್ಲರೆ ಮದ್ಯ ಮಾರಾಟಗಾರರ ಸಂಘದ ಪದಾಧಿಕಾರಿಗಳು 20% ಲಾಭಾಂಶ(ಕಮಿಷನ್) ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ. ಸದ್ಯ 10% ಇದ್ದು, ಅದನ್ನು 20% ಏರಿಸಲು ಮನವಿ ಮಾಡಿದ್ದಾರೆ. ಈ ಸಂಬಂಧ ಸಿಎಂ ಬಳಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಇದನ್ನೂ ಓದಿ: ಸಂಸತ್​​ನಲ್ಲಿ ಮಾತನಾಡುವ ಮೋದಿ, ರೈತರ ಬಳಿ ಬಂದು ಮಾತನಾಡಲಿ: ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.