ETV Bharat / state

ಜೆಡಿಎಸ್ ಸ್ವರೂಪದಲ್ಲಿ ರಾಜಕೀಯ ಪಕ್ಷವೇ ಅಲ್ಲ, ಅದು ಕುಟುಂಬಕ್ಕೆ ಸೀಮಿತ : ಸಿಎಂ ಸಿದ್ದರಾಮಯ್ಯ

author img

By ETV Bharat Karnataka Team

Published : Nov 15, 2023, 4:01 PM IST

Updated : Nov 15, 2023, 4:13 PM IST

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಗೌರಿಶಂಕರ್ ಮತ್ತು ದಾಸರಹಳ್ಳಿ ಮಂಜುನಾಥ್ ಅವರು ಜೆಡಿಎಸ್ ತೊರೆದು ಕಾಂಗ್ರೆಸ್​ಗೆ ಸೇರ್ಪಡೆಗೊಂಡರು. ಈ ಇಬ್ಬರು ನಾಯಕರನ್ನು ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್​ಗೆ ಬರಮಾಡಿಕೊಂಡರು.

JDS leader Gaurishankar and Dasarahalli Manjunath joined the Congress.
ಮಾಜಿ ಶಾಸಕ ಗೌರಿಶಂಕರ್, ದಾಸರಹಳ್ಳಿ ಮಂಜುನಾಥ್ ಅವರು ಜೆಡಿಎಸ್ ತೊರೆದು ಕಾಂಗ್ರೆಸ್​ಗೆ ಸೇರ್ಪಡೆಗೊಂಡರು.

ಗೌರಿಶಂಕರ್ ಮತ್ತು ದಾಸರಹಳ್ಳಿ ಮಂಜುನಾಥ್ ಕಾಂಗ್ರೆಸ್ ಸೇರ್ಪಡೆ: ಕಾಯಕ್ರಮದಲ್ಲಿ ಜೆಡಿಎಸ್​ ವಿರುದ್ಧ ಸಿದ್ದರಾಮಯ್ಯ ಟೀಕೆ

ಬೆಂಗಳೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಗೌರಿಶಂಕರ್ ಮತ್ತು ದಾಸರಹಳ್ಳಿ ಮಂಜುನಾಥ್ ಅವರು ಜೆಡಿಎಸ್ ತೊರೆದು ಕಾಂಗ್ರೆಸ್​ಗೆ ಸೇರುವ ಮೂಲಕ ಜಾತ್ಯತೀತ, ಸಂವಿಧಾನದ ಮೌಲ್ಯಗಳನ್ನು ಕಾಪಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಇಂದು ನಡೆದ ವಿವಿಧ ಪಕ್ಷದ ನಾಯಕರು ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಇಬ್ಬರನ್ನೂ ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು. ನಾವಿದ್ದಾಗ ಜನತಾದಳ ಸೆಕ್ಯುಲರ್ ಆಗಿತ್ತು. ಈಗ ಎಸ್ ಕಿತ್ತೋಗಿ ಕೇವಲ ಜನತಾದಳ ಆಗಿ ಉಳಿದಿದೆ ಎಂದು ವ್ಯಂಗ್ಯವಾಡಿದರು.

ಜೆಡಿಎಸ್​ ಬಿಜೆಪಿಯ ಬಿ ಟೀಮ್: ಹಿಂದೆಯೂ ಬಿಜೆಪಿ ಜತೆ ಕೈ ಜೋಡಿಸಿದ್ದ ಕಾರಣಕ್ಕೆ ಜನತಾ ಪರಿವಾರದಲ್ಲಿ ಸೆಕ್ಯುಲರ್ ಸಿದ್ಧಾಂತದವರೆಲ್ಲ ಪ್ರತ್ಯೇಕವಾಗಿ ಉಳಿದೆವು. ಈಗ ಜೆಡಿಎಸ್ ಮತ್ತೆ ಬಿಜೆಪಿ ಜತೆ ಬೆರೆಯುತ್ತಿದೆ. ನಾನು ಈ ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಮ್ ಅಂದಿದ್ದಕ್ಕೆ ಸಿಟ್ಟಾಗಿದ್ದರು. ಅಂದು ನಾನು ಹೇಳಿದ್ದನ್ನು ಇಂದು ಅವರೇ ಸಾಬೀತುಪಡಿಸಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.

ಜೆಡಿಎಸ್ ಪಕ್ಷ ಕೇವಲ ಕುಟುಂಬಕ್ಕೆ ಸೀಮಿತವಾಗಿದೆ: ಜೆಡಿಎಸ್ ಈಗ ತನ್ನ ಸ್ವರೂಪದಲ್ಲಿ ಜನಸಮುದಾಯದ ರಾಜಕೀಯ ಪಕ್ಷ ಆಗಿ ಉಳಿದಿಲ್ಲ. ಕೇವಲ ಕುಟುಂಬಕ್ಕೆ ಸೀಮಿತವಾಗಿದೆ. ಜೆಡಿಎಸ್​​ನ ಡಬಲ್ ಗೇಮ್​ ಅನ್ನು ಸರಿಯಾಗಿ ಅರ್ಥ ಮಾಡಿಕೊಂಡಿರುವ ಗೌರಿಶಂಕರ್ ಮತ್ತು ಮಂಜುನಾಥ್ ಸೇರಿದಂತೆ ಇನ್ನೂ ಬಹಳ ಮಂದಿ ಕಾಂಗ್ರೆಸ್ ಸೇರುತ್ತಿದ್ದಾರೆ. ಆ ಮೂಲಕ ತಮ್ಮ ರಾಜಕೀಯ ಜೀವನವನ್ನು ಭದ್ರ ಮಾಡಿಕೊಳ್ಳುತ್ತಿದ್ದಾರೆ ಎಂದರು.

ನಾಚಿಕೆ ಆಗತ್ತೋ ಇಲ್ವೋ ಮೋದಿಯವರೇ?: ನಾವು ಗ್ಯಾರಂಟಿ ಕಾರ್ಯಕ್ರಮ ಕೊಟ್ಟಾಗ ಅವನ್ನು ಟೀಕಿಸಿದ್ದ ಪ್ರಧಾನಿಯವರು, ಈಗ ಮೋದಿ ಗ್ಯಾರಂಟಿ ಹೆಸರಿನಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದು ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು ಪ್ರಧಾನಿ ಮೋದಿಯವರೇ ನಿಮಗೆ ನಾಚಿಕೆ ಆಗತ್ತೋ ಇಲ್ವೋ ಎಂದು ಪ್ರಶ್ನಿಸಿದರು.

ರಾಜ್ಯದ ಕನ್ನಡ ನಾಡಿನ ಜನತೆಯ ಹಣ ಇರುವ ಸರ್ಕಾರದ ಕಾರ್ಯಕ್ರಮಗಳನ್ನು ಪ್ರಧಾನಿ ಮೋದಿಯವರು ತಮ್ಮ ಕಾರ್ಯಕ್ರಮ ಎಂದು ಬಿಂಬಿಸಿ ಪ್ರಚಾರ ಪಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ. ಇದಕ್ಕೆ ರಾಜ್ಯದ ಜನತೆಯ, ನಮ್ಮ ಬೆಂಬಲ ಇಲ್ಲ ಎಂದು ಸ್ಪಷ್ಟಪಡಿಸಿದರು.

ಜನಪರ ಕಲ್ಯಾಣ ಕಾರ್ಯಕ್ರಮ: ವೈವಿಧ್ಯತೆಯಲ್ಲಿ ಏಕತೆ ಕಾಣುವ ಕಾಂಗ್ರೆಸ್ ಪಕ್ಷವೂ ಸಮಗ್ರ ಭಾರತ ಒಂದು ದೇಶ, ಐಕ್ಯತೆ, ಜಾತ್ಯತೀತತೆ ಎಂಬುದರಲ್ಲಿ ನಂಬಿಕೆ ಇಟ್ಟಿದೆ. ನಮ್ಮ ಸರ್ಕಾರ ಹಲವಾರು ಜನಪರ ಕಲ್ಯಾಣ ಕಾರ್ಯಕ್ರಮ ಜಾರಿಗೆ ತರುವ ಮೂಲಕ ಬಡವರಿಗೆ ಸಾಮಾಜಿಕ, ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಕತ್ತಲಲ್ಲಿ ಗೋಡೆ ಮೇಲೆ ಪೋಸ್ಟರ್‌ ಅಂಟಿಸುವ ಸ್ಥಿತಿಗೆ ಕಾಂಗ್ರೆಸ್ ಬಂದಿದೆ : ಜೆಡಿಎಸ್ ಕಿಡಿ

Last Updated : Nov 15, 2023, 4:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.