ETV Bharat / state

ಮೇಕೆದಾಟು ಯೋಜನೆ ಜಾರಿಗೆ ತಮಿಳುನಾಡಿನೊಂದಿಗೆ ರಾಜ್ಯ ಸರ್ಕಾರ ಸಮಾಲೋಚಿಸಲಿ: ತಿಪ್ಪೇಸ್ವಾಮಿ ಆಗ್ರಹ

author img

By

Published : Feb 15, 2023, 10:06 AM IST

ಬೆಂಗಳೂರು ದಿನದಿಂದ ದಿನಕ್ಕೆ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದು ಇಲ್ಲಿನ ಅಗತ್ಯದ ನೀರು ಪೂರೈಕೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಮೇಕೆದಾಟು ಯೋಜನೆ ಜಾರಿಗೆ ತಮಿಳುನಾಡು ಸರ್ಕಾರದ ಜೊತೆ ಮಾತುಕತೆಗೆ ಕೂರಬೇಕು ಎಂದು ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ ಒತ್ತಾಯಿಸಿದ್ದಾರೆ.

JDS member KA Thippeswamy
ಜೆಡಿಎಸ್ ಸದಸ್ಯ ಕೆ.ಎ ತಿಪ್ಪೇಸ್ವಾಮಿ

ಬೆಂಗಳೂರು: ಬೆಂಗಳೂರಿನ ನಾಗರಿಕರ ಹಿತ ದೃಷ್ಟಿಯಿಂದ ಮೇಕೆದಾಟು ಯೋಜನೆ ಅತ್ಯಂತ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರದೊಂದಿಗೆ ಮಾತುಕತೆ ನಡೆಸಿಯಾದರು ಸರ್ಕಾರ ಈ ಯೋಜನೆಯನ್ನು ಜಾರಿಗೆ ತರಬೇಕು ಎಂದು ವಿಧಾನ ಪರಿಷತ್​ ಜೆಡಿಎಸ್ ಸದಸ್ಯ ಕೆ.ಎ ತಿಪ್ಪೇಸ್ವಾಮಿ ಒತ್ತಾಯಿಸಿದರು.

ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಂಗಳೂರು ದಿನದಿಂದ ದಿನಕ್ಕೆ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದು ಇಲ್ಲಿನ ಅಗತ್ಯದ ನೀರು ಪೂರೈಕೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಮೇಕೆದಾಟು ಯೋಜನೆ ಜಾರಿಗೆ ತಮಿಳುನಾಡು ಸರ್ಕಾರದ ಜೊತೆ ಮಾತುಕತೆಗೆ ಕೂರಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಮುಖ ಯೋಜನೆಗಳ ಭವಿಷ್ಯ ಕೇಂದ್ರದ ಕೈಯಲ್ಲಿದೆ: ಕೃಷ್ಣಾ 3ನೇ ಹಂತದ ಯೋಜನೆಗಳ ಅನುಷ್ಠಾನ, ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಿಸಿದ ನಮ್ಮ ಪಾಲಿನ ನೀರು ಬಳಕೆಗೆ ಕೃಷ್ಣಾ 2ನೇ ನ್ಯಾಯಾಧಿಕರಣದ ಐತೀರ್ಪು ಅಧಿಸೂಚನೆ ಪ್ರಕಟಿಸಲು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಅಫಿಡವಿಟ್ ಸಲ್ಲಿಸಬೇಕು. ರಾಜ್ಯದ ಪ್ರಸ್ತಾವಿತ ಮೇಕೆದಾಟು, ಕೃಷ್ಣಾ ಐತೀರ್ಪಿನ ಗೆಜೆಟ್ ಅಧಿಸೂಚನೆ, ಕಳಸಾ-ಬಂಡೂರಿ ವಿಸ್ತೃತ ಯೋಜನಾ ವರದಿಗೆ ತ್ವರಿತ ತೀರುವಳಿಯಂತಹ ಪ್ರಮುಖ ಯೋಜನೆಗಳ ಭವಿಷ್ಯ ಕೇಂದ್ರ ಸರ್ಕಾರದ ಕೈಯ್ಯಲ್ಲಿದೆ. ಕೇಂದ್ರದಲ್ಲಿಯೂ ನಿಮ್ಮದೇ ಸರ್ಕಾರ ಇರುವುದರಿಂದ ಈ ಕಾರ್ಯ ಅತ್ಯಂತ ಸುಲಭವಾಗಿದೆ ಎಂದು ರಾಜ್ಯ ಬಿಜೆಪಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟರು.

ಭದ್ರಾ ಮೇಲ್ದಂಡೆ ಯೋಜನೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆಯೆಂದು ಘೋಷಿಸಿ 5,300 ಕೋಟಿ ರೂ. ನೀಡಿರುವುದು ಸ್ವಾಗತಾರ್ಹ. ಆದರೆ ಯೋಜನೆಗೆ ಆಂಧ್ರದ ರಾಯಲ್‌ಸೀಮೆ ಪ್ರಾಂತದವರು ಯುಪಿಬಿಗೆ ನೀರು ಹಂಚಿಕೆಯಾಗಿಲ್ಲ ಎಂಬ ಅಪಸ್ವರ ಎತ್ತಿದ್ದಾರೆ. ಕಳಸಾ-ಬಂಡೂರಿ ಯೋಜನೆಗೆ ಕಾನೂನಾತ್ಮಕ ತೊಡಕು ನಿವಾರಣೆಯಾಗಿವೆ. ವಿಸ್ತೃತ ಯೋಜನಾ ವರದಿಗೆ ಕೇಂದ್ರದ ಇಲಾಖೆಗಳ ತೀರುವಳಿ, ಅನುಮತಿ ತ್ವರಿತವಾಗಿ ಲಭಿಸಬೇಕಾಗಿದೆ. ಬಚಾವತ್ ತೀರ್ಪಿನಲ್ಲಿ ಕೃಷ್ಣಾ ಕಣಿವೆಯಡಿ ರಾಜ್ಯಕ್ಕೆ ನೀರು ಹಂಚಿಕೆಯಾಗಿದೆ. ಕೃಷ್ಣಾ ಕಣಿವೆಯಲ್ಲಿ ತುಂಗಭದ್ರಾ, ಭದ್ರಾ ಉಪಕಣಿವೆಗಳು ಸೇರಿವೆ ಎಂದು ರಾಜ್ಯ ಸರ್ಕಾರ ಮನವರಿಕೆ ಮಾಡಿಕೊಟ್ಟು, ಸಮಸ್ಯೆ ಎದುರಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ಸಲಹೆ ಇತ್ತರು.

ದಮ್ಮು ತಾಕತ್ತು ಪ್ರಸ್ತಾಪ: ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಯು.ಬಿ ವೆಂಕಟೇಶ್ ಮಾತನಾಡಿದ ಸಂದರ್ಭ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಸಾಕಷ್ಟು ವಾಕ್ ಸಮರ ನಡೆಯಿತು. ಯು.ಬಿ ವೆಂಕಟೇಶ್ ಮಾತನಾಡಿ, 'ದೇಶದ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಗೌರವವಿದೆ. ರಾಜ್ಯದ ಭೇಟಿ ಬಗ್ಗೆಯೂ ಆಕ್ಷೇಪವಿಲ್ಲ. ಆದರೆ ಪ್ರವಾಹ ಕಾಲಕ್ಕೆ ಬಂದರೂ ಬಾಧಿತ ಪ್ರದೇಶ ನೋಡಲಿಲ್ಲ. ಇಸ್ರೋ ಬಾಹ್ಯಾಕಾಶ ನೌಕೆ ಮಂಗಳಯಾನ ನೋಡಲು ಹೋದರು. ಅದು ವಿಫಲವಾಯಿತು. ಈ ಕಡೆ ಬಿ.ಎಸ್ ಯಡಿಯೂರಪ್ಪ ಒಬ್ಬಂಟಿಯಾಗಿ ರಾಜ್ಯ ಸುತ್ತಿದರು. ಆಗ ಬಾರದ ಮೋದಿ ಈಗ ಬರುತ್ತಿರುವುದೇಕೆ' ? ಎಂದು ಕೆಣಕಿದರು.

ಆಡಳಿತ ಪಕ್ಷದ ಮುಖ್ಯ ಸಚೇತಕ ಡಾ.ವೈ.ಎ ನಾರಾಯಣಸ್ವಾಮಿ ಕುಳಿತಲ್ಲಿಯೇ 'ನಿಮ್ಮನ್ನು ನೋಡಲು' ಎಂದು ಕಾಲೆಳೆದರು. ಆಗ 'ನಿಮ್ಮನ್ನು ತೆಗೆದುಹಾಕಲು' ಬರುತ್ತಿದ್ದಾರೆ ಎಂದು ಯು.ಬಿ.ವೆಂಕಟೇಶ್ ತಿರುಗೇಟು ನೀಡಿದರು. ಈ ವೇಳೆ ಆಕ್ಷೇಪವೆತ್ತಿದ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಟೀಕೆ ಸ್ವಾಗತಿಸುತ್ತೇವೆ. ಆದರೆ ಸರ್ಕಾರ ತೆಗೆದು ಹಾಕಲು ಮೋದಿ ಬರುತ್ತಿದ್ದಾರೆ ಎನ್ನುವುದು ಸರಿಯಲ್ಲವೆಂದರೆ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ಸರ್ಕಾರದ ಮುಖ್ಯ ಸಚೇತಕರು ಕಾಂಗ್ರೆಸ್ ನಾಯಕರನ್ನ ನೋಡಲು ಮೋದಿ ಬರುತ್ತಿದ್ದಾರೆ ಎಂದು ಹೇಳಿದ್ದಾರೆ. ನಮ್ಮನ್ನು ನೋಡಲು ಅವರೇಕೆ ಬರುತ್ತಾರೆ? ಎಂದು ಮರು ಪ್ರಶ್ನಿಸಿದರು.

ಸರ್ಕಾರ ತೆಗೆದು ಹಾಕಲು ಎಂದು ಕಡತದಲ್ಲಿ ದಾಖಲಾಗಿದ್ದರೆ ತೋರಿಸಿ ಸದನದಿಂದ ಹೊರ ನಡೆಯುವೆ ಎಂದು ಯು.ಬಿ.ವೆಂಕಟೇಶ್​ ಸವಾಲೆಸೆದರು. ನಾರಾಯಣಸ್ವಾಮಿ ಮಧ್ಯೆ ಪ್ರವೇಶಿಸಿ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡ ನಾಯಕರ ಯೋಗಕ್ಷೇಮ ವಿಚಾರಿಸಲು ಮೋದಿ ಬರುತ್ತಿದ್ದಾರೆ ಎಂದೆನಷ್ಟೇ ಎಂಬ ಸಮಜಾಯಿಷಿ ನೀಡಿದರು. ವಾಗ್ವಾದ ಮುಂದುವರಿದಂತೆ ಸಭಾಪತಿ ಬಸವರಾಜ ಹೊರಟ್ಟಿ ಮಧ್ಯೆ ಪ್ರವೇಶಿಸಿ, ಕಲಾಪವನ್ನು ಹಳಿಗೆ ತಂದರು.

ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಬಿಜೆಪಿಯ ಕೇಶವ ಪ್ರಸಾದ್, ಗಲ್ವಾನ್ ಗಡಿಯಲ್ಲಿ ಭಾರತೀಯ ಸೈನಿಕರ ಧೀರೋದಾತ್ತ ನಡೆ, ಗಡಿ ರಕ್ಷಣೆಯಲ್ಲಿ ಮೋದಿ ದಿಟ್ಟು ನಿಲುವಿನ ಬಗ್ಗೆ ಪ್ರಶಂಸಿಸಿದರು. ತಟ್ಟನೆ ಎದ್ದು ನಿಂತು ಬಿ.ಕೆ ಹರಿಪ್ರಸಾದ್, ವಾಜಪೇಯಿ ಆಡಳಿತಾವಧಿಯಲ್ಲಿ ಭಾರತೀಯ ಸೇನೆ ಮೆರೆದ ಪೌರುಷ ಪ್ರಸ್ತಾಪಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುತ್ತಾರಲ್ಲ, ಹಾಗೆ ಮೋದಿಯವರಿಗೆ ದಮ್ಮು, ತಾಕತ್ತಿದ್ದರೆ ಚೀನಾದ ಹೆಸರೆತ್ತಲಿ ನೋಡೋಣ ಎಂದರು.

ಮೋದಿಯವರಿಗೆ ದಮ್ಮು, ತಾಕತ್ತಿರುವ ಕಾರಣಕ್ಕೆ ದೇಶದಲ್ಲಿ ಭಯೋತ್ಪಾದಕರ ಹುಟ್ಟಡಗಿದೆ. ಸೇನೆಗೆ ಹೆಚ್ಚಿನ ಅಧಿಕಾರ ದೊರೆತಿದೆ ಎಂದು ವೈ.ಎ.ನಾರಾಯಣಸ್ವಾಮಿ ಪ್ರತ್ಯುತ್ತರಿಸಿದರು. ಆಗ ಎರಡೂ ಕಡೆಯವರು ವಾಗ್ವಾದಕ್ಕೆ ಇಳಿದಾಗ ಸಭಾಪತಿ ನಿಯಂತ್ರಿಸಿದರು. ಒಟ್ಟಾರೆ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯ ಸಂದರ್ಭವು ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ವಾಗ್ದಾಳಿ ಮುಂದುವರೆಯಿತು.

ಇದನ್ನೂ ಓದಿ: ಮೇಕೆದಾಟು ವಿವಾದ: ಕೇಂದ್ರ ಜಲಶಕ್ತಿ ಸಚಿವ ಶೇಖಾವತ್ ಜೊತೆ ಸಿಎಂ ಬೊಮ್ಮಾಯಿ ಮಾತುಕತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.