ಬಿಜೆಪಿ, ಕಾಂಗ್ರೆಸ್​​ಗೆ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮಲು ಹವಣಿಸುತ್ತಿರುವ ಜೆಡಿಎಸ್‍!

author img

By

Published : Aug 4, 2022, 4:58 PM IST

ಬಿಜೆಪಿ, ಕಾಂಗ್ರೆಸ್​​ಗೆ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮಲು ಹವಣಿಸುತ್ತಿರುವ ಜೆಡಿಎಸ್‍!

ದಕ್ಷಿಣ ಭಾರತದ ರಾಜ್ಯಗಳ ಅಧಿಕಾರಕ್ಕಾಗಿ ದಂಡಯಾತ್ರೆ ಶುರು ಮಾಡಿರುವ ಬಿಜೆಪಿಗೆ ಕೆಲವು ಸೂಕ್ಷ್ಮ ಪರಿಸ್ಥಿತಿಗಳು ಎದುರಾಗಿವೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಜೆಡಿಎಸ್​ ಅದರಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದೆ. ಇದೆಲ್ಲದರ ನಡುವೆ ಈ ಬಾರಿಯೂ ಜೆಡಿಎಸ್​ ಕಿಂಗ್​ ಮೇಕರ್​ ಆಗಲಿದೆಯಾ ಎಂಬ ಕುತೂಹಲ ಮೂಡಿದೆ.

ಬೆಂಗಳೂರು: ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಇನ್ನೂ ಹತ್ತು ತಿಂಗಳು ಬಾಕಿ ಇರುವಾಗಲೇ ರಾಜ್ಯ ರಾಜಕಾರಣ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮುಂಬರುವ ಚುನಾವಣೆಯಲ್ಲಿ ಬಹುಮತದೊಂದಿಗೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆಂದು ಬಿಜೆಪಿ ಮುಂದಾಗಿದ್ದರೆ, ಕಾಂಗ್ರೆಸ್ ಸಹ ರಾಜ್ಯದ ಗದ್ದುಗೆಗೆ ಏರಲು ತಂತ್ರಗಾರಿಕೆ ಮಾಡುತ್ತಿದೆ. ನಾವೇನು ಕಡಿಮೆ ಎಂಬಂತೆ ಜೆಡಿಎಸ್‍ ಕೂಡ ಬಿಜೆಪಿ ಮತ್ತು ಕಾಂಗ್ರೆಸ್​​ಗೆ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮಲು ಹವಣಿಸುತ್ತಿದೆ.

ಮಾಜಿ ಸಿಎಂ ಬಿಎಸ್​ವೈ ಹಾಗೂ ಸಿಎಂ ಬೊಮ್ಮಾಯಿ
ಮಾಜಿ ಸಿಎಂ ಬಿಎಸ್​ವೈ ಹಾಗೂ ಸಿಎಂ ಬೊಮ್ಮಾಯಿ

ಆಂತರಿಕ ಕಚ್ಚಾಟ : ದಕ್ಷಿಣ ಭಾರತದ ರಾಜ್ಯಗಳ ಅಧಿಕಾರಕ್ಕಾಗಿ ದಂಡಯಾತ್ರೆ ಶುರು ಮಾಡಿರುವ ಬಿಜೆಪಿಗೆ ಕೆಲವು ಸೂಕ್ಷ್ಮ ಪರಿಸ್ಥಿತಿಗಳು ಎದುರಾಗಿವೆ. ರಾಜ್ಯದ ರಾಜಕೀಯ ಸೂಕ್ಷ್ಮ ಪರಿಸ್ಥಿತಿಯನ್ನು ತಹಬದಿಗೆ ತರಲು ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ನಾಯಕರು ಪ್ರಯತ್ನಿಸುತ್ತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್​​ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಆಂತರಿಕ ಕಚ್ಚಾಟ ಮುಂದುವರಿದಿದೆ. ಈ ಸಮಯವನ್ನು ಜೆಡಿಎಸ್ ನಾಯಕ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.

ಡಿಕೆಶಿ ಹಾಗೂ ಸಿದ್ದರಾಮಯ್ಯ
ಡಿಕೆಶಿ ಹಾಗೂ ಸಿದ್ದರಾಮಯ್ಯ

ಹೆಚ್​ಡಿಕೆ ಮಾಸ್ಟರ್​ ಪ್ಲಾನ್: 2023 ರ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮಲು ಜೆಡಿಎಸ್ ಹವಣಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಮೂರು ಹತ್ಯೆಗಳ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮೂರು ದಿನಗಳ ಹಿಂದೆ ಕರಾವಳಿ ಪ್ರದೇಶಕ್ಕೆ ಭೇಟಿ ನೀಡಿದ್ದರು. ಅವಧಿಪೂರ್ವ ಚುನಾವಣೆ ಭವಿಷ್ಯ ನುಡಿದಿರುವ ಹೆಚ್​​ಡಿಕೆ, ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ.

ಹೆಚ್​ ಡಿ ಕುಮಾರಸ್ವಾಮಿ
ಹೆಚ್​ ಡಿ ಕುಮಾರಸ್ವಾಮಿ

ಶಾಂತಿ ಕದಡುವ ಕೆಲಸ: ಮೈಸೂರು, ಮಂಡ್ಯ ಹಾಗೂ ಕಲಬುರಗಿಗೆ ಇತ್ತೀಚೆಗೆ ಭೇಟಿ ನೀಡಿದ್ದರು. ಪಕ್ಷ ಸಂಘಟನೆ ಮತ್ತು ಬಲವರ್ಧನೆಗಾಗಿ ಮುಖಂಡರಿಗೆ ಮಾರ್ಗದರ್ಶನ ಮಾಡಿ ಬಂದಿದ್ದಾರೆ. ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರು ಕೇವಲ ತಮ್ಮದೇ ಪಕ್ಷದ ಸಂತ್ರಸ್ತರ ಕುಟುಂಬವನ್ನು ಭೇಟಿ ಮಾಡಿದ್ದರು. ಆದರೆ, ಕುಮಾರಸ್ವಾಮಿ ಅವರು ಎಲ್ಲಾ ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿ, ಆರ್ಥಿಕ ನೆರವು ನೀಡಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳು ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ದಕ್ಷಿಣ ಕನ್ನಡದಲ್ಲಿ ಶಾಂತಿ ಕದಡುವ ಕೆಲಸದಲ್ಲಿ ನಿರತವಾಗಿವೆ ಎಂದು ಆರೋಪಿಸಿದ್ದಾರೆ.

ಇಲ್ಲಿನ ಅಶಾಂತಿಗೆ ರಾಷ್ಟ್ರೀಯ ಪಕ್ಷಗಳನ್ನು ಹೊಣೆ ಮಾಡುವುದರಿಂದ ನಮ್ಮ ಪಕ್ಷಕ್ಕೆ ಲಾಭವಾಗಲಿದೆ. ಕುಮಾರಸ್ವಾಮಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 224 ಸ್ಥಾನಗಳ ಪೈಕಿ 123 ಸ್ಥಾನಗಳ ಮೇಲೆ ಮಾತ್ರ ಗಮನ ಹರಿಸುತ್ತಿದ್ದರೂ, ಪಕ್ಷವು ಹೆಚ್ಚಿನ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇದು ಇತರ ಪಕ್ಷದ ಸ್ಪರ್ಧಿಗಳ, ವಿಶೇಷವಾಗಿ ಕಾಂಗ್ರೆಸ್‌ನ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎನ್ನುತ್ತಾರೆ ಜೆಡಿಎಸ್​​ನ ಹಿರಿಯ ನಾಯಕರೊಬ್ಬರು.

ಜೆಡಿಎಸ್ ಕಿಂಗ್‌ಮೇಕರ್ : ಉತ್ತರ ಭಾರತದಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳು ಕಡಿಮೆ ಅಂತರದಲ್ಲಿಯಾದರೂ ಹಲವು ಸ್ಥಾನಗಳನ್ನು ಕಳೆದುಕೊಂಡಿವೆ. ಕರ್ನಾಟಕದಲ್ಲಿಯೂ ಇದೇ ಪರಿಸ್ಥಿತಿ ಎದುರಾಗಬಹುದು. ಇಲ್ಲಿ ಜೆಡಿಎಸ್ ಕಿಂಗ್‌ಮೇಕರ್ ಆಗಿ ಹೊರಹೊಮ್ಮುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದಿದ್ದಾರೆ.

ಎರಡು ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಪರ್ಯಾಯ ಎಂದು ಕುಮಾರಸ್ವಾಮಿ ಸ್ಪಷ್ಟ ಸಂದೇಶವನ್ನು ಈಗಾಗಲೇ ರವಾನಿಸಿದ್ದಾರೆ. ರಾಜ್ಯದಲ್ಲಿ ಹೊಸ ಸೇರ್ಪಡೆಯಾಗಿರುವ ಆಮ್ ಆದ್ಮಿ ಪಕ್ಷ (ಎಎಪಿ) ಕೆಲವು ಪ್ರದೇಶಗಳಲ್ಲಿ ಕೆಲವು ಸ್ಥಾನಗಳನ್ನು ಮಾತ್ರ ಕೇಂದ್ರೀಕರಿಸಿದೆ ಎಂದು ಹೇಳಲಾಗುತ್ತಿದೆ.

ಎಎಪಿ ಎಂಟ್ರಿ : ಆಮ್ ಆದ್ಮಿ ಪಕ್ಷ, ತೃಣಮೂಲ ಕಾಂಗ್ರೆಸ್ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ನಂತಹ ಪ್ರಾದೇಶಿಕ ಪಕ್ಷಗಳ ಎದುರು ಕಾಂಗ್ರೆಸ್ ದೊಡ್ಡ ಹೊಡೆತ ಕಂಡಿದೆ. ಈ ಎಲ್ಲಾ ಪಕ್ಷಗಳು ಕಾಂಗ್ರೆಸ್ ಅನ್ನು ಆಕ್ರಮಿಸಿಕೊಳ್ಳುವ ಸ್ಥಾನದಲ್ಲಿದೆ. ಇದಕ್ಕೆ ನಿದರ್ಶನವೆಂದರೆ, ಪಂಜಾಬ್​​ನಲ್ಲಿ ಕಾಂಗ್ರೆಸ್ ನಾಯಕತ್ವವು ಒಳಜಗಳದಲ್ಲಿ ತೊಡಗಿದ ನಂತರ ಎಎಪಿ ಭರ್ಜರಿ ಜಯವನ್ನು ದಾಖಲಿಸಿದೆ. ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಎಎಪಿ ತನ್ನ ಹೆಜ್ಜೆಗುರುತನ್ನು ವಿಸ್ತರಿಸಲು ನೋಡುತ್ತಿದೆ.

ಕಳೆದ ವರ್ಷ ನಡೆದ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಹೀನಾಯ ಸೋಲನ್ನು ಕಂಡಿತ್ತು, ಎಡಪಕ್ಷಗಳು ರಾಜ್ಯದಲ್ಲಿ ದಾಖಲೆಯ ಎರಡನೇ ಅವಧಿಗೆ ಅಧಿಕಾರ ಕಂಡುಕೊಂಡಿವೆ. ಈ ಎಲ್ಲಾ ಬೆಳವಣಿಗೆಯನ್ನು ಗಮನಿಸಿದರೆ ರಾಜ್ಯದಲ್ಲಿ ಬಹುಮತ ಗಳಿಸಲು ಮೂರೂ ಪಕ್ಷಗಳಿಗೆ ಅಷ್ಟು ಸುಲಭದ ಮಾತಲ್ಲ. ಬಿಜೆಪಿ ರಾಜ್ಯದ ಜನರ ಮನಸ್ಸನ್ನು ಗೆಲ್ಲಲು ಯೋಜನೆಗಳ ಬೆನ್ನತ್ತಿದೆ. ಇನ್ನೊಂದೆಡೆ ಕಾಂಗ್ರೆಸ್ ಮತ್ತು ಜೆಡಿಎಸ್‍, ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಸಾರಲು ಮುಂದಾಗಿದೆ.

ರಾಜ್ಯ ವಿಧಾನಸಭೆ ಚುನಾವಣೆಗೆ ಮೂರು ಪಕ್ಷಗಳು ತಮ್ಮದೇ ಕಾರ್ಯತಂತ್ರಗಳನ್ನು ರೂಪಿಸುತ್ತಿವೆ. ಇದರಲ್ಲಿ ಯಾರು ಯಶಸ್ಸು ಕಾಣುತ್ತಾರೆ ಎಂಬುದು ಕುತೂಹಲಕಾರಿ ಸಂಗತಿಯಾಗಿದೆ.

ಇದನ್ನೂ ಓದಿ: ಆಮ್‌ ಆದ್ಮಿ ಪಕ್ಷ ಸೇರಿದ ಹಾಸ್ಯನಟ ಟೆನ್ನಿಸ್‌ ಕೃಷ್ಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.