ETV Bharat / state

ಎನ್‌ಡಿಎ ಸಭೆಗೆ ಜೆಡಿಎಸ್‍ಗೆ ಆಹ್ವಾನ; ಕುಮಾರಸ್ವಾಮಿ ಮತ್ತು ದೇವೇಗೌಡರು ದೆಹಲಿಗೆ ಹೋಗಿರಬಹುದು: ರವಿಕುಮಾರ್

author img

By

Published : Jul 16, 2023, 8:53 PM IST

ಎನ್​ಡಿಎ ಜೊತೆ ಹೋಗಬೇಕು ಎಂದು ಹೆಚ್​ ಡಿ ದೇವೆಗೌಡರು ಮತ್ತು ಹೆಚ್ ಡಿ ಕುಮಾರಸ್ವಾಮಿ ಯೋಚಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್

ಬೆಂಗಳೂರು : ಎನ್‍ಡಿಎ ಸಭೆಯಲ್ಲಿ ಪಾಲ್ಗೊಳ್ಳುವಂತೆ ಜೆಡಿಎಸ್‍ಗೆ ಆಹ್ವಾನ ಕೊಟ್ಟಿರಬಹುದು. ನನಗೆ ತಿಳಿದು ಬಂದ ಮಾಹಿತಿ ಪ್ರಕಾರ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಹೆಚ್ ​ಡಿ ದೇವೇಗೌಡರು ದೆಹಲಿಗೆ ಹೋಗಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಬೆಂಬಲ ಕೊಡಲು ಅನೇಕ ಪಕ್ಷಗಳು ಮುಂದೆ ಬಂದಿದ್ದು, ಹೆಚ್​ ಡಿ ದೇವೇಗೌಡರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಕೋವಿಡ್ ಸಂದರ್ಭದಲ್ಲಿ ಮೋದಿಯವರ ಜೊತೆ ದೇವೇಗೌಡರು ನಿಂತರು. ದೇಶದ ದೃಷ್ಟಿಯಿಂದ ಸಿದ್ಧಾಂತ ಮರೆತು ಎನ್​ಡಿಎ ಜೊತೆ ಹೋಗಬೇಕು ಎಂದು ದೇವೇಗೌಡರು ಮತ್ತು ಕುಮಾರಸ್ವಾಮಿ ಯೋಚಿಸುತ್ತಿದ್ದಾರೆ. ಅವರ ಚಿಂತನೆಯನ್ನು ಅಭಿನಂದಿಸುತ್ತೇನೆ. ಕುಮಾರಸ್ವಾಮಿ ಮತ್ತು ದೇವೇಗೌಡರು ದೆಹಲಿಗೆ ಹೋಗಲಿದ್ದು, ಇದರ ಬಗ್ಗೆ ಪಕ್ಷದ ಅಧ್ಯಕ್ಷ ಜೆ ಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ಮೋದಿ ಅವರು ನಿರ್ಧರಿಸಲಿದ್ದಾರೆ. ದೇಶದ ಒಳಿತನ್ನು ಗಮನಿಸಿ ನಿರ್ಣಯ ಕೈಗೊಳ್ಳಲಿದ್ದು, ಅದಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದರು.

ಮತ್ತೊಮ್ಮೆ ಮೋದಿ ಪ್ರಧಾನಿ : ವಿವಿಧ ವಿರೋಧ ಪಕ್ಷಗಳು ತಮ್ಮ ತತ್ವ-ಸಿದ್ಧಾಂತಗಳಿಗೆ ತಿಲಾಂಜಲಿ ಇಟ್ಟು ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬ ಏಕೈಕ ಉದ್ದೇಶದೊಂದಿಗೆ ಹೊರಟಿದ್ದಾರೆ. ಅದಕ್ಕಾಗಿ ಇದೇ ಜುಲೈ 18ರಂದು ವಿಪಕ್ಷಗಳ ಸಭೆ ನಡೆಸಲಾಗುತ್ತಿದೆ. ಆದರೆ ನರೇಂದ್ರ ಮೋದಿ ಅವರು 2047ರ ವೇಳೆಗೆ ಪ್ರಪಂಚದಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ನಂಬರ್​ ಒನ್​ ರಾಷ್ಟ್ರವನ್ನಾಗಿ ಮಾಡುವ ದೂರದೃಷ್ಟಿಯನ್ನು ಇಟ್ಟುಕೊಂಡಿದ್ದಾರೆ ಎಂದು ಹೇಳಿದರು.

ಪಾರ್ಟಿ ಬೆಳೆಸುವುದು, ಮತ ಬ್ಯಾಂಕ್ ದೃಢೀಕರಣದ ಉದ್ದೇಶ ಅವರದಲ್ಲ. ಅಂಥ ದುರುದ್ದೇಶದ ಚಿಂತನೆ ವಿಪಕ್ಷಗಳದ್ದು. ನಿಸ್ವಾರ್ಥ ಮತ್ತು ದೂರದೃಷ್ಟಿಯ ಸಮರ್ಥ ನಾಯಕತ್ವವನ್ನು ಮೋದಿಯವರು ಕೊಡುತ್ತಿದ್ದು, ಅದನ್ನು ಜನರೂ ಅರ್ಥ ಮಾಡಿಕೊಂಡಿದ್ದಾರೆ. ಮತ್ತೊಮ್ಮೆ ಮೋದಿ ಅವರು ಪ್ರಧಾನಿ ಆಗಬೇಕೆಂಬ ಆಶಯ, ಅಭಿಲಾಶೆ ಜನರದ್ದು. ಅವರಿಗೆ ಮತ್ತೆ ಅಧಿಕಾರ ಲಭಿಸಲಿದೆ ಎಂದು ರವಿಕುಮಾರ್​ ವಿಶ್ವಾಸ ವ್ಯಕ್ತಪಡಿಸಿದರು.

ಬಜೆಟ್​ ವಿರುದ್ಧ ಅಸಮಾಧಾನ : ರಾಜ್ಯದಲ್ಲಿ ಸದನ ಪ್ರಾರಂಭವಾಗಿ 10 ಹನ್ನೆರಡು ದಿನಗಳಾಗಿವೆ. ಕಾಂಗ್ರೆಸ್‍ನವರು, ಸಿಎಂ ಸಿದ್ದರಾಮಯ್ಯ ರಾಜ್ಯಪಾಲರ ಕುರಿತು, ಬಜೆಟ್ ವಿಚಾರದಲ್ಲಿ ಮಾತನಾಡುತ್ತಿಲ್ಲ. ಅವರು ಮುಂದಿನ ಸಂಸತ್ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ತಮಗೆ ಶೇ 41 ರಷ್ಟು ಮತ ಪ್ರಮಾಣ ಬಂದಿದೆ ಎಂದು ಹೇಳುತ್ತಿದ್ದಾರೆ. ಮತ ಗಳಿಕೆಗೂ ಬಜೆಟ್‍ಗೂ ಏನು ಸಂಬಂಧ ಎಂದು ಪ್ರಶ್ನಿಸಿದರು.

ಒಳ್ಳೆಯ ಬಜೆಟ್ ಕೊಟ್ಟಿದ್ದೀರಾ ಎಂದು ಕಾಂಗ್ರೆಸ್‍ನವರನ್ನು ಕೇಳಿದ ರವಿಕುಮಾರ್​, ಅಲ್ಪಸಂಖ್ಯಾತರ ಪರವಾಗಿರುವ ಬಜೆಟನ್ನು ನೀವು ಕೊಟ್ಟಿದ್ದೀರಿ. ಯಾವುದೇ ಗುಡಿ ಗೋಪುರಗಳು, ಸಾಧು-ಸಂತರು, ಸ್ವಾಮೀಜಿಗಳು, ವ್ಯಾಪಾರಿ ವರ್ಗ, ಕುಶಲಕರ್ಮಿಗಳಿಗೆ ನೀವೇನು ಬಜೆಟ್‍ನಲ್ಲಿ ನಯಾಪೈಸೆ ತೆಗೆದು ಇಟ್ಟಿಲ್ಲ. ಮದ್ಯಪ್ರಿಯರಿಗೆ ವಿಪರೀತ ತೆರಿಗೆ ಹೇರಿದ್ದೀರಿ. ಇದರ ಬಗ್ಗೆ ಸಿದ್ದರಾಮಯ್ಯ ಮಾತನಾಡುತ್ತಿಲ್ಲ. ನಾವು ಸಂಸತ್ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ಭಾಷಣ ಮಾಡುತ್ತಾರೆ. ಸಂಸತ್ ಚುನಾವಣೆಯಲ್ಲಿ ಸೀಟು ಗೆಲ್ಲುವ ಅಜೆಂಡ ಫಿಕ್ಸ್ ಮಾಡಿದ್ದಾರೆ ಎಂದು ರವಿಕುಮಾರ್​ ಆರೋಪಿಸಿದರು.

ಆಡಳಿತ ಯಂತ್ರವನ್ನು ಲೋಕಸಭಾ ಚುನಾವಣೆಗೆ ಸಿದ್ಧ ಮಾಡುತ್ತಿದ್ದಾರೆ. ಭಾರತ ನಂಬರ್ ಒನ್ ಮಾಡುವ ಉದ್ದೇಶ ಇವರದ್ದಲ್ಲ. ಜನರಿಗೆ ಉದ್ಯೋಗ ನೀಡುವ ಬಜೆಟ್ ಕೊಟ್ಟಿಲ್ಲ. ಜನರ ಉದ್ಯೋಗ ಕಸಿಯುವ ಬಜೆಟ್ ಇದು ಎಂದು ಆರೋಪಿಸಿದರು. ಮಹಿಳೆಯರಿಗೆ ಉಚಿತ ಪ್ರಯಾಣ, ಪ್ರವಾಸ ಮಾಡಲಿ. ಅಡ್ಡಿ ಇಲ್ಲ. ಆದರೆ, ಕಾರ್ಮಿಕರಿಗೆ- ಕೃಷಿ ವರ್ಗಕ್ಕೆ ಏನು ಮಾಡಿದ್ದೀರಿ? ನೀರಾವರಿಗೆ ಎಷ್ಟು ಹಣ ಕೊಟ್ಟಿದ್ದೀರಿ? ರೈತರಿಗೆ ಏನು ಕೊಡುಗೆ ನೀಡಿದ್ದೀರಿ? ರಸ್ತೆಗಳ ಅಭಿವೃದ್ಧಿಗೆ ಏನು ಮಾಡುತ್ತೀರಿ? ಎಂದು ಪ್ರಶ್ನೆಗಳನ್ನು ರವಿಕುಮಾರ್​ ಮುಂದಿಟ್ಟರು.

ರಾಜ್ಯದಲ್ಲಿ ಸರಿಯಾಗಿ ಮುಂಗಾರು ಆಗದೆ ಮಳೆ ಇಲ್ಲ. ಉದ್ಯೋಗ ನೀಡಿಕೆಗೆ ಏನು ನಿಮ್ಮ ಯೋಜನೆ? ಸಂಕಷ್ಟದಲ್ಲಿರುವ ಖಾಸಗಿ ಬಸ್, ಆಟೋ ರಿಕ್ಷಾ, ಕ್ಯಾಬ್‍ನವರಿಗೆ ಏನು ಮಾಡುತ್ತೀರಿ? ಸಣ್ಣ, ಗೃಹ ಕೈಗಾರಿಕೆಗಳ ಪುನಶ್ಚೇತನಕ್ಕೆ ಏನು ಮಾಡುವಿರಿ? 6 ಲಕ್ಷಕ್ಕೂ ಹೆಚ್ಚು ಉದ್ಯೋಗ ಭರ್ತಿ ಮಾಡಬೇಕಿದೆ. ಇವ್ಯಾವುದರ ಬಗ್ಗೆಯೂ ಗಮನ ಕೊಡುತ್ತಿಲ್ಲ. ಸರ್ಕಾರದ ಹಣವನ್ನು ಕಾಂಗ್ರೆಸ್ ಪಾರ್ಟಿಯ ಪಂಚ ಗ್ಯಾರಂಟಿ ಯೋಜನೆಗಳಿಗೆ ಉಪಯೋಗಿಸುತ್ತಿರುವುದು ಜನರಿಗೆ ಅರ್ಥವಾಗಿದೆ. ಸಂಸತ್ ಚುನಾವಣೆಯಲ್ಲಿ ಜನರು ಕಾಂಗ್ರೆಸ್‍ಗೆ ಪಾಠ ಕಲಿಸುವುದು ನಿಶ್ಚಿತ ಎಂದು ರವಿಕುಮಾರ್​ ಭವಿಷ್ಯ ನುಡಿದರು.

ಇದನ್ನೂ ಓದಿ : ಜು.18ರ ಬಳಿಕ ಕುಮಾರಸ್ವಾಮಿ ಅವರೇ ವಿರೋಧ ಪಕ್ಷದ ನಾಯಕರಾದರೆ ಅಚ್ಚರಿ ಇಲ್ಲ: ಆಯನೂರು ಮಂಜುನಾಥ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.