ETV Bharat / state

ನನ್ನ ಮಂಡಿ ನೋವಿಗಿಂತ ಜನರ ಕಷ್ಟಗಳ ಬಗ್ಗೆ ನೋವಿದೆ.. ಕಾಲ ಕೂಡಿ ಬರುತ್ತೆ, ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಬರುತ್ತದೆ: ಹೆಚ್ ಡಿ ದೇವೇಗೌಡ

author img

By

Published : Jul 2, 2023, 10:39 PM IST

ನನ್ನ ಆರೋಗ್ಯದ ಬಗ್ಗೆ ಯಾರಿಗೂ ಆತಂಕ ಬೇಡ. ಕೊಂಚ ಮಂಡಿ ನೋವಿದೆ. ಅದಕ್ಕಿಂತಲೂ ಜನರು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ನೋವಿದೆ ಎಂದು ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡರು ತಿಳಿಸಿದ್ದಾರೆ.

ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡರು
ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡರು

ಬೆಂಗಳೂರು: ಕಾಲವೂ ಕೂಡಿ ಬರುತ್ತದೆ. ರಾಜ್ಯದಲ್ಲಿ ಜೆಡಿಎಸ್ ಸರ್ಕಾರವೂ ಬರುತ್ತದೆ. ಪಕ್ಷದಲ್ಲಿ ನಿಷ್ಠರಾಗಿರುವ, ಉಳಿಯುವ ಎಲ್ಲರಿಗೂ ಅಧಿಕಾರ, ಜನರ ಸೇವೆ ಮಾಡುವ ಅವಕಾಶ ಸಿಗುತ್ತದೆ ಎಂದು ಮಾಜಿ ಪ್ರಧಾನಮಂತ್ರಿ ಹೆಚ್ ಡಿ ದೇವೇಗೌಡರು ಹೇಳಿದ್ದಾರೆ.

ವಿಧಾನಮಂಡಲ ಅಧಿವೇಶನ, ಪಕ್ಷದ ಬಲವರ್ಧನೆ, ತಾಲೂಕು, ಜಿಲ್ಲಾ ಹಾಗೂ ರಾಜ್ಯ ಘಟಕಗಳ ಪುನಾರಚನೆ, ನೂತನ ಕೋರ್ ಕಮಿಟಿ ರಚನೆ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಯಾರೂ ಎದೆಗುಂದಬೇಕಿಲ್ಲ. ಪಕ್ಷ ಕಟ್ಟಿ. ಸೋಲಿನಿಂದ ಹತಾಶರಾಗುವುದು ಬೇಡ. ಛಲವಿದ್ದರೆ ಗೆಲುವು ಖಚಿತ. ಅಧೈರ್ಯವೇ ಅವಸಾನಕ್ಕೆ ನಾಂದಿ ಆಗುತ್ತದೆ. ಎಚ್ಚರ ಇರಲಿ ಎಂದು ತಿಳಿಸಿದರು.

ರಾಜಕಾರಣ ಗೊಂದಲಮಯವಾಗಿದೆ: ಈ ಪಕ್ಷವನ್ನು ಉಳಿಸಲೇಬೇಕು, ಉಳಿಸುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡೋಣ. ಇವತ್ತಿನ ರಾಜ್ಯ ಮತ್ತು ದೇಶದ ರಾಜಕಾರಣ ಗೊಂದಲಮಯವಾಗಿದೆ. ನಾವು ಜನನಿಷ್ಠರಾಗಿ ಅವರ ಜತೆ ನಿಲ್ಲೋಣ ಎಂದು ದೇವೇಗೌಡರು ಕರೆ ನೀಡಿದರು.

ರಾಷ್ಟ್ರೀಯ ಪಕ್ಷಗಳ ದೊಡ್ಡ ದೊಡ್ಡ ನಾಯಕರಲ್ಲಿ ಈಗ ಅಳುಕಿದೆ. ಚುನಾವಣೆಯ ಬಗ್ಗೆ ಭಯವಿದೆ. ನಮಗೆ ಅಂತಹ ಆತಂಕ, ಭಯ ಇಲ್ಲ. ಯಾವುದೇ ತಪ್ಪು ನಮ್ಮಿಂದ ಆಗಿಲ್ಲ. ಅವಕಾಶ ಸಿಕ್ಕಿದಾಗಲೆಲ್ಲ ಜನರ ಪರವಾಗಿಯೇ ಹೋರಾಟ ಮಾಡಿದ್ದೇವೆ ಎಂದು ಅವರು ಹೇಳಿದರು.

ತಮ್ಮ ಭಾಷಣದಲ್ಲಿ ಕೆಲ ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಉಲ್ಲೇಖ ಮಾಡಿದ ಮಾಜಿ ಪ್ರಧಾನಿಗಳು, ಜನರು ಅನುಭವಿಸುತ್ತಿರುವ ಸಂಕಷ್ಟಗಳ ಬಗ್ಗೆ ಮಾಧ್ಯಮಗಳು ನಿರಂತರವಾಗಿ ವರದಿ ಮಾಡುತ್ತಿವೆ. ಪತ್ರಿಕೆಗಳನ್ನು ಗಂಭೀರವಾಗಿ ಓದಿ, ಸುದ್ದಿ ಮಾಧ್ಯಮಗಳನ್ನು ಗಮನಿಸಿ. ಜನರ ಸಮಸ್ಯೆಗಳನ್ನು ಸರ್ಕಾರದ ಮುಖಕ್ಕೆ ಹಿಡಿಯಿರಿ. ಹೋರಾಟದಲ್ಲಿ ಅಂಜಿಕೆ ಏಕೆ? ಜನರ ಪರವಾಗಿ ನಿಲ್ಲುವುದಕ್ಕೆ ಅಳುಕು ಏಕೆ? ಎಂದು ನೂತನ ಶಾಸಕರನ್ನು ಮಾಜಿ ಪ್ರಧಾನಿಗಳು ಹುರಿದುಂಬಿಸಿದರು.

ನನ್ನ ಆರೋಗ್ಯದ ಬಗ್ಗೆ ಯಾರಿಗೂ ಆತಂಕ ಬೇಡ. ಕೊಂಚ ಮಂಡಿ ನೋವು ಇದೆ. ಅದಕ್ಕಿಂತ ಜನರು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ನನಗೆ ಹೆಚ್ಚು ನೋವಿದೆ. ಯಾವುದೇ ಸಂದರ್ಭದಲ್ಲಿ ಹೋರಾಟ ಮಾಡುವ ಛಲ ನನ್ನಲ್ಲಿದೆ. ನಿಮ್ಮೆಲ್ಲರ ಜತೆ ನಾನಿದ್ದೇನೆ ಎಂದು ಹೇಳಿದರು. ಸಮಾನ ನಾಗರೀಕ ಸಂಹಿತೆ ಬಗ್ಗೆ ದೇಶದ ಉದ್ದಗಲಕ್ಕೂ ಚರ್ಚೆ ನಡೆಯುತ್ತಿದೆ. ಸಂಹಿತೆಯ ಕರಡು ಮೊದಲು ಹೊರಬರಲಿ. ಆಮೇಲೆ ಚರ್ಚೆ ನಡೆಸಿ, ನಮ್ಮ ನಿಲುವು ಏನು ಎಂಬುದನ್ನು ತಿಳಿಸೋಣ ಎಂದರು.

ಪದಾಧಿಕಾರಿಗಳ ಬದಲಾವಣೆ : ಇನ್ನೊಂದು ತಿಂಗಳಲ್ಲಿ ರಾಜ್ಯ, ಜಿಲ್ಲಾ ಮತ್ತು ತಾಲೂಕು ಘಟಕಗಳ ಪದಾಧಿಕಾರಿಗಳನ್ನು ಬದಲಾವಣೆ ಮಾಡಲಾಗುವುದು ಎಂದು ಸಭೆಯಲ್ಲಿ ಭಾಗಿಯಾಗಿದ್ದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.

ಪಕ್ಷವನ್ನು ನಾವು ಬಲಿಷ್ಠವಾಗಿ ಕಟ್ಟಬೇಕು. ಕ್ರಿಯಾಶೀಲರಿಗೆ ಅವಕಾಶ ಕೊಡಬೇಕು. ಅದಕ್ಕೆ ಅಗತ್ಯವಾದ ಎಲ್ಲ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರದ ವಿರುದ್ಧ ವಿಷಯಾಧಾರಿತವಾಗಿ ಮಾತ್ರ ನಾವು ಹೋರಾಟ ಮಾಡುತ್ತೇವೆ. ವಿರೋಧ ಮಾಡಬೇಕು ಎನ್ನುವಂತೆ ಮಾಡುವುದು ಬೇಡ. ಗ್ಯಾರಂಟಿಗಳ ಬಗ್ಗೆ ನಮ್ಮ ತಕರಾರಿಲ್ಲ. ಅವನ್ನು ಇನ್ನೂ ಚೆನ್ನಾಗಿ ಜಾರಿ ಮಾಡಿ. ಅದಕ್ಕೆ ಗ್ಯಾರಂಟಿಗಳ ಅಡ್ಡ ಪರಿಣಾಮದಿಂದ ಕಷ್ಟಕ್ಕೆ ಸಿಲುಕಿದವರನ್ನೂ ಗಮನಿಸಿಕೊಳ್ಳಿ ಎಂದು ಒತ್ತಾಯ ಮಾಡೋಣ ಎಂದರು.

ಸೋತವರ ಕಷ್ಟ ಏನು ಎಂದು ನಾನು ಬಲ್ಲೆ. ಅವರ ಜತೆ ಪಕ್ಷ ಬಲವಾಗಿ ನಿಲ್ಲುತ್ತದೆ. ಇದರಲ್ಲಿ ಸಂಶಯ ಬೇಡ. ಚುನಾವಣೆ ಯಾವಾಗ ಬರುತ್ತೋ ಬಿಡುತ್ತೋ ಎನ್ನುವ ಚರ್ಚೆ ಬೇಡ. ಆದರೆ, ಪಕ್ಷವನ್ನು ಈಗಿನಿಂದಲೇ ಕಟ್ಟುವ ಕೆಲಸ ಮಾಡೋಣ. ಪಕ್ಷದ ಶಾಸಕರು, ವಿಧಾನ ಪರಿಷತ್ ಸದಸ್ಯರು, ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು, ಮಾಜಿ ಶಾಸಕರು, ಜಿಲ್ಲಾ ಘಟಕಗಳ ಅಧ್ಯಕ್ಷರು ಸೇರಿದಂತೆ ಅನೇಕರು ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಇದನ್ನೂ ಓದಿ: ಅಧಿಕಾರಿಗಳ ವರ್ಗಾವಣೆ ದಂಧೆಗಿಳಿದ ರಾಜ್ಯ ಸರ್ಕಾರ: ಹೆಚ್​.ಡಿ.ಕುಮಾರಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.