ETV Bharat / state

ಬಿಜೆಪಿ ಬಿ ಟೀಮ್ ವಿಚಾರ : ವಿಧಾನಸಭೆಯಲ್ಲಿ ಜೆಡಿಎಸ್‍-ಕಾಂಗ್ರೆಸ್ ಸದಸ್ಯರ ನಡುವೆ ವಾಕ್ಸಮರ

author img

By

Published : Mar 9, 2022, 5:45 PM IST

ವಿಧಾನಸಭೆ ಕಲಾಪದಲ್ಲಿ ಇಂದು ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿಯವರು ಜೆಡಿಎಸ್​​ ಬಿಜೆಪಿ ಪಕ್ಷದ 'ಬಿ' ಟೀಮ್​ ಎಂಬ ಟೀಕೆ ವಿಚಾರವಾಗಿ ಪ್ರಸ್ತಾಪಿಸಿದರು. ಈ ವೇಳೆ ಕಾಂಗ್ರೆಸ್​ ಮತ್ತು ಜೆಡಿಎಸ್​​ ಸದಸ್ಯರ ನಡುವೆ ವಾಗ್ವಾದ ನಡೆಯಿತು.

JDS - Congress members clash in Session
ವಿಧಾನಸಭೆಯಲ್ಲಿ ಜೆಡಿಎಸ್‍- ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ

ಬೆಂಗಳೂರು : ಜೆಡಿಎಸ್‍ ಬಿಜೆಪಿಯ ಬಿ ಟೀಮ್ ಎಂಬ ಕಾಂಗ್ರೆಸ್ ಟೀಕೆ ವಿಚಾರವಾಗಿ ವಿಧಾನಸಭೆಯಲ್ಲಿ ಇಂದು ಜೆಡಿಎಸ್‍ ಹಾಗೂ ಕೈ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ವಿಧಾನಸಭೆಯಲ್ಲಿ ಜೆಡಿಎಸ್‍- ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ

ಬಜೆಟ್ ಮೇಲಿನ ಚರ್ಚೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮಾತನಾಡುತ್ತಿದ್ದರು. ಈ ವೇಳೆ ಕಾಂಗ್ರೆಸ್ ಪಕ್ಷದ ಉಪನಾಯಕ ಯು.ಟಿ.ಖಾದರ್, ನೀವು ಬಜೆಟ್ ಮೇಲೆ ಮಾತನಾಡುತ್ತಿದ್ದಾರೋ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರ ಬಗ್ಗೆ ಮಾತನಾಡುತ್ತಿದ್ದರೋ ಸ್ಪಷ್ಟಪಡಿಸಿ ಎಂದು ಕುಮಾರಸ್ವಾಮಿ ಅವರನ್ನು ಕೇಳಿದರು. ಆಗ ಜೆಡಿಎಸ್‍ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸದಸ್ಯರು ಎದ್ದು ನಿಂತು ಮಾತನಾಡಲು ಮುಂದಾದಾಗ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ಬಿಜೆಪಿ ಸದಸ್ಯರು ಕೂಡ ಆ ಸಂದರ್ಭದಲ್ಲಿ ಮಾತನಾಡಲು ಮುಂದಾದಾಗ ಮತ್ತಷ್ಟು ಗದ್ದಲ ಹೆಚ್ಚಾಯಿತು. ಈ ಹಂತದಲ್ಲಿ ಮಾತಮಾಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಪ್ರತಿಪಕ್ಷದ ನಾಯಕರು ಮಾತನಾಡುವಾಗ ಮುಖ್ಯಮಂತ್ರಿ ಮಂಡಿಸಿದ ಬಜೆಟ್‍ಗಿಂತ ತಾವು ಮಂಡಿಸಿದ್ದ ಬಜೆಟ್ ಬಗ್ಗೆ ಮಾತನಾಡುತ್ತಿದ್ದಾರೆ ಎಂಬ ಅನುಮಾನವಿತ್ತು. ಕುಮಾರಸ್ವಾಮಿಯವರು ಎರಡೂ ಬಜೆಟ್‍ಗಳ ಹೋಲಿಕೆ ಮಾಡಿ ಮಾತನಾಡುತ್ತಿದ್ದಾರೆ. ಪ್ರತಿಪಕ್ಷದ ನಾಯಕರು ಮಾಡಿರುವ ಭಾಷಣಕ್ಕೆ ಉತ್ತರ ಹೇಳಲು ಮುಖ್ಯಮಂತ್ರಿಗೆ ಎರಡು ದಿನ ಬೇಕಾಗುತ್ತದೆ ಎಂದರು.

ಕಾಂಗ್ರೆಸ್​​-ಜೆಡಿಎಸ್​​ ಸದಸ್ಯರ ನಡುವೆ ವಾಗ್ವಾದ : ಆಗ ಖಾದರ್ ಅವರು ನಿಮ್ಮನ್ನು ಅವರು ಸಮರ್ಥನೆ ಮಾಡುತ್ತಾರೆ. ಅವರನ್ನು ನೀವು ಸಮರ್ಥಿಸಿಕೊಳ್ಳುತ್ತೀರಿ. ಈ ರೀತಿಯಾದರೆ ಬಿ ಟೀಮ್ ಎಂದು ಹೇಳುವುದಿಲ್ಲವೆ ಎಂದು ಪ್ರಶ್ನಿಸಿದರು. ಆಗ ಜೆಡಿಎಸ್ ಶಾಸಕರು ಕೆರಳಿ ಆಕ್ಷೇಪ ವ್ಯಕ್ತಪಡಿಸಿದರು. ಪ್ರತಿಯಾಗಿ ಕಾಂಗ್ರೆಸ್ ಸದಸ್ಯರು ಎದ್ದು ನಿಂತು ಮಾತನಾಡಲು ಮುಂದಾದರು. ಮತ್ತೆ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿ ಉಭಯ ಸದಸ್ಯರ ನಡುವೆ ಮಾತಿನ ವಾಗ್ವಾದ ನಡೆಯಿತು. ಹೀಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರ ನಡುವೆ ಪದೇ ಪದೇ ಮಾತಿನ ಚಕಮಕಿ ಹಾಗೂ ವಾಗ್ವಾದ ನಡೆಯುತ್ತಿದ್ದರೆ, ಆಡಳಿತಾರೂಢ ಬಿಜೆಪಿ ಶಾಸಕರು ಜೆಡಿಎಸ್ ಪರವಾಗಿ ನಿಂತರು.

ಆರ್​ಎಸ್​ಎಸ್​​​ ಬಜೆಟ್: ಮುಂದುವರೆದು ಮಾತನಾಡಿದ ಕುಮಾರಸ್ವಾಮಿ, ನಮ್ಮನ್ನು ರಾಷ್ಟ್ರೀಯ ಪಕ್ಷದ ಬಿ ಟೀಮ್ ಎಂಬ ಆರೋಪವನ್ನು ನಿತ್ಯ ಎದುರಿಸಬೇಕಾಗಿದೆ. ಪ್ರತಿಪಕ್ಷದ ನಾಯಕರು ಆರ್ಥಿಕ ಶಿಸ್ತು ದಾರಿ ತಪ್ಪಿರುವ ಬಗ್ಗೆ ಹಾಗೂ ಸಾಲದ ಪ್ರಮಾಣ ಹೆಚ್ಚಾಗಿರುವ ಬಗ್ಗೆ ಎರಡು ದಿನಗಳ ಕಾಲ ಮಾತನಾಡಿದ್ದಾರೆ ಎಂದು ಹೇಳುತ್ತಾ, 2014-15 ರಿಂದ ಇಲ್ಲಿಯವರೆಗೆ ಸಾಲದ ಪ್ರಮಾಣದ ಏರಿಕೆಯಾಗುತ್ತಿರುವುದನ್ನು ಪ್ರಸ್ತಾಪಿಸಿದರು. ಪ್ರತಿಪಕ್ಷದ ನಾಯಕರು ಆರ್​ಎಸ್​ಎಸ್​​​ ಬಜೆಟ್ ಎಂದು ಟೀಕಿಸಿದ್ದಾರೆ ಎಂಬುದನ್ನು ನಮೂದಿಸಿದರು.

ಹೆಚ್​ಡಿಕೆ ಗರಂ: ಪ್ರತಿಪಕ್ಷದ ನಾಯಕರು ಮಾಡಿದ ಭಾಷಣವನ್ನು ತಾಳ್ಮೆಯಿಂದ ಕೇಳಿದ್ದೇವೆ. ಎರಡು ದಿನದ ಚರ್ಚೆಯನ್ನು ನೋಡಿದರೆ ಗೊತ್ತಾಗುತ್ತದೆ. ಆಯವ್ಯಯದ ಬಗ್ಗೆ ಚರ್ಚೆಯಾಗಬೇಕು. ಆರ್​ಎಸ್​ಎಸ್​​ ಬಜೆಟ್ ಎಂದು ರಾಜಕೀಯ ಭಾಷಣವನ್ನೇ ಮಾಡಿದ್ದಾರೆ. ಆ ಸಂದರ್ಭದಲ್ಲಿ ಬಿಜೆಪಿ ಶಾಸಕರು ಮೇಜು ಕುಟ್ಟಿ ಸ್ವಾಗತಿಸಿದರು. ಈ ಹಂತದಲ್ಲಿ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಮಾತನಾಡಲು ಮುಂದಾದಾಗ ಮತ್ತೆ ಗದ್ದಲ ಉಂಟಾಯಿತು. ಈ ಹಂತದಲ್ಲಿ ಕೆರಳಿದ ಕುಮಾರಸ್ವಾಮಿ, ನಾನು ಏನು ಮಾತನಾಡಬೇಕು ಎಂಬುದು ಗೊತ್ತಿದೆ. ಮಾತನಾಡುವುದು ನನ್ನ ಹಕ್ಕು ನಿಮ್ಮಿಂದ ಹೇಳಿಸಿಕೊಳ್ಳಬೇಕಿಲ್ಲ ಎಂದು ಗರಂ ಆದರು.

ಪರಿಸ್ಥಿತಿ ತಿಳಿಗೊಳಿಸಿದ ಸಿಎಂ ಬೊಮ್ಮಾಯಿ: ಮತ್ತೆ ಯು.ಟಿ. ಖಾದರ್ ಬಜೆಟ್ ಬಗ್ಗೆ ಮಾತನಾಡಲಿ ಎಂದು ಹೇಳುತ್ತಿದ್ದಂತೆ ಕೆರಳಿದ ಜೆಡಿಎಸ್ ಶಾಸಕರು ಏರಿದ ಧ್ವನಿಯಲ್ಲಿ ಪ್ರತಿರೋಧವೊಡ್ಡಲು ಮುಂದಾದರು. ಬಿಜೆಪಿ ಶಾಸಕರು ಇದೇ ವೇಳೆ ಎದ್ದು ನಿಂತರು. ಆಗ ಸಚಿವ ಮಾಧುಸ್ವಾಮಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವರ ವಿಚಾರ ಪ್ರಸ್ತಾಪ ಮಾಡುತ್ತೀರಿ. ಮಾಜಿ ಸಿಎಂ ಎಸ್.ಆರ್.ಬೊಮ್ಮಾಯಿ ಅವರ ವಿಚಾರವನ್ನು ಪ್ರಸ್ತಾಪಿಸಿದ್ದೀರಿ. ಎಲ್ಲರಿಗೂ ಮಾತನಾಡುವ ಹಕ್ಕಿದೆ. ಏಕೆ ಅಡ್ಡಿ ಮಾಡಬೇಕು ಎಂದು ಹೇಳಿದರು. ಈ ಹಂತದಲ್ಲೂ ಗದ್ದಲ ಹೆಚ್ಚಾಯಿತು. ಉಪಸಭಾಧ್ಯಕ್ಷ ಆನಂದ್ ಮಾಮನಿ ಅವರು ಪದೇ ಪದೇ ಸಮಾಧಾನಪಡಿಸಲು ಯತ್ನಿಸುತ್ತಿದ್ದರು. ಈ ಹಂತದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಎದ್ದು ನಿಂತು ಮಾತನಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಇದನ್ನೂ ಓದಿ: ವಿಧಾನಸಭೆ ಕಲಾಪಕ್ಕೆ ಸಚಿವರು, ಅಧಿಕಾರಿಗಳು ಗೈರು: ಸ್ಪೀಕರ್‌ ಗರಂ, ಜೆಡಿಎಸ್‌ನಿಂದ ಸಭಾತ್ಯಾಗದ ಎಚ್ಚರಿಕೆ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.