ETV Bharat / state

ಜೆಡಿಎಸ್​​ 2ನೇ ಪಟ್ಟಿ: ಹಾಸನದಲ್ಲಿ ಭವಾನಿ ಬದಲು ಸ್ವರೂಪ್​, ಕಡೂರಲ್ಲಿ ದತ್ತಗೆ ಟಿಕೆಟ್​

author img

By

Published : Apr 14, 2023, 6:49 PM IST

Updated : Apr 14, 2023, 9:00 PM IST

ರಾಜ್ಯ ವಿಧಾನಸಭೆ ಚುನಾವಣೆಗೆ ಜೆಡಿಎಸ್​​ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಆಗಿದೆ. 49 ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದೆ.

jds-2nd-list-of-candidates-announced
49 ಅಭ್ಯರ್ಥಿಗಳ ಜೆಡಿಎಸ್​​ ಎರಡನೇ ಪಟ್ಟಿ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಿದೆ. ಅದರಲ್ಲೂ ಬಹುನಿರೀಕ್ಷಿತ ಹಾಸನ ಕ್ಷೇತ್ರದ ಟಿಕೆಟ್ ಘೋಷಿಸಲಾಗಿದೆ. ಹೆಚ್.ಡಿ. ಕುಮಾರಸ್ವಾಮಿ ಬೆಂಬಲಿತ ಹೆಚ್.ಪಿ. ಸ್ವರೂಪ್ ಗೆ ಟಿಕೆಟ್ ನೀಡಲಾಗಿದೆ. ಜೆಡಿಎಸ್ 49 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು.

ಮಾಜಿ ಸಿಎಂ ಕುಮಾರಸ್ವಾಮಿ, ಹೆಚ್.ಡಿ. ರೇವಣ್ಣ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಜೊತೆಗೂಡಿ ಜೆ.ಪಿ. ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿ ನಡೆಸಿ ಅಭ್ಯರ್ಥಿಗಳ ಘೋಷಣೆ ಮಾಡಿದರು. ಈ ಮೂಲಕ ಹಾಸನ ಕ್ಷೇತ್ರದ ಟಿಕೆಟ್ ವಿಚಾರವಾಗಿ ಭವಾನಿ ರೇವಣ್ಣ ಮತ್ತು ಸ್ವರೂಪ್ ನಡುವೆ ಇದ್ದ ಜಟಾಪಟಿ ಅಂತ್ಯವಾಗಿದೆ. ಕಳೆದ ಒಂದು ತಿಂಗಳಿಂದ ಜೆಡಿಎಸ್ ಹಾಸನ ಟಿಕೆಟ್ ವಿಚಾರ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಭವಾನಿ ರೇವಣ್ಣ ಹಾಸನ ಟಿಕೆಟ್​ಗೆ ಹಠ ಹಿಡಿದಿದ್ದರು. ಇತ್ತ ಹೆಚ್.ಡಿ. ರೇವಣ್ಣರೂ ತಮ್ಮ ಪತ್ನಿಗೆ ಹಾಸನ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದರು. ಇತ್ತ ಮಾಜಿ ಸಿಎಂ ಕುಮಾರಸ್ವಾಮಿ ಹಾಸನ ಟಿಕೆಟ್ ಪಕ್ಷದ ಕಾರ್ಯಕರ್ತ ಸ್ಚರೂಪ್​ಗೆ ನೀಡಲು ಬಿಗಿ ಪಟ್ಟು ಹಿಡಿದಿದ್ದರು. ಇದೀಗ ಕೊನೆಗೂ ಜೆಡಿಎಸ್ ಹಾಸನ ಟಿಕೆಟ್​ ಕುತೂಹಲಕ್ಕೆ ತೆರೆ ಬಿದ್ದಿದೆ.

ಹೆಚ್​ಡಿಕೆಗೆ ಮೇಲುಗೈ: ಕೊನೆಗೂ ಹೈವೋಲ್ಟೇಜ್ ಸಭೆ ಬಳಿಕ ಹೆಚ್.ಡಿ. ಕುಮಾರಸ್ವಾಮಿ ಬೆಂಬಲಿತ ಅಭ್ಯರ್ಥಿ ಸ್ವರೂಪ್​ಗೆ ಟಿಕೆಟ್ ನೀಡಲಾಗಿದೆ. ಆ ಮೂಲಕ ದೇವೇಗೌಡರ ಕುಟುಂಬದಲ್ಲಿ ಉಂಟಾದ ಜಟಾಪಟಿಯಲ್ಲಿ ಕುಮಾರಸ್ವಾಮಿ ಮೇಲುಗೈ ಸಾಧಿಸಿದ್ದಾರೆ. ದೇವೇಗೌಡರ ಮ್ಯಾರಥಾನ್ ಮಧ್ಯಸ್ಥಿಕೆ ಸಭೆ ಬಳಿಕ ಭವಾನಿ ರೇವಣ್ಣ ಹಾಗೂ ರೇವಣ್ಣ ಹಾಸನ ಟಿಕೆಟ್ ಬಿಟ್ಟು ಕೊಡಲು ಒಪ್ಪಿಕೊಂಡಿದ್ದಾರೆ.

ವೈ.ಎಸ್.ವಿ. ದತ್ತಾಗೆ ಕಡೂರು ಟಿಕೆಟ್: ಕಡೂರು ಟಿಕೆಟ್ ಮೇಲೆ ಕಣ್ಣಿಟ್ಟು ಕಾಂಗ್ರೆಸ್ ಸೇರಿದ್ದ ವೈಎಸ್​ವಿ ದತ್ತಾ ಕಾಂಗ್ರೆಸ್ ಟಿಕೆಟ್ ವಂಚಿತರಾಗಿದ್ದರು. ಇತ್ತ ತಮ್ಮ ಪತ್ನಿಗೆ ಟಿಕೆಟ್ ನೀಡಲು ಸಾಧ್ಯವಾಗದೇ ಮುನಿಸಿಕೊಂಡಿದ್ದ ಹೆಚ್.ಡಿ.ರೇವಣ್ಣರನ್ನು ಸಮಾಧಾನಪಡಿಸಲು ಅವರ ಒತ್ತಾಯದ ಮೇರೆಗೆ ದತ್ತಾಗೆ ಕಡೂರು ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಆ ಮೂಲಕ ರೇವಣ್ಣರನ್ನು ಸಮಾಧಾನಪಡಿಸಲಾಗಿದೆ.

ಅರಸೀಕೆರೆ ಬಿಟ್ಟು ಹಾಸನ ಜಿಲ್ಲೆಯ 6 ಕ್ಷೇತ್ರಗಳ ಟಿಕೆಟ್ ಅನೌನ್ಸ್: ಹೆಚ್.ಡಿ.ರೇವಣ್ಣರ ಪಾರುಪತ್ಯದ ಹಾಸನ ಜಿಲ್ಲೆಯ ಒಂದು ಕ್ಷೇತ್ರ ಅರಸೀಕೆರೆ ಬಿಟ್ಟು ಆರೂ ಕ್ಷೇತ್ರಗಳ ಟಿಕೆಟ್ ಘೋಷಿಸಲಾಗಿದೆ. ಹೈ ಪ್ರೊಫೈಲ್ ಹಾಸನ ಕ್ಷೇತ್ರದ ಟಿಕೆಟ್ ಬಿಕ್ಕಟ್ಟು ಇತ್ಯರ್ಥವಾಗುತ್ತಿದ್ದ ಹಾಗೆಯೇ ಉಳಿದ ಆರೂ ಕ್ಷೇತ್ರಗಳಲ್ಲಿ ಟಿಕೆಟ್ ಘೋಷಿಸಲಾಗಿದೆ. ಎಲ್ಲ ಹಾಲಿ ಶಾಸಕರಿಗೆ ಜೆಡಿಎಸ್ ಟಿಕೆಟ್ ಘೋಷಿಸಿದೆ. ಹೊಳೆನರಸೀಪುರ ಹೆಚ್.ಡಿ.ರೇವಣ್ಣ, ಬೇಲೂರು ಕೆ.ಎಸ್.ಲಿಂಗೇಶ್, ಸಕಲೇಶಪುರ ಹೆಚ್.ಕೆ.ಕುಮಾರಸ್ವಾಮಿ, ಅರಕಲಗೂಡು ಎ.ಮಂಜು, ಹಾಸನ ಸ್ವರೂಪ್ ಪ್ರಕಾಶ್, ಶ್ರವಣಬೆಳಗೊಳ ಸಿ.ಎನ್.ಬಾಲಕೃಷ್ಣರಿಗೆ ಟಿಕೆಟ್ ಘೋಷಿಸಲಾಗಿದೆ.

ಅರಸೀಕೆರೆ ಟಿಕೆಟ್ ಘೋಷಣೆ ಬಾಕಿ ಉಳಿಸಿಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ ಅರಸೀಕೆರೆ ಟಿಕೆಟ್ ಆಕಾಂಕ್ಷಿಯಾಗಿದ್ದ ಯಡಿಯೂರಪ್ಪ ಆಪ್ತ ಎಸ್.ಆರ್.ಸಂತೋಷ್ ಬಿಜೆಪಿ ಟಿಕೆಟ್ ವಂಚಿತರಾಗಿದ್ದು, ಜೆಡಿಎಸ್ ಜೊತೆ ಸಂಪರ್ಕದಲ್ಲಿದ್ದಾರೆ. ಜೆಡಿಎಸ್ ವರಿಷ್ಠರ ಜೊತೆ ಈಗಾಗಾಲೇ ಮಾತುಕತೆ ನಡೆಸಿರುವ ಸಂತೋಷ್ ಜೆಡಿಎಸ್​ನತ್ತ ಕಣ್ಣಿಟ್ಟಿದ್ದಾರೆ. ಹೀಗಾಗಿ ಜೆಡಿಎಸ್ ಕ್ಷೇತ್ರವನ್ನು ಬಾಕಿ ಉಳಿಸಿದ್ದಾರೆ.

82 ಕ್ಷೇತ್ರಗಳ ಟಿಕೆಟ್ ಘೋಷಣೆ ಬಾಕಿ: ಜೆಡಿಎಸ್ ಈವರೆಗೆ 142 ಜೆಡಿಎಸ್ ಅಭ್ಯರ್ಥಿಗಳ ಟಿಕೆಟ್ ಘೋಷಣೆ ಮಾಡಿದೆ. ಇನ್ನೂ 82 ಕ್ಷೇತ್ರಗಳ ಟಿಕೆಟ್ ಘೋಷಣೆ ಮಾಡದೇ ಹಾಗೇ ಬಾಕಿ ಉಳಿಸಿಕೊಂಡಿದೆ. ಶೀಘ್ರದಲ್ಲೇ ಟಿಕೆಟ್ ಘೋಷಣೆ ಮಾಡುವುದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಟಿಕೆಟ್ ಘೋಷಣೆಯಾದ ಬಳಿಕ ಜೆಡಿಎಸ್ ಉಳಿದ ಕ್ಷೇತ್ರಗಳ ಟಿಕೆಟ್ ಘೋಷಣೆ ಮಾಡಲಿದೆ. ಟಿಕೆಟ್ ಕೈ ತಪ್ಪಿದ ಇತರೆ ಪಕ್ಷಗಳ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಕಾದು ನೋಡುವ ತಂತ್ರ ಅನುಸರಿಸಲಿದೆ.

ಜೆಡಿಎಸ್ ಸೇರಿದ ಎಂ.ಪಿ.ಕುಮಾರಸ್ವಾಮಿ: ಮೂಡಿಗೆರೆ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಹೆಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಯಾದರು. ಕುಮಾರಸ್ವಾಮಿ ಮೂಡಿಗೆರೆಯಿಂದ ಜೆಡಿಎಸ್ ಟಿಕೆಟ್ ನೊಂದಿಗೆ ಕಣಕ್ಕಿಳಿಯಲಿದ್ದಾರೆ. ಹಾಗಾಗಿ ಮೂಡಿಗೆರೆ ಕ್ಷೇತ್ರದ ಟಿಕೆಟ್ ಘೋಷಣೆ ಮಾಡಿಲ್ಲ.

ಇನ್ನುಳಿದಂತೆ ಅರಕಲಗೂಡಲ್ಲಿ ಎ. ಮಂಜುಗೆ ಟಿಕೆಟ್​ ಒಲಿದಿದೆ. ಸಿವಿಲ್‌ ನ್ಯಾಯಾಧೀಶ ಹುದ್ದೆ ತ್ಯಜಿಸಿ ಜೆಡಿಎಸ್​ ಸೇರಿದ್ದ ಸುಭಾಶ್ಚಂದ್ರ ರಾಠೋಡ್ ಅವರಿಗೆ ಚಿತ್ತಾಪುರ ಟಿಕೆಟ್​ ಸಿಕ್ಕಿದೆ. ಸವದತ್ತಿಯಲ್ಲಿ ಸೌರಬ್​ ಚೋಪ್ರಾ ಹಾಗೂ ಇತ್ತೀಚೆಗಷ್ಟೇ ಹಾನಗಲ್​ನಲ್ಲಿ ಕಾಂಗ್ರೆಸ್​ ತೊರೆದಿದ್ದ ಮನೋಹರ್​ ತಹಶಿಲ್ದಾರ್ ಅವರಿಗೆ ಅವಕಾಶ ನೀಡಲಾಗಿದೆ.​

ಜೆಡಿಎಸ್ ಎರಡನೇ ಪಟ್ಟಿ ಹೀಗಿದೆ:

ಕುಡುಚಿ ಕ್ಷೇತ್ರ - ಆನಂದ್ ಮಾಳಗಿ

ರಾಯಭಾಗ - ಪ್ರದೀಪ್ ಮಾಳಗಿ

ಸವದತ್ತಿ - ಸೌರಬ್ ಆನಂದ ಚೋಪ್ರಾ

ಅಥಣಿ - ಶಿಶಿಕಾಂತ್ ಪಡಸಲಗಿ

ಹುಬ್ಬಳ್ಳಿ ಧಾರವಾಡ ಪೂರ್ವ - ವೀರಭದ್ರಪ್ಪ

ಕಲಬುರಗಿ ಉತ್ತರ - ನಾಸೀರ್ ಉಸ್ತಾದ್

ಬಳ್ಳಾರಿ - ಅಲ್ಲಾಭಕ್ಷ್ ಅಲಿಯಾಸ್ ಮುನ್ನ

ಹಗರಿಬೊಮನಹಳ್ಳಿ - ಪರಮೇಶ್ವರಪ್ಪ

ಹರಪ್ಪನಹಳ್ಳಿ - ನೂರ್ ಅಹಮದ್

ಹಳಿಯಾಳ - ಎಸ್.ಎಲ್. ಘೋಟ್ನೇಕರ್

ಭಟ್ಕಳ - ನಾಗೇಂದ್ರ ನಾಯಕ್

ಶಿರಸಿ-ಸಿದ್ದಾಪುರ - ಉಪೇಂದ್ರ ಪೈ

ಯಲ್ಲಾಪುರ - ನಾಗೇಶ್ ನಾಯಕ್

ಚಿತ್ತಾಪುರ - ನಿವೃತ್ತ ನ್ಯಾಯಾಧೀಶ ಸುಭಾಷ್ ಚಂದ್ರ ರಾಥೋಡ್

ಮಂಗಳೂರು ದಕ್ಷಿಣ - ಸಮತಿ ಹೆಗಡೆ

ಜೇವರ್ಗಿ - ದೊಡ್ಡಪ್ಪಗೌಡ ಪಾಟೀಲ್​

ಕಾರವಾರ - ಚೈತ್ರಾ ಕೋಟೇಕಾರ್

ಕಡೂರು - ವೈಎಸ್​ವಿ ದತ್ತ

ಸಿರಗುಪ್ಪ - ಪರಮೇಶ್ವರ್ ನಾಯಕ್

ಕಂಪ್ಲಿ - ರಾಜು ನಾಯಕ್

ಕೊಳ್ಳೇಗಾಲ - ಪುಟ್ಟಸ್ವಾಮಿ

ಗುಂಡ್ಲುಪೇಟೆ - ಕಡಬೂರು ಮಂಜುನಾಥ್

ಕಾರ್ಕಳ - ಶ್ರೀಕಾಂತ್

ಉಡುಪಿ - ದಕ್ಷಿತ್ ಆರ್. ಶೆಟ್ಟಿ

ಬೈಂದೂರು - ಮನ್ಸೂರು ಇಬ್ರಾಹಿಂ

ಯಲಹಂಕ - ಮುನೇಗೌಡ

ಸರ್ಜಜ್ಞ ನಗರ - ಮಹಮ್ಮದ್ ಮುಸ್ತಾಪ್

ಯಶವಂತಪುರ - ಜವರಾಯ ಗೌಡ

ತಿಪಟೂರು - ಶಾಂತೇಶ್

ಹಾನಗಲ್ - ಮನೋಹರ್ ತಹಶಿಲ್ದಾರ್

ಹೊಳೆನರಸೀಪುರ - ಹೆಚ್​.ಡಿ. ರೇವಣ್ಣ

ಬೇಲೂರು - ಲಿಂಗೇಶ್

ಶ್ರವಣಬೆಳಗೊಳ - ಬಾಲಕೃಷ್ಣ

ಸಕಲೇಶಪುರ - ಹೆಚ್.ಕೆ. ಕುಮಾರಸ್ವಾಮಿ

ಮಯಾಕೊಂಡ - ಅನಂದಪ್ಪ

ಹಾಸನ ಕ್ಷೇತ್ರ - ಹೆಚ್​.ಪಿ. ಸ್ವರೂಪ್ ಪ್ರಕಾಶ್

ಇದನ್ನೂ ಓದಿ: ಕಮಲ ತೊರೆದು ಕೈ ಹಿಡಿದ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ

Last Updated : Apr 14, 2023, 9:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.