ETV Bharat / state

ರಸ್ತೆ ಗುಂಡಿ ಮುಚ್ಚಲು 36 ಗಂಟೆಗಳಲ್ಲಿ ಕಾಮಗಾರಿ ಕಾರ್ಯಾದೇಶ ನೀಡಿ: ಪಾಲಿಕೆಗೆ ಹೈಕೋರ್ಟ್ ತಾಕೀತು

author img

By

Published : Apr 20, 2022, 5:36 PM IST

ರಾಜಧಾನಿ ಬೆಂಗಳೂರಿನ ರಸ್ತೆಗಳ ನಿರ್ವಹಣೆ ಸಂಬಂಧ 2015ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಇದರ ವಿಚಾರಣೆ ನಡೆಸಿದ ಹೈಕೋರ್ಟ್,​ ರಸ್ತೆ ಗುಂಡಿ ಮುಚ್ಚಲು 36 ಗಂಟೆಗಳಲ್ಲಿ ಕಾಮಗಾರಿ ಕಾರ್ಯಾದೇಶ ನೀಡಿ ಎಂದು ಬಿಬಿಎಂಪಿಗೆ ಸೂಚಿಸಿದೆ.

High Court instructs to BBMP
ಪಾಲಿಕೆಗೆ ಹೈಕೋರ್ಟ್ ತಾಕೀತು

ಬೆಂಗಳೂರು: ನಗರದ ರಸ್ತೆ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಕಾರ್ಯಾದೇಶವನ್ನು ಮುಂದಿನ 36 ಗಂಟೆಗಳಲ್ಲಿ ನೀಡಬೇಕು ಎಂದು ಬಿಬಿಎಂಪಿಗೆ ಹೈಕೋರ್ಟ್‌ ಗಡುವು ನೀಡಿದೆ. ಅಲ್ಲದೆ, ಇನ್ನೂ ಯಾವ್ಯಾವ ನೆಪಗಳನ್ನು ಹೇಳುತ್ತೀರಿ, ಯಾರ ಮೇಲೆ ಹೊಣೆ ಹೊರಿಸುತ್ತೀರಿ ಎಂದು ಪಾಲಿಕೆಗೆ ಚಾಟಿ ಬೀಸಿದೆ. ರಾಜಧಾನಿ ಬೆಂಗಳೂರಿನ ರಸ್ತೆಗಳ ನಿರ್ವಹಣೆ ಸಂಬಂಧ 2015ರಲ್ಲಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಹೈಕೋರ್ಟ್​ ಇಂದು ನಡೆಸಿತು.

ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಹಾಗೂ ನ್ಯಾಯಮೂರ್ತಿ ಎಸ್‌.ಆರ್‌. ಕೃಷ್ಣ ಕುಮಾರ್‌ ಅವರಿದ್ದ ವಿಭಾಗೀಯ ಪೀಠ ಬಿಬಿಎಂಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು. ವಿಚಾರಣೆ ಆರಂಭವಾಗುತ್ತಿದ್ದಂತೆಯೇ ರಸ್ತೆ ಗುಂಡಿ ಮುಚ್ಚುವ ಕಂಪನಿ ಪರ ವಕೀಲರು ವಾದಿಸಿ, ‘ಪಾಲಿಕೆ ಈವರೆಗೂ ನಮಗೆ ಕಾರ್ಯಾದೇಶ ನೀಡಿಲ್ಲ. ಆದ್ದರಿಂದ, ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಆರಂಭಿಸಲು ಸಾಧ್ಯವಾಗಿಲ್ಲ. ಇನ್ನೂ ಪಾಲಿಕೆ ಜತೆ ಮಾತುಕತೆ ನಡೆದಿದೆ’ ಎಂದು ತಿಳಿಸಿದರು.

ಪಾಲಿಕೆ ಪರ ವಕೀಲರ ವಾದವೇನು?: ಪಾಲಿಕೆ ಪರ ವಕೀಲ ವಿ. ಶ್ರೀನಿಧಿ, ‘ಕೆಲ ವಿಚಾರಗಳಲ್ಲಿ ಲೆಕ್ಕಾಚಾರ ನಡೆಯುತ್ತಿದ್ದು, ಎಆರ್‌ಟಿಎಸ್‌ ಸಂಸ್ಥೆಯೇ ಎರಡು ದಿನ ಕಾಲಾವಕಾಶ ನೀಡುವಂತೆ ಬಿಬಿಎಂಪಿಗೆ ಕೋರಿದೆ. ಅದರ ಹೊರತಾಗಿ ರಸ್ತೆಗುಂಡಿ ಮುಚ್ಚುವ ಕಾಮಗಾರಿ ಸಂಬಂಧ ಪಾಲಿಕೆ ಕಾರ್ಯಾದೇಶ ನೀಡಲು ಸಿದ್ಧವಿದೆ. ಇನ್ನೆರಡು ದಿನಗಳಲ್ಲಿ ಕಾರ್ಯಾದೇಶ ನೀಡುತ್ತೇವೆ’ ಎಂದು ತಿಳಿಸಿದರು. ಬಿಬಿಎಂಪಿ ಹೇಳಿಕೆಯನ್ನು ಎಆರ್‌ಟಿಎಸ್‌ ಪರ ವಕೀಲರು ಸರಾಸಗಟಾಗಿ ನಿರಾಕರಿಸಿದರು. ಕೊನೆಗೆ ಪಾಲಿಕೆ ಪರ ವಕೀಲರು, ಪ್ರಕರಣವನ್ನು ಗುರುವಾರ ವಿಚಾರಣೆಗೆ ನಿಗದಿಪಡಿಸಿದರೆ, ಕಾರ್ಯಾದೇಶ ನೀಡಿ ನ್ಯಾಯಾಲಯಕ್ಕೆ ದಾಖಲೆ ಒದಗಿಸಲಾಗುವುದು ಎಂದು ತಿಳಿಸಿದರು.

ಬೇಸರ ವ್ಯಕ್ತಪಡಿಸಿದ ಕೋರ್ಟ್​: ಇದಕ್ಕೆ ಅಸಮಾಧಾನಗೊಂಡ ಪೀಠ, ‘ನಮಗೆ ಬೇರೆ ಯಾವ ವಿಚಾರವೂ ಬೇಡ. ರಸ್ತೆ ಗುಂಡಿ ಮುಚ್ಚುವ ಕೆಲಸ ಆರಂಭವಾಗಿದೆಯೇ, ಇಲ್ಲವೇ ಎನ್ನುವುದಷ್ಟೇ ಬೇಕು. ಈಗಾಗಲೇ ಮಳೆ ಆರಂಭವಾಗಿದೆ. ಪರಿಸ್ಥಿತಿ ಮಾತ್ರ ಮೊದಲಿನಂತೆಯೇ ಇದೆ. ಮಳೆ ಆರಂಭವಾದರೆ ಮೂರ್ನಾಲ್ಕು ತಿಂಗಳು ಕಾಮಗಾರಿ ಮಾಡಲಾಗದು. ಇನ್ನೇನು ಕೋರ್ಟ್‌ ಬೇಸಿಗೆ ರಜೆ ಆರಂಭವಾಗಲಿದ್ದು, ಕಲಾಪ ನಡೆಯುವುದಿಲ್ಲವೆಂಬುದು ನಿಮಗೂ ತಿಳಿದಿದೆ. ಈಗಾಗಲೇ ಸಾಕಷ್ಟು ಸಮಯ ನೀಡಿದ್ದೇವೆ. ನಿಮಗೆ ಕೆಲಸ ಆರಂಭಿಸುವ ಉದ್ದೇಶವಿಲ್ಲ. ಇದು ನಿಜಕ್ಕೂ ದುರದೃಷ್ಟಕರ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿತು.

ಅಲ್ಲದೇ, ಮೊದಲು ಸಂಚಾರ ದಟ್ಟಣೆಯಿಂದ ರಸ್ತೆ ಗುಂಡಿ ಮುಚ್ಚಲಾಗಿಲ್ಲವೆಂದು ಹೇಳಿದಿರಿ, ಆನಂತರ ಮೂಲಸೌಕರ್ಯ ಕೊರತೆ, ಆಮೇಲೆ ಮಳೆಯ ಮೇಲೆ ಆರೋಪ ಹೊರಿಸಿದಿರಿ, ಇದೆಲ್ಲಾ ಆದ ಬಳಿಕ ರಸ್ತೆ ಅಗೆಯುವ ಇತರ ಏಜೆನ್ಸಿಗಳತ್ತ ಬೆರಳು ತೋರಿದಿರಿ. ಇದೀಗ, ರಸ್ತೆ ಗುಂಡಿ ಮುಚ್ಚಲು ಮುಂದಾಗಿರುವ ಸಂಸ್ಥೆ ಬಗ್ಗೆಯೇ ದೂರುತ್ತಿದ್ದೀರಿ. ಇದೇ ರೀತಿ ನೀವು ಆರೋಪ ಹೊರಿಸುವುದನ್ನು ಮುಂದುವರೆಸಲು ಯಾರು ಉಳಿದಿದ್ದಾರೆ. ಇನ್ನು ಮುಂದೆ ಯಾರ ಮೇಲೆ ನಿಮ್ಮ ಜವಾಬ್ದಾರಿಗಳನ್ನು ಹೊರಿಸುತ್ತೀರಿ ಎಂದು ಪೀಠ ಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡಿತು.

ಇದನ್ನೂ ಓದಿ: ಕಸದ ಲಾರಿಗಳಿಂದ ಅಪಘಾತ : ಬೆಂಗಳೂರು ಪಾಲಿಕೆಯಲ್ಲಿರುವ ಗೈಡ್ ಲೈನ್ಸ್‌ ಏನು?

ಅಂತಿಮವಾಗಿ, ನೀವು ಒಂದಲ್ಲಾ ಒಂದು ಕಾರಣ ನೀಡಿ ಕೆಲಸ ಮುಂದೂಡುತ್ತಲೇ ಇದ್ದೀರಿ, ಇದು ನಿಜಕ್ಕೂ ವಿಪರೀತವಾಯಿತು’ ಎಂದು ಆಕ್ರೋಶ ವ್ಯಕ್ತಪಡಿಸಿತು. ಹಾಗೆಯೇ, ‘ನಿಮಗೆ ಇನ್ನು 36 ಗಂಟೆ ಕಾಲಾವಕಾಶ ನೀಡುತ್ತೇವೆ. ಅಷ್ಟರೊಳಗೆ ಕಾಮಗಾರಿ ಆರಂಭಿಸಲು ಕಾರ್ಯಾದೇಶ ನೀಡಿ, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸಲ್ಲಿಸಿ ಎಂದು ಪಾಲಿಕೆಗೆ ತಾಕೀತು ಮಾಡಿ, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.