ಬೆಂಗಳೂರು : ಚುನಾವಣೆ ಅಂಚಿನಲ್ಲಿ ಬೊಮ್ಮಾಯಿ ಸರ್ಕಾರ ಪ್ರಮುಖ ಸಮುದಾಯಗಳಿಗೆ ಮೀಸಲಾತಿ ನೀಡುವ ಮೂಲಕ ಚುನಾವಣಾ ಕಣವನ್ನು ಸಜ್ಜುಗೊಳಿಸಿದೆ. ಎಸ್ ಸಿ, ಎಸ್ ಟಿ ಸಮುದಾಯ, ಒಕ್ಕಲಿಗರು, ಲಿಂಗಾಯತರ ಮೀಸಲಾತಿ ಬೇಡಿಕೆ ಈಡೇರಿಸುವ ಮೂಲಕ ಬೊಮ್ಮಾಯಿ ಸರ್ಕಾರ ಸಿಹಿ ಸುದ್ದಿ ನೀಡಿದೆ. ಇದೀಗ ಪರಿಶಿಷ್ಟ ಜಾತಿಯವರ ಬಹುಕಾಲದ ಬೇಡಿಕೆಯಾದ ಒಳ ಮೀಸಲಾತಿ ಕಲ್ಪಿಸಲು ಮುಂದಾಗಿದೆ. ಆ ಮೂಲಕ ಬೊಮ್ಮಾಯಿ ಸರ್ಕಾರ ಚುನಾವಣಾ ದಿಗ್ವಿಜಯಕ್ಕಾಗಿ ಕಾರ್ಯತಂತ್ರ ರೂಪಿಸಿದೆ.
ಎಸ್ ಸಿ, ಎಸ್ಟಿ ಸಮುದಾಯದ ಮೀಸಲಾತಿ ಹೆಚ್ಚಳ, ಒಕ್ಕಲಿಗರು ಹಾಗೂ ಲಿಂಗಾಯತರಿಗೆ ಎರಡು ಪ್ರತ್ಯೇಕ ಪ್ರವರ್ಗ ಸೃಷ್ಟಿಸಿ ಮೀಸಲಾತಿ ನೀಡಲು ಬಿಜೆಪಿ ಸರ್ಕಾರ ತೀರ್ಮಾನಿಸಿದೆ. ಬಹು ದಿನಗಳ ಮೀಸಲಾತಿ ಬೇಡಿಕೆಗಳನ್ನು ಬೊಮ್ಮಾಯಿ ಸರ್ಕಾರ ಒಂದೊಂದಾಗಿ ಈಡೇರಿಸುವ ಮೂಲಕ ಪ್ರಬಲ ಸಮುದಾಯಗಳ ಪ್ರೀತಿಪಾತ್ರರಾಗಲು ಮುಂದಾಗಿದೆ. ಇದೀಗ ದಶಕಗಳ ಪರಿಶಿಷ್ಟ ಜಾತಿಯವರ ಒಳಮೀಸಲಾತಿ ಬೇಡಿಕೆಯನ್ನೂ ಈಡೇರಿಸಲು ವೇದಿಕೆ ಸಜ್ಜುಗೊಳಿಸಿದೆ. ನ್ಯಾ.ಸದಾಶಿವ ಆಯೋಗದ ವರದಿ ಶಿಫಾರಸ್ಸಿನಂತೆ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ನೀಡಲು ಮುಂದಾಗಿದೆ. ಅದಕ್ಕಾಗಿ ಈಗಾಗಲೇ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚಿಸಲಾಗಿದೆ. ಸಂಪುಟ ಉಪಸಮಿತಿ ವರದಿ ಆಧಾರದಲ್ಲಿ ಒಳ ಮೀಸಲಾತಿ ನೀಡಲು ಸರ್ಕಾರ ನಿರ್ಧರಿಸಿದೆ. ಆ ಮೂಲಕ ಚುನಾವಣೆ ಹೊಸ್ತಿಲಲ್ಲಿ ಒಳ ಮೀಸಲಾತಿ ಅಸ್ತ್ರ ಬಿಡಲು ಸನ್ನದ್ಧವಾಗಿದೆ.
ಏನಿದು ನ್ಯಾ.ಸದಾಶಿವ ಆಯೋಗ ವರದಿ?: ಒಳ ಮೀಸಲಾತಿ ಕುರಿತು ನ್ಯಾಯಮೂರ್ತಿ ಸದಾಶಿವ ಆಯೋಗ 2012ರಲ್ಲಿ ವರದಿ ನೀಡಿತ್ತು. 2005 ರಲ್ಲಿ ಆಗಿನ ಸರ್ಕಾರ ನ್ಯಾಯಮೂರ್ತಿ ಎ.ಜೆ. ಸದಾಶಿವ ಅವರ ನೇತೃತ್ವದ ಸಮಿತಿ ರಚಿಸಿತ್ತು. 2012ರಲ್ಲಿ ನ್ಯಾ. ಸದಾಶಿವ ಆಯೋಗ ವರದಿ ಸಲ್ಲಿಸಿದಾಗಿನಿಂದ ಒಳಮೀಸಲಾತಿ ರಾಜಕೀಯ ಒಳಸುಳಿಯಲ್ಲೇ ಸಿಲುಕಿದೆ. ಇತ್ತ ಈ ಮೀಸಲಾತಿಯೊಳಗಿನ ಮೀಸಲಾತಿಯ ಬೇಡಿಕೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಲೇ ಬಂದಿದೆ. ಆದರೆ ಯಾವುದೇ ಸರ್ಕಾರಗಳು ಇದರ ಅನುಷ್ಠಾನದ ಧೈರ್ಯ ತೋರಿರಲಿಲ್ಲ.
ನ್ಯಾ.ಸದಾಶಿವ ಆಯೋಗದ ವರದಿಯ ಪ್ರಕಾರ ಪರಿಶಿಷ್ಟ ಜಾತಿಯ 101 ಉಪಜಾತಿಗಳನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಿ ಶೇ.15ರ ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡುವಂತೆ ಶಿಫಾರಸ್ಸು ಮಾಡಲಾಗಿದೆ. ಇದರ ಪ್ರಕಾರ ಶೇ.33.4ರಷ್ಟಿರುವ ಒಂದನೇ ಗುಂಪಿಗೆ (ಎಡಗೈ ಪ.ಜಾ) ಶೇ.6, ಶೇ.32ರಷ್ಟಿರುವ (ಬಲಗೈ ಪ.ಜಾ) ಎರಡನೇ ಗುಂಪಿಗೆ ಶೇ.5, ಶೇ.23.64ರಷ್ಟಿರುವ (ಸ್ಪರ್ಶ ಪರಿಶಿಷ್ಟ ಜಾತಿ) ಮೂರನೇ ಗುಂಪಿಗೆ ಶೇ.3 ಮತ್ತು ಶೇ.4.65 ರಷ್ಟಿರುವ ಇತರ ಪರಿಶಿಷ್ಟ ಜಾತಿಯವರಿಗೆ ಶೇ.1ರಷ್ಟು ಮೀಸಲಾತಿಯನ್ನು ಹಂಚಿಕೆಗೆ ಶಿಫಾರಸು ಮಾಡಿದೆ.
ಇದೇ ವೇಳೆ ಸ್ಪೃಶ್ಯ ಜಾತಿಗಳಾದ ಲಂಬಾಣಿ, ಬೋವಿ, ಕೊರಮ, ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿಯ ಗುಂಪಿನಿಂದ ಹೊರಗಿಡಬೇಕೆಂಬ ಬೇಡಿಕೆಯನ್ನು ಆಯೋಗ ತಿರಸ್ಕರಿಸಿದೆ. ಸಮೀಕ್ಷೆಯ ಪ್ರಕಾರ ಎಡಗೈ ಗುಂಪಿನ (ಮಾದಿಗ ಜಾತಿ) ಜನಸಂಖ್ಯೆ 32,35,517 (ಶೇ. 33.47), ಬಲಗೈ ಗುಂಪಿನ (ಹೊಲೆಯ ಜಾತಿ) ಜನಸಂಖ್ಯೆ 30,93,693 (ಶೇ. 32.01), ಇತರೆ ಪರಿಶಿಷ್ಟ ಜಾತಿಗಳು 4,49,879 (ಶೇ. 46.5) ಮತ್ತು ಸ್ಪೃಶ್ಯ ಜಾತಿಗಳ ಜನಸಂಖ್ಯೆ 22,84,642 (ಶೇ. 23.64) ಇದೆ. ಆಯೋಗ ವರ್ಗೀಕರಿಸಿದಂತೆ ಮೊದಲ ಗುಂಪಿನ (ಎಡಗೈ) ಒಟ್ಟು ಸಾಕ್ಷರತೆ 62.15%, ಎರಡನೇ ಗುಂಪಿನ (ಬಲಗೈ) 65.16%, ಮೂರನೇ ಗುಂಪಿನ ಸ್ಪೃಶ್ಯ ಜಾತಿಗಳ ಸಾಕ್ಷರತೆ 68.46% ಮತ್ತು ನಾಲ್ಕನೇ ಗುಂಪು (ಇತರೆ ಪರಿಶಿಷ್ಟ ಜಾತಿಗಳು) ಸಾಕ್ಷರತೆ (55.65%) ಇದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಏನಿದು ಒಳ ಮೀಸಲಾತಿ ಕೂಗು?: ಪರಿಶಿಷ್ಟ ಜಾತಿಗಳಿಗೆ ಹಾಲಿ ಇರುವ ಶೇ.17ರಷ್ಟು ಮೀಸಲಾತಿಯಲ್ಲಿ ಬಹುತೇಕ ಮೀಸಲಾತಿಯ ಉಪಯೋಗವನ್ನು ಬಲಗೈ ಸಮುದಾಯಗಳೇ ಪಡೆದುಕೊಳ್ಳುತ್ತಿವೆ. ಬಲಗೈ ಗುಂಪಿನ ಜತೆ ಸ್ಪರ್ಧಿಸಲು ನಮಗೆ ಸಾಧ್ಯವಾಗುತ್ತಿಲ್ಲ ಎಂಬುದು ಎಡ ಗೈ (ಮಾದಿಗ) ಪ.ಜಾತಿಯವರ ಅಸಮಾಧಾನ.
ಪ.ಜಾತಿಯ ಮೀಸಲಾತಿಯ ಸೌಲಭ್ಯ ಸಮುದಾಯದಲ್ಲಿರುವ ನಾಲ್ಕೂ ಗುಂಪಿನವರಿಗೆ ಸಮನಾಗಿ ಹಂಚಿಯಾಗಿಲ್ಲ ಎಂಬುದು ಅವರ ಆಕ್ರೋಶ. ಹೀಗಾಗಿ ಎಸ್ಸಿ ಮೀಸಲಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸಬೇಕು ಎಂದು ಎರಡೂವರೆ ದಶಕಗಳಿಂದ ಎಡಗೈ ಸಮುದಾಯಗಳು ಹೋರಾಟ ನಡೆಸುತ್ತಿವೆ. ಒಳ ಮೀಸಲಾತಿ ಕಲ್ಪಿಸಿದರೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಅತಿ ಹಿಂದುಳಿದಿರುವ ಎಡಗೈ ಸಮುದಾಯಗಳಿಗೆ ಅವಕಾಶಗಳು ಸಿಗಲಿವೆ. ಇದರಿಂದ ಮೀಸಲಾತಿ ಪರಿಕಲ್ಪನೆಗೆ ಅರ್ಥ ಬರಲಿದೆ ಎಂಬುದು ಅವರ ವಾದ. ಇತ್ತ ನ್ಯಾ.ಸದಾಶಿವ ಆಯೋಗ ತಿರಸ್ಕರಿಸುವಂತೆ ಇತರೆ ಪ.ಜಾತಿ ಸಮುದಾಯದವರು ಆಗ್ರಹಿಸುತ್ತಿದ್ದಾರೆ.
ಬಿಜೆಪಿ ಸರ್ಕಾರದ ಲೆಕ್ಕಾಚಾರ ಏನು?: ಚುನಾವಣೆ ಹೊಸ್ತಿಲಲ್ಲಿ ಈಗಾಗಲೇ ವಿವಿಧ ಮೀಸಲಾತಿ ಬೇಡಿಕೆ ಈಡೇರಿಸುವ ಬಿಜೆಪಿ ಸರ್ಕಾರ ದಶಕಗಳ ಒಳಮೀಸಲಾತಿ ಬೇಡಿಕೆ ಈಡೇರಿಸುವ ಮೂಲಕ ಚುನಾವಣಾ ಲಾಭ ಪಡೆಯುವ ಕಾರ್ಯತಂತ್ರ ರೂಪಿಸಿದೆ. 2012ರಲ್ಲೇ ಸದಾಶಿವ ಆಯೋಗವು ಒಳ ಮೀಸಲಾತಿ ಕಲ್ಪಿಸುವ ಕುರಿತು ವರದಿ ಸಲ್ಲಿಸಿದ್ದರೂ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಐದು ವರ್ಷ ಯಾವುದೇ ಕ್ರಮ ಕೈಗೊಂಡಿಲ್ಲ. ಎಡಗೈ ಸಮುದಾಯದವರನ್ನು ಕೇವಲ ಮತ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿರುವ ಕಾಂಗ್ರೆಸ್ ನ್ಯಾಯ ಒದಗಿಸಿಲ್ಲ. ನಾವು ಒಳ ಮೀಸಲಾತಿ ಒದಗಿಸಲು ಮುಂದಾಗಿದ್ದೇವೆ ಎಂಬ ಸಂದೇಶ ರವಾನಿಸಲು ಮುಂದಾಗಿದೆ.
ಆ ಮೂಲಕ ಪ.ಜಾತಿಯಲ್ಲಿ ಸುಮಾರು 32,35,517 (33.4%)ರಷ್ಟು ಜನಸಂಖ್ಯೆ ಹೊಂದಿರುವ ಪ್ರಬಲ ಮಾದಿಗ ಸಂಬಂಧಿತ ಎಡಗೈ ಪರಿಶಿಷ್ಟ ಜಾತಿಯವರ ಮನಗೆಲ್ಲಲು ಬಿಜೆಪಿ ಸರ್ಕಾರ ಮುಂದಾಗಿದೆ. ಈಗಾಗಲೇ ಪರಿಶಿಷ್ಟ ಜಾತಿ ಮೀಸಲಾತಿಯನ್ನು 15% ದಿಂದ 17%ಗೆ ಏರಿಕೆ ಮಾಡಿರುವ ಬೊಮ್ಮಾಯಿ ಸರ್ಕಾರ ಬಹು ದಶಕಗಳ ಒಳ ಮೀಸಲಾತಿ ಬೇಡಿಕೆಯನ್ನು ಈಡೇರಿಸಿ ಪರಿಶಿಷ್ಟ ಜಾತಿ ಸಮುದಾಯದವರನ್ನು ಸಂಪೂರ್ಣವಾಗಿ ತಮ್ಮತ್ತ ಸೆಳೆಯುವ ಇರಾದೆ ಹೊಂದಿದೆ.
ಒಳ ಮೀಸಲಾತಿ ಒಳಸುಳಿ ಏನು?: ಒಳ ಮೀಸಲಾತಿಗೆ ಒಳಸುಳಿ ತಿರುಗೇಟು ನೀಡುವ ಆತಂಕವೂ ಇದೆ. ಇತ್ತ ಎಡಗೈ ಸಂಬಂಧಿತ ಸಮುದಾಯದವರ ಪರ ಒಳಮೀಸಲಾತಿ ಕೊಟ್ಟರೆ, ಅದೇ ಜಾತಿಗೆ ಸೇರಿದ ಪ್ರಬಲ ಬಲಗೈ ಸಮುದಾಯದ ವಿರೋಧ ಕಟ್ಟಿಕೊಳ್ಳುವ ಆತಂಕವೂ ಎದುರಾಗಿದೆ. ಇತ್ತ ಮೀಸಲಾತಿ ಸೌಲಭ್ಯದಿಂದ ವಂಚಿತರಾಗಿರುವ ಮಾದಿಗ ಮತ್ತು ಅದರ ಸಂಬಂಧಿತ ಜಾತಿಗಳಿಗೆ ಹೆಚ್ಚಿನ ಮೀಸಲಾತಿಯ ಅನುಕೂಲಗಳು ಸಿಕ್ಕರೆ, ಅತ್ತ ಹೊಲೆಯ (ಬಲಗೈ) ಸಂಬಂಧಿತ ಜಾತಿಗಳ ಪ್ರತಿನಿಧಿಗಳ ಕಣ್ಣುಕೆಂಪಾಗಿಸುವ ಆತಂಕವೂ ಇದೆ.
ಇದರಿಂದ ಒಳ ಮೀಸಲಾತಿ ಬಿಸಿ ತುಪ್ಪ ಎಂಬ ಮಾತಿದೆ. ಈ ಒಳಸುಳಿಯ ಕಾರಣ ನ್ಯಾ.ಸದಾಶಿವ ಆಯೋಗ ವರದಿ ಸಲ್ಲಿಸಿ 10 ವರ್ಷ ಕಳೆದರೂ ಯಾವ ಸರ್ಕಾರಗಳೂ ಅದರ ಜಾರಿಯ ಗೋಜಿಗೆ ಹೋಗಿಲ್ಲ. ಇದರಿಂದ ಮತ ಗಳಿಸುವ ಬದಲು ಮತ ಕಳೆಯುವ ಆತಂಕವೇ ಹೆಚ್ಚು ಎಂಬ ಆತಂಕ ರಾಜಕೀಯ ಪಕ್ಷಗಳದ್ದು. ಇತ್ತ ಒಳಮೀಸಲಾತಿಗೆ ಕಾನೂನು ತೊಡಕು ಕಗ್ಗಂಟಾಗುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಹರ್ಯಾಣ, ಪಂಜಾಬ್, ಆಂಧ್ರಪ್ರದೇಶದಲ್ಲಿನ ಒಳಮೀಸಲಾತಿ ಆದೇಶಕ್ಕೆ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ನ್ಯಾ.ಸದಾಶಿವ ಆಯೋಗದ ವರದಿಯೂ ಆಂಧ್ರಪ್ರದೇಶದ ಆಯೋಗದ ವರದಿಯ ಪಡಿಯಚ್ಚು ಎನ್ನಲಾಗಿದ್ದು, ಅಲ್ಲಿಯಂತೆ ಇಲ್ಲೂ ಒಳ ಮೀಸಲಾತಿಗೆ ಕಾನೂನು ವಿಘ್ನ ಬರಲಿದೆ ಎಂದು ಹೇಳಲಾಗಿದೆ.
ಚುನಾವಣೆ ಹೊತ್ತಲ್ಲಿ ಕಣ್ಣೊರೆಸುವ ತಂತ್ರ : ಈ ಬಗ್ಗೆ ಈಟಿವಿ ಭಾರತ ಜೊತೆ ಮಾತನಾಡಿರುವ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ.ಎಸ್. ದ್ವಾರಕನಾಥ್, ನ್ಯಾ.ಸದಾಶಿವ ಆಯೋಗದ ವರದಿ ವೈಜ್ಞಾನಿಕವಾಗಿದ್ದು, ಅದರ ಜಾರಿಗೆ ಸಮಸ್ಯೆ ಇಲ್ಲ. ಆದರೆ, ಬೊಮ್ಮಾಯಿ ಸರ್ಕಾರ ನ್ಯಾ.ಸದಾಶಿವ ಆಯೋಗದ ವರದಿ ಪರಿಶೀಲನೆಗೆ ಸಚಿವ ಮಾಧುಸ್ವಾಮಿ ನೇತೃತ್ವದ ಸಂಪುಟ ಉಪಸಮಿತಿ ರಚಿಸಿರುವುದು ಸಮಂಜಸವಲ್ಲ. ಇದು ಕೇವಲ ಚುನಾವಣೆ ಹೊಸ್ತಿಲಲ್ಲಿ ಕಣ್ಣೊರೆಸುವ ತಂತ್ರವಾಗಿದೆ ಎಂದು ದೂರಿದ್ದಾರೆ. ಬೇರೆ ರಾಜ್ಯಗಳಲ್ಲಿ ಒಳಮೀಸಲಾತಿ ಆದೇಶವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದಂತೆ ರಾಜ್ಯದ ವಿಚಾರದಲ್ಲಿ ಆಗುವ ಸಾಧ್ಯತೆ ಕಡಿಮೆ. ನ್ಯಾ.ಸದಾಶಿವ ಆಯೋಗ ವೈಜ್ಞಾನಿಕ ವರದಿ ನೀಡಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : 'ಮೇಲ್ಜಾತಿ ಮೀಸಲಾತಿಗೆ ಸುಪ್ರೀಂನಲ್ಲಿ ಹಿನ್ನಡೆ, ಎಸ್ಸಿ-ಎಸ್ಟಿ ವಿಚಾರದಲ್ಲಿ ಅಂತಹ ಪರಿಸ್ಥಿತಿ ಉದ್ಭವಿಸದು'