ETV Bharat / state

ಏಷ್ಯಾ-ಓಶಿಯಾನಿಯಾ 24 ಗಂಟೆ ಓಟದ ಚಾಂಪಿಯನ್‌ಶಿಪ್‌: ಭಾರತದ ಪುರುಷರಿಗೆ ಚಿನ್ನ, ಮಹಿಳೆಯರಿಗೆ ಬೆಳ್ಳಿ

author img

By

Published : Jul 3, 2022, 8:21 PM IST

ಅಮರ್ ಸಿಂಗ್ ದೆವಂಡ ನೇತೃತ್ವದ ಭಾರತ ತಂಡ ನಿಗದಿತ 24 ಗಂಟೆಗಳಲ್ಲಿ 739.959 ಕಿಲೋ ಮೀಟರ್ ದೂರವನ್ನು ಕ್ರಮಿಸಿ ಮೊದಲ ಸ್ಥಾನ ಪಡೆಯಿತು. ಶನಿವಾರ ಬೆಳಗ್ಗೆ 8 ಗಂಟೆಗೆ ಆರಂಭವಾಗಿದ್ದ ಓಟ ಭಾನುವಾರ ಬೆಳಗ್ಗೆ ಮುಕ್ತಾಯಗೊಂಡಿತು.

ಏಷ್ಯಾ - ಓಶಿಯಾನಿಯಾ 24 ಗಂಟೆ ಓಟದ ಚಾಂಪಿಯನ್‌ಶಿಪ್‌
ಏಷ್ಯಾ - ಓಶಿಯಾನಿಯಾ 24 ಗಂಟೆ ಓಟದ ಚಾಂಪಿಯನ್‌ಶಿಪ್‌

ಬೆಂಗಳೂರು: ಪ್ರತಿಷ್ಠಿತ ಏಜೀಸ್ ಫೆಡರಲ್ ಲೈಫ್ ಇನ್ಶೂರೆನ್ಸ್ ಐಎಯು 24 ಗಂಟೆ ಅಲ್ಟ್ರಾ ಮ್ಯಾರಥಾನ್ ಓಟದ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಪುರುಷರ ತಂಡ ಮತ್ತು ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಲ್ಲದೇ ಮಹಿಳೆಯರ ತಂಡ ವಿಭಾಗದಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದೆ. ಶನಿವಾರ ಮತ್ತು ಭಾನುವಾರ ಇಲ್ಲಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಓಟದ ಸ್ಪರ್ಧೆಯಲ್ಲಿ ಭಾರತೀಯರು ಅದ್ಭುತ ಪ್ರದರ್ಶನ ತೋರಿ ಪದಕಗಳನ್ನು ಮುಡಿಗೇರಿಸಿಕೊಂಡರು.

ಅಮರ್ ಸಿಂಗ್ ದೆವಂಡ ನೇತೃತ್ವದ ಭಾರತ ತಂಡ ನಿಗದಿತ 24 ಗಂಟೆಗಳಲ್ಲಿ 739.959 ಕಿಲೋ ಮೀಟರ್ ದೂರವನ್ನು ಕ್ರಮಿಸಿ ಮೊದಲ ಸ್ಥಾನ ಪಡೆಯಿತು. ಶನಿವಾರ ಬೆಳಗ್ಗೆ 8 ಗಂಟೆಗೆ ಆರಂಭವಾಗಿದ್ದ ಓಟ ಭಾನುವಾರ ಬೆಳಗ್ಗೆ ಮುಕ್ತಾಯಗೊಂಡಿತು.

ಏಷ್ಯಾ - ಓಶಿಯಾನಿಯಾ 24 ಗಂಟೆ ಓಟದ ಚಾಂಪಿಯನ್‌ಶಿಪ್‌
ಏಷ್ಯಾ - ಓಶಿಯಾನಿಯಾ 24 ಗಂಟೆ ಓಟದ ಚಾಂಪಿಯನ್‌ಶಿಪ್‌

ಅಮರ್ ಸಿಂಗ್ ವೈಯಕ್ತಿಕ ಶ್ರೇಷ್ಠ 254.418 ಕಿಲೋ ಮೀಟರ್ ದೂರ ಓಡಿ ವೈಯಕ್ತಿಕ ವಿಭಾಗದಲ್ಲಿ ಮೊದಲ ಸ್ಥಾನ ಪಡೆದರು. ತಮ್ಮ ಹಿಂದಿನ ಶ್ರೇಷ್ಠ ದಾಖಲೆಯನ್ನು 18 ಕಿ. ಲೋ ಮೀಟರ್‌ಗಳಿಂದ ಉತ್ತಮಗೊಳಿಸಿಕೊಂಡ ಅಮರ್ ಸಿಂಗ್ ಈ ಕೂಟದ ಪ್ರಮುಖ ಆಕರ್ಷಣೆ ಎನಿಸಿದರು.

ಭಾರತದ ಕ್ಲೀನ್ ಸ್ವೀಪ್: ಸೌರವ್ ಕುಮಾರ್ ರಂಜನ್ (242.564 ಕಿ.ಮೀ) ಮತ್ತು ಗೀನೊ ಆ್ಯಂಥೋನಿ (238.977) ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದ ಕಾರಣ ವೈಯಕ್ತಿಕ ವಿಭಾಗದಲ್ಲಿ ಭಾರತ ಕ್ಲೀನ್ ಸ್ವೀಪ್ ಸಾಧನೆ ಮಾಡಿತು. ಈ ಮೂವರೂ ಸೇರಿ ತಂಡ ವಿಭಾಗದಲ್ಲಿ ಭಾರತಕ್ಕೆ ಚಿನ್ನ ತಂದುಕೊಟ್ಟರು.

ಆಸ್ಟ್ರೇಲಿಯಾ 2ನೇ ಸ್ಥಾನ: ಆಸ್ಟ್ರೇಲಿಯಾ (628.405) ಮತ್ತು ಚೈನೀಸ್ ತೈಪೆ (563.591) ತಂಡ ವಿಭಾಗದಲ್ಲಿ ಕ್ರಮವಾಗಿ 2 ಮತ್ತು 3ನೇ ಸ್ಥಾನಗಳನ್ನು ಪಡೆದುಕೊಂಡವು.

ಭಾರತೀಯ ಓಟಗಾರರಿಂದ ಬಲಿಷ್ಠ ಪ್ರದರ್ಶನ: ಏಜೀಸ್ ಫೆಡರಲ್ ಲೈಫ್ ಇನ್ಶೂರೆನ್ಸ್ ಲಿಮಿಟೆಡ್‌ನ ಸಿಎಂಒ ಕಾರ್ತಿಕ್ ರಾಮನ್ ಮಾತನಾಡಿ, ಭಾರತೀಯ ಓಟಗಾರರು ಇಂತಹ ಬಲಿಷ್ಠ ಪ್ರದರ್ಶನ ತೋರಿದ್ದು ಬಹಳ ಖುಷಿ ನೀಡಿದೆ. 24 ಗಂಟೆಗಳ ಕಾಲ ಟ್ರ್ಯಾಕ್‌ನಲ್ಲಿ ಛಲ ಮತ್ತು ಧೈರ್ಯ ಪ್ರದರ್ಶಿಸಿದ ಪ್ರತಿಯೊಬ್ಬ ವಿಜೇತರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ತುಂತುರು ಮಳೆಯಿಂದ ಅಹ್ಲಾದಕರ ಅನುಭವ: ತುಂತುರು ಮಳೆ ಬೀಳುತ್ತಿದ್ದ ಕಾರಣ ವಾತಾವರಣ ಓಟಗಾರರಿಗೆ ಅಹ್ಲಾದಕರ ಅನುಭವ ನೀಡಿತು. ಭಾರತೀಯ ಮಹಿಳಾ ತಂಡವೂ ಅತ್ಯುತ್ತಮ ಪ್ರದರ್ಶನ ತೋರಿ ಎರಡನೇ ಸ್ಥಾನ ಪಡೆದುಕೊಂಡಿತು. ಓಟಗಾರ್ತಿಯರು ಒಟ್ಟು 570.70 ಕಿಲೋ ಮೀಟರ್ ದೂರ ಓಡಿ ಮೊದಲ ಸ್ಥಾನ ಪಡೆದ ಆಸ್ಟ್ರೇಲಿಯಾಗೆ ಪ್ರಬಲ ಪೈಪೋಟಿ ನೀಡಿದರು.

ಆಸ್ಟ್ರೇಲಿಯಾ ತಂಡ 607.63 ಕಿ.ಮೀ ದೂರ ಓಡಿ ಮೊದಲ ಸ್ಥಾನ ಪಡೆದರೆ, ಚೈನೀಸ್ ತೈಪೆ ತಂಡ 529.082 3ನೇ ಸ್ಥಾನ ಪಡೆಯಿತು. ವೈಯಕ್ತಿಕ ವಿಭಾಗದಲ್ಲಿ ತೈಪೆಯ ಕುವಾನ್ ಜುಲಿನ್ (216.877 ಕಿ.ಮೀ) ಮೊದಲ ಸ್ಥಾನ ಪಡೆದರೆ, ಆಸ್ಟ್ರೇಲಿಯಾದ ಕ್ಯಾಸಿ ಕೊಹೆನ್ (214.990 ಕಿ.ಮೀ.), ಅಲಿಸಿಯಾ ಹೆರೊನ್(311.442 ಕಿ. ಮೀ) ಕ್ರಮವಾಗಿ 2ನೇ ಮತ್ತು 3ನೇ ಸ್ಥಾನ ಪಡೆದರು.

ಮೊದಲ ಬಾರಿಗೆ ಭಾರತದಲ್ಲಿ ಚಾಂಪಿಯನ್‌ಶಿಪ್: ರೇಸ್ ನಿರ್ದೇಶಕರಾಗಿದ್ದ ಎನ್‌ಇಬಿ ಸ್ಪೋರ್ಟ್ಸ್‌ನ ನಾಗರಾಜ್ ಅಡಿಗ ಮತ್ತು ಆಯೋಜಕರು ಚಾಂಪಿಯನ್‌ಶಿಪ್‌ನ ಯಶಸ್ಸಿನ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಇದೇ ಮೊದಲ ಬಾರಿಗೆ ಭಾರತ ಇಷ್ಟು ದೊಡ್ಡ ಮಟ್ಟದಲ್ಲಿ ಐಎಯು ಚಾಂಪಿಯನ್‌ಶಿಪ್ ಆಯೋಜಿಸಿದೆ. ಈ ಕೂಟದ ಯಶಸ್ಸಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ನಾಗರಾಜ್ ಅಡಿಗ ಹೇಳಿದರು.

ಫಲಿತಾಂಶಗಳು

ತಂಡ ವಿಭಾಗ

ಪುರುಷರು: 1.ಭಾರತ (739.959ಕಿ.ಮೀ.), 2. ಆಸ್ಟ್ರೇಲಿಯಾ (628.405 ಕಿ.ಮೀ.), 3. ಚೈನೀಸ್ ತೈಪೆ (563.591 ಕಿ. ಮೀ)

ಮಹಿಳೆಯರು: 1. ಆಸ್ಟ್ರೇಲಿಯಾ (607.630 ಕಿ.ಮೀ.), 2. ಭಾರತ (570.700 ಕಿ.ಮೀ), 3. ಚೈನೀಸ್ ತೈಪೆ (529.082)

ವೈಯಕ್ತಿಕ ವಿಭಾಗ

ಪುರುಷರು: 1. ಅಮರ್ ಸಿಂಗ್ ದೆವಂಡ (258.418 ಕಿ. ಮೀ), 2. ಸೌರವ್ ರಂಜನ್ (241.564 ಕಿ.ಮೀ), 3. ಗೀನೊ ಆ್ಯಂಥೋನಿ (238.977 ಕಿ. ಮೀ.)
ಮಹಿಳೆಯರು: 1.ಕುವಾನ್ ಜು ಲಿನ್ (216.877 ಕಿ.ಮೀ), 2. ಕ್ಯಾಸಿ ಕೊಹೆನ್ (214.990ಕಿ. ಮೀ), 3. ಅಲಿಸಿಯಾ ಹೆರೊನ್(211.442 ಕಿ.ಮೀ.)

ಮುಕ್ತ ವಿಭಾಗ
ಎಲೈಟ್ ಮಹಿಳೆ
ಯೊಹಾನ ಜಕ್ರಜ್ವೆಸ್ಕಿ (ಪೋಲೆಂಡ್ 199.20)

ಓಪನ್ ಮಹಿಳೆ
ತೃಪ್ತಿ ಚವಾಣ್ (ಭಾರತ 134.90 ಕಿ. ಮೀ)

ಎಲೈಟ್ ಪುರುಷ
ತೊಮಾಜ್ ಪಾವ್ಲೊಸ್ಕಿ (ಪೋಲೆಂಡ್ 222.00)

ಓಪನ್ ಪುರುಷ
ಸಿಕಂದರ್ ಲಾಂಬ (ಭಾರತ 202.36), 2. ಸಂದೆಲ್ ನಿಪಾಣೆ (190.53)

ಓದಿ: ನಾನು ಗೆದ್ದರೆ ದೇಶದ್ರೋಹ ಕಾನೂನು ರದ್ದು ಮಾಡುತ್ತೇನೆ: ಸಿನ್ಹಾ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.