ETV Bharat / state

ಬೆಂಗಳೂರಲ್ಲಿ ರೋಡ್ ರೇಜ್ ಗಲಾಟೆ ಹೆಚ್ಚಳ: ಗಂಭೀರವಾಗಿ ಪರಿಗಣಿಸಿದ‌ ಪೊಲೀಸರು, ನಾಲ್ವರ ವಿರುದ್ಧ ರೌಡಿಪಟ್ಟಿ ಓಪನ್

author img

By ETV Bharat Karnataka Team

Published : Oct 8, 2023, 9:08 PM IST

ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ಪುಂಡರ ಮೇಲೆ ಬೆಂಗಳೂರು ನಗರ ಪೊಲೀಸರು ರೌಡಿಶೀಟ್​ ತೆರೆದಿದ್ದಾರೆ.

ಸಿಲಿಕಾನ್ ಸಿಟಿ
ಸಿಲಿಕಾನ್ ಸಿಟಿ

ಬೆಂಗಳೂರು : ರಾಜಧಾನಿಯಲ್ಲಿ ರೋಡ್ ರೇಜ್ ಗಲಾಟೆ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿವೆ. ಓವರ್ ಟೇಕ್, ವೇಗದ ಚಾಲನೆ ಹೀಗೆ ವಿವಿಧ ಕ್ಷುಲ್ಲಕ ಕಾರಣಗಳ ನೆಪವೊಡ್ಡಿ ಕಿಡಿಗೇಡಿಗಳು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ಪುಂಡರ ಮೇಲೆ ನಗರ ಪೊಲೀಸರು ರೌಡಿಶೀಟ್ ತೆರೆಯುವ ಮೂಲಕ ಕಾನೂನಿನ ಚಾಟಿ ಬೀಸಿದ್ದಾರೆ.

ವಾಹನ ಸಂಚಾರದ ವೇಳೆ ವಾಹನ ಅಡ್ಡಗಟ್ಟಿ ಸಾರ್ವಜನಿಕರ ಮೇಲೆ ಮಾರಣಾಂತಿಕ ಹಲ್ಲೆ ಹಾಗೂ ಕೊಲೆಯತ್ನ ಪ್ರಕರಣಗಳಲ್ಲಿ ಭಾಗಿಯಾಗಿರುವ ಬೆನ್ನಲ್ಲೇ ನಗರ ಪೊಲೀಸರು ಉದ್ದೇಶಪೂರ್ವಕವಾಗಿ ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾಗುವವರ ವಿರುದ್ಧ ರೌಡಿಪಟ್ಟಿ ತೆರೆಯುವಂತೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಸೂಚಿಸಿದ್ದರು. ಇದರಂತೆ ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ನಾಲ್ವರ ವಿರುದ್ಧ ರೌಡಿಪಟ್ಟಿ ತೆರೆಯಲಾಗಿದೆ.

ಕಳೆದ ಜನವರಿಯಿಂದ ಸೆ.30ರ ವರೆಗೆ ಕೊನೆಗೊಂಡಂತೆ ನಗರದಲ್ಲಿ 18 ರಸ್ತೆ ಬದಿ ಗಲಾಟೆ ಪ್ರಕರಣಗಳು ದಾಖಲಾಗಿವೆ. 2022ರಲ್ಲಿ 7 ಪ್ರಕರಣಗಳು ದಾಖಲಾಗಿತ್ತು. ಈ ವರ್ಷದಲ್ಲಿ ದಾಖಲಾಗಿದ್ದ 18 ಪ್ರಕರಣಗಳಲ್ಲಿ ನಾಲ್ವರ ವಿರುದ್ಧ ರೌಡಿಶೀಟರ್ ತೆರೆಯಲಾಗಿದೆ.

ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಆಗಸ್ಟ್ 5ರಂದು ಹಾರ್ನ್ ಮಾಡಿ ದಾರಿ ಕೇಳಿದಕ್ಕೆ, ಕಾರು ಅಡ್ಡಗಟ್ಟಿ ಗಾಜಿಗೆ ಹಾನಿಗೊಳಿಸಿ ದುಂಡಾವರ್ತಿ ತೋರಿದ್ದ ಟೆನ್ನಿಸ್ ಅಕಾಡೆಮಿಯೊಂದರಲ್ಲಿ ಬಾಲ್ ಬಾಯ್ ಕೆಲಸ ಮಾಡುತ್ತಿದ್ದ ಮುರುಳಿ ಹಾಗೂ ಎಲೆಕ್ಟ್ರಿಷಿಯನ್ ರಘು ಎಂಬುವರನ್ನ ಬಂಧಿಸಿ ಅವರ ವಿರುದ್ಧ ರೌಡಿಶೀಟ್ ಓಪನ್ ಮಾಡಿದ್ದಾರೆ.

ಆಟೋ ಚಾಲಕನ ವಿರುದ್ಧ ರೌಡಿಪಟ್ಟಿ: ಕಳೆದ‌ ಜುಲೈ 17ರಂದು‌ ಹೆಂಡತಿ ಹಾಗೂ ಐದು ವರ್ಷದ ಮಗು ಜೊತೆ ಆಸ್ಪತ್ರೆಯಿಂದ ಮನೆಗೆ ಕಾರಿನಲ್ಲಿ ನೀಲಬ್ ಪಾಂಡೆ ಎಂಬುವರು ಹೋಗುವಾಗ ಆಟೊ ಟಚ್ ಮಾಡಿದ್ದಕ್ಕೆ ದೊಡ್ಡದಾಗಿ ಬಿಂಬಿಸಿ ಕಾರಿನ ಮೇಲೆ ಬಾನೆಟ್ ಮೇಲೆ ಗುದ್ದಿ ಆಕ್ರಮಣಕಾರಿಯಾಗಿ ವರ್ತಿಸಿ, ಅವಾಚ್ಯ ಶಬ್ಧಗಳಿಂದ ವರ್ತಿಸಿದ್ದ. ಚಾಲಕ ನೀಲಬ್ ಕಾರಿನಿಂದ‌‌ ಇಳಿಯದೆ ಮೇಘನಾ‌ ಮೇಲೆ‌ ಹಲ್ಲೆ‌ ಮಾಡಲು ಮುಂದಾಗಿದ್ದ. ಕಾರಿನ ಗ್ಲಾಸ್ ಕ್ಲೋಸ್ ಮಾಡುತ್ತಿದ್ದಂತೆ ಜೋರಾಗಿ ಹೊಡೆದು ಗಾಜು ಪುಡಿ-ಪುಡಿ ಮಾಡಿದ್ದ. ಈ ವೇಳೆ ಗಾಜಿನ ಚೂರುಗಳು ಕಿವಿ ಹಾಗೂ ಕೈಗೆ ಬಿದ್ದು ಮೇಘನಾ ಗಾಯಗೊಂಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಚಾಲಕನ ನಡವಳಿಕೆ ಹಾಗೂ ವರ್ತನೆ ನೋಡಿ ಚಾಲಕನ‌ ವಿರುದ್ಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ರೌಡಿಪಟ್ಟಿ ತೆರೆಯಲಾಗಿದೆ.

ಅದೇ ರೀತಿ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ಬನ್ನೇರುಘಟ್ಟ ವ್ಯಾಪ್ತಿಯಲ್ಲಿ ಕಳೆದ‌ ಫೆಬ್ರವರಿಯಲ್ಲಿ ಬೈಕ್‌ನಲ್ಲಿ ಬರಬೇಕಾದರೆ ಕಾರಿನ ಚಾಲಕ ನಡುವೆ ಸಣ್ಣ ಅಪಘಾತ ವಿಷಯವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿತ್ತು.‌ ಮಾತಿನ ಘರ್ಷಣೆಗೆ ಸುಮ್ಮನಾಗದೆ ಬೈಕ್ ಚಾಲಕನನ್ನು ಹಿಂಬಾಲಿಸಿ ಕಾರು ಚಾಲಕ ಅಡ್ಡಗಟ್ಟಿ ಸ್ಟೀಲ್‌ ರಾಡಿನಿಂದ ಮೈ-ಕೈಗಳಿಗೆ ಹೊಡೆದು ಗಾಯಗೊಳಿಸಿದ್ದ‌. ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ನೀಡಿದ‌ ದೂರಿನ‌ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನ ಬಂಧಿಸಿದ್ದರು.‌ ಅಲ್ಲದೆ ಆತನ ವಿರುದ್ಧ ರೌಡಿಪಟ್ಟಿ ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರು: ಮಾಲೀಕನಿಂದ ಹಣ ಸುಲಿಗೆಗೆ ಕಿಡ್ನಾಪ್ ಪ್ರಹಸನ; ಕಾರ್ಮಿಕ ಸೇರಿ ಮೂವರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.