ETV Bharat / state

ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ: ಸಚಿವ ಬಿ ಸಿ ನಾಗೇಶ್

author img

By

Published : Aug 25, 2022, 7:44 PM IST

'ದೇಶದ ಪ್ರತಿ ಮಗುವಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಅದಕ್ಕಾಗಿ ದೇಶದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅಮೂಲಾಗ್ರ ಸುಧಾರಣೆ, ಬದಲಾವಣೆ ತರಲಿರುವ ಮಹತ್ವಾಕಾಂಕ್ಷೆಯ 'ರಾಷ್ಟ್ರೀಯ ಶಿಕ್ಷಣ ನೀತಿ 2020' ಅನುಷ್ಠಾನಗೊಳಿಸುವಲ್ಲಿ ಕರ್ನಾಟಕ ಸರ್ಕಾರ ಮುಂಚೂಣಿಯಲ್ಲಿದೆ ಎಂದು ಸಚಿವ ನಾಗೇಶ್​ ಹೇಳಿದರು.

implementation-of-national-education-policy-2020-from-next-academic-year
ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಅಂಗನವಾಡಿ, ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ (2023-24) ರಾಜ್ಯದಲ್ಲಿ 'ರಾಷ್ಟ್ರೀಯ ಶಿಕ್ಷಣ ನೀತಿ 2020' ಅನುಷ್ಠಾನಕ್ಕೆ ಬರಲಿದೆ. 3 ವರ್ಷ ಮೇಲ್ಪಟ್ಟ ಮಕ್ಕಳ 'ಪೂರ್ವ ಬಾಲ್ಯಾವಸ್ಥೆ ಆರೈಕೆ ಮತ್ತು ಶಿಕ್ಷಣ'ವನ್ನು ರಾಜ್ಯದ 20 ಸಾವಿರ ಅಂಗನವಾಡಿಗಳು ಮತ್ತು ಶಾಲೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಹಾಲಪ್ಪ ಆಚಾರ್ ಅವರು ಜಂಟಿ ಮಾಧ್ಯಮಗೋಷ್ಟಿಯಲ್ಲಿ ಘೋಷಿಸಿದರು.

ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಜಂಟಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಸಚಿವ ಬಿ.ಸಿ. ನಾಗೇಶ್, 'ದೇಶದ ಪ್ರತಿ ಮಗುವಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಅದಕ್ಕಾಗಿ ದೇಶದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅಮೂಲಾಗ್ರ ಸುಧಾರಣೆ, ಬದಲಾವಣೆ ತರಲಿರುವ ಮಹತ್ವಾಕಾಂಕ್ಷೆಯ 'ರಾಷ್ಟ್ರೀಯ ಶಿಕ್ಷಣ ನೀತಿ 2020' ಅನುಷ್ಠಾನಗೊಳಿಸುವಲ್ಲಿ ಕರ್ನಾಟಕ ಸರ್ಕಾರ ಮುಂಚೂಣಿಯಲ್ಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದೆ. ಮುಂದಿನ ವರ್ಷದಿಂದಲೇ ಎನ್‌ಇಪಿ-2020 ಪ್ರಕಾರ, ಬುನಾದಿ ಶಿಕ್ಷಣವನ್ನು ನೀಡಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.

ಎನ್ಇಪಿ 2020 ಪ್ರಕಾರ, 'ಪೂರ್ವ ಬಾಲ್ಯಾವಸ್ಥೆ ಆರೈಕೆ ಮತ್ತು ಶಿಕ್ಷಣ' ಪಠ್ಯಕ್ರಮ ಚೌಕಟ್ಟು ರಚನೆಗೆ ಆರು ಸಮಿತಿಗಳನ್ನು ರಚಿಸಲಾಗಿದೆ. ಪಠ್ಯಕ್ರಮ ವಿನ್ಯಾಸ, ಪಠ್ಯಕ್ರಮ ಬೋಧನಾ ಮತ್ತು ಕಲಿಕಾ ಸಾಮಗ್ರಿಗಳು ಹಾಗೂ ಮೌಲ್ಯಮಾಪನ, ಸಾಮರ್ಥ್ಯ ಅಭಿವೃದ್ಧಿ, ಸಮುದಾಯ ತಲುಪುವಿಕೆ, ಮಗುವಿಗೆ ಆರಂಭಿಕ ಉತ್ತೇಜನ, ಮೇಲ್ವಿಚಾರಣೆ ಮತ್ತು ಉಸ್ತುವಾರಿ ವಿಷಯ ಸೇರಿ ಒಟ್ಟು ಆರು ಸಮಿತಿಗಳು ಪಠ್ಯಕ್ರಮ ಚೌಕಟ್ಟನ್ನು ಸಿದ್ಧಪಡಿಸಿವೆ ಎಂದರು.

ಇದನ್ನೂ ಓದಿ: ಹಲವು ನೀರಾವರಿ ಯೋಜನೆಗಳಿಗೆ ಸಂಪುಟ ಸಭೆ ಅನುಮೋದನೆ

ಕೇಂದ್ರ ಶಿಕ್ಷಣ ಇಲಾಖೆಯಿಂದ ಇದೇ ಸೆಪ್ಟಂಬರ್‌ನಲ್ಲಿ ಅಂತಿಮ ಪಠ್ಯಕ್ರಮ ಚೌಕಟ್ಟು ಲಭ್ಯವಾಗುವ ನಿರೀಕ್ಷೆ ಇದೆ. ಬಳಿಕ ರಾಜ್ಯದ ಪಠ್ಯಕ್ರಮ ಚೌಕಟ್ಟನ್ನು ಅಂತಿಮಗೊಳಿಸಲಾಗುತ್ತದೆ. ಪಠ್ಯಕ್ರಮ ಚೌಕಟ್ಟಿಗೆ ತಕ್ಕಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಅಗತ್ಯ ತರಬೇತಿಯನ್ನು ಡಿಎಸ್‌ಇಆರ್‌ಟಿ ಮೂಲಕ ಶಿಕ್ಷಣ ಇಲಾಖೆಯ ಅಧೀನದ ಸಂಸ್ಥೆಗಳಲ್ಲಿ ನೀಡಲಾಗುತ್ತದೆ. ಎನ್‌ಇಪಿ 2020 ಪರಿಣಾಮಕಾರಿ ಅನುಷ್ಠಾನಕ್ಕಾಗಿ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಜ್ಞರ ಸಮಿತಿಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಸಚಿವರು ತಿಳಿಸಿದರು.

ಮೊದಲ ಹಂತದ ತರಬೇತಿ : ರಾಜ್ಯದಲ್ಲಿ 66,361 ಅಂಗನವಾಡಿ ಕೇಂದ್ರಗಳಿವೆ. ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಯಕರ್ತೆಯರ ಪೈಕಿ 732 ಜನ ಸ್ನಾತಕೋತ್ತರ ಪದವೀಧರರಿದ್ದಾರೆ. 6,017 ಪದವೀಧರರು, 14,303 ಪಿಯುಸಿ ಮತ್ತು 40,786 ಅಂಗನವಾಡಿ ಕಾರ್ಯಕರ್ತೆಯರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆಯನ್ನು ಹೊಂದಿದ್ದಾರೆ. ಹೀಗಾಗಿ, ಎನ್‌ಇಪಿ-2020 ಪಠ್ಯಕ್ರಮದ ಕುರಿತು ತರಬೇತಿ ನೀಡಬಹುದು ಎಂದು ಸಚಿವ ಹಾಲಪ್ಪ ಆಚಾರ್ ಅವರು ಮಾಹಿತಿ ನೀಡಿದರು.

ರಾಷ್ಟ್ರೀಯ ಶಿಕ್ಷಣ ನೀತಿ 2020 ಆಶಯದಂತೆ ಕಲ್ಯಾಣ ಕರ್ನಾಟಕ ಭಾಗದ 14 ಸಾವಿರ ಅಂಗನವಾಡಿ ಕಾರ್ಯಕರ್ತೆಯರಿಗೆ ಟಾಟಾ ಫೌಂಡೇಶನ್ ಮೂಲಕ ಈಗಾಗಲೇ ತರಬೇತಿ ನೀಡಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರ ವಿದ್ಯಾರ್ಹತೆ ಅನುಸಾರ ಮೂರು ವಿಧದ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಶೈಕ್ಷಣಿಕ ವರ್ಷ ಆರಂಭದ ವೇಳೆಗೆ ತರಬೇತಿಯನ್ನು ಮುಕ್ತಾಯಗೊಳಿಸಲಾಗುತ್ತದೆ ಎಂದು ಸಚಿವರು ವಿವರಿಸಿದರು.

ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಠಿಕ ಆಹಾರ, ಆರೋಗ್ಯ, ಆರೈಕೆ ಮತ್ತು ಶಿಕ್ಷಣವನ್ನು ನೀಡಲಾಗುತ್ತಿದೆ. ಚಿಲಿಪಿಲಿ, ಚಿಲಿಪಿಲಿ ಪ್ಲಸ್ ಪಠ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ. 'ಎನ್‌ಇಪಿ 2020' ಮೂಲಕ ಈ ಕಾರ್ಯಕ್ರಮವನ್ನು ಇನ್ನಷ್ಟು ಸುಧಾರಣೆ ಮಾಡಿ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು ಎಂದು ಸಚಿವರಾದ ಹಾಲಪ್ಪ ಆಚಾರ್ ತಿಳಿಸಿದರು.

ಇದನ್ನೂ ಓದಿ: ಸೆ. 12ರಿಂದ ವಿಧಾನಮಂಡಲ ಅಧಿವೇಶನ, ಹುತಾತ್ಮ ಯೋಧರ ಕುಟುಂಬಕ್ಕೆ ಅನುಕಂಪದ ನೌಕರಿಗೆ ಒಪ್ಪಿಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.