ETV Bharat / state

ಅಕ್ರಮ ಡಿನೋಟಿಫಿಕೇಷನ್: ಮಾಜಿ ಸಿಎಂ ಕುಮಾರಸ್ವಾಮಿ ಹಾಜರಿಗೆ ನ್ಯಾಯಾಲಯ ಸೂಚನೆ

author img

By

Published : Feb 17, 2023, 8:13 AM IST

ಈ ವಿಚಾರಣೆ ವೇಳೆ ಗೈರಾಗಿರುವ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಮುಂದಿನ ವಿಚಾರಣೆ ವೇಳೆ ಕೋರ್ಟ್​ಗೆ ಹಾಜರಾಗುವಂತೆ ಸೂಚಿಸಿದೆ.

Civil Court Complex
ಸಿವಿಲ್​ ನ್ಯಾಯಾಲಯ ಸಂಕೀರ್ಣ

ಬೆಂಗಳೂರು: ಅಕ್ರಮ ಡಿನೋಟಿಫಿಕೇಶನ್​ ಪ್ರಕರಣದ ಆರೋಪಿ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರು ಮುಂದಿನ ವಿಚಾರಣೆಯಲ್ಲಿ ತಪ್ಪದೇ ಹಾಜರಾಗಬೇಕು ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಿಳಿಸಿದೆ. ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿಯ ಮಾಹಿತಿ ಹಕ್ಕು ಕಾರ್ಯಕರ್ತ ಎಂ ಎಸ್ ಮಹದೇವಸ್ವಾಮಿ ಅವರು ದಾಖಲಿಸಿರುವ ಪ್ರಕರಣವನ್ನು ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಿ, ಈ ಆದೇಶವನ್ನು ಹೊರಡಿಸಿದೆ.

ಈ ಪ್ರಕರಣದ ವಿಚಾರಣೆ ವೇಳೆ, ಪ್ರಕರಣದ ಇತರ ಆರೋಪಿಗಳಾದ ಪದ್ಮಾ, ಶ್ರೀದೇವಿ, ಚೇತನ್ ಕುಮಾರ್, ಕೆ ಬಿ ಶಾಂತಮ್ಮ, ಆರ್ ಬಾಲಕೃಷ್ಣ, ಜಿ ಮಲ್ಲಿಕಾರ್ಜುನ ಮತ್ತು ಪಿ ಜಗದೀಶ್ ಅವರು ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಆದರೆ, ಮೊದಲನೇ ಆರೋಪಿಯಾದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಆರನೇ ಆರೋಪಿ ರೇಖಾ ಎಸ್. ಚಂದ್ರು, ಏಳನೇ ಆರೋಪಿ ಯೋಗ ಮೂರ್ತಿ, 8ನೇ ಆರೋಪಿ ನರಸಿಂಹಲು ನಾಯ್ಡು, 10ನೇ ಆರೋಪಿ ಟಿ ಮುರಳೀಧರ್, 12ನೇ ಆರೋಪಿ ಇ ಎ ಯೋಗೇಂದ್ರನಾಥ್, 14 ಹಾಗೂ 18 ನೇ ಆರೋಪಿಗಳಾದ ಡಿ ಎಸ್ ದೀಪಕ್, ಎಂ ಸುಬ್ರಮಣಿ, ಬಾಲಾಜಿ ಇನ್ಫ್ರಾ, ಶುಭೋದಯ ಬಿಲ್ಡರ್ಸ್ ಮತ್ತು ಸನ್ರೈಸ್ ಬಿಲ್ಡರ್ಸ್ ಪ್ರತಿನಿಧಿಗಳು ಹಾಜರಾತಿಯಿಂದ ವಿನಾಯಿತಿ ಕೋರಿದ್ದರು.

ಮೊದಲ ಆರೋಪಿಯಾದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಮುಂದಿನ ವಿಚಾರಣೆಗೆ ತಪ್ಪದೇ ಹಾಜರುಪಡಿಸಲಾಗುವುದು ಎಂದು ಕುಮಾರಸ್ವಾಮಿ ಅವರ ಪರ ವಕೀಲ ನ್ಯಾಯಪೀಠಕ್ಕೆ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ವಿಚಾರಣೆಯನ್ನು ಮಾರ್ಚ್ 21ಕ್ಕೆ ಮುಂದೂಡಿದೆ.

ಪ್ರಕರಣದ ಹಿನ್ನೆಲೆ ಏನು?: ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಅವರು 2007ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಬೆಂಗಳೂರಿನ ಬನಶಂಕರಿ 5ನೇ ಹಂತದ ಹಲಗೆವಡೇರಹಳ್ಳಿ ವ್ಯಾಪ್ತಿಯಲ್ಲಿ ಬರುವ 3.34 ಎಕರೆಯಷ್ಟು ಭೂಮಿಯನ್ನು ಸರ್ಕಾರದ ಸ್ವಾಧೀನದಿಂದ ಕೈಬಿಟ್ಟು, ಅಕ್ರಮವಾಗಿ ಡಿನೋಟಿಪೈ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಡಿನೋಟಿಫಿಕೇಶನ್​ ಪ್ರಕರಣದ ಕುರಿತು ಸುದೀರ್ಘವಾದ ನತಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಬಿ ರಿಪೋರ್ಟ್​ ಸಲ್ಲಿಸಿದ್ದರು. ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್​ ಅನ್ನು ಪರಿಶೀಲಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿ ದೂರುದಾರ ಮಹದೇವಸ್ವಾಮಿ ಅವರು ಸಲ್ಲಿಸಿದ್ದ ಪ್ರತಿಭಟನಾ ಅರ್ಜಿಯನ್ನು ಮಾನ್ಯ ಮಾಡಿತ್ತು. ಇದಕ್ಕೆ ತಡೆ ನೀಡುವಂತೆ ಕೋರಿ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಅವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಆ ಅರ್ಜಿಯನ್ನು ಕೂಡ ಹೈಕೋರ್ಟ್​ ವಜಾ ಮಾಡಿತ್ತು. ಇದೀಗ ಆ ಕುರಿತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮತ್ತೆ ವಿಚಾರಣೆ ನಡೆಸಿದ್ದು, ಈ ವಿಚಾರಣೆಗೆ ದೂರಿನಲ್ಲಿ ದಾಖಲಾಗಿದ್ದ ಆರೋಪಿಗಳಲ್ಲಿ ಕೆಲವರಷ್ಟೇ ಹಾಜರಾಗಿದ್ದು, ಕುಮಾರಸ್ವಾಮಿ ಅವರನ್ನೂ ಸೇರಿಸಿ ಕೆಲವರು ಗೈರಾಗಿದ್ದರು. ಈ ವಿಚಾರಣೆಯಲ್ಲಿ ಗೈರಾಗಿರುವ ಎಲ್ಲ ಆರೋಪಿಗಳು ಹಾಗೂ ಹೆಚ್​ ಡಿ ಕುಮಾರಸ್ವಾಮಿ ಅವರು ಮುಂದಿನ ವಿಚಾರಣೆ ವೇಳೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ನ್ಯಾಯಾಲಯ ತಿಳಿಸಿದೆ..

ಇದನ್ನೂ ಓದಿ: ವಿಕಲಚೇತನ ಪಕ್ಷ ಎಂಬ ಟೀಕಿಗೆ ಎಚ್.ಡಿ.ಕುಮಾರಸ್ವಾಮಿ ತಿರುಗೇಟು- ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.