ETV Bharat / state

ವಿಧಾನಸಭೆ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ಅತಿದೊಡ್ಡ ಹಗರಣ ಬಹಿರಂಗ : ಹೆಚ್​ಡಿಕೆ ಬಾಂಬ್​

author img

By

Published : Sep 12, 2022, 1:43 PM IST

ವಿಧಾನಸಭೆ ಅಧಿವೇಶನದಲ್ಲಿ ಈ ವಿಚಾರದ ಬಗ್ಗೆ ಚರ್ಚೆ ಮಾಡಲು‌‌ ಕಾಂಗ್ರೆಸ್ ಪಕ್ಷ ಸಹಕರಿಸಬೇಕು. ಈ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಜನರಿಗೆ ಗೊತ್ತಾಗಬೇಕು. ನಾನು ಈ ದಾಖಲೆಗಾಳನ್ನು ಬಿಡುಗಡೆ ಮಾಡುತ್ತಿರುವುದು ಈ ಸರ್ಕಾರದ ಹಗರಣಗಳ ಒಂದು ಸ್ಯಾಂಪಲ್ ಮಾತ್ರ. ಇದನ್ನು ಬಿಜೆಪಿಯವರು ಅರಗಿಸಿಕೊಳ್ಳಲಿ ಸಾಕು ಎಂದು ಕುಮಾರಸ್ವಾಮಿ ಗುಡುಗಿದ್ದಾರೆ.

i-will-reveal-biggest-scam-in-assembly-session-hd-kumaraswamy
ವಿಧಾನಸಭೆ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ಅತಿದೊಡ್ಡ ಹಗರಣ ಬಹಿರಂಗ : ಹೆಚ್​ಡಿಕೆ ಬಾಂಬ್​

ಬೆಂಗಳೂರು : ರಾಜ್ಯ ಸರ್ಕಾರದ ಅತಿದೊಡ್ಡ ಹಗರಣವನ್ನು ವಿಧಾನಸಭೆ ಕಲಾಪದಲ್ಲಿ ಬಹಿರಂಗಪಡಿಸುವುದಾಗಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೊಸ ಬಾಂಬ್​ ಸಿಡಿಸಿದ್ದಾರೆ.

ವಿಧಾನಸೌಧದ ಜೆಡಿಎಸ್‍ ಕಚೇರಿಯಲ್ಲಿ ಇಂದು ನಡೆದ ಶಾಸಕಾಂಗ ಪಕ್ಷದ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಭ್ರಷ್ಟಾಚಾರದ ಬಗ್ಗೆ ದಾಖಲೆಗಳನ್ನು ಕೊಡಿ ಎಂದು ಹಲವು ಬಾರಿ ಕೆಣಕಿದ್ದಾರೆ. ಸಾವಿರಾರು ಕೋಟಿ ಬೆಲೆಬಾಳುವ ಸರ್ಕಾರಿ ಆಸ್ತಿಯನ್ನು ಅಕ್ರಮವಾಗಿ ಪರಭಾರೆ ಮಾಡಲು ಹೊರಟ ಅತಿದೊಡ್ಡ ಅಕ್ರಮದ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಸದನದಲ್ಲಿ ಈ ವಿಚಾರದ ಬಗ್ಗೆ ಚರ್ಚೆ ಮಾಡಲು‌‌ ಕಾಂಗ್ರೆಸ್ ಪಕ್ಷ ಸಹಕರಿಸಬೇಕು. ಈ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಜನರಿಗೆ ಗೊತ್ತಾಗಬೇಕು. ನಾನು ಈ ದಾಖಲೆಗಳನ್ನು ಬಿಡುಗಡೆ ಮಾಡುತ್ತಿರುವುದು ಈ ಸರ್ಕಾರದ ಹಗರಣಗಳ ಒಂದು ಸ್ಯಾಂಪಲ್ ಮಾತ್ರ. ಇದನ್ನು ಬಿಜೆಪಿಯವರು ಅರಗಿಸಿಕೊಳ್ಳಲಿ ಸಾಕು ಎಂದು ಹೆಚ್​​ಡಿಕೆ ಗುಡುಗಿದರು.

i-will-reveal-biggest-scam-in-assembly-session-hd-kumaraswamy
ಜೆಡಿಎಸ್‍ ಶಾಸಕಾಂಗ ಪಕ್ಷದ ಸಭೆ

ನಾನು ಸುಖಾಸುಮ್ಮನೆ ಸದನದ ಸಮಯ ಹಾಳು ಮಾಡುವುದಿಲ್ಲ. ಇವತ್ತಿನ ಜೆಡಿಎಸ್‍ ಶಾಸಕಾಂಗ ಪಕ್ಷದ ಸಭೆಯಲ್ಲಿಯೂ ಈ ವಿಷಯ ಸೇರಿ ಹಲವಾರು ವಿಚಾರವಾಗಿ ಚರ್ಚೆ ಮಾಡಲಾಗಿದೆ. ರಾಜ್ಯದಲ್ಲಿ ಇತ್ತೀಚೆಗೆ ಬೆಂಗಳೂರು ನಗರ ಸೇರಿ 22 ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿದೆ. ಇದರಿಂದ ದೊಡ್ಡ ಮಟ್ಟದ ನಷ್ಟವಾಗಿದೆ ಎಂದು ಹೇಳಿದರು.

ಚರ್ಚೆಗೆ ಆದ್ಯತೆ ಕೊಡಲಿ: ಬೆಳೆ ಹಾನಿ, ಮನೆ ಕುಸಿತವೂ ಆಗಿದೆ. ಇದರ ಬಗ್ಗೆ ಸದನದಲ್ಲಿ ವಿಶೇಷವಾಗಿ ಚರ್ಚೆ ಮಾಡಲು ನಿರ್ಧಾರ‌ ಮಾಡಲಾಯಿತು. ಗುತ್ತಿದಾರರಿಂದ ಪರ್ಸೆಂಟೇಜ್ ಪಡೆಯುವ ಆರೋಪದ ಬಗ್ಗೆ ಬೀದಿಯಲ್ಲಿ ಚರ್ಚೆ ನಡೆಯುತ್ತಿದೆ. ನಾಳೆಯಿಂದ 9 ದಿನಗಳ ಕಾಲ ಅಧಿಕೃತ ಪ್ರತಿಪಕ್ಷ ಯಾವ ರೀತಿಯ ಚರ್ಚೆಗೆ ಆದ್ಯತೆ ಕೊಡಲಿದೆ. ಉತ್ತಮ ರೀತಿಯ ಕಲಾಪಕ್ಕೆ ಅವಕಾಶ ಯಾವ ರೀತಿ ಇರುತ್ತದೆ ಎಂಬುದನ್ನು ನೋಡಬೇಕು. ಸುಮ್ಮನೆ ವಿಚಾರ ಇಲ್ಲದೆ, ದಾಖಲೆ ಇಲ್ಲದೇ ಮಾತಾಡುವುದರಿಂದ ಸದನದ ಕಲಾಪಕ್ಕೆ ಅಡ್ಡಿ ಆಗಲಿದೆ ಎಂದು ಹೇಳಿದರು.

ಸುಮ್ಮನೆ ನನ್ನನ್ನು ಕೆಣಕಿದ್ದಾರೆ: ಜನತಾ ದಳದ ಶಾಸಕರು ಇದ್ದಾರೆ ಎಂಬುದನ್ನು ಮಾಧ್ಯಮಗಳು ಮರೆತಿವೆ. ಅದು ನಮ್ಮ ಲೋಪವೂ ಇರಬಹುದು. ಇತ್ತೀಚೆಗೆ ನಾನು ಸದನದ ಕಲಾಪದಲ್ಲಿ ದೊಡ್ಡ ಮಟ್ಟದ ಚರ್ಚೆಯಲ್ಲಿ ಪಾಲ್ಗೊಂಡಿಲ್ಲ. ಯಾವುದಾದರೂ ಮುಖ್ಯ ವಿಚಾರ ಇದ್ದಾಗ ಭಾಗಿಯಾಗಿದ್ದೇನೆ. ನಾನು ಭಾಗಿಯಾದಾಗ ದಾಖಲೆ ಸಮೇತ ಮಾತನಾಡಿದ್ದೇನೆ. ಒಂದಿಷ್ಟು ಜನ ಹೇಳುತ್ತಿದ್ದಾರೆ, ಸದನದಲ್ಲಿ ಏನು ಮಾತಾಡಿ ಬಿಟ್ಟಾರು ಅಂತ ಹೇಳಿದ್ದಾರೆ. ಯಾರೋ ಸುಮ್ಮನೆ ನನ್ನನ್ನು ಕೆಣಕಿದ್ದಾರೆ. ಅವರ ಬಳಿ ನಾನು ಪಾಠ ಹೇಳಿಸಿಕೊಳ್ಳಬೇಕಿದೆ ಎಂದು ವ್ಯಂಗ್ಯವಾಡಿದರು.

ಯಾರೂ ಸಹ ಯಾವುದೇ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತಿಲ್ಲ. ಸಾರ್ವಜನಿಕ ಆಸ್ತಿಯನ್ನು ಹಣಕ್ಕೋಸ್ಕರ ಮಾರಾಟಕ್ಕೆ ಇಡುತ್ತಿದ್ದಾರೆ. ಇಂತಹದೊಂದು ದಾಖಲೆ ಸದನದಲ್ಲಿ‌ ಇಡಬೇಕಿದೆ. ನಾಡಿನ‌ ಜನತೆಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒಂದು ಸಂದೇಶ ಹೋಗಬೇಕು‌ ಎಂದರು.

ಸರ್ಕಾರಕ್ಕೆ ಎಂಟು-ಹತ್ತು ಸಾವಿರ ಕೋಟಿ ಬರಬೇಕಿದೆ. ಅಂಥಹದೊಂದು ದಾಖಲೆ ಇಡುತ್ತೇನೆ. 1957ರ ಇಸವಿಯ ವಿಷಯವಿದು. 2008-09ರಲ್ಲೇ 5 ಸಾವಿರ ಕೋಟಿ ಅಂತಾ ಅಂದಾಜು ಮಾಡಿದ್ದರು. ಎಂತಹ ಆದೇಶ ಮಾಡಿದ್ದಾರೆಂದರೆ, ಅದನ್ನು ನಾವು ಕಲಿಯಬೇಕು.‌ ರಾಮನಗರ, ಚನ್ನಪಟ್ಟಣ ಅಷ್ಟೇ ಅಲ್ಲ, ಇಡೀ ರಾಜ್ಯದಲ್ಲಿ ಆಗಿದೆ. ಮುಖ್ಯಮಂತ್ರಿ ಕೂಡ ಭರವಸೆ ಕೊಟ್ಟಿದ್ದಾರೆ.‌ ಮೂಲಭೂತ ಸೌಕರ್ಯ ಸರಿ ಮಾಡುತ್ತೇವೆ ಅಂದಿದ್ದಾರೆ ಎಂದು ಹೇಳಿದರು.

ಕೆಸಿಆರ್​ ಕಲ್ಪನೆ: ತೃತೀಯ ರಂಗ ಎಂಬುದು ಪ್ರಶ್ನೆ ಅಲ್ಲ. ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ದೇಶದ ಸಮಸ್ಯೆ ಪರಿಹಾರಕ್ಕೆ ಅವರದ್ದೇ ಆದ ಒಂದು ಕಲ್ಪನೆ ಇಟ್ಟುಕೊಂಡಿದ್ದಾರೆ. ರೈತರ ವಿಚಾರದಲ್ಲಿ ಯಾವ ರೀತಿ ಸಹಾಯ ಆಗಬೇಕು. ರಾಷ್ಟ್ರಮಟ್ಟದಲ್ಲಿ ಯಾವ ರೀತಿ ಮುನ್ನಡೆಯಬೇಕು ಎಂಬ ಕಲ್ಪನೆ ಅವರಿಗಿದೆ. ಅದಕ್ಕೆ ನಮ್ಮ ಸಹಾಯ ಕೋರಿದ್ದಾರೆ. ನಾವು ಅವರ ಜೊತೆ ಕೈ ಜೋಡಿಸುವ ನಿಟ್ಟಿನಲ್ಲಿ ಯೋಚಿಸಲಾಗಿದೆ ಎಂದು ತಿಳಿಸಿದರು.

ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನೇ ಅನೇಕ ಬಾರಿ ಹೇಳಿದ್ದೇನೆ. ಈ ಚುನಾವಣೆ ನಮಗೆ ನಿರ್ಣಾಯಕ. ಈ ಚುನಾವಣೆ ಮುಂದಿನ ದಿನಗಳಿಗೆ ಬುನಾದಿ ಇದ್ದ ಹಾಗೆ. ಮುಂದಿನ 25 ವರ್ಷಕ್ಕೆ ಏನು ಆಗಬೇಕು ಅನ್ನೋದು ಮುಖ್ಯ. ಅದಕ್ಕಾಗಿ ಈ ಚುನಾವಣೆ ತುಂಬಾ ಮುಖ್ಯ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ ಎಂದರು.

ಇದನ್ನೂ ಓದಿ: ರಾಜ್ಯ ಸರ್ಕಾರದ ವೈಫಲ್ಯ ವಿರುದ್ಧ ಉಭಯ ಸದನಗಳಲ್ಲೂ ಹೋರಾಟ: ಬಿ ಕೆ ಹರಿಪ್ರಸಾದ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.