ETV Bharat / state

ನಾನು ಒಮ್ಮೊಮ್ಮೆ ಸುಳ್ಳು ಹೇಳುತ್ತೇನೆ, ನೂರಕ್ಕೆ ನೂರು ಪ್ರಾಮಾಣಿಕನಲ್ಲ: ಸದನದಲ್ಲಿ ಸಿದ್ದರಾಮಯ್ಯ ಹೇಳಿಕೆ

author img

By

Published : Sep 13, 2022, 8:46 PM IST

ಸತ್ಯ ಹೇಳುವುದರಲ್ಲಿ ಸಚಿವ ಮಾಧುಸ್ವಾಮಿ ಮೊದಲಿಗರು. ನಾವು ಮ್ಯಾನೇಜ್ ಮಾಡ್ತಿದ್ದೀವಿ ಎಂದು ಮಾಧುಸ್ವಾಮಿ ಅವರೇ ಹೇಳಿದ್ದಾರೆ ಎಂದು ಸಿದ್ದರಾಮಯ್ಯ ಕಾಲೆಳೆದರು. ಈ ವೇಳೆ ಹಾಗಾದರೆ ನೀವು ಸುಳ್ಳು ಹೇಳ್ತೀರಾ ಎಂದು ಸಚಿವ ಮಾಧುಸ್ವಾಮಿ ಪ್ರಶ್ನಿಸಿದರು.

i-lie-sometimes-says-congress-leader-siddaramaiah-in-assembly
ನಾನು ಒಮ್ಮೊಮ್ಮೆ ಸುಳ್ಳು ಹೇಳುತ್ತೇನೆ, ನೂರಕ್ಕೆ ನೂರು ಪ್ರಾಮಾಣಿಕನಲ್ಲ: ಸದನದಲ್ಲಿ ಸಿದ್ದರಾಮಯ್ಯ ಹೇಳಿಕೆ

ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ಸಿದ್ದರಾಮಯ್ಯ ಹಾಗೂ ಸಚಿವ ಮಾಧುಸ್ವಾಮಿ ಮಧ್ಯೆ ಸುಳ್ಳಿನ ಸುತ್ತ ಸ್ವಾರಸ್ಯಕರ ಚರ್ಚೆ ನಡೆಯಿತು. ಮಳೆ ಅನಾಹುತ ಬಗ್ಗೆ ಚರ್ಚೆ ನಡೆಸುತ್ತಾ ಸಿದ್ದರಾಮಯ್ಯ ನಾನು ಒಮ್ಮೊಮ್ಮೆ ಸುಳ್ಳು ಹೇಳ್ತೀನಿ. ನಾನು ನೂರಕ್ಕೆ ನೂರು ಪ್ರಾಮಾಣಿಕ ಅಲ್ಲ. ಒಂದೊಂದು ಸಾರಿ ಸುಳ್ಳು ಹೇಳುವ ಸಂದರ್ಭ ಬರುತ್ತದೆ ಎಂದು ಬಹಿರಂಗ ‌ಪಡಿಸಿದರು. ಒಳ್ಳೆಯದಕ್ಕಾಗಿ ಒಮ್ಮೊಮ್ಮೆ ಸುಳ್ಳು ಹೇಳಬೇಕಾಗುತ್ತೆ. ಆದರೆ, ನನಗೋಸ್ಕರ ರಾಜಕೀಯ ಲಾಭಕ್ಕಾಗಿ ಸುಳ್ಳು ಹೇಳಲ್ಲ ಎಂದು ಸ್ಪಷ್ಟನೆಯನ್ನೂ ನೀಡಿದರು.

ಇದನ್ನೂ ಓದಿ: ಆ ಆಡಿಯೋ ನನ್ನದೇ, ಗೊತ್ತಿಲ್ಲದೇ ಕಾಲ್ ರೆಕಾರ್ಡ್ ಮಾಡೋದು ಅಪರಾಧ: ಸಚಿವ ಮಾಧುಸ್ವಾಮಿ

ಅಲ್ಲದೇ, ಸರ್ಕಾರದ ಕಾರ್ಯವೈಖರಿ ಬಗ್ಗೆ ಸಚಿವ ಮಾಧುಸ್ವಾಮಿ ಫೋನ್ ಸಂಭಾಷಣೆಯನ್ನು ಉಲ್ಲೇಖಿಸುತ್ತಾ, ಸತ್ಯ ಹೇಳುವುದರಲ್ಲಿ ಸಚಿವ ಮಾಧುಸ್ವಾಮಿ ಮೊದಲಿಗರು. ನಾವು ಮ್ಯಾನೇಜ್ ಮಾಡ್ತಿದ್ದೀವಿ ಎಂದು ಮಾಧುಸ್ವಾಮಿ ಅವರೇ ಹೇಳಿದ್ದಾರೆ ಎಂದು ಸಿದ್ದರಾಮಯ್ಯ ಕಾಲೆಳೆದರು. ಈ ವೇಳೆ ಹಾಗಾದರೆ ನೀವು ಸುಳ್ಳು ಹೇಳ್ತೀರಾ ಎಂದು ಸಚಿವ ಮಾಧುಸ್ವಾಮಿ ಪ್ರಶ್ನಿಸಿದರು. ಆಗ ಸಿದ್ದರಾಮಯ್ಯ ಒಂದೊಂದು ಸಾರಿ ನಾನು ಸುಳ್ಳು ಹೇಳುತ್ತೇನೆ ಎಂದು ಒಪ್ಪಿಕೊಂಡರು.

ಮೊಟ್ಟೆ ಎಸೆದರೆ ನೀವೇನು ವೀರರಾ, ಶೂರರಾ?: ಕೊಡಗಿನಲ್ಲಿ ಮೊಟ್ಟೆ ಎಸೆದ ವಿಚಾರವಾಗಿಯೂ ಪ್ರತಿಪಕ್ಷ ಸದಸ್ಯರು ಹಾಗೂ ಆಡಳಿತ ಪಕ್ಷ ಸದಸ್ಯರ ನಡುವೆ ವಾಕ್ಸಮರ ನಡೆಯಿತು. ಮಳೆ ಹಾನಿ ಪರಿಶೀಲನೆಗೆ ಕೊಡಗು, ಚಿಕ್ಕಮಗಳೂರು ಜಿಲ್ಲೆ ಗಳಿಗೆ ಹೋಗಿದ್ದೆ. ಕೊಡಗು ಹೋಗುತ್ತಿದ್ದಾಗ ಅಲ್ಲಿ ನನಗೆ ಕಪ್ಪು ಬಾವುಟ ತೋರಿಸಿ ಮೊಟ್ಟೆ ಹೊಡೆಯಲು ಶುರು ಮಾಡಿದರು ಎಂದು ಸಿದ್ದರಾಮಯ್ಯ ವಿಷಯ ಪ್ರಸ್ತಾಪಿಸಿದರು.

ಈ ವೇಳೆ ಸ್ಪೀಕರ್ ಕಾಗೇರಿ ಮಧ್ಯಪ್ರವೇಶಿಸಿ ಅದು ಬೇರೆ ಯಾವುದೋ ಕಾರಣಕ್ಕೆ ಎಂದು ಮಾಧ್ಯಮಗಳಲ್ಲಿ ಬರುತ್ತಿತ್ತು ಎಂದರು. ಆಗ ನಿಮಗೆ ಗೊತ್ತಾ ಎಂದು ಸಿದ್ದರಾಮಯ್ಯ ಮರು ಪ್ರಶ್ನಿಸಿದರು. ಈ ವೇಳೆ ಕೊಡಗಿನವರು ಅತಿವೃಷ್ಟಿ ಪರಿಶೀಲನೆ ಮಾಡಲು ಬಂದಾಗ ಹೀಗೆ ಮಾಡಿದ್ರಾ ಎಂದು ಸ್ಪೀಕರ್ ಪ್ರಶ್ನೆ ಮಾಡಿದರು. ಆಗ ಸಾವರ್ಕರ್, ಟಿಪ್ಪು ಬಗ್ಗೆ ಮಾತನಾಡಿದ್ದೀರಿ ಎಂದು ಬಿಜೆಪಿ ಶಾಸಕ ಕೆಜಿ ಬೋಪಯ್ಯ ಅವರು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು. ಈ ವೇಳೆ ಶಾಸಕ ಅಪ್ಪಚ್ಚು ರಂಜನ್ ಕೂಡ ಸಾಥ್ ‌ನೀಡಿದರು.

ಇದನ್ನೂ ಓದಿ: ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿಗೆ ಬಿಜೆಪಿಗರಿಂದ ಮೊಟ್ಟೆ ಎಸೆತ, ಕಪ್ಪು ಬಾವುಟ ಪ್ರದರ್ಶನ

ಈ ವೇಳೆ ಆಕ್ರೋಶಗೊಂಡ ಸಿದ್ದರಾಮಯ್ಯ, ಕಪ್ಪು ಬಾವುಟ, ಮೊಟ್ಟೆ ಹೊಡೆಯುವುದು ನಮಗೂ ಗೊತ್ತು. ನಾವು ಹಿಂದೆ ಇದೆ ಮಾಡಿರುವುದು. ಇದಕ್ಕೆಲ್ಲಾ ನಾನು ಹೆದರೋದಿಲ್ಲ. ಮೊಟ್ಟೆ ಎಸೆದರೆ ನೀವೇನು ವೀರರಾ, ಶೂರರಾ?. ಇದಕ್ಕೆಲ್ಲಾ ಹೆದರುವ ಮಕ್ಕಳಲ್ಲ ನಾವು. ಅದೇ ಮೊಟ್ಟೆ ಎಸೆಯುವ ಕೆಲಸ ಇಡೀ ರಾಜ್ಯಾದ್ಯಂತ ಮಾಡಿಸಬಲ್ಲೆ. ಆದರೆ, ಅಂತ ಕೆಲಸ ಮಾಡಲ್ಲ ಎಂದರು.

ಶಾಸಕ ಅಪ್ಪಚ್ಚು ರಂಜನ್, ಮೊಟ್ಟೆ ಹೊಡೆದಿದ್ದು ನಿಮ್ಮ ಪಕ್ಷದವರೇ ಎಂದರು. ಇದಕ್ಕೆ ಮತ್ತಷ್ಟು ಸಿಟ್ಟಾದ ಸಿದ್ದರಾಮಯ್ಯ, ಕೂತ್ಕೊಳ್ರಿ, ಹೋಗಿ ಬಿಡಿಸಿಕೊಂಡು ಬಂದವರು ನೀವೇ ತಾನೆ ಎಂದು ತರಾಟೆಗೆ ತೆಗೆದುಕೊಂಡ‌ರು. ನಿಮ್ಮ ಜೊತೆಗಿರುವ ಪೋಟೋ ಇದೆ. ನಾಚಿಕೆ ಆಗಲ್ವಾ?. ಎಲ್ಲ ಅಪ್ಪಚ್ಚು ರಂಜನ್ ಮಾಡಿಸಿದ್ದು ಎಂದು ಆರೋಪಿಸಿದರು. ಈ ವೇಳೆ ಎರಡೂ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಕೊಡಗಿನಲ್ಲಿ ಅಭಿವೃದ್ಧಿ ಆಗಿಲ್ಲ: ಈ ಹಿಂದೆ ಟಿಪ್ಪು ಪೇಟ ಹಾಕೊಂಡು ಖಡ್ಗ ಹಿಡಿದಿದ್ರಲ್ಲ ನಾಚಿಕೆ ಆಗಲ್ವಾ ನಿಮಗೆ ಎಂದು ಬಿಜೆಪಿ ನಾಯಕರ ವಿರುದ್ಧ ತಿರುಗಿ ಬಿದ್ದ ಸಿದ್ದರಾಮಯ್ಯ, ಕೊಡಗಿನಲ್ಲಿ ಒಂದು ರೂಪಾಯಿ ಅಭಿವೃದ್ಧಿ ಆಗಿಲ್ಲ. ಕೊಡಗಿನ ಜನ ಒಳ್ಳೆಯವರು. ಆದರೆ, ನಿಮ್ಮ ನಡವಳಿಕೆಯಿಂದ ಕೊಡಗು ಹಾಳಾಗುತ್ತಿದೆ. ಪೊಲೀಸರು ಘಟನೆ ಆದಾಗ ನಿಷ್ಕ್ರಿಯರಾಗಿದ್ದರು. ಎಸ್ಪಿ​ಗೆ ಕೆಲಸ ಮಾಡಲು ನಾಲಾಯಕ್ ಎಂದು ಹೇಳಿದ್ದೆ ಎಂದು ಕಿಡಿಕಾರಿದರು.

ಆಗ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಪೊಲೀಸರು ನಿಷ್ಕ್ರಿಯರಾಗಿರಲಿಲ್ಲ. ಸೂಕ್ತ ಬಂದೋಬಸ್ತ್ ಹಾಗೂ ಎಲ್ಲ ರೀತಿಯಲ್ಲಿ ರಕ್ಷಣೆ ನೀಡಿದ್ದಾರೆ ಎಂದು ಸಮರ್ಥನೆ ಮಾಡಿಕೊಂಡರು. ಆಗ ಸಿದ್ದರಾಮಯ್ಯ, ಮೊಟ್ಟೆ ಎಸೆದವರನ್ನು ಪೊಲೀಸ್ ಠಾಣೆಯಿಂದ ಬಿಡಿಸಲು ಶಾಸಕ ಅಪ್ಪಚ್ಚು ರಂಜನ್ ಏಕೆ ಹೋದರು ಎಂದು ಗರಂ ಆದರು.

ಇದಕ್ಕೆ ಅಪ್ಪಚ್ಚು ರಂಜನ್, ನಾವು ಪೊಲೀಸ್​ ಸ್ಟೇಷನ್​ಗೆ ಹೋಗಿದ್ದು ಕಪ್ಪು ಬಾವುಟ ಹಿಡಿದವರ ಬಿಡಿಸೋಕೆ ಎಂದರು. ಈ ವೇಳೆ ಸಿದ್ದರಾಮಯ್ಯ, ಇವರು ಕುಮ್ಮಕ್ಕು ಕೊಡದೇ ಇದ್ದರೆ, ಮೊಟ್ಟೆ ಎಸೆತಾ ಇದ್ರಾ?. ಜನಾರ್ದನ ರೆಡ್ಡಿ ಬಳ್ಳಾರಿಗೆ ಬನ್ನಿ ಎಂದು ಸವಾಲು ಹಾಕಿದ ಹಾಗೆ ಕೊಡಗಿಗೆ ಬನ್ನಿ ಎಂದು ಬೋಪಯ್ಯ ಸವಾಲು ಹಾಕಿದರೆ. 144 ಸೆಕ್ಷನ್ ನೀವು ಹಾಕದೇ ಇರಬೇಕಾಗಿತ್ತು. ನಾಳೆಯೇ ಬರ್ತೀನಿ ನಿಮ್ಮ‌ ಕೊಡಗಿಗೆ, ‌ನಿಮ್ಮ ಮನೆಗೆ ಬರ್ತೀನಿ. ಏನು‌ ಕೊಡಗು ನಿಮ್ಮದಾ? ನಿಮ್ಮ ಸಂಸ್ಥಾನನಾ? ಎಂದು ಗುಡುಗಿದರು. ಇದೇ ವೇಳೆ ಬೋಪಯ್ಯ ಸಮರ್ಥನೆ ಮಾಡುತ್ತಾ, ನಿಮ್ಮ ವಕ್ತಾರರು ಸವಾಲು ಹಾಕಿದ್ದರು. ಹೀಗಾಗಿ ನಾನು ಹೇಳಿದ್ದು ಎಂದರು.

ಇದನ್ನೂ ಓದಿ: ಒಂದೂವರೆ ಅಡಿ ನೀರಲ್ಲಿ ಬೋಟ್​ನಲ್ಲಿ ಹೋದರಲ್ಲ ಪುಣ್ಮಾತ್ಮರು ಎಂದ ಸಿಎಂ: ನನ್ನ ಸ್ವಂತ ಬೋಟ್​ನಲ್ಲಿ ಹೋಗಿಲ್ಲ ಎಂದ ಸಿದ್ದು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.