ETV Bharat / state

ಧರ್ಮರಕ್ಷಣೆ ಬಗ್ಗೆ ಪ್ರವಚನ ಕೊಟ್ಟಿದ್ದೆ, ವಿಧ್ವಂಸಕ ಕೃತ್ಯವೆಸಗಲು ಹೇಳಿಲ್ಲ: ಸಿಸಿಬಿ ವಿಚಾರಣೆ ವೇಳೆ ಶಂಕಿತ ಉಗ್ರ ಟಿ.ನಜೀರ್ ಹೇಳಿಕೆ

author img

By

Published : Aug 1, 2023, 5:09 PM IST

''ಧರ್ಮರಕ್ಷಣೆ ಬಗ್ಗೆ ಪ್ರವಚನ ನೀಡಿದ್ದೆ. ವಿಧ್ವಂಸಕ ಕೃತ್ಯವೆಸಗಲು ಹೇಳಿಲ್ಲ'' ಎಂದು ಶಂಕಿತ ಉಗ್ರ ಟಿ.ನಜೀರ್, ಸಿಸಿಬಿ ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾನೆ.

CCB interrogation  Suspected terrorist arrest case
ಧರ್ಮರಕ್ಷಣೆ ಬಗ್ಗೆ ಪ್ರವಚನ ಕೊಟ್ಟಿದ್ದೆ, ವಿಧ್ವಂಸಕ ಕೃತ್ಯವೆಸಗಲು ಹೇಳಿಲ್ಲ: ಸಿಸಿಬಿ ವಿಚಾರಣೆ ವೇಳೆ ಶಂಕಿತ ಉಗ್ರ ಟಿ.ನಜೀರ್ ಹೇಳಿಕೆ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ವಿಧ್ವಂಸಕ‌ ಕೃತ್ಯವೆಸಗಲು ಶಂಕಿತ ಉಗ್ರರಿಗೆ ಜೈಲಿನಲ್ಲೇ ತರಬೇತಿ ನೀಡಿದ್ದ ಆರೋಪದಡಿ 2008 ಬೆಂಗಳೂರು ಸರಣಿ ಬಾಂಬ್ ಸ್ಫೋಟದ ಆರೋಪಿಯಾಗಿರುವ ಟಿ. ನಜೀರ್​​ನನ್ನು ಸಿಸಿಬಿ ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ವೇಳೆ ಧರ್ಮ ರಕ್ಷಣೆಗಾಗಿ ಪ್ರೇರಣೆ ನೀಡಿದ್ದು, ಹೊರತುಪಡಿಸಿದರೆ ಬಾಂಬ್ ಸ್ಫೋಟಿಸಲು ಹೇಳಿಲ್ಲ ಎಂದು ಹೇಳಿಕೆ ನೀಡಿದ್ದಾನೆ.

ಸ್ಫೋಟದ ಸಂಚಿನ ಪ್ರಕರಣ ಪ್ರಮುಖ ಆರೋಪಿ ಟಿ. ನಜೀರ್, 20 ತಿಂಗಳು ಕಾಲ ಜೈಲಿನಲ್ಲಿರುವಾಗ ಉಗ್ರ ಕೃತ್ಯವೆಸಗಲು ಶಂಕಿತರಿಗೆ ಬ್ರೈನ್ ವಾಶ್ ಮಾಡಿದ್ದ ಎಂಬುದರ ಬಗ್ಗೆ ಸಿಸಿಬಿ ತನಿಖೆ ವೇಳೆ‌ ಕಂಡುಬಂದಿತ್ತು. ಶಂಕಿತರ ಹೇಳಿಕೆ ಆಧರಿಸಿ ಸೆಂಟ್ರಲ್ ಜೈಲಿನಲ್ಲಿದ್ದ ಟಿ. ನಜೀರ್​ನನ್ನು ಬಾಡಿ ವಾರೆಂಟ್ ಪಡೆದು ಸಿಸಿಬಿ ತೀವ್ರ ವಿಚಾರಣೆಗೊಳಪಡಿಸಿತ್ತು‌. ಧರ್ಮ ರಕ್ಷಣೆ ಬಗ್ಗೆ ಸಹ ಕೈದಿಗಳಿಗೆ ಪ್ರವಚನ ಮಾಡಿದ್ದೆ. ಬಾಂಬ್ ಸ್ಫೋಟವಾಗಲಿ, ಗ್ರೆನೇಡ್ ಹಾಗೂ ಗನ್ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದಾನೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಜೈಲಿನಲ್ಲಿರುವಾಗ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮೊಹಮ್ಮದ್ ಜುನೈದ್ ಸೇರಿ ಹಲವರಿಗೆ ಧರ್ಮ ರಕ್ಷಣೆ ಮಾಡಬೇಕು ಎಂದು ಪ್ರವಚನ ಕೊಟ್ಟಿದ್ದೆ. ಧರ್ಮವನ್ನ ಉಳಿಸಿ ಬೆಳೆಸಬೇಕು ಎಂದು ಪ್ರೇರಣೆ ನೀಡಿದ್ದೆ. ಎಲ್ಲಿಯೂ ವಿಧ್ವಂಸಕ ಕೃತ್ಯವೆಸಗುವಂತೆ ಹೇಳಿಲ್ಲ. ಜೈಲಿನಿಂದ ಹೊರಬಂದ ಬಳಿಕ ಒಳ್ಳೆಯವನಾಗಿ ಬದುಕಬೇಕು ಎಂದುಕೊಂಡಿದ್ದೇನೆ ಎಂದು ಸಿಸಿಬಿ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಿರುವುದಾಗಿ ತಿಳಿದುಬಂದಿದೆ.

ಜೈಲಿನಲ್ಲಿರುವಾಗ ಮೊಬೈಲ್ ಬಳಕೆ ಮಾಡಿರುವುದಾಗಿ ಒಪ್ಪಿಕೊಂಡಿರುವ ನಜೀರ್, ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ. ಮೊಬೈಲ್ ಬಳಸಿರುವುದು ಗೊತ್ತಾಗುತ್ತಿದ್ದಂತೆ ಜೈಲಿನ ಅಧಿಕಾರಿಗಳು ಸರ್ಚ್ ಮಾಡಿದ್ದಾರೆ. ಜೊತೆಗೆ ಸಿಸಿಬಿ ಅಧಿಕಾರಿಗಳು ಸಹ ಜೈಲಿಗೆ ತೆರಳಿ ಮಹಜರು ಮಾಡಲಿದ್ದಾರೆ. ನಜೀರ್ ಮೊಬೈಲ್ ವಶಕ್ಕೆ‌ ಪಡೆದುಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಈ ಹಿಂದೆ, ಶಂಕಿತ ಉಗ್ರನ ಮನೆಯಲ್ಲಿ 4 ಹ್ಯಾಂಡ್ ಗ್ರೆನೇಡ್ ಪತ್ತೆ: ಶಂಕಿತ ಉಗ್ರರ ಬಂಧನ ಪ್ರಕರಣದ ಹಿನ್ನೆಲೆ ಈ ಹಿಂದೆ, ಐದನೇ ಆರೋಪಿ ಜಾಯೇದ್ ತಬ್ರೆಸ್​ನ ಕೊಡಿಗೆಹಳ್ಳಿಯ ಮನೆಯ ಅಲ್ಮೇರಾದಲ್ಲಿ ಬಚ್ಚಿಟ್ಟಿದ್ದ ನಾಲ್ಕು ಹ್ಯಾಂಡ್ ಗ್ರೆನೇಡ್​ಗಳನ್ನ ಸಿಸಿಬಿ ವಶಪಡಿಸಿಕೊಂಡಿತ್ತು. ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿರುವುದು ತಿಳಿದುಬಂದಿತ್ತು. 2021ರಲ್ಲಿ ಉಪ್ಪಿನಂಗಡಿ ಸಮೀಪದಲ್ಲಿ ಐದು ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿದ್ದವು. ನೆಲದಡಿ ಲಭಿಸಿದ್ದ 40 ವರ್ಷದಷ್ಟು ಹಳೆಯ ಗ್ರೆನೇಡ್​ಗಳು ಇವು ಆಗಿವೆ. ಬಳಿಕ 2022ರಲ್ಲಿ ಅಥಣಿ ಬಳಿಯ ಶಾಲೆಯೊಂದರಲ್ಲಿ ಒಂದು ಹ್ಯಾಂಡ್ ಗ್ರೆನೇಡ್​ ಪತ್ತೆಯಾಗಿತ್ತು. ವಿದ್ಯಾರ್ಥಿಗಳು ಚೆಂಡು ಎಂದು ಆಟವಾಡುವಾಗ ನಿರ್ಜೀವ ಸ್ಥಿತಿಯಲ್ಲಿ ಗ್ರೆನೇಡ್ ಇದ್ದವು. ನಂತರ ರಾಜಧಾನಿಯಲ್ಲೇ ಭಾರಿ ಪ್ರಮಾಣದ ನಾಲ್ಕು ಜೀವಂತ ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿದ್ದವು.

ಇದನ್ನೂ ಓದಿ: ಒಳ ಉಡುಪಿನಲ್ಲಿ ಮೊಬೈಲ್ ಇಟ್ಟು ಜೈಲಿನೊಳಗೆ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದ ಡಿ ದರ್ಜೆ ನೌಕರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.