ETV Bharat / state

ಬೆಂಗಳೂರಲ್ಲಿ ಮಹಿಳಾ ಅಭ್ಯರ್ಥಿಗಳು ಗೆದ್ದಿರುವುದೆಷ್ಟು? ಪುರುಷರಿಗೆ ಸ್ಪರ್ಧೆಯೊಡ್ಡುವರೇ ವುಮನ್​​ ಕ್ಯಾಂಡಿಡೇಟ್ಸ್​​​​​​​!

author img

By

Published : Apr 21, 2023, 7:30 PM IST

16 ನೇ ವಿಧಾನಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳು, ಪ್ರಾದೇಶಿಕ ಪಕ್ಷ ಜೆಡಿಎಸ್, ಆಮ್ ಆದ್ಮಿ ಪಕ್ಷ ಹಾಗೂ ಪಕ್ಷೇತರರು ಸೇರಿ ಬೆಂಗಳೂರಿನ 28 ಕ್ಷೇತ್ರಗಳಲ್ಲಿ 32 ಮಂದಿ ಮಹಿಳೆಯರು ನಾಮಪತ್ರ ಸಲ್ಲಿಕೆ ಮಾಡಿರುವರು. ಇಲ್ಲಿಯವರೆಗೆ ಬೆಂಗಳೂರಿನ ಕ್ಷೇತ್ರಗಳಿಂದ ವಿಧಾನಸಭೆಗೆ ಆಯ್ಕೆಯಾದವರು ಕೇವಲ 6 ರಿಂದ 7 ಮಂದಿ ಮಹಿಳೆಯರು ಮಾತ್ರ.

Women candidates of various parties in Bangalore constituencies
ಬೆಂಗಳೂರಿನ ಕ್ಷೇತ್ರಗಳಲ್ಲಿ ವಿವಿಧ ಪಕ್ಷದ ಮಹಿಳಾ ಉಮೇದುವಾರರು

ಬೆಂಗಳೂರು: ಕರ್ನಾಟಕ ರಾಜ್ಯ ರಚನೆಯಾಗಿ ಮೊದಲ ಚುನಾವಣೆಯಿಂದ ಇಲ್ಲಿಯವರೆಗೆ ಬೆಂಗಳೂರಿನ ವಿಧಾನಸಭೆ ಕ್ಷೇತ್ರಗಳಿಂದ ವಿಧಾನಸಭೆಗೆ ಆಯ್ಕೆಯಾದವರು ಕೇವಲ 6 ರಿಂದ 7 ಮಂದಿ ಮಹಿಳೆಯರು ಮಾತ್ರ. 1952 ರಲ್ಲಿ ಕರ್ನಾಟಕ ರಾಜ್ಯ ರಚನೆಯಾಯಿತು. ಆಗ ನಡೆದ ಮೊದಲ ಚುನಾವಣೆಯಿಂದ ಇಲ್ಲಿಯ ವರೆಗೆ ನಡೆದ ಚುನಾವಣೆಗಳಲ್ಲಿ ಮಹಿಳೆಯರು ಸ್ಪರ್ಧೆ ಮಾಡುತ್ತಲೇ ಇದ್ದಾರೆ. ಆದರೆ, ಗೆಲುವು ಕಾಣುವುದು ಮಾತ್ರ ಬೆರಳೆಣಿಕೆಯಷ್ಟು. ಕೆಲವು ಮಹಿಳೆಯರು ಎರಡು ಬಾರಿ ಶಾಸಕರೂ ಆಗಿದ್ದಾರೆ.

ಇದೀಗ ಕರ್ನಾಟಕದಲ್ಲಿ 16 ನೇ ವಿಧಾನಸಭೆ ಚುನಾವಣೆ ಬಂದಿದೆ. ರಾಷ್ಟ್ರೀಯ ಪಕ್ಷಗಳು, ಪ್ರಾದೇಶಿಕ ಪಕ್ಷ ಜೆಡಿಎಸ್, ಆಮ್ ಆದ್ಮಿ ಪಕ್ಷ ಹಾಗೂ ಪಕ್ಷೇತರರು ಸೇರಿದಂತೆ ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಒಟ್ಟು 32 ಮಂದಿ ಮಹಿಳೆಯರು ಈ ಸಲ ನಾಮಪತ್ರ ಸಲ್ಲಿಸಿದ್ದಾರೆ. ಅದರಲ್ಲಿ ಕಣದಲ್ಲಿ ಉಳಿದುಕೊಳ್ಳುವವರೆಷ್ಟು ಎಂಬುದು ಏ.24 ರಂದು ಗೊತ್ತಾಗಲಿದೆ.

15ನೇ ವಿಧಾನಸಭೆಯಲ್ಲಿ ಜಯನಗರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದ ಸೌಮ್ಯ ರೆಡ್ಡಿ ಅವರು, ಮತ್ತೆ ಅದೇ ಕ್ಷೇತ್ರದಿಂದ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇನ್ನು ರಾಜರಾಜೇಶ್ವರಿನಗರ ಕ್ಷೇತ್ರದಿಂದ ಕಳೆದ ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಬಿಜೆಪಿಯ ಮುನಿರತ್ನ ಅವರ ವಿರುದ್ಧ ಸೋತಿದ್ದ ಕುಸುಮಾ ಹನುಮಂತರಾಯಪ್ಪ ಅವರು ಈ ಬಾರಿಯೂ ಸ್ಪರ್ಧಿಸಿದ್ದಾರೆ.

ಇನ್ನು ಬಿಜೆಪಿಯಿಂದ ಒಬ್ಬರಿಗೆ ಮಾತ್ರ ಬೆಂಗಳೂರಿನ ಮಹದೇವಪುರ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಈ ಬಾರಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರಿಗೆ ಟಿಕೆಟ್ ಬಿಜೆಪಿ ನೀಡಿಲ್ಲ. ಅವರ ಪತ್ನಿ ಮಂಜುಳಾ ಅರವಿಂದ ಲಿಂಬಾವಳಿ ಅವರಿಗೆ ಮಣೆ ಹಾಕಿದೆ.

ಅದೇ ರೀತಿ ಜೆಡಿಎಸ್ ಅನುರಾಧ ಎಂಬುವರಿಗೆ ಪುಲಿಕೇಶಿನಗರ ಕ್ಷೇತ್ರದಿಂದ ಟಿಕೆಟ್ ನೀಡಿದೆ. ಇನ್ನು ಆಮ್ ಆದ್ಮಿ ಪಕ್ಷದಿಂದ ಬೆಂಗಳೂರಿನಲ್ಲಿ ಮೂವರು ಮಹಿಳೆಯರಿಗೆ ಟಿಕೆಟ್ ನೀಡಿದೆ. ಬಸವನಗುಡಿ ಕ್ಷೇತ್ರದಿಂದ ಸತ್ಯಲಕ್ಷ್ಮಿ ರಾವ್, ಜಯನಗರದಿಂದ ಮಹಾಲಕ್ಷ್ಮಿ ಹಾಗೂ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಿಂದ ಶಾಂತಲಾ ದಾಂಬ್ಲೆ ಅವರನ್ನು ಕಣಕ್ಕಿಳಿಸಲಾಗಿದೆ.

ರಾಜ್ಯದಲ್ಲಿರುವ ಸುಮಾರು 6.5 ಕೋಟಿ ಯಷ್ಟು ಜನಸಂಖ್ಯೆಯಲ್ಲಿ ಶೇ.49 ರಷ್ಟು ಮಹಿಳೆಯರಿದ್ದಾರೆ. ಆದರೆ, ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯ ವಿಚಾರಕ್ಕೆ ಬಂದಾಗ ಮಹಿಳೆಯರ ಸಂಖ್ಯೆ ಕಡಿಮೆ ಇರುವುದನ್ನು ಕಾಣುತ್ತೇವೆ. ದಶಕಗಳಿಂದಲೂ ಮಹಿಳೆಯರಿಗೆ ರಾಜಕೀಯದಲ್ಲಿ ಹೆಚ್ಚು ಪ್ರಾತಿನಿಧ್ಯ ಸಿಗುತ್ತಿಲ್ಲವೆಂಬುದು ಗೊತ್ತೇ ಇದೆ. ಹೆಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಮಹಿಳೆಯರಿಗೆ ರಾಜಕೀಯ ಪ್ರಾತಿನಿದ್ಯ ಸಿಗಬೇಕೆಂದು ಪ್ರತಿಪಾದಿಸಿದ್ದರು.

ರಾಜಕೀಯ ವಿಶ್ಲೇಷಕರ ಪ್ರಕಾರ, ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ರಾಜಕೀಯ ಪಕ್ಷಗಳು ಹಿಂದೇಟು ಹಾಕುತ್ತವೆ. ಪುರುಷ ಅಭ್ಯರ್ಥಿಗಳ ಎದುರು ಮಹಿಳಾ ಅಭ್ಯರ್ಥಿಗಳು ಸೋಲುತ್ತಾರೆ ಎಂಬ ಕಾರಣದಿಂದ ಅವರಿಗೆ ಟಿಕೆಟ್ ನಿರಾಕರಿಸಲಾಗುತ್ತದೆ. ಆದರೆ, ಮಹಿಳಾ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂಬುದು ಸುಳ್ಳು. ಅವರು ಸಹ ತಮ್ಮದೇ ಆದ ಮತ ಬ್ಯಾಂಕ್ ಹೊಂದಿರುತ್ತಾರೆ.

ಲಾಬಿಯೂ ಕಾರಣ : ಮಹಿಳೆಯರಿಗೆ ಟಿಕೆಟ್ ಕೈತಪ್ಪಲು ಲಾಬಿಯೂ ಒಂದು ಕಾರಣ. ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಕೊರತೆ ಇಲ್ಲ. ಆದರೆ, ಮಹಿಳಾ ಅಭ್ಯರ್ಥಿಗಳ ಕೊರತೆ ಇದೆ ಎಂಬ ತಪ್ಪು ಕಲ್ಪನೆ ಮಹಿಳೆಯರನ್ನು ರಾಜಕೀಯದಿಂದ ದೂರ ಮಾಡಿದೆ. ಇದರ ಜೊತೆಗೆ ಬೆಂಗಳೂರಿನಲ್ಲಿ ಬೃಹದಾಕಾರವಾಗಿ ಬೆಳೆಯುತ್ತಿರುವ ರಿಯಲ್ ಎಸ್ಟೇಟ್ ಲಾಬಿಯೂ ಒಂದು ಕಾರಣ. ಹಾಗಾಗಿ, ಇಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ಮಹಿಳಾ ಮೀಸಲಾತಿ ಮಸೂದೆ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡುತ್ತದೆ. ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡನೆಯೇನೋ ಮಾಡಲಾಗಿದೆ. ಆದರೆ, ಅದು ಇನ್ನೂ ಜಾರಿಗೆ ಬಂದಿಲ್ಲ. ಮಹಿಳೆಯರು ಯೋಗ್ಯ ಪ್ರಾತಿನಿಧ್ಯ ಹೊಂದಲು ಇರುವ ಅಸ್ತ್ರವೆಂದರೆ ಮಹಿಳಾ ಮೀಸಲಾತಿ.

ಕರ್ನಾಟಕ ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆಯನ್ನು ರಾಜ್ಯದಲ್ಲಿ ಅಂಗೀಕರಿಸಿದ ನಂತರ ಸ್ಥಳೀಯ ಆಡಳಿತ ಮಟ್ಟದಲ್ಲಿ ಶೇ.50 ಸ್ಥಾನಗಳನ್ನು ಮಹಿಳೆಯರಿಗೆ ನಿಗದಿಪಡಿಸಲಾಗಿದೆ. ಬಿಬಿಎಂಪಿಯಲ್ಲಿ ಮೊದಲ ಬಾರಿಗೆ ಶೇ.50 ರಷ್ಟು ಮಹಿಳಾ ಸದಸ್ಯರು ಆಯ್ಕೆಯಾಗಿದ್ದರು.

ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಸರಿಯಾದ ವಾತಾವರಣವಿಲ್ಲ. ಚುನಾವಣೆ ಬಂದರೆ ಪುರುಷ ಅಭ್ಯರ್ಥಿಗಳು ಮತದಾರರಿಗೆ ಹಣ, ಗಿಫ್ಟ್ ಹಂಚುತ್ತಾರೆ. ಯಾವ ಮಹಿಳಾ ಅಭ್ಯರ್ಥಿಗಳು ಈ ಕೆಲಸಕ್ಕೆ ಕೈ ಹಾಕುವುದಿಲ್ಲ. ಮಹಿಳೆಯರಿಗೆ ಚುನಾವಣೆ ಸಂದರ್ಭದಲ್ಲಿ ಹೆಚ್ಚು ಪ್ರಾತಿನಿದ್ಯ ಸಿಗಬೇಕು ಎಂದು ಜೆಡಿಎಸ್​​​​ನ ನಗರ ಮಹಿಳಾ ಘಟಕದ ಅಧ್ಯಕ್ಷೆ ರೂತ್ ಮನೋರಮಾ ಒತ್ತಾಯಿಸಿದ್ದಾರೆ.
ಗೆಲ್ಲುವುದು ಸುಲಭದ ಮಾತಲ್ಲ : ದಶಕಗಳ ಚುನಾವಣೆಗೂ ಈಗಿನ ಚುನಾವಣೆಗೂ ಬಹಳ ವ್ಯತ್ಯಾಸವಿದೆ. ಹಿಂದೆ ಜನಪ್ರತಿನಿಧಿಗಳ ಮೇಲೆ ಜನರು ವಿಶ್ವಾಸ, ನಂಬಿಕೆ ಇಟ್ಟು ಮತಚಲಾವಣೆ ಮಾಡುತ್ತಿದ್ದರು. ಅದೇ ರೀತಿ ಜನಪ್ರತಿನಿಧಿಗಳು ಸಹ ನಡೆದುಕೊಳ್ಳುತ್ತಿದ್ದರು. ಆದರೆ, ಈಗ ನಂಬಿಕೆ, ವಿಶ್ವಾಸ ಕಡಿಮೆಯಾಗುತ್ತಿದೆ.

ಜನಪ್ರತಿನಿಧಿಗಳು ಮತದಾರರಿಗೆ ನೀಡುವ ಆಶ್ವಾಸನೆ, ಭರವಸೆಗಳು ಈಡೇರಿಸದಿರುವುದೇ ಇದಕ್ಕೆ ಮುಖ್ಯ ಕಾರಣ. ಇನ್ನು ಪುರುಷ ಅಭ್ಯರ್ಥಿಗಳ ಜೊತೆ ಮಹಿಳಾ ಅಭ್ಯರ್ಥಿಗಳು ಸ್ಪರ್ಧೆ ಮಾಡುವುದು ಇನ್ನೂ ಕಷ್ಟ. ಪುರುಷರ ವೇಗಕ್ಕೆ ಮಹಿಳೆಯರು ಹೋಗುವುದು. ಕಡಿಮೆ. ಹಾಗಾಗಿ, ಚುನಾವಣೆಯಲ್ಲಿ ಗೆಲ್ಲುವುದು ವಿರಳ ಎನ್ನುತ್ತಾರೆ ವಿಶ್ಲೇಷಕರು.
ಇದನ್ನೂಓದಿ:ಲಿಂಗಾಯತ ಮತಗಳನ್ನು ಸೆಳೆಯಲು ಶೆಟ್ಟರ್​ಗೆ ಟಾಸ್ಕ್ ಕೊಟ್ಟ 'ಕೈ': ಶೆಟ್ಟರ್ ಹಣಿಯಲು ಆರ್​ಎಸ್​ಎಸ್​ ರಣತಂತ್ರ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.