ETV Bharat / state

ಜನರ ಭೂಮಿ ವಿಚಾರದಲ್ಲಿ ಸರ್ಕಾರ ಲೂಟಿಕೋರರಂತೆ ವರ್ತಿಸಬಾರದು: ಹೈಕೋರ್ಟ್

author img

By

Published : Feb 12, 2023, 6:38 AM IST

ಖಾಸಗಿಯವರಿಗೆ ಸೇರಿದ ಭೂಮಿಯನ್ನು ಹಲವು ವರ್ಷಗಳ ಹಿಂದೆ ಸ್ವಾಧೀನಪಡಿಸಿಕೊಂಡು ಪರಿಹಾರ ನೀಡದ ಕೆಐಎಡಿಬಿ ಧೋರಣೆಗೆ ಹೈಕೋರ್ಟ್​ ಛೀಮಾರಿ ಹಾಕಿದೆ. ಅರ್ಜಿದಾರರಿಗೆ 8 ವಾರಗಳಲ್ಲಿ ಬಡ್ಡಿಸಮೇತ ಪರಿಹಾರ ಮೊತ್ತ ಪಾವತಿಸಲು ಸೂಚಿಸಿದೆ.

high-court-upset-with-kiadb
ಐಎಡಿಬಿಗೆ ಹೈಕೋರ್ಟ್​ ಛೀಮಾರಿ

ಬೆಂಗಳೂರು: ವ್ಯಕ್ತಿಯೊಬ್ಬರಿಗೆ ಸೇರಿದ ಜಮೀನನ್ನು ಸ್ವಾಧೀನಪಡಿಸಿಕೊಂಡು 15 ವರ್ಷ ಕಳೆದರೂ ಪರಿಹಾರ ನೀಡದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ನಡೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್, "ಜನರ ಭೂಮಿಯ ವಿಚಾರದಲ್ಲಿ ಸರ್ಕಾರ ಲೂಟಿಕೋರಂತೆ ವರ್ತಿಸಬಾರದು" ಎಂದು ಖಡಕ್ ಆಗಿ ಹೇಳಿದೆ. ತಮಗೆ ಸೇರಿದ ಭೂಮಿಯನ್ನು ಕೈಗಾರಿಕಾ ಪ್ಲ್ಯಾಟ್​ಗಳನ್ನಾಗಿ ಮಾಡಲು ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿದೆ. ಆದರೆ, ಈವರೆಗೂ ಭೂ ಪರಿಹಾರ ನೀಡಿಲ್ಲ ಎಂದು ಆರೋಪಿಸಿ ಬೆಂಗಳೂರಿನ ನಿವಾಸಿಗಳಾದ ಎಂ.ವಿ.ಗುರುಪ್ರಸಾದ್ ಮತ್ತು ನಂದಿನಿ ಎಂಬವರು ಹೈಕೋರ್ಟ್​ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ ಶನಿವಾರ ಈ ಅರ್ಜಿ ವಿಚಾರಣೆ ನಡೆಸಿತು.

ಸಾಂವಿಧಾನಿಕ ಆಸ್ತಿಯ ಹಕ್ಕು ಉಲ್ಲಂಘನೆ: ಅಲ್ಲದೆ, "ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮತ್ತು ಅದರ ಅಧಿಕಾರಿಗಳ ನಡತೆ ನ್ಯಾಯಸಮ್ಮತ ಮಾನದಂಡಕ್ಕೆ ಅನುಗುಣವಾಗಿಲ್ಲ. ಈ ನಡವಳಿಕೆಯು ಸಂವಿಧಾನಕ್ಕೆ ವಿರುದ್ಧವಾಗಿ ಊಳಿಗಮಾನ್ಯ ಧೋರಣೆಯ ಸಂಕೋಲೆಗಳನ್ನು ಬಲಪಡಿಸುವಂತಿದೆ. ಕೆಐಎಡಿಬಿ ನಡೆ ಸಂವಿಧಾನದ ಪರಿಚ್ಛೇದ 300ಎ ಅಡಿಯಲ್ಲಿ ಲಭ್ಯವಿರುವ ಆಸ್ತಿ ಹಕ್ಕು ಉಲ್ಲಂಘಿಸಿದಂತಾಗಿದೆ. ಕಲ್ಯಾಣ ರಾಜ್ಯದ ಉದ್ದೇಶವನ್ನೇ ಕಸಿದುಕೊಂಡಂತಾಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಒಂದೂವರೆ ದಶಕವಾದರೂ ಕೆಐಎಡಿಬಿ ಸೂಕ್ತ ಪರಿಹಾರ ಪಾವತಿಸದಿರುವುದರಿಂದ ಅರ್ಜಿದಾರರಿಗೆ ಪರಿಹಾರದ ಜೊತೆಗೆ ಹೆಚ್ಚಿನ ಬಡ್ಡಿ ಮತ್ತು ಇತರೆ ಲಾಭಾಂಶ ನೀಡಬೇಕು. 2013ರ ಕಾಯಿದೆ ಪ್ರಕಾರ ಶೇ.50ರಷ್ಟು ಪರಿಹಾರ ಮೊತ್ತವನ್ನು 8 ವಾರಗಳಲ್ಲಿ ಮೂಲ ಆಸ್ತಿ ಮಾಲೀಕರಿಗೆ ಪಾವತಿಸಬೇಕು. ಅಲ್ಲದೆ, ಒಟ್ಟಾರೆ ಮೊತ್ತಕ್ಕೆ ವಾರ್ಷಿಕ ಶೇ.12ರ ಬಡ್ಡಿ ಕೂಡ ಅರ್ಜಿದಾರರಿಗೆ ಪಾವತಿಸಬೇಕು ಎಂದು ಕೋರ್ಟ್ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರರಾದ ಎಂ.ವಿ.ಗುರುಪ್ರಸಾದ್ ಮತ್ತು ನಂದಿನಿ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ದೇವನಹಳ್ಳಿ ತಾಲ್ಲೂಕಿನ ಜೊನ್ನಹಳ್ಳಿಯಲ್ಲಿ 6 ಎಕರೆ ಭೂಮಿಯನ್ನು ಹೊಂದಿದ್ದರು. ಈ ಭಾಗದಲ್ಲಿ ಕೈಗಾರಿಕಾ ಫ್ಲ್ಯಾಟ್​ ನಿರ್ಮಾಣಕ್ಕಾಗಿ 2006 ಡಿಸೆಂಬರ್ ಮತ್ತು 2007ರ ಜನವರಿಯಲ್ಲಿ ಅರ್ಜಿದಾರರ ಭೂಮಿಯನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿತ್ತು.

ಸೂಕ್ತ ಭರವಸೆಯೊಂದಿಗೆ ವಶಪಡಿಸಿಕೊಂಡ ಭೂಮಿಗೆ 15 ವರ್ಷ ಕಳೆದರೂ ಸರ್ಕಾರ ಪರಿಹಾರ ವಿತರಿಸಿರಲಿಲ್ಲ. ಕೈಗಾರಿಕಾ ಅಭಿವೃದ್ಧಿಯ ದೃಷ್ಟಿಯಿಂದ ಒಂದೂವರೆ ದಶಕದ ಹಿಂದೆಯೇ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಉದ್ಯಮಿಗಳಿಗೆ ಹಂಚಿಕೆ ಮಾಡಿತ್ತು. ಆಗಲೂ ಭೂ ಮಾಲೀಕರಿಗೆ ಪರಿಹಾರ ನೀಡಿರಲಿಲ್ಲ.

ಇದರಿಂದ ಭೂಮಿ ಕಳೆದುಕೊಂಡ ಅರ್ಜಿದಾರರು ಕೆಐಎಡಿಬಿ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಭೂಮಿ ಮಾಲೀಕತ್ವವನ್ನು ತಾವು ಹೊಂದಿರುವುದಾಗಿ ತಿಳಿಸಿದ್ದರೂ ಕೆಐಎಡಿಬಿಯು ಭೂಮಿ ಮಾರಾಟ ಮಾಡಿರುವವರ ಹೆಸರನ್ನು ಅಧಿಸೂಚನೆಯಲ್ಲಿ ಪ್ರಕಟಿಸಿತ್ತು. ಆ ನಂತರ ಸಾಕಷ್ಟು ಪ್ರಯತ್ನದ ಬಳಿಕ ಭೂಮಿ ಸ್ವಾಧೀನಪಡಿಸಿಕೊಂಡ ಅಧಿಸೂಚನೆಯಲ್ಲಿ ತಿದ್ದುಪಡಿ ಮಾಡಿ ಅರ್ಜಿದಾರರ ಹೆಸರು ಸೇರಿಸಲಾಗಿದೆ. ಅರ್ಜಿದಾರರ ಭೂಮಿಯನ್ನು ವಶಪಡಿಸಿಕೊಂಡು ಕೈಗಾರಿಕಾ ಪ್ಲ್ಯಾಟ್‌ಗಳನ್ನಾಗಿ ಅಭಿವೃದ್ಧಿಪಡಿಸಿ ಶೇ.50ರಷ್ಟು ರಿಯಾಯಿತಿ ನೀಡಿ ಅದನ್ನು ಉದ್ಯಮಿಗಳಿಗೆ ಹಂಚಿಕೆ ಮಾಡುವ ಮೂಲಕ 7.5 ಕೋಟಿ ರೂಪಾಯಿಗಳನ್ನು ಕೆಐಎಡಿಬಿ ಸಂಗ್ರಹಿಸಿದೆ. ಇಷ್ಟಾದರೂ 15 ವರ್ಷಗಳಿಂದ ಪರಿಹಾರ ಹಂಚಿಕೆ ಮಾಡಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

ಇದನ್ನೂ ಓದಿ: ಏರೋ ಇಂಡಿಯಾ 2023: ಲೋಹದ ಹಕ್ಕಿಗಳ ತಾಲೀಮು ಪ್ರದರ್ಶನ ವೀಕ್ಷಿಸಿ ಸಂಭ್ರಮಿಸಿದ ಸಾರ್ವಜನಿಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.