ETV Bharat / state

ಜನ ಸ್ವಾರ್ಥಿಗಳಾಗಿದ್ದು ಹಣ ಪಡೆದು ಮತ ಹಾಕುವ ಚಾಳಿ ಮುಂದುವರೆಸುತ್ತಿದ್ದಾರೆ: ಹೈಕೋರ್ಟ್ ಬೇಸರ

author img

By

Published : Apr 6, 2023, 12:40 PM IST

ಜನ ಈಗಲೂ ಹಣ ಪಡೆದು ಮತ ಹಾಕುವ ಚಾಳಿ ಮುಂದುವರೆಸುತ್ತಿದ್ದಾರೆ. ಅವರು ಎಚ್ಚೆತ್ತುಕೊಳ್ಳದಿದ್ದರೆ ನಾವೇನು ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ರಾಜ್ಯ ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ.

high court
ಹೈಕೋರ್ಟ್

ಬೆಂಗಳೂರು : ಸ್ಮಶಾನ ಭೂಮಿ ಇಲ್ಲದ ಗ್ರಾಮದವರು ಮುಂದೆ ಬಂದು ಮನವಿ ಮಾಡುವಂತೆ ಕೋರಿ ರಾಜ್ಯದ 31 ಜಿಲ್ಲೆಗಳಲ್ಲಿಯೂ ಸ್ಥಳೀಯ ಮತ್ತು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟಣೆ ಹೊರಡಿಸಿದರೂ ಮುಂದೆ ಬಾರದ ಜನರ ಬಗ್ಗೆ ತೀವ್ರ ಅಸಮಾಧಾನಗೊಂಡ ಹೈಕೋರ್ಟ್, ಎಲ್ಲರೂ ಸ್ವಾರ್ಥಿಗಳಾಗಿ ಬದಲಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದೆ.

ರಾಜ್ಯದಲ್ಲಿ ಸ್ಮಶಾನ ಭೂಮಿ ಇಲ್ಲದ ಗ್ರಾಮ ಮತ್ತು ಪಟ್ಟಣ ಪ್ರದೇಶಗಳಿಗೆ ಅಗತ್ಯವಾದ ಸ್ಮಶಾನ ಭೂಮಿ ಒದಗಿಸುವಂತೆ ಸರ್ಕಾರಕ್ಕೆ ನೀಡಿದ್ದ ನಿರ್ದೇಶನ ಜಾರಿಯಾಗದ ಹಿನ್ನೆಲೆಯಲ್ಲಿ ಬೆಂಗಳೂರಿನ ನಿವಾಸಿ ಮೊಹಮ್ಮದ್ ಇಕ್ಬಾಲ್ ಎಂಬುವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂತಿ ಬಿ.ವೀರಪ್ಪ ಮತ್ತು ನ್ಯಾಯಮೂರ್ತಿ ಟಿ.ವೆಂಕಟೇಶ್ ನಾಯಕ್ ಅವರಿದ್ದ ನ್ಯಾಯಪೀಠ ಗುರುವಾರ ಈ ಅರ್ಜಿ ವಿಚಾರಣೆ ನಡೆಸಿತು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆಯುತ್ತಿದೆ. ಆದರೂ, ಜನತೆಗೆ ಈವರೆಗೂ ಬುದ್ದಿ ಬಂದಿಲ್ಲ. ಹಣ ಪಡೆದು ಮತ ಹಾಕುವ ಚಾಳಿ ಮುಂದುವರೆಸುತ್ತಿದ್ದಾರೆ. ಜನ ಎಚ್ಚೆತ್ತುಕೊಳ್ಳದಿದ್ದರೆ ನಾವೇನು ಮಾಡುವುದಕ್ಕೆ ಸಾಧ್ಯವಿಲ್ಲ. ಜನ ಸರಿಯಾದರೆ ಎಲ್ಲವೂ ಸರಿಯಾಗಲಿದೆ ಎಂದು ನ್ಯಾಯಪೀಠ ತಿಳಿಸಿತು.

ಇದನ್ನೂ ಓದಿ : ಕಾವೇರಿ, ಕನ್ನಿಕೆ ನದಿ ಪಾತ್ರ ಸ್ವಚ್ಛಗೊಳಿಸಲು 15 ದಿನ ಕಾಲಾವಕಾಶ ನೀಡಿದ ಹೈಕೋರ್ಟ್

ಅರ್ಜಿದಾರರಿಗೂ ತರಾಟೆ : ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿರುವ ಮಹಮ್ಮದ್ ಇಕ್ಬಾಲ್ ಅವರನ್ನು ಉದ್ದೇಶಿಸಿದ ನ್ಯಾಯಪೀಠ, ರಾಜ್ಯದಲ್ಲಿ ಎಷ್ಟು ಗ್ರಾಮಗಳಿವೆ ಎಂಬುದರ ಕುರಿತು ಮಾಹಿತಿ ಇದೆಯೇ ಎಂದು ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಇಲ್ಲ ಎಂಬುದಾಗಿ ತಿಳಿಸಿದರು. ಇದರಿಂದ ಅಸಮಾಧಾನಗೊಂಡ ನ್ಯಾಯಪೀಠ, 2018 ರಿಂದ ಅರ್ಜಿ ವಿಚಾರಣೆ ನಡೆಯುತ್ತಿದೆ. ಇದನ್ನು ನ್ಯಾಯಾಲಯ ಮೇಲ್ವಿಚಾರಣೆ ಮಾಡುತ್ತಿದೆ. ಅಲ್ಲದೇ, ನ್ಯಾಯಾಲಯ ಪ್ರತಿ 15 ದಿನಕ್ಕೊಮ್ಮೆ ಎಷ್ಟು ಗ್ರಾಮಗಳಿಗೆ ಸ್ಮಶಾನ ಭೂಮಿ ಒದಗಿಸಲಾಗಿದೆ ಎಂಬ ಅಂಶವನ್ನು ಪಡೆದು ವಿಚಾರಣೆ ನಡೆಸುತ್ತಿದೆ. ಆದರೂ ರಾಜ್ಯದಲ್ಲಿ ಎಷ್ಟು ಗ್ರಾಮಗಳಿವೆ ಎಂಬುದು ಅರ್ಜಿದಾರರಿಗೆ ಗೊತ್ತಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿತು.

ಇದನ್ನೂ ಓದಿ : ಪ್ರೀತಿಸಿದವಳನ್ನು ಮದುವೆಯಾಗಲು ಅಪರಾಧಿಯನ್ನ ಪೆರೋಲ್ ಮೇಲೆ ಬಿಡುಗಡೆಗೆ ಹೈಕೋರ್ಟ್ ಸೂಚನೆ

ವಿಚಾರಣೆ ವೇಳೆ ಸರ್ಕಾರದ ಪರವಾಗಿ ಹಾಜರಿದ್ದ ವಕೀಲರು, ಯಾವ ಯಾವ ಗ್ರಾಮಗಳಲ್ಲಿ ಸ್ಮಶಾನ ಭೂಮಿ ಇಲ್ಲ ಎಂಬುದರ ಕುರಿತು ಮಾಹಿತಿ ಪಡೆಯಲು ಪತ್ರಿಕಾ ಪ್ರಕಟಣೆ ಹೊರಡಿಸುವಂತೆ ನ್ಯಾಯಪೀಠ ಈ ಹಿಂದೆ ನೀಡಿದ್ದ ಸೂಚನೆ ಅನುಪಾಲನೆ ಮಾಡಿರುವ ಸಂಬಂಧ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಅಲ್ಲದೇ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ರಾಜ್ಯ ಮಟ್ಟದ ಮತ್ತು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಆದರೆ, ಈವರೆಗೂ ಯಾವುದೇ ಹಳ್ಳಿಯಿಂದ ಸ್ಮಶಾನ ಭೂಮಿ ಲಭ್ಯವಿಲ್ಲದ ಗ್ರಾಮದಿಂದ ಮನವಿ ಬಂದಿಲ್ಲ. ಮನವಿ ಬಂದಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ನ್ಯಾಯಪೀಠಕ್ಕೆ ವಿವರಿಸಿದರು. ಈ ಮಾಹಿತಿ ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಏಪ್ರಿಲ್ 20ಕ್ಕೆ ಮುಂದೂಡಿತು.

ಇದನ್ನೂ ಓದಿ : ನೆಹರು ಓಲೇಕಾರಗೆ ರಿಲೀಫ್​ ನೀಡಿದ ಹೈಕೋರ್ಟ್​​​​: ವಿಶೇಷ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.