ETV Bharat / state

ವಿಶೇಷ ಆಶ್ರಯ ಯೋಜನೆ ಅಡಿ ನಿವೇಶನ ಹಂಚಿಕೆಗೆ ವಿಳಂಬ : ಸರ್ಕಾರದ ವಿರುದ್ಧ ಹೈಕೋರ್ಟ್ ಗರಂ

author img

By

Published : Dec 7, 2021, 11:32 PM IST

ವಿಶೇಷ ಆಶ್ರಯ ಯೋಜನೆ ಅಡಿ ವಿಕಲಚೇತನರು, ಮಾಜಿ ಯೋಧರು ಮತ್ತು ವಿಧವೆಯರು ಒಳಗೊಂಡಂತೆ ಅರ್ಹ ಫಲಾನುಭವಿಗಳೀಗೆ ನಿವೇಶನ ಹಂಚಿಕೆ ಮಾಡಲು ಸರ್ಕಾರವು ವಿಳಂಬ ಮಾಡುತ್ತಿದೆ ಎಂದು ಸಲ್ಲಿಕೆಯಾಗಿದ್ದ ಪಿಐಎಲ್ ಅರ್ಜಿ ವಿಚಾರಣೆ ಹೈಕೋರ್ಟ್​ನಲ್ಲಿ ನಡೆಯಿತು.

high court
ಹೈಕೋರ್ಟ್

ಬೆಂಗಳೂರು: ವಿಶೇಷ ಆಶ್ರಯ ಯೋಜನೆ ಅಡಿ ವಿಕಲಚೇತನರು, ಮಾಜಿ ಯೋಧರು ಮತ್ತು ವಿಧವೆಯರು ಒಳಗೊಂಡಂತೆ ಅರ್ಹ ಫಲಾನುಭವಿಗಳೀಗೆ ನಿವೇಶನ ಹಂಚಿಕೆ ಮಾಡಲು ವಿಳಂಬ ಮಾಡುತ್ತಿರುವ ಸರ್ಕಾರದ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಈ ಕುರಿತು ರಾಜೇಶ್ವರಿ ಹಾಗೂ ಇತರೆ ನಾಲ್ವರು ಸಲ್ಲಿಸಿದ್ದ ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿತು. ವಿಶೇಷ ಆಶ್ರಯ ಯೋಜನೆ ಅಡಿ 71 ಅಂಗವಿಕಲರು, ಇಬ್ಬರು ಮಾಜಿ ಯೋಧರು ಹಾಗೂ 129 ನಿರಾಶ್ರಿತರು ಹಾಗೂ ವಿಧವೆಯರು ಸೇರಿದಂತೆ ಒಟ್ಟು 202 ಫಲಾನುಭವಿಗಳನ್ನು ಗುರುತಿಸಲಾಗಿದೆ. ಆದರೆ, ಕಳೆದ 9 ವರ್ಷಗಳಿಂದ ಯೋಜನೆಯ ಸೌಲಭ್ಯವನ್ನು ಫಲಾನುಭವಿಗಳಿಗೆ ಕಲ್ಪಿಸಿಲ್ಲ. ಸೌಲಭ್ಯಕ್ಕಾಗಿ ಫಲಾನುಭವಿಗಳು ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿತು.

ಅಲ್ಲದೆ, ಸರ್ಕಾರದ ಈ ಧೋರಣೆಯನ್ನು ನ್ಯಾಯಾಲಯ ಒಪ್ಪುವುದಿಲ್ಲ. ಆದರೆ, ನಿವೇಶನ ಹಂಚಿಕೆ ಕುರಿತಂತೆ ಫಲಾನುಭವಿಗಳಿಗೆ ಈಗಾಗಲೇ ಹಕ್ಕು ಪತ್ರ ವಿತರಿಸಲಾಗಿದೆ ಎಂದು ಸರ್ಕಾರಿ ವಕೀಲರು ಹೇಳಿದ್ದಾರೆ. ಇದರಿಂದ ಸರ್ಕಾರಕ್ಕೆ ಕೊನೆಯದಾಗಿ ನಾಲ್ಕು ವಾರ ಕಾಲಾವಕಾಶ ನೀಡಲಾಗುವುದು. ಈಗಾಗಲೇ ಗುರುತಿಸಿರುವ ಫಲಾನುಭವಿಗಳಿಗೆ ಈ ಯೋಜನೆಯ ಸೌಲಭ್ಯ ಕಲ್ಪಿಸಿ ವರದಿ ಸಲ್ಲಿಸಬೇಕು. ತಪ್ಪಿದರೆ ಪ್ರತಿವಾದಿ ವಸತಿ ಇಲಾಖೆ ಕಾರ್ಯದರ್ಶಿ ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿ ಅರ್ಜಿಯ ಮುಂದಿನ ವಿಚಾರಣೆಗೆ ಹಾಜರಾಗಬೇಕು ಎಂದು ತಾಕೀತು ಮಾಡಿ, ವಿಚಾರಣೆ ಮುಂದೂಡಿತು.

ಇದಕ್ಕೂ ಮುನ್ನ ಅರ್ಜಿ ಪರಿಶೀಲಿಸಿದ ಪೀಠ, ಹೈಕೋರ್ಟ್ ಆದೇಶ ನೀಡಿ ಒಂಭತ್ತು ವರ್ಷ ಕಳೆದಿದೆ. ಅಂದಿನಿಂದ ಈವರೆಗೆ ಫಲಾನುಭವಿಗಳಿಗೆ ಏಕೆ ಯೋಜನೆಯಡಿ ಸೌಲಭ್ಯ ತಲುಪಿಸಿಲ್ಲ. ನಿವೇಶನಗಳಿಗಾಗಿ ಫಲಾನುಭವಿಗಳು ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ. ಇನ್ನೂ ಏಕೆ ನಿವೇಶನವನ್ನು ಫಲಾನುಭವಿಗಳಿಗೆ ಸುಪರ್ದಿಗೆ ನೀಡಿಲ್ಲ? ಎಂದು ಪ್ರಶ್ನಿಸಿತು.

ಸರ್ಕಾರಿ ವಕೀಲರು ಮಾಹಿತಿ ನೀಡಿ, ವಿಶೇಷ ಆಶ್ರಯ ಯೋಜನೆಯಡಿ 202 ಫಲಾನುಭವಿಗಳನ್ನು ಗುರುತಿಸಲಾಗಿದೆ. 154 ಫಲಾನುಭವಿಗಳಿಗೆ ಈಗಾಗಲೇ ಹಕ್ಕು ಪತ್ರ ವಿತರಿಸಲಾಗಿದೆ. ಫಲಾನುಭವಿಗಳಿಗೆ ನಿವೇಶನ ವಿತರಿಸಲು ಸರ್ಜಾಪುರ ಹೋಬಳಿಯ ಆನೇಕಲ್ ತಾಲೂಕಿನಲ್ಲಿ ಭೂಮಿ ಗುರುತಿಸಲಾಗಿದೆ. ಬಡಾವಣೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಅದನ್ನು ಖುದ್ದು ಬೆಂಗಳೂರು ನಗರ ಜಿಲ್ಲಾಧಿಕಾರಿಯೇ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಕೊನೆಯದಾಗಿ ಎಂಟು ವಾರ ಕಾಲಾವಕಾಶ ನೀಡಿದರೆ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ಮುಂದೆ ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ: ಮಾಜಿ ಸಿಎಂ ಸಿದ್ದರಾಮಯ್ಯ ಭವಿಷ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.