ETV Bharat / state

ಅಕ್ರಮ ಡಿನೋಟಿಫಿಕೇಷನ್: ಬಿಎಸ್‌ವೈ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಿದ ಹೈಕೋರ್ಟ್

author img

By

Published : Jun 7, 2023, 10:34 PM IST

ಡಿನೋಟಿಫಿಕೇಷನ್ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದುಗೊಳಿಸಿದೆ.

high-court-quashed-fir-registered-against-bs-yeddyurappa
ಅಕ್ರಮ ಡಿನೋಟಿಫಿಕೇಷನ್ ಆರೋಪ : ಬಿಎಸ್‌ವೈ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು : ಬೆಂಗಳೂರಿನ ಹಳಗೇವಡೇರನಹಳ್ಳಿಯಲ್ಲಿ 2.5 ಎಕರೆ ಭೂಮಿ ಡಿನೋಟಿಫೈ ಮಾಡಿದ್ದ ಕುರಿತು ಮಹಾಲೇಖಪಾಲರು ಮತ್ತು ಲೆಕ್ಕಪರಿಶೋಧಕರ (ಸಿಎಜಿ) ವರದಿ ಆಧರಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ಅನ್ನು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ವಜಾ ಮಾಡಿದೆ. ತಮ್ಮ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದು ಕೋರಿ ಬಿ.ಎಸ್. ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್​ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.

ಸಿಎಜಿ ವರದಿ ಆಧರಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗದು ಮತ್ತು ಅದನ್ನು ತನಿಖೆಯ ಭಾಗವಾಗಿಸಲು ಆಗದು ಎಂಬುದನ್ನು ಹೈಕೋರ್ಟ್​​ನ ಬೇರೊಂದು ಪೀಠವು 2015ರಲ್ಲಿ ಯಡಿಯೂರಪ್ಪ ವಿರುದ್ಧದ ಪ್ರಕರಣಗಳನ್ನು ರದ್ದು ಪಡಿಸಿತ್ತು. ಇದೇ ಅಂಶವನ್ನು ದಾಖಲಿಸಿರುವ ನ್ಯಾಯಪೀಠ ಯಡಿಯೂರಪ್ಪ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ ಏನು? : ಸರ್ಕಾರ ಸ್ವಾಧೀನ ಪಡಿಸಿಕೊಂಡಿದ್ದ ಜಮೀನನ್ನು 2006ರಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಡಿನೋಟಿಫೈ ಮಾಡಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟಾಗಿದೆ ಎಂದು ಉಲ್ಲೇಖಿಸಿ ಸಿಎಜಿ ವರದಿ ನೀಡಿತ್ತು. ಈ ವರದಿಯನ್ನು ಆಧರಿಸಿ ಬೆಂಗಳೂರಿನ ಜಯಕುಮಾರ್ ಹಿರೇಮಠ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಬಿ.ಎಸ್. ಯಡಿಯೂರಪ್ಪ ವಿರುದ್ಧ 15 ಎಫ್‌ಐಆರ್​ ದಾಖಲು ಮಾಡಿದ್ದರು.

ಹಳಗೇವಡೇರನಹಳ್ಳಿ, ಬಿಳೇಕಳ್ಳಿ ಮತ್ತು ಜೆ.ಬಿ. ಕಾವಲ್​ನಲ್ಲಿ ಭೂಮಿ ಡಿನೋಟಿಫೈ ಮಾಡಿದ ಆರೋಪದಲ್ಲಿ ಮೊದಲಿಗೆ ಮೂರು ಎಫ್‌ಐಆರ್ ದಾಖಲಿಸಲಾಗಿತ್ತು. ಆ ನಂತರ ಜೆ.ಪಿ. ನಗರ, ಹೆಚ್‌ಆರ್​​ಬಿಆರ್ ಲೇಔಟ್, ಜಯನಗರ 8ನೇ ಹಂತ ಮತ್ತು ರಾಚನೇಹಳ್ಳಿ ಸುತ್ತಮುತ್ತಲಿನ ಪ್ರದೇಶದಲ್ಲಿನ ಡಿನೋಟಿಫಿಕೇಶನ್​ಗೆ ಸಂಬಂಧಿಸಿದಂತೆ ಮತ್ತೆ 12 ಎಫ್‌ಐಆರ್​ಗಳನ್ನು ದಾಖಲಿಸಲಾಗಿತ್ತು.

ಬಳಿಕ ಹಳಗೇವಡೇರನಹಳ್ಳಿಯಲ್ಲಿ 2.2 ಎಕರೆ ಭೂಮಿ ಡಿನೋಟಿಫೈ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ 15ನೇ ಎಫ್‌ಐಆರ್ ದಾಖಲಿಸಲಾಗಿತ್ತು. 2015ರಲ್ಲಿ ಹೈಕೋರ್ಟ್ 15 ಎಫ್‌ಐಆರ್​​ಗಳನ್ನು ಮಾಡಿತ್ತು. ಇದೇ ಆರೋಪದ ಮೇಲೆ ದಾಖಲಾಗಿದ್ದ 15ನೇ ಎಫ್‌ಐಆರ್ ಅನ್ನು ಈಗ ಹೈಕೋರ್ಟ್ ವಜಾ ಮಾಡಿದೆ. ಈ ಎಫ್‌ಐಆರ್​​ಗಳನ್ನು ವಜಾ ಮಾಡಿರುವುದನ್ನು ಲೋಕಾಯುಕ್ತವು ಸುಪ್ರೀಂ ಕೋರ್ಟ್​​ನಲ್ಲಿ ಪ್ರಶ್ನಿಸಿದೆ. ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಲು ನಿರಾಕರಿಸಿದ್ದು, ವಿಚಾರಣಾ ಹಂತದಲ್ಲಿದೆ.

ಇದನ್ನೂ ಓದಿ : ಜಾಮೀನು ಕೋರಿ ಮುರುಘಾ ಶರಣರಿಂದ ಹೈಕೋರ್ಟ್​ಗೆ ಅರ್ಜಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.